Friday, November 20, 2026

ಪ್ರಾಯೋಗಿಕ ಆವೃತ್ತಿ

ಆಹಾರ ಸಂಸ್ಕರಣೆ ಯಂತ್ರೋಪಕರಣಗಳ ಪ್ರಯೋಜನ ಪಡೆಯಿರಿ- ಹರ್ಷಿತಾ

ಆಹಾರ ಸಂಸ್ಕರಿಸುವ ಯಂತ್ರೋಪಕರಣಗಳನ್ನು ಪ್ರಯೋಜನವನ್ನು ಗ್ರಾಮೀಣ ಮಹಿಳೆಯರು ಪಡೆದುಕೊಳ್ಳಬೇಕು ಎಂದು ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ ತಿಳಿಸಿದರು.

ನಬಾರ್ಡ್, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ತಾಲೂಕಿನ ಉಮ್ಮಡಹಳ್ಳಿಯ ಸಾಂಸ್ಕೃತಿಕ ಭವನದಲ್ಲಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ಪುಸ್ತಕ ಬರವಣಿಗೆ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ನಿಯಮಗಳಿಗೊಳಪಟ್ಟು ಕೃಷಿ ಆಹಾರ ಪದಾರ್ಥಗಳನ್ನು ಸಂಸ್ಕರಣೆ ಮಾಡಲು ಹಲವು ಸಹಾಯಧನವನ್ನು ನೀಡುತ್ತಿದೆ. ಇದರ ಪ್ರಯೋಜನವನ್ನು ಸ್ವಸಹಾಯಸಂಘಗಳ ಪ್ರತಿನಿಧಿಗಳು ಪಡುದುಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಘಗಳು ಕೇವಲ ಹಣಗಳಿಕೆಗಷ್ಟೇ ಸೀಮಿತವಾಗದೆ ರಚನಾತ್ಮಕ ಚಟುವಟಿಕೆಗಳು ಮತ್ತು ಆದಾಯೋತ್ಪನ್ನ ಚಟುವಟಿಕೆಗಳ ಮೂಲಕ ಸಮಾಜಕ್ಕೆ ನೆರವಾಗಬೇಕು ಎಂದರು.

ಸರ್ಕಾರಗಳು ಕಾಲಕ್ಕನುಗುಣವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಅಥವಾ ಸದಸ್ಯರುಗಳು ಅದರ ಮನವರಿಕೆಯನ್ನು ಅರ್ಥೈಸಿಕೊಂಡು ಆ ಯೋಜನೆಗಳನ್ನು ಯಾವ ರೀತಿ ಪಡೆದುಕೊಳ್ಳುವುದು ಸೂಕ್ತ. ಗ್ರಾಮೀಣ ಜನರಿಗೆ ಸಮರ್ಪಕ ಮಾಹಿತಿ ಕೊರತೆಯಿಂದಾಗಿ ಹಲವು ಯೋಜನೆಗಳು ಕಡೇ ಭಾಗದ ಕೃಷಿ ರೈತ ಮಹಿಳೆಯರಿಗೆ ತಲುಪುತ್ತಿಲ್ಲ. ಇದು ವಿಷಾದನೀಯ. ಸ್ವಸಹಾಯ ಸಂಘಗಳ ಬಲವರ್ಧನೆ ಮತ್ತು ರಚನೆ, ಪುನಶ್ಚೇತನಕ್ಕೆ ಅನುಕೂಲವಾಗಲು ಈ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಯ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.

