Saturday, November 21, 2026

ಪ್ರಾಯೋಗಿಕ ಆವೃತ್ತಿ

ಕಣ್ಮನ ಸೆಳೆಯುವ ವೈವಿಧ್ಯ ಪ್ರವಾಸಿ ತಾಣಗಳ ನೆಲೆ ಸಕ್ಕರೆನಾಡು…!

ವಿಶೇಷ ಲೇಖನ

ರಾಜ್ಯದ ದಕ್ಷಿಣ ಭಾಗದಲ್ಲಿರುವ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರ ಹಾಟ್‌ಸ್ಪಾಟ್ ಆಗಿದೆ. ವಿಶ್ವವಿಖ್ಯಾತ ಸ್ಥಳಗಳನ್ನು ಹೊಂದಿರುವ ಜಿಲ್ಲೆಯ ಬಹುಭಾಗ ಹಚ್ಚ ಹಸಿರಿನಿಂದ ಕೂಡಿದ ಪ್ರದೇಶವಾಗಿದೆ. ಇಪ್ಪತ್ತನೆಯ ಶತಮಾನದ ಪ್ರಾರಂಭದವರೆಗೂ ಒಣಭೂಮಿ ಪ್ರದೇಶವಾಗಿದ್ದು, ಕೃಷ್ಣರಾಜಸಾಗರ ಅಣೆಕಟ್ಟು ನಿರ‍್ಮಾಣವಾದ ನಂತರ ನೀರಾವರಿ ಸೌಲಭ್ಯ ಪಡೆದು ಆರ್ಥಿಕ ಪ್ರಗತಿಯತ್ತ ಸಾಗಿತು.

ನೀರಾವರಿ ಬೆಳೆಗಳಾದ ಕಬ್ಬು ಮತ್ತು ಭತ್ತವನ್ನು ಹೆಚ್ಚಾಗಿ ಬೆಳೆಯುವುದರಿಂದ ಜಿಲ್ಲೆಯನ್ನು ರಾಜ್ಯದ ಸಕ್ಕರೆ ಮತ್ತು ಭತ್ತದ ಕಣಜವೆಂದೂ ಕರೆಯುವುದುಂಟು. ಶಿವಸಮುದ್ರದಲ್ಲಿ 1902ರಲ್ಲಿ ಪ್ರಾರಂಭವಾದ ಜಲವಿದ್ಯುತ್ ಯೋಜನೆ ಏಷ್ಯಾದಲ್ಲೇ ಎರಡನೆಯದಾದ ವಿದ್ಯುತ್ ಕೇಂದ್ರ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಇದಲ್ಲದೆ ಕೃಷ್ಣರಾಜಸಾಗರ ಅಣೆಕಟ್ಟೆ, ಮೇಲುಕೋಟೆ ದೇವಸ್ಥಾನ, ಮೈಷುಗರ್ ಕಾರ್ಖಾನೆ, ಹುಲಿಕೆರೆ ಬುಗ ಸೇರಿದಂತೆ ಹಲವು ಸ್ಥಳಗಳು ವಿಶ್ವಮಟ್ಟದಲ್ಲಿ ಜಿಲ್ಲೆಗೆ ಪ್ರಖ್ಯಾತಿಯನ್ನು ತಂದು ಕೊಟ್ಟಿವೆ.

ಇನ್ನು ಜಿಲ್ಲೆಯ ಏಳೂ ತಾಲೂಕುಗಳು ಕಾವೇರಿ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿವೆ. ರೇಷ್ಮೆ ವ್ಯವಸಾಯವು ಲಾಭದಾಯಕವಾಗಿದ್ದು, ಎಲ್ಲಾ ತಾಲೂಕುಗಳಿಗೂ ಹಿಪ್ಪುನೇರಳೆ ವ್ಯವಸಾಯವು ವ್ಯಾಪಿಸುತ್ತಿದೆ. ಬಹುತೇಕ ಪ್ರವಾಸಿ ತಾಣಗಳಿಗೆ ಉತ್ತಮ ಸಂಚಾರ ಮಾರ್ಗ ಹಾಗೂ ಸಂಪರ್ಕಗಳನ್ನು  ಹೊಂದಿದೆ. ಮೈಸೂರು-ಬೆಂಗಳೂರು ರೈಲು ಹಾಗೂ ರಸ್ತೆ ಮಾರ್ಗಗಳು ಈ ಜಿಲ್ಲೆಯಲ್ಲಿ ಹಾದು ಹೋಗುತ್ತವೆ. ಇತ್ತೀಚಿನ ಎರಡು ದಶಕಗಳಲ್ಲಿ ಶೈಕ್ಷಣಿಕ ಪ್ರಗತಿ ಉಲ್ಲೇಖನೀಯವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಮಹಾವಿದ್ಯಾಲಯವೂ ಸೇರಿದಂತೆ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಸಾಂಸ್ಕೃತಿಕ ರಂಗದಲ್ಲೂ ಸಾಧನೆ ಗಣನೀಯವಾಗಿದೆ.

ಇತಿಹಾಸ ಪ್ರಸಿದ್ಧ ಪ್ರವಾಸಿ ಸ್ಥಳಗಳು 

ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ಮತ್ತು ಇತಿಹಾಸ ಪ್ರಸಿದ್ಧ ಸ್ಥಳಗಳಿವೆ. ಮೈಸೂರು ಸಂಸ್ಥಾನದ ರಾಜಧಾನಿಯಾಗಿ 1610 ರಿಂದ 1799 ರವರೆಗೆ ಮೆರೆದ ಶ್ರೀರಂಗಪಟ್ಟಣ, ಕಾವೇರಿಯ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳಿರುವ ಶಿವಸಮುದ್ರ, ಧನಗೂರು ಬಳಿಯ ಶಿಂಷಾ ಜಲಪಾತ, ಸುಂದರ ಉದ್ಯಾನದಿಂದ ಕಂಗೊಳಿಸುತ್ತಿರುವ ಕೃಷ್ಣರಾಜಸಾಗರ ಇವು ವಿಶ್ವ ಪ್ರಸಿದ್ಧವಾಗಿವೆ. ಶ್ರೀರಂಗಪಟ್ಟಣದ ಬಳಿ ಇರುವ ರಂಗನತಿಟ್ಟು ಪ್ರಸಿದ್ಧ ಪಕ್ಷಿಧಾಮವಾಗಿದೆ. ಮೇಲುಕೋಟೆ, ತೊಣ್ಣೂರು, ಶ್ರೀರಂಗಪಟ್ಟಣ, ಆದಿಚುಂಚನಗಿರಿ ಮುಂತಾದ ಯಾತ್ರಾ ಸ್ಥಳಗಳಿವೆ.

ಗಂಗರ ಕಾಲದ ಸುಂದರ ಬಸದಿ ಇರುವ ನಾಗಮಂಗಲ ತಾಲೂಕಿನ ಕಂಬದಹಳ್ಳಿ, ಜೈನರಿಗೆ ಪವಿತ್ರ ಸ್ಥಳವಾಗಿದೆ. ಕೃಷ್ಣರಾಜಪೇಟೆ ತಾಲೂಕಿನ ಗೋವಿಂದನಹಳ್ಳಿ, ಹೊಸಹೊಳಲು, ಕಿಕ್ಕೇರಿ, ಅಘಲಯ, ಅಗ್ರಹಾರ ಬಾಚಹಳ್ಳಿ, ಮಾದಾಪುರ ಮತ್ತು ತೆಂಗಿನಘಟ್ಟ, ನಾಗಮಂಗಲ ತಾಲೂಕಿನ ನಾಗಮಂಗಲ, ಬೆಳ್ಳೂರು ಮತ್ತು ಲಾಳನಕೆರೆ, ಮಂಡ್ಯ ತಾಲೂಕಿನ ಬಸರಾಳು, ಹೊಸಬೂದನೂರು ಮುಂತಾದ ಸ್ಥಳಗಳಲ್ಲಿ ಹೊಯ್ಸಳರ ಕಾಲದ ದೇವಾಲಯಗಳಿವೆ. ಆದಿರಂಗ, ಮಧ್ಯರಂಗ ಮತ್ತು ಅಂತ್ಯರಂಗ ಎಂಬ ರಂಗನಾಥ ದೇವಸ್ಥಾನಗಳ ಪೈಕಿ ಆದಿರಂಗ ಶ್ರೀರಂಗಪಟ್ಟಣದಲ್ಲೂ, ಮಧ್ಯರಂಗ ಶಿವಸಮುದ್ರ(ಕೊಳ್ಳೇಗಾಲ ತಾಲೂಕು)ದಲ್ಲೂ ಮತ್ತು ಅಂತ್ಯರಂಗ ತಮಿಳುನಾಡು ರಾಜ್ಯದಲ್ಲೂ ಇವೆ.

