ಮನೆ ಮನೆಗೆ ಗ್ಯಾಸ್ ಪೈಪ್ ಲೈನ್ ಮೂಲಕ ಅಳವಡಿಸಿದರೆ ಸಾಕಷ್ಟು ಹಣ ಉಳಿತಾಯವಾಗಲಿದೆ ಎಂದು ಎಜಿ&ಪಿ ಪ್ರಥಮ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ಸಹ ಮುಖ್ಯಸ್ಥ ವಿರೂಪಾಕ್ಷ ಹೇಳಿದರು.
ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿನ ಶ್ರೀವರಸಿದ್ಧಿ ವಿನಾಯಕ ಗಣಪತಿ ದೇವಾಲಯದಲ್ಲಿ ಭಾರತ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಪಿಎನ್ ಜಿ ಅನುಷ್ಠಾನಕ್ಕಾಗಿ ಎಜಿ &ಪಿ ಪ್ರಥಮ್ ಸಂಸ್ಥೆ ಆಯೋಜಿಸಿರುವ ಮನೆಮನೆಗೆ ಕೊಳವೆ ಗ್ಯಾಸ್ ಸಂಪರ್ಕ ಯೋಜನೆ ಕುರಿತು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು.
ಕೊಳವೆ ಮಾರ್ಗದ ಮೂಲಕ ಮನೆ ಮನೆಗೆ ಅನಿಲ ಸಂಪರ್ಕ ಎಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ನಮ್ಮ ರಾಜ್ಯದ ಹಲವು ನಗರಗಳು ಆಯ್ಕೆಯಾಗಿ ಯಶಸ್ಸು ಸಾಧಿಸಿದೆ. ಬೆಂಗಳೂರು, ಮೈಸೂರು ಆರಂಭಗೊಂಡು ಈಗ ಮಂಡ್ಯ ನಗರದಲ್ಲಿ ಯೋಜನೆ ರೂಪಿಸಲು ಸಿದ್ದಗೊಂಡಿದ್ದೇವೆ ಎಂದರು.
ಹಸಿರು ಅನಿಲ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೆ ತರುತ್ತಿದೆ. ಆಧುನಿಕ ತಂತ್ರಜ್ಞಾನದ ಜಿಐಎಸ್ ಆಧಾರಿತ ನಿಯಂತ್ರಣ ವ್ಯವಸ್ಥೆ ಮೈಸೂರು ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿನಲ್ಲಿ ಈ ಬಿಡ್ ಅನ್ನು ಎಜಿ ಎಂಡ್ ಪಿ ಸಂಸ್ಥೆಯು ಪಡೆದುಕೊಂಡಿದೆ.ಇದಕ್ಕೆ ಗ್ರಾಹಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದರು.
ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಮೋಹನ್‌ಕುಮಾರ್ ಮಾತನಾಡಿ, ಪ್ರಸ್ತುತ ಬಹುಪಾಲು ನಾಗರೀಕರು ಎಲ್.ಪಿ.ಜಿ 14ಕೆ.ಜಿ ಸಿಲಿಂಡರ್ ಗ್ಯಾಸ್ ಅನ್ನು 1100 ರೂ ನೀಡಿ ಖರೀದಿಸುತ್ತಿದ್ದಾರೆ. ಮನೆಯ ಅಡುಗೆ ಮನೆಗೆ ನೇರವಾಗಿ ಕೊಳವೆ ಮೂಲಕ ಪಿಎನ್‌ಜಿ ಗ್ಯಾಸ್ ಅಳವಡಿಸಿಕೊಂಡರೆ ಅನಾಹುತಗಳು ಕಡಿಮೆ ಮತ್ತು ೨೪ಗಂಟೆಗಳ ಕಾಲ ಗ್ಯಾಸ್ ಲಭ್ಯ ಎಂದರು.
ಕಾರ್ಯಕ್ರಮದಲ್ಲಿ ಎಜಿ&ಪಿ ಪ್ರಥಮ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಚೇತನ್, ನಗರಸಭಾ ಸದಸ್ಯರಾದ ರವೀಂದ್ರ,ಕುಮಾರ್, ಯೋಜನೆ ಗುತ್ತಿಗೆದಾರ ಅಬ್ರಹಾರ್, ಸ್ಥಳೀಯ ಮುಖಂಡರಾದ ಜಯಶೀಲ ಸೇರಿದಂತೆ ಹಲವು ನಾಗರಿಕರಿದ್ದರು.




