Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಂಚಾರಿ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವವರು ಯಾರು ?

✍️ ಚೇತನ್ ಕಾಗೇಪುರ.

ಕರ್ನಾಟಕ ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರರವರು ಮಂಡ್ಯ ಜಿಲ್ಲೆಯಲ್ಲಿನ ಕಳೆದ ಮೂರು ವರ್ಷಗಳಲ್ಲಿನ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು 2,24,732 ದಾಖಲಾಗಿದ್ದು ಅವುಗಳಲ್ಲಿ ಒಟ್ಟು 8,92,68,100 ರೂಪಾಯಿಗಳ ದಂಡ ಸಂಗ್ರಹಿಸಲಾಗಿದೆ ಹಾಗೂ 5,617 ಅಪಘಾತಗಳಲ್ಲಿ 1260 ಮಂದಿ ಮೃತ ಪಟ್ಟಿದ್ದಾರೆಯೆಂದು ಮಾಹಿತಿ ನೀಡಿದ್ದಾರೆ.

ಸರಿ, ನಾವಿಲ್ಲಿ ಗಮನಿಸಬೇಕಾದ ಅಂಶ, ಪೊಲೀಸಿನವರಂತೂ ಕೇವಲ ದಂಡ ವಸೂಲಾತಿ ಮಾಡುವುದಷ್ಟೇ ಅವರ ಕೆಲಸವೆಂದು ಭಾವಿಸಿದಂತಿದೆ ಅವರ ಕಾರ್ಯವೈಖರಿ. ಇದೇ ಅಭಿಪ್ರಾಯವನ್ನು ಯಾವುದೇ ಸಾರ್ವಜನಿಕರನ್ನು ಕೇಳಿದರೂ ಹೇಳುತ್ತಾರೆ.

ಹಾಗಾದರೆ ಸಂಚಾರಿ ನಿಯಮಗಳನ್ನು ಜನರಿಗೆ ತಿಳಿಸಿಕೊಡುವವರು ಯಾರು ? ಉದಾಹರಣೆಗೆ ಕೋವಿಡ್ ಸೋಂಕು ಈ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದಾಗ ಅದರ ಬಗ್ಗೆ ಯಾವೊಬ್ಬ ಸಾಮಾನ್ಯ ಪ್ರಜೆಗೂ ಅದರ ಹರಡುವ ಬಗೆ, ತೀವ್ರತೆ, ರೋಗ ಲಕ್ಷಣ, ನಿಯಂತ್ರಿಸುವ ಮುಂಜಾಗ್ರತಾ ಬಗೆ ತಿಳಿದಿರಲಿಲ್ಲ. ಅದನ್ನ ವಿವರವಾಗಿ ತಿಳಿಸಿದ್ದು ಮಾಧ್ಯಮಗಳು ಮತ್ತು ಸರ್ಕಾರಿ ಆಯೋಜಿತ ಮಾಧ್ಯಮ ಜಾಹೀರಾತುಗಳು. ಅದಂತೂ ದಿನದ 24 ಗಂಟೆಗಳೂ ಎಡೆಬಿಡದೆ ತೋರಿಸಿದ್ದರಿಂದಾಗಿ ಜನತೆ ಅರಿವಿನಿಂದಲೋ ಅಥವಾ ಭಯಗೊಂಡೂ ಅಂತೂ ಎಲ್ಲರೂ ತಮ್ಮ ಮನೆಯೊಳಗೆ ತಿಂಗಳುಗಟ್ಟಲೇ ಬಂಧಿಯಾಗಿದ್ದರು, ಇದರಿಂದ ಹಲವು ನಿತ್ಯ ದುಡಿಯುವ ಕುಟುಂಬಗಳು ಸಂಕಷ್ಟ ಅನುಭವಿಸಿದ್ದೂ ಉಂಟು. ಜೊತೆಗೆ ಕರೋನವನ್ನು ನಿಭಾಯಿಸಿದ್ದೂ ಆಯಿತು ಅಲ್ಲವೇ… ಅದನ್ನು ಒಮ್ಮೆ ನೆನೆಯೋಣ…

nudikarnataka.com
ವಿವಿಧ ಸಂದರ್ಭಗಳಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕಛೇರಿ ಸಮೀಪ, ಎಸ್.ಪಿ ಕಛೇರಿ ಸಮೀಪ ತೆಗೆದ ಚಿತ್ರಗಳು

ಇದರಿಂದ ನಮಗೆ ತಿಳಿಯುವ ಸಣ್ಣ ವಿಚಾರವೆಂದರೆ ಸರ್ಕಾರ ನಿಜಕ್ಕೂ ಪ್ರಯತ್ನಪಟ್ಟರೆ, ತನ್ನ ಜನತೆಗೆ ತಾನು ತಿಳಿಸಲು ಕಲಿಸಲು ಇಚ್ಛಿಸಿರುವ ವಿಚಾರಗಳನ್ನು ತನ್ನ ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ ಮಾಧ್ಯಮಗಳ ನೆರವಿನೊಂದಿಗೆ ಸಾಧಿಸಬಹುದು ಎನ್ನುವುದು ಸ್ಪಷ್ಟವಲ್ಲವೇ.