ಮಂಡ್ಯ ತಾಲೂಕಿನ ಬಸರಾಳಿನ ಚೆನ್ನಮಲ್ಲಿಕಾರ್ಜುನ ದೇವಾಲಯ, ಹೊಸಬೂದನೂರು ದೇವಾಲಯ, ಗುತ್ತಲಿನ ಅರ್ಕೇಶ್ವರ ಸ್ವಾಮಿ ದೇವಾಲಯ, ಸಾತನೂರು ಗ್ರಾಮದ ಕಂಬದ ನರಸಿಂಹಸ್ವಾಮಿ ದೇವಾಲಯ, ಮಳವಳ್ಳಿ ತಾಲೂಕಿನ ಶಿವನಸಮುದ್ರ, ಮುತ್ತತ್ತಿಯ ಶ್ರೀ ಮುತ್ತುರಾಯನ ಸ್ವಾಮಿ ದೇವಾಲಯ, ಬಸವನಬೆಟ್ಟದಲ್ಲಿರುವ ಬಸವೇಶ್ವರ ದೇವಾಲಯ, ಮತ್ತಿತಾಳೇಶ್ವರ, ಮಾರೇಹಳ್ಳಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ, ಅಂತರವಳ್ಳಿ, ಚಿಕ್ಕಮುತ್ತತ್ತಿ, ಮದ್ದೂರು ತಾಲೂಕಿನ ಹನುಮಂತನಗರ ಪರಿಸರ ಪ್ರವಾಸೋದ್ಯಮ ಉದ್ಯಾನವನ, ಕೊಕ್ಕರೆ ಬೆಳ್ಳೂರು, ಶಿವಪುರ ಸತ್ಯಾಗ್ರಹ ಸೌಧ, ಅರೆತಿಪ್ಪೂರು ಜೈನ ಸ್ಮಾರಕಗಳು, ವೈದ್ಯನಾಥಪುರ, ತೋಪಿನ ತಿಮ್ಮಪ್ಪ ದೇವಾಲಯ, ಉಗ್ರನರಸಿಂಹ ದೇವಾಲಯ, ಹೊಳೆ ಆಂಜನೇಯ ಸ್ವಾಮಿ ದೇವಾಲಯ, ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ, ಗುಂಬಜ್, ದರಿಯಾದೌಲತ್, ಘೋಸಾಯಿ ಘಾಟ್, ಡಂಜನ್, ಶ್ರೀರಂಗನಾಥಸ್ವಾಮಿ ದೇವಾಲಯ, ಕೋಟೆ ಪ್ರದೇಶ, ಪಶ್ಚಿಮವಾಹಿನಿ, ಶ್ರೀ ನಿಮಿಷಾಂಭ ದೇವಾಲಯಗಳಿವೆ.

ಹಾಗೇಯೆ ಕೆ.ಆರ್.ಎಸ್ ಅಣೆಕಟ್ಟು, ಬೃಂದಾವನ ಗಾರ್ಡನ್, ರಂಗನತಿಟ್ಟು, ಹುಲಿಕೆರೆ, ಬಲಮುರಿ ಮತ್ತು ಎಡಮುರಿ, ಸಂಗಮ, ಚಂದ್ರವನ ಆಶ್ರಮ, ಮಹದೇವಪುರ, ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯ, ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ, ಪಂಚಕಲ್ಯಾಣಿ, ಅಕ್ಕತಂಗಿ ಕೊಳ, ರಾಯಗೋಪುರ, ಧನುಷ್ಕೋಟಿ, ಕೆರೆತೊಣ್ಣೂರು, ಕುಂತಿಬೆಟ್ಟ, ಆರತಿ ಉಕ್ಕಡ, ಕೆ.ಆರ್.ಎಸ್ ಹಿನ್ನೀರು ಪ್ರದೇಶದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ, ಹರವು, ಮಲೆಮಹದೇಶ್ವರ ಸ್ವಾಮಿ ದೇವಾಲಯ ಹಾಗೂ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ, ಹಾಲತಿ ಬೆಟ್ಟ, ಕಂಬದಹಳ್ಳಿ, ಕೋಟೆಬೆಟ್ಟ, ಮುಳುಕಟ್ಟಮ್ಮ ದೇವಾಲಯ, ಸೌಮ್ಯಕೇಶವ ದೇವಾಲಯ ಮತ್ತು ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಫಾಲ್ಸ್, ಹೊಸಹೊಳಲು, ಕಿಕ್ಕೇರಿ, ಕಲ್ಲಹಳ್ಳಿ ಭೂವರಹನಾಥ, ಅಗ್ರಹಾರ ಬಾಚಹಳ್ಳಿ, ಅಂಬಿಗರಹಳ್ಳಿ, ಬೂಕನಕೆರೆ ಪ್ರವಾಸಿ ತಾಣಗಳಾಗಿದೆ.

ಜಿಲ್ಲೆಯಲ್ಲಿ ಒಟ್ಟು55 ಪ್ರವಾಸಿ ತಾಣಗಳಿದ್ದು, ಅವುಗಳಲ್ಲಿ ರಾಜ್ಯ ಸರ್ಕಾರವು 34 ಪ್ರಮುಖ ತಾಣಗಳನ್ನು ಗುರುತಿಸಿದೆ. ಈಗಾಗಲೇ ರಾಜ್ಯ ರ‍್ಕಾರದಿಂದ ಹಲವಾರು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಗೃಹ, ಲ್ಯಾಂಡ್ ಸ್ಕೇಪಿಂಗ್, ಪಾಥ್ ವೇ, ಪಾರ್ಕಿಂಗ್ ಆಸನಗಳ ವ್ಯವಸ್ಥೆ ಇದೆ. ಮೆಟ್ಟಿಲುಗಳ ನಿರ್ಮಾಣ, ಯಾತ್ರಿ ನಿವಾಸ, ಡಾರ್ಮೆಂಟರಿ ಇತ್ಯಾದಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಹಲವಾರು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನು ಪ್ರವಾಸೋದ್ಯಮ ನೀತಿ 2020-25 ರಡಿ ಜಿಲ್ಲೆಯಲ್ಲಿ ಕೇಂದ್ರೀಕೃತ ಪ್ರವಾಸಿ ತಾಣವನ್ನು ಗುರುತಿಸಲಾಗಿದೆ.

