Friday, May 17, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರಿನಲ್ಲಿ ಗೋಕಾಕ್ ಮಾದರಿ ಚಳವಳಿ| ಕನ್ನಡ ವಿರೋಧಿಗಳಿಗೆ ಬಿಸಿ ಮುಟ್ಟಿಸಿದ ಕರವೇ ಕಾರ್ಯಕರ್ತರು !

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಬಹುತೇಕ ವಾಣಿಜ್ಯ ಅಂಗಡಿ ನಾಮಫಲಕಗಳಲ್ಲಿ ಕನ್ನಡ ಬಳಕೆ ಕನಿಷ್ಠವಾಗಿದ್ದು, ಅನ್ಯ ಭಾಷೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಡಿಸೆಂಬರ್‌ 27ರಂದು ನಗರದಲ್ಲಿ ಬೃಹತ್ ರ‍್ಯಾಲಿ ಹಮ್ಮಿಕೊಂಡಿದೆ. ಬೆಂಗಳೂರು ವಿಮಾನ ನಿಲ್ದಾಣದ ಸಾದಹಳ್ಳಿ ಗೇಟ್​​ ಬಳಿಯ ಟೋಲ್​ ಪ್ಲಾಜಾದಿಂದ ಆರಂಭವಾಗುವ ರ‍್ಯಾಲಿ ಕಬ್ಬನ್ ಪಾರ್ಕ್ ವರೆಗೆ ಸಾಗಲಿದೆ.

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ, ನೆಲದ ಭಾಷೆ. ಕರ್ನಾಟಕದ ಎಲ್ಲ ವ್ಯಾಪಾರ, ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡವೇ ಅಗ್ರಸ್ಥಾನ ಪಡೆಯಬೇಕು ಎಂಬ ಸರ್ಕಾರದ ನಿಯಮಾವಳಿಗಳು ಇದ್ದರೂ ಸಹ ಕೆಲವು ಉದ್ಯಮಿಗಳು, ವ್ಯಾಪಾರಸ್ಥರು ಕನ್ನಡದ ಅಸ್ಮಿತೆಯನ್ನು ಅಗೌರವದಿಂದ ಕಾಣುತ್ತ, ಕನ್ನಡದಲ್ಲಿ ನಾಮಫಲಕಗಳನ್ನು ಹಾಕದೇ ಉಡಾಫೆಯಿಂದ ವರ್ತಿಸುತ್ತಿದ್ದಾರೆ.

ಈ ಹಿನ್ನೆಲೆ, ಕರ್ನಾಟಕ ರಕ್ಷಣಾ ವೇದಿಕೆ ಕಳೆದ ನವೆಂಬರ್ 1ರಿಂದ ಸತತವಾಗಿ ರಾಜ್ಯಾದ್ಯಂತ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ನಡೆಸುತ್ತ ಬಂದಿದೆ. ಆದರೂ ಕೆಲವು ವಲಸಿಗ ವ್ಯಾಪಾರಸ್ಥರು ನಾಮಫಲಕ ಬದಲಿಸದ ಹಿನ್ನೆಲೆ ಡಿಸೆಂಬರ್ 27ರೊಳಗೆ ನಾಮಫಲಕ ಕನ್ನಡೀಕರಿಸಲು ಕರ್ನಾಟಕ ರಕ್ಷಣಾ ವೇದಿಕೆ ಗಡುವು ನೀಡಿತ್ತು. ಆದರೂ, ಇನ್ನು ಹಲವು ಅಂಗಡಿಗಳಲ್ಲಿ ಕನ್ನಡ ನಾಮಫಲಕ ಬಳಕೆ ಮಾಡಿಲ್ಲ.

“>

ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯಕ್ಕೆ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ನಾಮಫಲಕ ಮಹಾ ಅಭಿಯಾನ ಕೈಗೊಂಡಿದೆ. ಬುಧವಾರ ಬೆಳಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ನಾಡಪ್ರಭು ಕೆಂಪೇಗೌಡರ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಟೋಲ್ ಬಳಿ ಸಮಾವೇಶಗೊಂಡು, ಅಲ್ಲಿಂದ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಿಂದ ರ‍್ಯಾಲಿ ಶುರುವಾಗಿದ್ದು, ಯಲಹಂಕ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಎಸ್‌ಪಿ ರೋಡ್, ಬ್ರಿಗೇಡ್ ರೋಡ್, ಎಮ್‌ಜಿ ರೋಡ್, ಚಿಕ್ಕ ಪೇಟೆ, ಸಿಟಿ ಮಾರ್ಕೆಟ್, ಅವಿನ್ಯೂ ರೋಡ್ ಮುಖಾಂತರ ಕಬ್ಬನ್ ಪಾರ್ಕ್ ವರೆಗೆ ಸಾಗಲಿದೆ.

“>

ಕನ್ನಡಕ್ಕೆ ಶೇ.60 ರಷ್ಟು ಆದ್ಯತೆ ಕೊಡಬೇಕು ಎಂದು ಕರವೇ ನಾರಾಯಣಗೌಡ ಬಣ ಮಾಲ್, ಅಂಗಡಿ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿದೆ. ಇನ್ನು ರ‍್ಯಾಲಿ ವೇಳೆ ಕನ್ನಡ ನಾಮಫಲಕ ಇಲ್ಲದ ಅಂಗಡಿ, ಉದ್ಯಮಗಳು ಕಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಪೊಲೀಸ್ ಬಿಗಿ ಭದ್ರತೆ

ರ‍್ಯಾಲಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಜತೆಗೆ ಈ ವೇಳೆ, ವಾಹನ ಸಂಚಾರ ದಟ್ಟಣೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ವಿಮಾನ ನಿಲ್ದಾಣ​ ರಸ್ತೆಯ ಡಿವೈಡರ್ ಬಳಿ ಸುಮಾರು 500 ಮೀಟರ್ ಗೂ ಅಧಿಕ ದೂರ ಸೈಡ್ ವಾಲ್ ಅಳವಡಿಕೆ ಮಾಡಿದ್ದಾರೆ.

ಜತೆಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಟೋಲ್ ಬಳಿ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 1 ಎಸಿಪಿ, 6 ಇನ್ಸ್​ಪೆಕ್ಟರ್, 12 ಸಬ್ ಇನ್ಸ್​ಪೆಕ್ಟರ್ ಸೇರಿದಂತೆ 500 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಇನ್ನು ಬೆಂಗಳೂರಿನಲ್ಲಿ ರ‍್ಯಾಲಿ ನಡೆಸಲು ಅವಕಾಶವಿಲ್ಲದ ಹಿನ್ನೆಲೆ, ಪ್ರತಿಭಟನೆ ತೀವ್ರಗೊಳಿಸಿದರೆ ಕಾರ್ಯಕರ್ತರನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ 10 ಬಸ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.

“ಕರವೇ ಬೃಹತ್ ಜಾಥಾ ಇದ್ದು, ಈ ಹಿನ್ನೆಲೆ, ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಮುಂಜಾಗೃತ ಕ್ರಮ ವಹಿಸಲಾಗಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ” ಎಂದು ಡಿಸಿಪಿ ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!