Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಆ.19ರಂದು ಹಲ್ಲೇಗೆರೆ ಡಾ.ಎಲ್.ಎನ್ ಮೂರ್ತಿಗೆ ಸನ್ಮಾನ

ಮಂಡ್ಯದ ಕರ್ನಾಟಕ ಸಂಘ, ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಮತ್ತು ನಾಗರಿಕ ವೇದಿಕೆ ವತಿಯಿಂದ ಅನಿವಾಸಿ ಭಾರತೀಯ ಸಾಧಕ ಡಾ. ಎಲ್ .ಎನ್ .ಮೂರ್ತಿ ಹಲ್ಲೇಗೆರೆ ಅವರನ್ನು ಸನ್ಮಾನಿಸಲಾಗುವುದು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಗಸ್ಟ್ 19ರ ಸಂಜೆ 4 ಗಂಟೆಗೆ ಮಂಡ್ಯದ ಪಿಇಎಸ್ ಕಾಲೇಜು ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯ ಹಾಗೂ ಅಮೆರಿಕಾದ ಸ್ಕೋಪ್ ಆಫ್ ಫೌಂಡೇಶನ್ ಸಂಸ್ಥಾಪಕ ಡಾ. ಎಲ್. ಎನ್. ಮೂರ್ತಿ ಹಾಗೂ ಅವರ ಕುಟುಂಬ ಸದಸ್ಯರು ಅಮೆರಿಕಾದಲ್ಲಿ ಸ್ಕೋಪ್ ಆಫ್ ಫೌಂಡೇಶನ್ ಸಂಸ್ಥೆ ಸ್ಥಾಪಿಸಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಮಾತೃಭೂಮಿಯ ಋಣವನ್ನು ತೀರಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರವಾಗಿ ‘ಭೂದೇವಿ ಆಧ್ಯಾತ್ಮಿಕ ಕೇಂದ್ರ’ (ಮದರ್ ಅರ್ಥ್) ಯೋಜನೆಯನ್ನು ತಮ್ಮ ಹುಟ್ಟೂರು ಮಂಡ್ಯ ತಾಲೂಕಿನ ಹಲ್ಲೇಗೆರೆಯಲ್ಲಿ ಪ್ರಾರಂಭಿಸಲು ಮುಂದಾಗಿದ್ದಾರೆ. ಸುಮಾರು 70 ಕೋಟಿ ವೆಚ್ಚದಲ್ಲಿ ತಮ್ಮ 12 ಎಕರೆ ಜಮೀನಿನಲ್ಲಿ ಈ ಯೋಜನೆ ಜನ್ಮ ತಳೆಯಲಿದೆ. ಈ ಹಿನ್ನಲೆಯಲ್ಲಿ ಅವರಿಗೆ ನಾಗರಿಕ ಸನ್ಮಾನ ನೀಡುತ್ತಿದ್ದೇವೆ ಎಂದರು.

ಬಡ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಆರೋಗ್ಯಕ್ಕೆ ನೆರವು ನೀಡುವ ಮಹತ್ವದ ಉದ್ದೇಶದೊಂದಿಗೆ ಈಗಾಗಲೇ ಕಾರ್ಯಪ್ರವೃತ್ತವಾಗಿರುವ ತಮ್ಮದೇ ಸೇವಾ ಸಂಸ್ಥೆಯಾದ ಸ್ಕೋಪ್ ಫೌಂಡೇಶನ್ ನಿಂದ ದಾನ ಸಹಾಯ ಪಡೆದು ನೀಲಿ ಗ್ರಾನೈಟ್ ಮತ್ತು ವೈಟ್ ಸ್ಟೋನ್ ನಿಂದ 14 ಅಡಿ ಎತ್ತರದ ‘ಭೂದೇವಿ’ ಏಕಶಿಲಾ ಪ್ರತಿಮೆಯನ್ನು ಖ್ಯಾತ ಶಿಲ್ಪಿಗಳಿಂದ ಕೆತ್ತಿಸಲು ಯೋಜನೆ ರೂಪಿಸಿದ್ದಾರೆ.ಇಂದಿನ ಒತ್ತಡ ಮತ್ತು ತಳಮಳದ ಧಾವಂತದ ಬದುಕಿನಲ್ಲಿ ತೊಡಗಿರುವ ಜನತೆಗೆ ಯೋಗ,ಧ್ಯಾನ,ಸಂಗೀತ,ಸಾಹಿತ್ಯದ ಮೂಲಕ ಒತ್ತಡ ಕಡಿಮೆ ಮಾಡಿ ಶಾಂತಿ-ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡುವುದು ಭೂದೇವಿ ಆಧ್ಯಾತ್ಮಿಕ ಕೇಂದ್ರದ ಸದುದ್ದೇಶ ಎಂದರು.

ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರವಿಕುಮಾರ್ ಗಣಿಗ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹಾಗೂ ಮಾಜಿ ಶಾಸಕ ಎಂ.ಶ್ರೀನಿವಾಸ್ ಡಾ.ಎಲ್.ಎನ್. ಮೂರ್ತಿ ಹಲ್ಲೇಗೆರೆ ಅವರನ್ನು ಸನ್ಮಾನಿಸಲಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿನಂದನಾ ನುಡಿಗಳ ನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್, ಅಭಿನವ ಭಾರತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಶಿವಮೂರ್ತಿ ಕೀಲಾರ,ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಬಿಜ್ಜವರ ಎಚ್. ಲೋಕೇಶ್, ಹನಕೆರೆ ಎಂ. ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಿ .ಶಿವರಾಜು ಕೀಲಾರ, ನೇಗಿಲ ಯೋಗಿ ಸಂಸ್ಥೆಯ ಅಧ್ಯಕ್ಷ ಎ.ಸಿ. ರಮೇಶ್ ಭಾಗವಹಿಸಲಿದ್ದಾರೆ.

ಸಂಜೆ 4 ಗಂಟೆಯಿಂದ ನಾಡಿನ ಸುಪ್ರಸಿದ್ಧ ಗಾಯಕರುಗಳಾದ ಡಾ. ರಾಮೇಶ್ವರಪ್ಪ, ವಿಶ್ವೇಶ ಭಟ್, ಅಶ್ವಿನಿ ಭಟ್, ಶಶಿಕಲಾ ಸುನಿಲ್, ಶ್ರೀಧರ್, ವೀಣಾ ಶಿವಣ್ಣ ರವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ನಾಗರಿಕ ವೇದಿಕೆಯ ಎ.ಸಿ.ರಮೇಶ್, ಡಿ. ಶಿವರಾಜು ಕೀಲಾರ, ಮಂಜೇಶ್, ಹನಕೆರೆ ನಾಗಪ್ಪ, ಕಾರಸವಾಡಿ ಮಹದೇವು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!