ದೇವಾಲಯದ ನಾಡು ಮಂಡ್ಯ
ಅನಂತ ಪದ್ಮನಾಭ ಮತ್ತು ಕಾಶಿ ವಿಶ್ವೇಶ್ವರ ದೇವಾಲಯ ಮಂಡ್ಯ ತಾಲೂಕಿನ ಹೊಸ ಬೂದನೂರು ಗ್ರಾಮದಲ್ಲಿವೆ. ಅನಂತಪದ್ಮನಾಭ ದೇಗುಲ ಕ್ರಿ.ಶ. 127ರಲ್ಲಿ ಹೊಯ್ಸಳರ ಮುಮ್ಮಡಿ ನರಸಿಂಹನ ಕಾಲದಲ್ಲಿ ನಿರ‍್ಮಾಣವಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ದೇವಾಲಯವನ್ನು ರಾಜ್ಯ ಪುರಾತತ್ವ ಇಲಾಖೆ ದುರಸ್ತಿ ಮಾಡಿದೆ. ಇದೇ ಕಾಲಘಟ್ಟದ ಕಾಶಿವಿಶ್ವೇಶ್ವರ ದೇಗುಲವು ಶಿಲ್ಪಕಲಾ ಕೆತ್ತನೆಯಿಂದ ಆಕ‍ರ್ಷಕವಾಗಿದೆ. ಶಿಥಿಲಗೊಂಡಿದ್ದ ಆಲಯವನ್ನು ರಾಜ್ಯ ಪುರಾತತ್ವ ಇಲಾಖೆ, ಧಾರ್ಮಿಕ ಸ್ಥಳದ ಪುನರುತ್ಥಾನ ಟ್ರಸ್ಟ್ ಹಾಗೂ ಗ್ರಾಮಸ್ಥರ ಸಹಕಾರದಿಂದ ಜೀರ್ಣೋದ್ಧಾರ ಮಾಡಲಾಗಿದೆ.

ಏಷ್ಯಾದಲ್ಲಿಯೇ ಮೊದಲ ಸಕ್ಕರೆ ಕಾರ್ಖಾನೆ 
ಮೈಷುಗರ್ ಏಷ್ಯಾದಲ್ಲಿಯೇ ಮೊದಲ ಸಕ್ಕರೆ ಕಾರ್ಖಾನೆ ಎಂಬ ಹಿರಿಮೆಗೆ ಮಂಡ್ಯ ನಗರದಲ್ಲಿರುವ ಮೈಸೂರು ಸಕ್ಕರೆ ಕಾರ್ಖಾನೆ ಪಾತ್ರವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಮಿರ್ಜಾ ಇಸ್ಮಾಯಿಲ್ ಹಾಗೂ ಕೆನಡಾದ ವೆಸ್ಲಿ ಸಿ.ಕೋಲ್ಡನ್ ಎಂಬ ತಜ್ಞರಿಂದ ಈ ಕಾರ್ಖಾನೆ ನಿರ್ಮಾಣಗೊಂಡು ಜಿಲ್ಲೆಯ ಜೀವನಾಡಿ ಆರ್ಥಿಕ ಸಂಪನ್ಮೂಲದ ಕಣಜ ಎಂದೇ ಖ್ಯಾತಿ ಪಡೆದಿದೆ. ಕಾರ್ಖಾನೆಯನ್ನು ನಂಬಿ ಸಾವಿರಾರು ಕಾರ್ಮಿಕರು ಸಹಸ್ರಾರು ರೈತ ಕುಟುಂಬಗಳು ನೆಮ್ಮದಿಯ ಬದುಕು ಕಟ್ಟಿಕೊಂಡಿವೆ. ಆದರೆ ಕೆಲ ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿದ್ದು, ಜಿಲ್ಲೆಯ ಜನರಲ್ಲಿ ಬೇಸರ ತರಿಸಿದೆ.

ಮಲ್ಲಿಕಾರ್ಜುನ ದೇವಾಲಯ
ಜಿಲ್ಲಾ ಕೇಂದ್ರದಿಂದ 24 ಕಿ.ಮೀ ದೂರದಲ್ಲಿರುವ ಬಸರಾಳು ಮಲ್ಲಿಕಾರ್ಜುನ ದೇವಾಲಯ ಹೊಯ್ಸಳರ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಹೊಯ್ಸಳರ ಕಾಲದಲ್ಲಿ ಇದು ಬಸುರಿವಾಳ ಎಂಬ ಹೆಸರಿನ ಅಗ್ರಹಾರವಾಗಿತ್ತು. ಇಲ್ಲಿರುವ ಮಲ್ಲಿಕಾರ್ಜುನ ದೇವಾಲಯವು ಹೊಯ್ಸಳ ದೊರೆ ಎರಡನೇಯ ನರಸಿಂಹನ ದಂಡನಾಯಕ ಹರಿಹರನಿಂದ ಸ್ಥಾಪಿಸಲ್ಪಟ್ಟಿತ್ತು. ಹರಿಹರ ಸೇವುಣರನ್ನು ಸೋಲಿಸಿ, ಗೆಲುವು ಸಾಧಿಸಿದ ನೆನಪಿಗಾಗಿ ತನ್ನ ತಂದೆಯ ಹೆಸರಿನಲ್ಲಿ ಈ ದೇವಾಲಯ ಕಟ್ಟಿಸಿದ ಎಂಬ ಇತಿಹಾಸವಿದೆ.

ಹುಲಿಕೆರೆ ಟನಲ್
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ಕೃಷ್ಣರಾಜಸಾಗರ ಅಣೆಕಟ್ಟು ವ್ಯಾಪ್ತಿಯ ವಿಶ್ವೇಶ್ವರಯ್ಯ ನಾಲೆಗೆ ಮಂಡ್ಯ ತಾಲೂಕಿನ ಹುಲಿಕೆರೆ ಬಳಿ 2.80 ಕಿ.ಮೀ ಸುರಂಗ ನಾಲೆ  ನಿರ್ಮಿಸಲಾಗಿದೆ. ಸುರಂಗದೊಳಗೆ ಹರಿದು ಬರುವ ಕಾವೇರಿಯ ದೃಶ್ಯವನ್ನು ನೋಡುವುದೇ ಒಂದು ರೀತಿಯ ಸೊಗಸು. ಏಷ್ಯಾದಲ್ಲಿ ಖ್ಯಾತಿ ಪಡೆದುಕೊಂಡಿರುವ ಟನಲ್ ತಾಲೂಕಿನ ಹುಲಿಕೆರೆ ಬಳಿ ವಿಶ್ವೇಶ್ವರಯ್ಯ ನಾಲೆಗೆ ನಿರ್ಮಿಸಿರುವ ಟನಲ್ 2.8 ಕಿ.ಮೀ ಉದ್ದ ಹಾಗೂ 1.73 ಮೀ ಅಗಲವಿದೆ. ಇದರೊಂದಿಗೆ ಏಷ್ಯಾದಲ್ಲಿ ಮೊದಲ ಹಾಗೂ ಉದ್ದದ ಟನಲ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರಲ್ಲಿ 2,200 ಕ್ಯೂಸೆಕ್ ನೀರು ಹರಿಸಬಹುದಾಗಿದೆ. ಮಿರ್ಜಾ ಇಸ್ಮಾಯಿಲ್ ದಿವಾನರಾಗಿದ್ದ ಕಾಲದಲ್ಲಿ 1927 ರಿಂದ 1931ರವರೆಗೆ ಬುಗದ ನಿರ್ಮಾಣ ಕಾರ‍್ಯ ನಡೆದಿದ್ದು, ಅಂದಾಜು 54.64 ಲಕ್ಷ ರೂ ವೆಚ್ಚವಾಗಿತ್ತು.

