Wednesday, November 18, 2026

ಪ್ರಾಯೋಗಿಕ ಆವೃತ್ತಿ

7 ಕಡೆ ಟೌನ್ ಶಿಪ್ ಮಾಡಲು ಹೊರಟ ಪಿತಾಮಹ HDK : ಡಿ.ಕೆ.ಶಿವಕುಮಾರ್

ರಾಮನಗರ ಜಿಲ್ಲೆಯ “ಬಿಡದಿ ಸೇರಿದಂತೆ ಏಳು ಕಡೆ ಟೌನ್ ಶಿಪ್ ಮಾಡಲು ಹೊರಟಿದ್ದವರು ಹಾಗೂ ಆ  ಯೋಜನೆಯ ಪಿತಾಮಹ ಮಾಜಿ ಸಿಎಂ ಕುಮಾರಸ್ವಾಮಿ. ಈಗ ಅವರ ಕುಟುಂಬದವರೇ ವಿರೋಧ ಮಾಡಿದರೆ ಯಾವ ನ್ಯಾಯ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಗೆ ಶುಕ್ರವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ಗೆ ದೇವೇಗೌಡರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರಶ್ನಿಸಿದಾಗ, “ದೇವೇಗೌಡರು ದೊಡ್ಡವರು. ಪಾಪ ಅವರು ಮರೆತಿರಬೇಕು. ಬಿಡದಿ, ಸಾತನೂರು, ನಂದಗುಡಿ ಸೇರಿ 7 ಟೌನ್ ಶಿಪ್ ಗೆ ನೋಟಿಫಿಕೇಶನ್ ಹೊರಡಿಸಿದ್ದು ಅವರ ಸುಪುತ್ರ ಕುಮಾರಸ್ವಾಮಿ. ಈ ತೀರ್ಮಾನ ಮಾಡಿ ಡಿಎಲ್ ಎಫ್ ಅವರಿಂದ 300 ಕೋಟಿ ರೂ. ಹಣ ಕಟ್ಟಿಸಿಕೊಂಡಿದ್ದರು. ಆನಂತರ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗ ಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಹಣ ವಾಪಸ್ ನೀಡಿದ್ದಾರೆ ಎಂದು ನೆನಪಿಸಿದರು.

ಡಿನೋಟಿಫಿಕೇಷನ್ ಮಾಡುವುದಿಲ್ಲ

“ನಾನು ಯಾವುದೇ ಜಮೀನು ಡಿನೋಟಿಫಿಕೇಷನ್ ಮಾಡುವುದಿಲ್ಲ, ಇದು ಮಾಡಿದ ತಕ್ಷಣ ದುಡ್ಡು-ಕಾಸು ಹೊಡೆದರು ಎನ್ನುವ ಆರೋಪ ಬರುತ್ತದೆ. ಈಗಾಗಲೇ ನಾನು ಕೋರ್ಟ್, ಕಚೇರಿ ಅಲೆದು, ಜೈಲು ವಾಸವನ್ನೂ ಅನುಭವಿಸಿದ್ದೇನೆ. ನನ್ನ ಸ್ವಂತ ಜಮೀನಿನ ಬಗ್ಗೆಯೂ ಇವರುಗಳೇ ಆರೋಪ ಮಾಡಿದ್ದಾರೆ. ದೇವೇಗೌಡರೇ ನಿಮ್ಮ ಮಗ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಯಾಕೆ ಈ ಜಮೀನು ಡಿನೋಟಿಫಿಕೇಷನ್ ಮಾಡಲಿಲ್ಲ. ಈಗೇಕೆ ಮಾತನಾಡುತ್ತಿದ್ದೀರಿ? ನಾನು ಎಲ್ಲಾ ರೈತರ ಬಳಿ ಮಾತನಾಡಿದ್ದೇನೆ. ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಇಡೀ ದೇಶಕ್ಕೇ ಮಾದರಿಯಾಗುವಂತಹ ನಗರ ನಿರ್ಮಾಣ ಮಾಡುತ್ತೇವೆ. ದೆಹಲಿ‌, ಚಂಡೀಗಡ್ ಮಾದರಿಗಿಂತ ಉತ್ತಮವಾಗಿ 10 ಸಾವಿರ ಎಕರೆಯಲ್ಲಿ ಬೆಂಗಳೂರು ನಗರಕ್ಕಿಂತ ಚೆನ್ನಾಗಿ ರೂಪಿಸಲಾಗುವುದು. ಇದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ” ಎಂದರು.

