Monday, November 23, 2026

ಪ್ರಾಯೋಗಿಕ ಆವೃತ್ತಿ

ನಾಳೆ ಪ್ರೊ. ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಪ್ರದಾನ

ಪ್ರೊ.ಎಚ್ ಎಲ್ ಕೇಶವಮೂರ್ತಿ ಪ್ರತಿಷ್ಠಾನ ವತಿಯಿಂದ 5 ನೇ ವರ್ಷದ ಪ್ರೊ.ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭವು ಡಿ.28 ಬೆಳಿಗ್ಗೆ 10.30 ಕ್ಕೆ ಮಂಡ್ಯನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನ ನಡೆಯಲಿದೆ.

ಈ ಸಾಲಿನ ಪ್ರಶಸ್ತಿಯನ್ನು ಸಾಂಸ್ಕೃತಿಕ ಚಿಂತಕ ಹಾಗೂ ಹೋರಾಟಗಾರ ಕೋಟಗಾನಹಳ್ಳಿ ರಾಮಯ್ಯ ಅವರಿಗೆ ಪ್ರದಾನ ಮಾಡಲಾಗುವುದು. ನಿವೃತ್ತ ಉಪನ್ಯಾಸಕ ಎಚ್ ಎನ್ ಶಿವಣ್ಣ ಗೌಡ ಪ್ರಶಸ್ತಿ ಪುರಸ್ಕೃತರನ್ನು ಕುರಿತು ಮಾತನಾಡುವರು. ಪ್ರೊ. ಎಚ್ ಎಲ್ ಕೇಶವಮೂರ್ತಿ ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ಸಮಾರಂಭ ಅಧ್ಯಕ್ಷತೆ ವಹಿಸುವರು.

ಕೋಟಗಾನಹಳ್ಳಿ ರಾಮಯ್ಯ ಅವರ ಪರಿಚಯ

ಕರ್ನಾಟಕದ ದಲಿತ ಚಳುವಳಿಯ ಸ್ಥಾಪಕರಲ್ಲಿ ಒಬ್ಬರಾದ ಕೆ.ರಾಮಯ್ಯನವರು. ತಮ್ಮ ಬದುಕನ್ನು ಕೇವಲ ದಲಿತ ಸೀಮಿತಗೊಳಿಸದೆ, ಜೀವನದುದ್ದಕ್ಕೂ ನೆಲಮೂಲ ಸಂಸ್ಕೃತಿಯ ಕುರಿತಯ ಗಾಢವಾಗಿ ಚಿಂತಿಸಿದವರು. ಈ ಕಾರಣಕ್ಕಾಗಿ ಅವರ ನಾಟಕ, ಕಾವ್ಯ ಹಾಗೂ ಇತರೆ ಕೃತಿಗಳಲ್ಲಿ ಅಪ್ಪಟ ದೇಶಿ ಚಿಂತನೆಯ ಸೊಗಡನ್ನು ಕಾಣಬಹುದಾಗಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೋಟಗಾನಹಳ್ಳಿಯ ದಲಿತ ಕುಟುಂಬದಲ್ಲಿ 1954ರಲ್ಲಿ ಜನಿಸಿದ ರಾಮಯ್ಯನವರು ಕಾಲೇಜು ವಿದ್ಯಾಭ್ಯಾಸವನ್ನು ತ್ಯಜಿಸಿ ದಲಿತ ಚಳುವಳಿಯಲ್ಲಿ ಸಕ್ರಿಯವಾದವರು. ಅಲ್ಲಿನ ಜಮೀನ್ದಾರಿ ಪದ್ಧತಿಯ ವಿರುದ್ಧ ಧ್ವನಿ ಎತ್ತಿದವರು. ಲಂಕೇಶ್ ಪತ್ರಿಕೆ, ಮುಂಗಾರು, ಸುದ್ದಿ ಸಂಗಾತಿ, ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ದುಡಿದ ನಂತರ ಕೆ.ರಾಮಯ್ಯನವರು ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡು ಹತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದರು.

ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ‘ಬೆಳ್ಳಿಚುಕ್ಕಿ’ ಸಿನಿಮಾಕ್ಕೆ ಕಥೆ-ಸಂಭಾಷಣೆ ಹಾಗೂ ಅತ್ಯಂತ ಜನಪ್ರಿಯವಾಗಿದ್ದ ಗ್ರಾಮೀಣ ಸಂಸ್ಕೃತಿಯ ಕಥನವುಳ್ಳ ‘ಸಂಕ್ರಾಂತಿ’ ಧಾರವಾಹಿಗೆ ಚಿತ್ರಕಥೆ ರಚಿಸಿದವರು. ಅವರ ಕವಿತೆಗಳು, ಹಾಡುಗಳಾಗಿ ರಂಗಭೂಮಿಯಲ್ಲಿ ಇಂದಿಗೂ ಪ್ರಸಿದ್ಧವಾಗಿವೆ.

ಕೋಲಾರ ಸಮೀಪದ ಅಂತರಗಂಗೆ ಬೆಟ್ಟದಲ್ಲಿ 2005ರಲ್ಲಿ ಇವರು ಸ್ಥಾಪಿಸಿದ ‘ಆದಿಮ’ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಿದೆ. ನಮ್ಮ ಜನಪದರ ಮೌಖಿಕ ಕಾವ್ಯ ಹಾಗೂ ಇತರೆ ದೇಶಿ ಸಂಸ್ಕೃತಿ ಚಿಂತನೆಗಳನ್ನು ಮುನ್ನೆಲೆಗೆ ತರುವುದರೊಂದಿಗೆ ಹಾಡು, ನೃತ್ಯ, ನಾಟಕಗಳ ಮೂಲಕ ಆಧುನಿಕ ಮನುಕುಲದ ವಿಕೃತಿಗಳಿಗೆ ಕೆ.ರಾಮಯ್ಯ ಮತ್ತು ಅರೆಯುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಇವರಿಗೆ ಸಂದಿವೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