ಕೃಷಿ ವಿಶ್ವವಿದ್ಯಾನಿಲಯ
ಕೃಷಿಯನ್ನು ಉತ್ತೇಜಿಸಲು, ತಳಿಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮನಗಂಡ ಮೈಸೂರು ರಾಣಿ ಕೆಂಪರಾಜಮ್ಮಣ್ಣಿ ವಿ.ಸಿ.ಫಾರಂನಲ್ಲಿ ತಮಗೆ ಸೇರಿದ 650ಕ್ಕೂ ಹೆಚ್ಚು ಎಕರೆ ಜಾಗವನ್ನು ಕೃಷಿ ಸಂಶೋಧನೆಗೆ ಮೀಸಲಿಟ್ಟರು. ಬಳಿಕ ಅದು ಕಾಲೇಜಾಗಿ ಬದಲಾವಣೆಗೊಂಡು, ಈಗ ಕೃಷಿ ವಿಶ್ವವಿದ್ಯಾನಿಲಯವಾಗಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಹೆಮ್ಮೆಯನ್ನು ಎತ್ತರಕ್ಕೇರಿಸಿದ ಹಿರಿಮೆ ಈ ಸಂಸ್ಥೆಗೆ ಸೇರುತ್ತದೆ. ಭತ್ತ, ರಾಗಿ, ಕಬ್ಬು ಸೇರಿದಂತೆ ವಿವಿಧ ಬೆಳೆಗಳ ತಳಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಪಡಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ರಾಗಿ ಲಕ್ಷ್ಮಣ್ಣಯ್ಯ ಅವರು ರಾಗಿ ಕೃಷಿಯಲ್ಲಿ ವಿಶೇಷ ಸಂಶೋಧನೆ ನಡೆಸಿ ಆಫ್ರಿಕಾ ದೇಶದ ರಾಗಿ ತಳಿಯನ್ನು ನಮ್ಮ ದೇಶದ ರಾಗಿ ತಳಿಯೊಂದಿಗೆ ಮಿಶ್ರಣ ಮಾಡಿ ಕಂಡು ಹಿಡಿದ ಇಂಡೋ-ಆಫ್ರಿಕಾ ರಾಗಿ ತಳಿ `ಇಂಡಾಫ್’ ಆಗಿ ಪ್ರಖ್ಯಾತಿ ಪಡೆದಿದೆ.

ಕಂಬದ ನರಸಿಂಹಸ್ವಾಮಿ
ಮಂಡ್ಯದಿಂದ ನಾಲ್ಕೂವರೆ ಕಿ.ಮೀ ದೂರದಲ್ಲಿರುವ ಕೊಮ್ಮೇರಹಳ್ಳಿ ಗ್ರಾಮದಿಂದ ಸುಮಾರು ಒಂದೂವರೆ ಕಿ.ಮಿ ದೂರ ಸಾಗಿದರೆ ಕಂಬದ ನರಸಿಂಹಸ್ವಾಮಿ ದೇವಾಲಯ ಸಿಗುತ್ತದೆ. ಪ್ರತಿ ಶ್ರಾವಣದಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕಡೇ ಶ್ರಾವಣ ಶನಿವಾರ ನರಸಿಂಹಸ್ವಾಮಿ ದೇವರ ಉತ್ಸವ ನಡೆಯಲಿದ್ದು, ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ.

ಕಾಳಿಕಾಂಭ ದೇವಾಲಯ
ಮಂಡ್ಯ ನಗರದ ಪೇಟೆ ಬೀದಿಯಲ್ಲಿರುವ ಶಕ್ತಿದೇವತೆ ಕಾಳಿಕಾಂಭ ದೇವಾಲಯ ಸಹಸ್ರಾರು ಭಕ್ತರ ಪಾಲಿಗೆ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಲ್ಲಿ ಅಸಂಖ್ಯಾತ ಜನರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದೇ ದೇವಾಲಯದ ಆವರಣದಲ್ಲಿ ಬಿಸಿಲು ಮಾರಮ್ಮ, ಗಣಪತಿ ದೇಗುಲವಿದೆ.

ಲಕ್ಷ್ಮಿಜನಾರ್ಧನ ದೇವಾಲಯ
ಮಂಡ್ಯ ನಗರದ ಪೇಟೆಬೀದಿಯಲ್ಲಿರುವ ಲಕ್ಷ್ಮಿಜನಾರ್ಧನ ದೇವಾಲಯ ಪುರಾಣ ಪ್ರಸಿದ್ಧಿ ಪಡೆದಿದೆ. ಇತಿಹಾಸ ಪ್ರಸಿದ್ಧ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ವೈರಮುಡಿ ಜಾತ್ರಾ ಮಹೋತ್ಸವದ ದಿನದಂದು ಜಿಲ್ಲಾ ಖಜಾನೆಯಲ್ಲಿರುವ ಆಭರಣಗಳಿಗೆ ಮೊದಲ ಪೂಜೆಯನ್ನು ಈ ಲಕ್ಷ್ಮಿಜನಾರ್ಧನ ದೇವಾಲಯಲ್ಲಿ ಸಲ್ಲಿಸಲಾಗುತ್ತದೆ. ಇದಲ್ಲದೆ ವಿದ್ಯಾಗಣಪತಿ, ರಾಘವೇಂದ್ರ, ಚಾಮುಂಡೇಶ್ವರಿ, ಕಾಲಭೈರವೇಶ್ವರ, ಶನಿದೇವರು, ರ‍್ಕೇಶ್ವರ ಸೇರಿದಂತೆ ಹಲವು ದೇವಾಲಯ ನಗರದಲ್ಲಿದೆ.

ಸತ್ಯಾಗ್ರಹದ ನಾಡು ಮದ್ದೂರು
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಿಗುವ ಶಿವಪುರ ಸತ್ಯಾಗ್ರಹ ಸೌಧ ಸ್ವಾತಂತ್ರ ಸಂಗ್ರಾಮದ ಘಟನೆಗಳನ್ನು ನೆನಪಿಸುವ ಸ್ಥಳವಾಗಿದೆ. ಜಿಲ್ಲಾ ಕೇಂದ್ರದಿಂದ 20 ಕಿ.ಮೀ ದೂರದಲ್ಲಿರುವ ಶಿವಪುರದಲ್ಲಿ 1938ರ ಏಪ್ರಿಲ್ 11, 12 ಮತ್ತು 13ರಂದು ಟಿ.ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ಸಿನ ಮೊದಲ ಅಧಿವೇಶನ ನಡೆಯಿತು. ಸರ್ಕಾರದ ಪ್ರತಿಬಂಧಕಾಜ್ಞೆ ನಡುವೆಯೂ ಅಧಿವೇಶನ ನಡೆದ ಸ್ಥಳದಲ್ಲಿ ಜಮಾವಣೆಗೊಂಡು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ಹಲವರು ಸೆರೆವಾಸಕ್ಕೆ ಗುರಿಯಾದರು. ಈ ಘಟನೆಯ ನೆನಪಿಗಾಗಿ ನಿ ರ‍್ಮಾಣಗೊಂಡಿದ್ದೇ ಐತಿಹಾಸಿಕ ಶಿವಪುರ ಧ್ವಜಸತ್ಯಾಗ್ರಹ ಸೌಧ. ಆದರೆ ಇತ್ತೀಚಿನ ದಿನಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೊರಗುತ್ತಿದೆ.

ಕೊಕ್ಕರೆ ಬೆಳ್ಳೂರು
ಮದ್ದೂರು ತಾಲೂಕು ಕೇಂದ್ರದಿಂದ 20 ಕಿ.ಮೀ ದೂರದಲ್ಲಿರುವ ಕೊಕ್ಕರೆ ಬೆಳ್ಳೂರು ಒಂದು ವಿಶ್ವ ಪ್ರಸಿದ್ಧ ಪಕ್ಷಿಧಾಮ. ಪ್ರತಿ ವರ್ಷ ಚಳಿಗಾಲದ ಅವಧಿಯಲ್ಲಿ ದೇಶ-ವಿದೇಶಗಳ ಬೇರೆ ಭಾಗಗಳಿಂದ ವಂಶಾಭಿವೃದ್ಧಿಗಾಗಿ ಹಲವು ಬಗೆಯ ಕೊಕ್ಕರೆಗಳು ಇಲ್ಲಿಗೆ ಬರುತ್ತವೆ. ಪ್ರಕೃತಿ ಸಹಜವಾದ ಈ ಪ್ರದೇಶವು ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಸಾವಿರಾರು ಕಿ.ಮೀ ದೂರದಿಂದ ಸಂತಾನೋತ್ಪತ್ತಿಗಾಗಿ ಬರುವ ಹೆಜ್ಜಾರ‍್ಲೆ(ಫೆಲಿಕಾನ್) ಹಾಗೂ ಬಣ್ಣದ ಕೊಕ್ಕರೆ (ಪೇಂಟೆಡ್ ಸ್ಟರ್‍ಕ್ ) ಹಕ್ಕಿಗಳಿಗೆ ನೆಲೆ ಒದಗಿಸಿದೆ.