ನಿಯಮಗಳ ಉಲ್ಲಂಘನೆ, ಅದರಿಂದಾಗುವ ತೊಂದರೆಯ ತೀವ್ರತೆ, ಅಪಘಾತಕ್ಕೊಳಗಾದವರ ಕುಟುಂಬದ ಸ್ಥಿತಿ, ಭವಿಷ್ಯ ಇನ್ನಿತರ ಸಾಮಾಜಿಕ ನಡವಳಿಕೆಗಳ ಬದಲಾವಣೆಯ ಅಗತ್ಯತೆ ಇರುವ ವಿಚಾರಗಳ ಕುರಿತಂತೆ
ನಿರಂತರ ಅರಿವಿನ ಕಾರ್ಯಕ್ರಮಗಳನ್ನು ನೀಡುತ್ತಾ ಬರುವುದರಿಂದ ಜನರನ್ನ ಸುಶಿಕ್ಷಿತರನ್ನಾಗಿಸ ಬಹುದಲ್ಲವೇ..?

nudikarnataka.com
ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಾಹನಗಳ ಯಾರ್ಡ್ ಆಗಿ ಬಳಸಲಾಗುತ್ತಿರುವುದು. ಕೆ.ಎಂ.ದೊಡ್ಡಿ (ಭಾರತೀ ನಗರ).

ಅಂದ ಮೇಲೆ ಮಂಡ್ಯ ಜಿಲ್ಲೆಯಾದ್ಯಂತ ದಂಡ ಸಂಗ್ರಹಿಸಿರುವ ಸಂಚಾರಿ ಪೊಲೀಸರು ಅದೆಷ್ಟು ಸಾರಿಗೆ ನಿಯಮಗಳ ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ? ಸಾರಿಗೆ ಪೊಲೀಸರ ಕರ್ತವ್ಯ ಕೇವಲ ದಂಡ ವಸೂಲಿ ಮಾಡುವುದು ಮಾತ್ರವೇ… ? ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಯಾರ ಕರ್ತವ್ಯ ? ಕಳೆದ ಕೆಲವು ತಿಂಗಳುಗಳ ಹಲವು ಪತ್ರಿಕಾ ವರದಿಗಳು ಈಗಾಗಲೇ ತೋರಿಸಿಕೊಟ್ಟಿವೆ, ಇಲಾಖೆಯ ಹಣ ಸಂಗ್ರಹಿಸುವ ಪರಾಕಾಷ್ಠೆ ಎಷ್ಟರ ಮಟ್ಟಿಗೆ ಇದೆ ಎಂದು.

ಇನ್ನು ಮಂಡ್ಯದ ಎಸ್.ಪಿ.ಕಚೇರಿ, ಜಿಲ್ಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿನ ರಸ್ತೆಗಳಲ್ಲಿಯೇ ಪಾದಾಚಾರಿ ಮಾರ್ಗಗಳಲ್ಲಿ ಹಲವಾರು ಕಾರುಗಳು, ದ್ವಿಚಕ್ರ ವಾಹನಗಳು ನಿಂತಿರುತ್ತವೆ, ಹಾಗಾಗಿ ಪಾದಾಚಾರಿಗಳು ರಸ್ತೆಗಳಲ್ಲಿ ನಡೆಯುತ್ತಿರುತ್ತಾರೆ. ಅಪಘಾತದಿಂದ ಅಂಗಾಂಗ ಕಳೆದುಕೊಳ್ಳುತ್ತಾರೆ ಮತ್ತು ಸಾವೂ ಸಂಭವಿಸುತ್ತದೆ. ಇದನ್ನೆಲ್ಲಾ ಸರಿಪಡಿಸುವವರು ಯಾರು ?

ತನ್ನ ಮಕ್ಕಳಾದ ಸಾರ್ವಜನಿಕರನ್ನು ಸುಶಿಕ್ಷಿತರನ್ನಾಗಿಸಿ, ಅವರನ್ನು ಪಾಲನೆಮಾಡಬೇಕಾದ್ದು ಸರ್ಕಾರದ ಹಾಗೂ ಅದರ ಅಡಿಯಲ್ಲಿರುವ ಇಲಾಖೆಗಳ ಕರ್ತವ್ಯ ಎನ್ನುವುದನ್ನು ಮರೆತಂತಿದೆ. ವ್ಯವಸ್ಥೆಯನ್ನು
ಕಟ್ಟುವ ಕಡೆಗೂ ಸಂಬಂಧಿಸಿದ ಇಲಾಖೆ ಇನ್ನಾದರೂ ಗಮನ ಹರಿಸಲಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!