ಮಂಡ್ಯ ಆರ್‌ಎಪಿಸಿಎಂಎಸ್  ಅಧ್ಯಕ್ಷ ಯು.ಸಿ. ಶೇಖರ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಎರಡು ಎಕರೆ ಜಾಗದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಸಿದ್ಧಪಡಿಸಿ ರಪ್ತು ನಿಗಮದಿಂದ ಆಹಾರ ಸಂಸ್ಕರಿಸುವ ಯಂತ್ರೋಪಕರಣಗಳು ಮತ್ತು ಅದನ್ನು ಮಾರುಕಟ್ಟೆ ಮಾಡುವ ಯೋಜನೆಯನ್ನು ಸಿದ್ಧಪಡಿಸಿದೆ. ಶೇ. 10ರಷ್ಟನ್ನು ಆರ್.ಎ.ಪಿ.ಸಿ.ಎಂ.ಎಸ್. ನೀಡಿದರೆ, ಉಳಿದ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಮಂಡ್ಯ-ಬೆಂಗಳೂರು ಹೆದ್ದಾರಿ ಪಕ್ಕದ ಜಾಗದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಾವಯವ ಕೃಷಿ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇದೆ. ಲವಂಗ, ಚಕ್ಕೆ ಸಹಿತ ಗೃಹ ಬಳಕೆಯ ಪದಾರ್ಥಗಳನ್ನು ಗ್ರಾಮೀಣ ಮಹಿಳೆಯರು ಬೆಳೆಯಬೇಕಾಗಿದೆ. ಅದನ್ನೂ ಸಹ ರಾಸಾಯನಿಕ ಮುಕ್ತವಾಗಿ ಬೆಳೆದು ರೋಗ-ರುಜಿನಗಳಿಂದ ದೇಹವನ್ನು ಮುಕ್ತ ಮಾಡಬೇಕಾಗಿದೆ. ನಾನೂ ಕೂಡ ಸಾವಯವ ಕೃಷಿಕನಾಗಿದ್ದು, ವೈಯಕ್ತಿಕವಾಗಿ ನಾನು ತರಬೇತಿ ನೀಡಲು ಸಿದ್ಧನಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಮಾತನಾಡಿ, ನಬಾರ್ಡ್ ಭಾರತದ ಸರ್ವತೋಮುಖ ಅಭಿವೃದ್ಧಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಜನರ ಆದಾಯೋತ್ಪನ್ನ ಚಟುವಟಿಕೆಗೆ ಅನುಕೂಲವಾಗುವ ಕಾರ‌್ಯಕ್ರಮಗಳನ್ನು ಸರ್ಕಾರಗಳ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ಹಮ್ಮಿಕೊಳ್ಳುತ್ತಾ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವು ಮಹತ್ವಪೂರ್ಣ ಕಾರ‌್ಯಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಜಾಗೃತ ಮೂಡಿಸಲು ಹಲವು ಕಾರ‌್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಸಹಕಾರ ಬ್ಯಾಂಕುಗಳಲ್ಲಿ ಉಳಿತಾಯ ಮನೋಭಾವದಿಂದ ರಚಿತಗೊಂಡಿರುವ ಸ್ವಸಹಾಯ ಸಂಘಗಳ ಬಲವರ್ಧನೆಗೆ ಅನುಕೂಲವಾಗಲು ಪರಿಸರ ರೂರಲ್ ಡೆವಲಪ್‌ಮೆಂಟ್ ಸಂಸ್ಥೆ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಬ್ಯಾಂಕ್ ಬರೋಡದ ಆರ್ಥಿಕ ಸಮಾಲೋಚಕಿ ಕೆ.ಪಿ. ಅರುಣಕುಮಾರಿ, ವಿಬ್‌ಸಿಟಿಯ ಉಪನ್ಯಾಸಕ ಪುರಂದರ್, ಕುಶಲಕರ್ಮಿ ಅನ್ನಪೂರ್ಣ ಇತರರು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾಗ್ಯ, ಪಿಡಿಓ ಮಂಜುನಾಥ್, ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಲೋಹಿತ್, ಸಿಇಓ ಶಂಕರೇಗೌಡ, ನಿರ್ದೇಶಕ ಶಿವಶಂಕರ್, ಸಿದ್ದರಾಮು ಇತರರು ಕಾರ‌್ಯಕ್ರಮದಲ್ಲಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