ಮದ್ದೂರಮ್ಮ ದೇವಾಲಯ
ಮದ್ದೂರಮ್ಮ ದೇವಾಲಯದ ಪಟ್ಟಣದ ಶಕ್ತಿ ದೇವತೆ. ಮದ್ದೂರಮ್ಮನ ಜಾತ್ರಾ ಮಹೋತ್ಸವ ಪ್ರತಿ ವರ್ಷದ ವೈಶಾಖ ಮಾಸದ ಹುಣ್ಣಿಮೆಯ ಆಸುಪಾಸಿನಲ್ಲಿ ನಡೆಯುತ್ತದೆ. ಜಾತ್ರೆ ಅಂಗವಾಗಿ ಬಂಡಿ ಉತ್ಸವ, ಕೊಂಡೋತ್ಸವ, ಸಿಡಿ ಉತ್ಸವ, ಉಗ್ರನರಸಿಂಹಸ್ವಾಮಿ ರಥೋತ್ಸವ, ದೇವಿಯ ಪಲ್ಲಕ್ಕಿ ಹಾಗೂ ಓಕುಳಿ ಉತ್ಸವ ನಡೆಯುತ್ತದೆ. ಮದ್ದೂರಮ್ಮ ದೇವಿಯು ಕೊಡಗಿನಿಂದ ಇಲ್ಲಿಗೆ ಬಂದು ನೆಲೆಯಾದಳೆಂದು ಪುರಾಣಗಳಿಂದ ತಿಳಿದು ಬರುತ್ತದೆ.

ಉಗ್ರ ನರಸಿಂಹಸ್ವಾಮಿ ದೇವಾಲಯ
ಮದ್ದೂರು ಪಟ್ಟಣದಲ್ಲಿರುವ ಉಗ್ರ ನರಸಿಂಹಸ್ವಾಮಿ ದೇವಾಲಯ ಹೊಯ್ಸಳ ಶೈಲಿಯಲ್ಲಿದೆ. ಐದು ಅಂತಸ್ತುಗಳ ದ್ರಾವಿಡ ಶೈಲಿಯ ಗೋಪುರವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಜಯ-ವಿಜಯರ ವಿಗ್ರಹಗಳಿವೆ. ಗರ್ಭಗೃಹದಲ್ಲಿ ಎತ್ತರವಾದ ಕೃಷ್ಣಶಿಲೆಯ ಸುಂದರ ಉಗ್ರನರಸಿಂಹಮೂರ್ತಿ ಇದೆ. ಗರ್ಭಗೃಹದ ಮುಂದಿರುವ ಪ್ರಾಕಾರದಲ್ಲಿ ಸುಂದರವಾದ ಕಪ್ಪುಕಲ್ಲಿನ ವೃತ್ತಾಕಾರದ ಕಂಬಗಳಿದ್ದು, ಇದರಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಹೊರ ಪ್ರಾಕಾರದಲ್ಲಿ ಕಲ್ಲಿನ ಕಂಬಗಳಿವೆ. ಗರ್ಭಗೃಹದಲ್ಲಿರುವ ಸ್ವಾಮಿಗೆ ಎಂಟು ಕೈ, ಮೂರು ಕಣ್ಣು ಇರುವುದು ವಿಶೇಷ. ಇದಲ್ಲದೆ ಶ್ರೀನಿವಾಸ, ಶ್ರೀಕೃಷ್ಣ, ಯಶೋಧಾ, ಸೌಮ್ಯನಾಯಕಿ, ನರಸಿಂಹನಾಯಕಿ ವಿಗ್ರಹವಿದೆ. ಶ್ರೀರಾಮ, ಸೀತಾ, ಲಕ್ಷ್ಮಣ, ಆಂಜನೇಯ ವಿಗ್ರಹಗಳನ್ನು ಕಾಣಬಹುದು.

ವೈದ್ಯನಾಥೇಶ್ವರ
ಮದ್ದೂರು ತಾಲೂಕು ಕೇಂದ್ರದಿಂದ 3 ಕಿ.ಮೀ ಅಂತರದಲ್ಲಿ ಶಿಂಷಾ ನದಿಯ ಬಲದಂಡೆಯ ಮೇಲೆ ವೈದ್ಯನಾಥೇಶ್ವರ ಎಂಬ ಪ್ರಾಚೀನ ದೇವಸ್ಥಾನ ಇದೆ. ಈ ದೇವಾಲಯದಿಂದಲೇ ಊರಿಗೆ ವೈದ್ಯನಾಥಪುರವೆಂಬ ಹೆಸರು ಬಂದಿದೆ. ದೇವಾಲಯದ ಮೂಲ ಗರ್ಭಗೃಹದಲ್ಲಿ ಒಂದೆಡೆ ಹುತ್ತವಿದ್ದು, ಅದರ ಮೃತ್ತಿಕ ಪ್ರಸಾದದಿಂದ ವ್ಯಾದಿಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ. ಹೊಯ್ಸಳ ದೊರೆಗಳು ಹಾಗೂ ಸೇನಾಧಿಕಾರಿಗಳು ವೈದ್ಯನಾಥೇಶ್ವರನಿಗೆ ದಾನವಿತ್ತ ಅನೇಕ ಶಾಸನ ದೊರೆತಿವೆ. ಕಾರ್ತಿಕ ಮಾಸದಲ್ಲಿ ವೈದ್ಯನಾಥೇಶ್ವರನಿಗೆ ವಿಶೇಷ ಪೂಜೆ ನಡೆಯುತ್ತದೆ.

ತೋಪಿನ ತಿಮ್ಮಪ್ಪ
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಆಬಲವಾಡಿ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ದೇವಾಲಯವಿದೆ. ಪ್ರತಿ ವರ್ಷ ಜುಲೈನಲ್ಲಿ ನಡೆಯುವ ಜಾತ್ರೆಯಲ್ಲಿ ತಿಮ್ಮಪ್ಪನಿಗೆ ತಾವರೆ ಎಲೆಯಲ್ಲಿ ನೈವೇದ್ಯ ಅರ್ಪಿಸಿ ನಂತರ ಭಕ್ತರಿಗೆಲ್ಲ ತಾವರೆ ಎಲೆಯಲ್ಲಿ ಊಟ ನೀಡುವುದು ಅಲ್ಲಿನ ವಿಶೇಷ.

ಹನುಮಂತನಗರ
ಮಂಡ್ಯದಿಂದ ಕೆ.ಎಂ.ದೊಡ್ಡಿಗೆ ತೆರಳುವ ಮರ‍್ಗದಲ್ಲಿ 16 ಕಿ.ಮೀ ಸಾಗಿಸಿದರೆ ಹನುಮಂತನಗರ ಸಿಗುತ್ತದೆ. ಕರಡಕೆರೆಯಲ್ಲಿ ಪ್ರಸಿದ್ಧವಾದ ಆಂಜನೇಯ ದೇವಾಲಯವಿದೆ. ಈ ಆಂಜನೇಯ ದೇವಾಲಯದ ಪ್ರಭಾವದಿಂದ ಜಾಗಕ್ಕೆ ಹನುಮಂತನಗರ ಎಂಬ ಹೆಸರು ಬಂದಿದೆ. ಕೋಟ್ಯಂತರ ರೂ ವೆಚ್ಚದಲ್ಲಿ ಆತ್ಮಲಿಂಗೇಶ್ವರ ದೇವಸ್ಥಾನ ನರ‍್ಮಾಣಗೊಂಡಿದೆ. ಈ ಕ್ಷೇತ್ರದಲ್ಲಿ ಪ್ರಕೃತಿ ಮತ್ತು ಯೋಗ ಚಿಕಿತ್ಸೆ, ಔಷಧ ಚಿಕಿತ್ಸೆ ಕೇಂದ್ರವಿದೆ. ಪ್ರತಿ ವರ್ಷ ಶಿವರಾತ್ರಿ ಹಬ್ಬದ ಅಂಗವಾಗಿ ಭಾರೀ ದನಗಳ ಜಾತ್ರೆ ನಡೆಯುತ್ತದೆ.