ಕಾವೇರಿ ಆರತಿ 98 ರೂ. ಕೋಟಿ ವೆಚ್ಚ
ಕೆ.ಆರ್.ಎಸ್ : ಕಾವೇರಿ ದಕ್ಷಿಣ ಭಾರತೀಯರ ಜೀವನದಿಯಾಗಿದ್ದು, ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳ ಜನ ವಸತಿ ಪ್ರದೇಶಕ್ಕೆ ಕುಡಿಯುವ ನೀರು, ಕೈಗಾರಿಕೆ ಹಾಗೂ ಕೃಷಿಗೆ ನೀರು ಪೂರೈಸುವ ಜೀವನದಿಗೆ ಭಕ್ತಿಯಿಂದ ಪ್ರಾರ್ಥಿಸಬೇಕೆಂಬ ಸದುದ್ದೇಶದಿಂದ ಕಾವೇರಿ ಗಂಗಾರತಿ ಆರಂಭಿಸಲಾಗುವುದೆಂದು ಜಲ ಸಂಪನ್ಮೂಲ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗಂಗಾರತಿ ನಮ್ಮ ಧಾರ್ಮಿಕ ವಿಚಾರವಾಗಿದ್ದು, ಧಾರ್ಮಿಕ ದತ್ತಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ, ನೀರಾವರಿ, ಬೆಂಗಳೂರು ನಗರ ನೀರು ಸರಬರಾಜು ಮಂಡಳಿ ಸೇರಿದಂತೆ ಹಲವು ಇಲಾಖೆಗಳ ಸಹಭಾಗಿತ್ವದಲ್ಲಿ 98 ಕೋಟಿ ವೆಚ್ಚದಲ್ಲಿ ಕಾವೇರಿ ಆರತಿ ಆರಂಭಿಸಲಾವುದೆಂದರು.

ಕಾವೇರಿ ಆರತಿ ರಾಜ್ಯದ ಸಂಸ್ಕೃತಿ ಆಗಿದ್ದು, ಸದರಿ ಧಾರ್ಮಿಕ ಕಾರ್ಯದ ಆಚರಣೆಗೆ ಅಗತ್ಯವಿರುವ ಹೆಚ್ಚುವರಿ ಅನುದಾನ ಕ್ರೂಢೀಕರಣಕ್ಕೂ ಅವಕಾಶವಿದ್ದು, ಮೂಲ ಸೌಕರ್ಯಗಳನ್ನು ಅಭಿವೃದ್ದಿಪಡಿಸಲು ನೆರೆಹೊರೆಯ 4 ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಪ್ಲಾನಿಕ್ ಆಧಾರಿಟಿ ರಚಿಸುವ ಇಂಗಿತ ವ್ಯಕ್ತಪಡಿಸಿದರು.

ಬೃಂದಾವನ ಗಾರ್ಡನ್ ಅಭಿವೃದ್ದಿ ಸಂಬಂಧ ಈಗಾಗಲೇ 7 ಜನ ಖಾಸಗಿ ವ್ಯಕ್ತಿಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, ಆಕರ್ಷಣಿಯ ರೀತಿಯಲ್ಲಿ ಅಭಿವೃದ್ದಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

” ರೈತರು ತಮ್ಮ ಭೂಮಿ ಮಾರಾಟ ಮಾಡಲೂ ಆಗದೆ, ಅಭಿವೃದ್ಧಿಯನ್ನು ಮಾಡಲಾಗದೇ ಪರದಾಡುತ್ತಿದ್ದಾರೆ. ಈ ಬಗ್ಗೆ ಏನಾದರೂ ಒಂದು ತೀರ್ಮಾನ ಮಾಡಿ ಎಂದು ರೈತರೇ ನನ್ನ ಬಳಿ ಬಂದು ಮನವಿ ಮಾಡಿದ್ದಾರೆ. ಅವರು ತಮ್ಮ ಆಸ್ತಿ ಕಳೆದುಹೋಯಿತು ಎನ್ನಬಾರದು, ಅವರು ಖುಷಿ ಪಡಬೇಕು. ಭೂಮಿ ಹೋದರೂ ಉತ್ತಮ ಪರಿಹಾರ‌ ನೀಡಿದ್ದಾರೆ ಎನ್ನಬೇಕು. ರೈತರ ಮುಂದೆ ಎರಡು ಆಯ್ಕೆ ನೀಡಿದ್ದು ಭೂಮಿಗೆ ಹಣದ ಪರಿಹಾರ ಅಥವಾ ಅಭಿವೃದ್ಧಿ ಪಡಿಸಿದ ಪರಿವರ್ತಿತ ಭೂಮಿ ಪಡೆಯಬಹುದು ಎಂದು ತಿಳಿಸಿದ್ದೇವೆ. ರಾಜಕೀಯವಾಗಿ ನಾವು ಏನೇ ಮಾಡಿದರೂ ವಿರೋಧ ಮಾಡುತ್ತಾರೆ” ಎಂದು ಜರಿದರು.