ಜಲಪಾತಗಳ ತವರು ಮಳವಳ್ಳಿ
ಮಳವಳ್ಳಿ ತಾಲೂಕಿನಲ್ಲಿರುವ ಗಗನಚುಕ್ಕಿ ಜಲಪಾತ ವಿಶ್ವವಿಖ್ಯಾತ ಪಡೆದಿದೆ. ಈ ಜಲಪಾತದಿಂದ ಹರಿಯುವ ನೀರನ್ನು ಉಪಯೋಗಿಸಿಕೊಂಡು ವಿದ್ಯುತ್ ತಯಾರಿಸಲು 1902ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನ್ ಶೇಷಾದ್ರಿ ಅಯ್ಯರ್ ನೇತೃತ್ವದಲ್ಲಿ ಯೋಜನೆ ರೂಪಿಸಲಾಯಿತು. ಇದು ಏಷ್ಯಾದಲ್ಲಿಯೇ ಪ್ರಥಮ ಜಲ ವಿದ್ಯುತ್ ಘಟಕ ಎಂಬ ಮಾನ್ಯತೆ ಪಡೆದಿದೆ. ಮಳವಳ್ಳಿ ತಾಲೂಕಿನ ಶಿವನಸಮುದ್ರ(ಬ್ಲಫ್)ದಲ್ಲಿರುವ ಈ ಜಲಪಾತವು ಮಂಡ್ಯ ಜಿಲ್ಲಾ ಕೇಂದ್ರದಿಂದ 65 ಕಿ.ಮೀ. ದೂರದಲ್ಲಿದೆ. ಸುಮಾರು 220 ಅಡಿ ಗಳಷ್ಟು ಎತ್ತರದಿಂದ ಧುಮುಕವ ಜಲಧಾರೆ ರಮ್ಯ ಮನೋಹರವಾಗಿರುತ್ತದೆ. ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪ್ರದೇಶದ ಸುತ್ತಮುತ್ತ ಬೆಟ್ಟಗುಡ್ಡಗಳ ಸಾಲಿದ್ದು, ಸಮುದ್ರ ಮಟ್ಟದಿಂದ 1988 ಅಡಿಗಳಷ್ಟು ಎತ್ತರದಲ್ಲಿದೆ.

ಮುತ್ತತ್ತಿ
ಜೀವನದಿ ಕಾವೇರಿಯ ದಡದಲ್ಲಿ ಪ್ರಕೃತಿಯ ನಡುವೆ ಇರುವ ಪುಟ್ಟ ಗ್ರಾಮ ಮುತ್ತತ್ತಿ. ಶ್ರೀರಾಮನ ಪತ್ನಿ ಸೀತಾದೇವಿಯು ಸ್ನಾನ ಮಾಡುವಾಗ ಆಕೆಯ ಮುತ್ತಿನ ಮೂಗುತಿ ನೀರಿನಲ್ಲಿ ಬಿದ್ದು ಹೋಯಿತೆಂದೂ, ಅದನ್ನು ರಾಮನ ಭಂಟನಾದ ಹನುಮಂತನು ತನ್ನ ಬಾಲದಿಂದ ಎತ್ತಿ ಕೊಟ್ಟ ಕಾರಣದಿಂದ ಮುತ್ತತ್ತಿ ಎಂಬ ಹೆಸರು ಬಂದಿದೆ ಎಂಬ ಧಾರ್ಮಿಕ ಐತಿಹ್ಯವಿದೆ. ಇಲ್ಲಿಯ ದೇವಸ್ಥಾನದಲ್ಲಿರುವ ಹನುಮಂತನನ್ನು ಮುತ್ತತ್ತಿರಾಯನೆಂಬ ಹೆಸರಿನಿಂದ ಪೂಜಿಸಲಾಗುತ್ತಿದೆ. ಜಿಲ್ಲಾ ಕೇಂದ್ರದಿಂದ 70 ಕಿ.ಮೀ ದೂರದಲ್ಲಿರುವ ಮುತ್ತತ್ತಿ ಪ್ರಕೃತಿಯನ್ನೇ ಮೈದುಂಬಿ ಹೊಂದಿಕೊಂಡಿರುವ ಸುಂದರ ತಾಣ.

ಬೆಂಕಿಹಳ್ಳ ಜಲಪಾತ
ಮಳವಳ್ಳಿ ತಾಲೂಕಿನ ಹಲಗೂರು ಸಮೀಪ ಬೆಂಕಿಹಳ್ಳ ಜಲಪಾತವಿದೆ. ಜಿಲ್ಲೆಯ ಜೀವನದಿ ಕಾವೇರಿಗೆ ಉಪನದಿಯಾಗಿ ಶಿಂಷಾ ನದಿಯು ಮುತ್ತತ್ತಿ ಸಮೀಪ ಕಾವೇರಿಯನ್ನು ಸೇರುತ್ತದೆ. ಕಾವೇರಿ ನದಿಗೆ ಸ್ವಲ್ಪ ದೂರದಲ್ಲಿ ಶಿಂಷಾ ನದಿ ರಭಸವಾಗಿ ಹರಿದು ಸೃಷ್ಟಿ ಮಾಡುವುದೇ ಬೆಂಕಿಹಳ್ಳ ಜಲಪಾತ. ಜಲಪಾತದ ತೀರದಲ್ಲಿ ಬೆಂಕಿ ಕಾಯಿಸಿಕೊಂಡಷ್ಟು ಶಾಖ ಬರುವುದರಿಂದ ಈ ಜಲಪಾತಕ್ಕೆ ಬೆಂಕಿಹಳ್ಳ ಅಥವಾ ಕೊಂಡಹಳ್ಳ ಎಂಬ ಹೆಸರು ಬಂದಿದೆ. ಬಂಡೆಗಳ ಮಧ್ಯೆ ನೀರು ಹರಿಯುವಾಗ ಜಲಪಾತ ತುಂಬಾ ವಿಶಾಲವಾಗಿ ಕಾಣುವುದು ನೋಡುಗರ ಮನ ತಣಿಸುತ್ತದೆ.

ಕಾವೇರಿ ಫಿಶಿಂಗ್ ಕ್ಯಾಂಪ್
ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ಕಾವೇರಿ ಅಭಯಾರಣ್ಯದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ನಡುವೆ ಭೀಮೇಶ್ವರಿ ಬಳಿ ಕಾವೇರಿ ಫಿಶಿಂಗ್ ಕ್ಯಾಂಪ್ ತೆರೆದಿದೆ. ಮಂಡ್ಯದಿಂದ 57 ಕಿ.ಮೀ ದೂರದಲ್ಲಿದ್ದು, ದೇಶ ವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿ ಮಹಶೀರ್ ತಳಿ ಮೀನು ಹಿಡಿದು ಮತ್ತೆ ಬಿಡುವ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಕಾವೇರಿ ಅಭಯಾರಣ್ಯ
ಮಳವಳ್ಳಿ ತಾಲೂಕಿನಲ್ಲಿರುವ ಅರಣ್ಯ ಪ್ರದೇಶವನ್ನು ಕಾವೇರಿ ಅಭಯಾರಣ್ಯವೆಂದು ರಾಜ್ಯ ಸರ್ಕಾರ 14-01-1987ರಲ್ಲಿ ಘೋಷಿಸಿದ್ದು, ಇದರ ಒಟ್ಟು ವಿಸ್ತೀರ್ಣ 526.96 ಚ.ಕಿ.ಮೀ ಆಗಿದೆ. ಈ ಅಭಯಾರಣ್ಯ ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಹಬ್ಬಿಕೊಂಡಿದೆ. ತೊರೆಮತ್ತೆ ಮತ್ತು ನೇರಳೆ ಈ ಅಭಯಾರಣ್ಯದಲ್ಲಿ ಕಂಡುಬರುವ ಪ್ರಮುಖ ಸಸ್ಯ ಪ್ರಬೇಧವಾಗಿದೆ. ಇದಲ್ಲದೆ ಹುಣಸೆ, ಆಲ, ಅರಳಿ, ಕಮರ ಹಾಗೂ ಚುಜ್ಜಲು ಜಾತಿಯ ಮರಗಳನ್ನು ಕಾಣಬಹುದು.

ಕೋಟೆನಾಡು ಶ್ರೀರಂಗಪಟ್ಟಣ
ಮೈಸೂರು ನಿರ್ಮಾತೃ ಎಂದೇ ಖ್ಯಾತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವೇ ಕೃಷ್ಣರಾಜಸಾಗರ ಜಲಾಶಯ. ‘ಕನ್ನಂಬಾಡಿ’ ಎಂಬಲ್ಲಿ 1911ರಲ್ಲಿ ಆರಂಭವಾದ ಅಣೆಕಟ್ಟೆಯ ಕೆಲಸ ಅಂದಿನ ತಂತ್ರಗಾರಿಕೆಯಿಂದ ಸ್ಥಳೀಯ ಸಂಪನ್ಮೂಲಗಳಾದ ದೊಡ್ಡ ಬಂಡೆಗಳು, ಸುಣ್ಣದಗಾರೆ, ಚಿಕ್ಕಇಟ್ಟಿಗೆ ಮತ್ತು ನೀರು ರಂಧ್ರಗಳಿಂದ ಹೊರಹೋಗದಂತೆ ಹಿಗ್ಗುವ ಚಿರ್‍ಕಿ ಗಾರೆಯನ್ನು ಬಳಸಿ ಕಟ್ಟಲಾಗಿದೆ. ತಳಪಾಯ 114 ಅಡಿಗಳಷ್ಟು ಅಗಲವಿದ್ದು, ಅಣೆಕಟ್ಟೆಯ ಮೇಲ್ಮಟ್ಟ 14 ಅಡಿ ಇದೆ. 2 ರಿಂದ 3 ತಿರುವುಗಳನ್ನು ಒಳಗೊಂಡಂತೆ ‘ಎಲ್’ ಆಕಾರದಲ್ಲಿ ಅಣೆಕಟ್ಟೆ ವಿಸ್ತರಿಸಿದೆ. 2.6 ಕಿ.ಮೀ ಉದ್ದವನ್ನು ಹೊಂದಿರುವ ಅಣೆಕಟ್ಟೆ 124.80 ಅಡಿ ಎತ್ತರ ಮತ್ತು 49.452 ಟಿ.ಎಂ.ಸಿ ನೀರು ಶೇಖರಣಾ ಸಾಮರ್ಥ್ಯವನ್ನು ಹೊಂದಿದ್ದು, ಶ್ರೀರಂಗಪಟ್ಟಣ ತಾಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿದೆ.

ಬೃಂದಾವನ
ಕೆಆರ್‌ಎಸ್ ಅಣೆಕಟ್ಟೆಯ ಮುಂಭಾಗದಲ್ಲಿ ವಿಶಾಲವಾದ ಬೃಂದಾವನವಿದೆ. ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರು ಸುಂದರವಾದ ಬೃಂದಾವನ ನಿರ್ಮಿಸಿದರು. ಈ ಉದ್ಯಾನ ವಿಶ್ವ ಪ್ರಸಿದ್ಧಿ ಪಡೆದುಕೊಂಡಿದೆ. ಅಲ್ಲಿನ ಸಂಗೀತ ನೃತ್ಯ ಕಾರಂಜಿ ಮನ ಸೆಳೆಯುತ್ತದೆ.

ಶ್ರೀರಂಗನಾಥಸ್ವಾಮಿ ದೇವಾಲಯ
ಜಿಲ್ಲೆಯಲ್ಲಿ ಪ್ರಸಿದ್ಧ ದೇವಾಲಯಗಳಲ್ಲಿ ಶ್ರೀರಂಗನಾಥಸ್ವಾಮಿಯೂ ಒಂದು. ಗಂಗರ ಸಾಮಂತನಾದ ತಿರುಮಲಯ್ಯ ದೇವಾಲಯವನ್ನು ಕಟ್ಟಿಸಿ ಇದಕ್ಕೆ ಶ್ರೀರಂಗಪುರವೆಂದು ಹೆಸರಿಟ್ಟರೆಂದು ಕೆಲ ಪುಸ್ತಕದಲ್ಲಿ ತಿಳಿದು ಬರುತ್ತದೆ. ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಒಳಭಾಗ ಹೊಯ್ಸಳರ ಕಾಲದ್ದು, ಗರ್ಭಗೃಹ ಮತ್ತು ಸುಕನಾಸಿಗಳ ಛಾವಣಿಗಳ ಮಧ್ಯದಲ್ಲಿ ಪದ್ಮಗಳನ್ನು ಬಿಡಿಸಲಾಗಿದೆ. ವಿಜಯನಗರ ಕಾಲದ ಗಂಟೆ ಮಾದರಿಯ ಕಂಬಗಳು ನವರಂಗದಲ್ಲಿವೆ. ದ್ವಾರದ ಬಳಿ ಎರಡು ದೊಡ್ಡ ದ್ವಾರಪಾಲಕ ವಿಗ್ರಹವಿದೆ. ಗೋಪುರ, ಮುಖಮಂಟಪ, ರ‍್ಭಗೃಹದ ಗೋಪುರ ವಿಜಯನಗರ ಶಿಲ್ಪ ವಿಗ್ರಹವಾಗಿದೆ. ದೇವಾಲಯದಲ್ಲಿ ಹೊಯ್ಸಳ ಮತ್ತು ವಿಜಯನಗರದ ಕಾಲಕ್ಕೆ ಸೇರಿದ ದೇವತೆಗಳ, ಋಷಿಗಳ ವಿಗ್ರಹಗಳು ಆಕರ್ಷಕವಾಗಿದೆ.

ನಿಮಿಷಾಂಭ ದೇವಾಲಯ
ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಶ್ರೀನಿಮಿಷಾಂಭ ದೇವಾಲಯವು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಲಕ್ಷ್ಮಿ ಸಹಿತ ನಾರಾಯಣ, ಮೌಕ್ತಿಕೇಶ್ವರ, ಆಂಜನೇಯ ಹಾಗೂ ಸೂರ್ಯ ನಾರಾಯಣ ಸ್ವಾಮಿಯನ್ನೊಳಗೊಂಡ ಶ್ರೀ ಚಕ್ರ ಸಹಿತವಾದ ಈ ದೇವಾಲಯವು ಹಲವು ಐತಿಹ್ಯಗಳನ್ನು ಹೊಂದಿದ್ದು, ಕಾವೇರಿ ನದಿಯ ದಡದಲ್ಲಿದೆ.

ಕರೀಘಟ್ಟ
ಕರೀಘಟ್ಟ ಗಿರಿಧಾಮ ಲೋಕಪಾವನಿ ನದಿಯ ತೀರದಲ್ಲಿದೆ. ಸಮುದ್ರಮಟ್ಟದಿಂದ ಸುಮಾರು 2,697 ಅಡಿ ಎತ್ತರದಲ್ಲಿದೆ. ಶ್ರೀರಂಗಪಟ್ಟಣದಿಂದ 5 ಕಿ.ಮೀ ದೂರದಲ್ಲಿದ್ದು, ದ್ರಾವಿಡ ವಿನ್ಯಾಸದಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನವಿದೆ. ಇದನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ. 17ನೇ ಶತಮಾನದಲ್ಲಿ ಚಿಕ್ಕದೇವರಾಯ ಒಡೆಯರ್ ಅವರು ವಿಸ್ತರಿಸುತ್ತಾರೆ. ೩ನೇ ಮೈಸೂರು ಯುದ್ಧವು ಇಲ್ಲಿ ನಡೆಯುತ್ತದೆ. ಈ ಬೆಟ್ಟ ಚಾರಿತ್ರಿಕ ಇತಿಹಾಸ ಹೊಂದಿದೆ.