ಮರುನಾಮಕರಣ ಹೇಗೆ ಎಂಬುದು ಗೊತ್ತಿದೆ

ರಾಮನಗರ ಹೆಸರು ಬದಲಾವಣೆಗೆ ‌ಸಹಕಾರ ಸಿಗಲಿಲ್ಲ. ಈಗ ದೊರೆಯುತ್ತದೆಯೇ ಎಂದಾಗ, “ನನಗೆ ರಾಮನಗರದ ಹೆಸರನ್ನು ಹೇಗೆ ಬದಲಾವಣೆ ಮಾಡಬೇಕು ಎಂಬುದು ನನಗೆ ಗೊತ್ತಿದೆ. ನಾನು ಮಾಡಿಯೇ ಸಿದ್ದ. ಇದು ಬೆಂಗಳೂರು ದಕ್ಷಿಣವೇ. ನಾವು ಯಾರೂ ಸಹ ಹೊರಗಡೆಯಿಂದ ಬಂದು ಹೆಸರು ಕೊಡಿ ಎಂದು ಕೇಳುತ್ತಿಲ್ಲ. ಇದು ನಮ್ಮ‌ ಹಕ್ಕು. ನಮ್ಮ ತಂದೆ ತಾಯಿ, ಹುಟ್ಟೂರಿನ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಆಗುತ್ತದೆಯೇ?” ಎಂದರು.

ಶಿವಕುಮಾರ್ ಕಂಡರೆ ಅವರಿಗೆ ಅಸೂಯೆಯೇ ಎಂದು ಕೇಳಿದಾಗ, “ಏನಾದರೂ ಅಂದುಕೊಳ್ಳಲಿ, ನನ್ನ ಕಂಡರೆ ಅವರಿಗೆ ಪ್ರೀತಿ ಜಾಸ್ತಿ. ದೇವೇಗೌಡರ ಬಳಿ ನಮ್ರತೆಯಿಂದ ಬೇಡಿಕೊಳ್ಳುತ್ತೇನೆ. ಬಿಡದಿ ಟೌನ್ ಶಿಪ್ ನಿಮ್ಮ ಮಗನೇ ಮಾಡಿದ್ದು, ನಿಮ್ಮ ಕಾಲದಲ್ಲಿಯೇ ಆಗಿದ್ದು. ನಾವು ನೀವು ಹಾಕಿದ್ದನ್ನು ಮುಂದುವರೆಸುತ್ತಿದ್ದೇವೆ” ಎಂದು ತಿಳಿಸಿದರು.

ದಸರಾಗೆ ಕಂಬಳ ಸೇರ್ಪಡೆ

“ನಾಡಹಬ್ಬ ದಸರಾವನ್ನು ಈ ಬಾರಿ ವಿನೂತನವಾಗಿ ಆಚರಿಸಲು ಚರ್ಚೆ ನಡೆಸಲಾಗಿದೆ. ಹಳೆಯ ಒಂದಷ್ಟು ಪದ್ದತಿಗಳನ್ನು ಕೈಬಿಟ್ಟು ಹೊಸ ಪೀಳಿಗೆಯನ್ನು ಸೆಳೆಯುವಂತೆ ಆಕರ್ಷಣೀಯವಾಗಿ ನಡೆಸಲು ಚರ್ಚಿಸಲಾಗಿದೆ. ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಸಭೆ ನಡೆಸೋಣ ಎಂದು ಹೇಳಿದ್ದಾರೆ. ಕಂಬಳ ನಮ್ಮ ರಾಜ್ಯದ ಕರಾವಳಿ ಭಾಗ ವಿಶೇಷವಾದ ಆಚರಣೆ, ಹೀಗಾಗಿ ಕಂಬಳವನ್ನು ದಸರಾದಲ್ಲಿ ಸೇರಿಸಲಾಗುವುದು. ಇದಕ್ಕೆ ಸ್ಥಳ ಹುಡುಕಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದರು.

ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಸಿ ಇ ಒ ನಂದಿನಿ, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಬಿ.ಡಬ್ಲ್ಯೂ.ಎಸ್.ಎಸ್.ಬಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್, ಕಾವೇರಿ ನೀರಾವರಿ ನಿಗಮದ ಎಂ.ಡಿ. ಮಹೇಶ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