ರಂಗನತಿಟ್ಟು ಪಕ್ಷಿಧಾಮ
ರಂಗನತಿಟ್ಟು ಪಕ್ಷಿಧಾಮ ಪ್ರಪಂಚದಲ್ಲಿಯೇ ಪ್ರಖ್ಯಾತಿ ಪಡೆದಿದೆ. ಇದು ಶ್ರೀರಂಗಪಟ್ಟಣದಿಂದ 3 ಕಿ.ಮೀ ದೂರದಲ್ಲಿದ್ದು, ಸಣ್ಣ ದ್ವೀಪವಾಗಿದೆ. ಕಾವೇರಿ ನದಿಯ ಮಧ್ಯಭಾಗದಲ್ಲಿರುವ ಈ ಪಕ್ಷಿಧಾಮದಲ್ಲಿ ಗೊರವಂಕ, ಗಿಳಿ, ಚಮಚಮುಖಿ, ಬುಲ್‌ಬುಲ್, ಕಾಜಾಣ, ಗೀಜಗ, ಸೂರಕ್ಕಿ, ಚಂಬುಕುಟಿಗ, ಮಿಂಚುಳ್ಳಿ, ಗರುಡ, ನೀರುಕಾಗೆ, ಕಳ್ಳೀಪೀರ, ಕೌಜುಗ, ಜಂಗಲ್ ಬರ‍್ಬ್ಲರ್, ರಾಬಿನ್ ಸೇರಿದಂತೆ ಹಲವು ಜಾತಿಯ ಪಕ್ಷಿಗಳು ದೇಶ, ವಿದೇಶದಿಂದ ಬರುತ್ತದೆ. ಭಾರತದ ಪ್ರಸಿದ್ಧ ಪಕ್ಷಿತಜ್ಞ ಡಾ.ಸಲೀಂ ಅಲಿ ಅವರ ಶಿಫಾರಸ್ಸಿನ ಮೇರೆಗೆ ಈ ಸ್ಥಳ 1940ರಲ್ಲಿ ಪಕ್ಷಿಧಾಮದ ಪಟ್ಟ ಪಡೆಯಿತು.

ದರಿಯಾ ದೌಲತ್(ಟಿಪ್ಪು ಅರಮನೆ)
ಶ್ರೀರಂಗಪಟ್ಟಣ ತಾಲೂಕು ಕೇಂದ್ರದಿಂದ 2 ಕಿ.ಮೀ ದೂರದಲ್ಲಿರುವ ದರಿಯಾ ದೌಲತ್ ಅರಮನೆಯು ಇಂಡೋ ಇಸ್ಲಾಮಿಕ್ ವಿನ್ಯಾಸದಲ್ಲಿ ನಿರ್ಮಿತವಾಗಿದೆ. ಇದು ಟಿಪ್ಪುವಿನ ಬೇಸಿಗೆಯ ಅರಮನೆಯಾಗಿದೆ. 1784ರಲ್ಲಿ ನಿರ್ಮಿಸಿರುವ ಕಟ್ಟಡವು ಆಯತಾಕಾರದಲ್ಲಿದೆ. ಪ್ರತಿಯೊಂದು ಗೋಡೆ, ಕಂಬಗಳು, ಕಮಾನುಗಳು ವೈವಿಧ್ಯಮಯ ಬಣ್ಣದ ಕಲಾಕೃತಿಗಳಿಂದ ಕೂಡಿದೆ. ಟಿಪ್ಪುವಿಗೆ ಸಂಬಂಧಪಟ್ಟ ವಸ್ತುಗಳು ಸಂಗ್ರಹಾಲಯದ ಪ್ರದರ್ಶಿಸಲಾಗಿದೆ. ಬತೇರಿ, ಟಿಪ್ಪು ಸಮಾಧಿ, ಘೋಸಾಯ್‌ಘಾಟ್ ನೋಡಬಹುದು.

ಗುಂಬಜ್
ಶ್ರೀರಂಗಪಟ್ಟಣದಿಂದ 3 ಕಿ.ಮೀ ದೂರದಲ್ಲಿ ಕಾವೇರಿ ನದಿಯು ಎರಡು ಕವಲಾಗಿ ಮುಂದೆ ಸಾಗಿ ಒಂದಾಗಿ ಸೇರುವ ಸಂಗಮದ ತಟದಲ್ಲಿರುವುದೇ ಗುಂಬಜ್. ಇದು ಟಿಪ್ಪು ಸುಲ್ತಾನ್, ಹೈದರಾಲಿ ಮತ್ತು ಅವರ ಕುಟುಂಬದ ಸದಸ್ಯರ ಸಮಾಧಿಗಳಿರುವ ಸ್ಮಾರಕ ಸ್ಥಳ. ಗೋಳವಾದ ಗುಮ್ಮಟಾದಾಕಾರದಲ್ಲಿರುವ ಸ್ಮಾರಕವೇ ಗುಂಬಜ್ ಎನ್ನಿಸಿಕೊಂಡಿದೆ. ಕಪ್ಪು ಅಮೃತಶಿಲೆಗಳ ಕಂಬಗಳ ಪ್ರಾಂಗಣವನ್ನು ಹೊಂದಿದೆ.

ಪಶ್ಚಿಮವಾಹಿನಿ
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಪಶ್ಚಿಮವಾಹಿನಿಯಲ್ಲಿ ಚಿತಾಭಸ್ಮ ವಿಸರ್ಜಿಸಿದರೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಅಂತೆಯೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ವಿಸರ್ಜನೆ ಮಾಡಿದ ಕರ್ನಾಟಕದ ಏಕೈಕ ಸ್ಥಳ ಪಶ್ಚಿಮವಾಹಿನಿ. ಪಶ್ಚಿಮಾಭಿಮುಖವಾಗಿ ಹರಿಯುವ ಇಲ್ಲಿನ ಕಾವೇರಿ ನದಿಯಲ್ಲಿ 1948 ಫೆ.12ರಂದು ಅಂದಿನ ಮುಖ್ಯಮಂತ್ರಿ ಚಂಗಲರಾಯರೆಡ್ಡಿ, ಗಾಂಧೀಜಿ ಅವರ ಅಸ್ಥಿಯನ್ನು ವಿಸರ್ಜಿಸಿದರು.

ಬಲಮುರಿ
ಶ್ರೀರಂಗಪಟ್ಟಣ ತಾಲೂಕು ಕೇಂದ್ರದಿಂದ ೧೩ ಕಿ.ಮೀ ದೂದರಲ್ಲಿರುವ ರಮಣೀಯವಾದ ಪ್ರೇಕ್ಷಣೀಯ ಸ್ಥಳ ಬಲಮುರಿ. ಕಾವೇರಿ ನದಿಗೆ ಅಡ್ಡಲಾಗಿ ಒಡ್ಡುಗಳನ್ನು ನರ‍್ಮಿಸಿದ್ದು, ನೀರು ಜಾರುಗುಪ್ಪೆಯಾಕಾರದಲ್ಲಿ ಹರಿಯುವುದನ್ನು ನೋಡುವುದೇ ಮನಮೋಹಕ. ಪ್ರವಾಸಿಗರ ಮೆಚ್ಚಿನ ತಾಣವೆಂದೇ ಬಲಮುರಿ ಪ್ರಸಿದ್ಧಿಯಾಗಿದೆ.

(ಮುಂದುವರೆಯುವುದು……)

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