Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರತಿಯೊಬ್ಬರು ಉತ್ತಮ ಆರೋಗ್ಯ ವೃದ್ದಿಸಿಕೊಳ್ಳಲು ಮುಂದಾಗಬೇಕು: ಡಾ.ಎಚ್.ಎಲ್.ನಾಗರಾಜ್

ಹಿಂದಿನ ಕಾಲದಲ್ಲಿ ಭಾರತ ದೇಶದಲ್ಲಿ ಬಡತನವೆಂಬುವುದು ತಲೆ ಎತ್ತಿ ಮೆರೆಯುತ್ತಿತ್ತು, ಆದರೆ ಮುಂದಿನ ದಿನಗಳಲ್ಲಿ ಅನಾರೋಗ್ಯವೆಂಬುವುದು ತಲೆಯೆತ್ತಿ ಮೆರೆಯುವ ಪರಿಸ್ಥಿತಿ ಬರಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ ಎಚ್ ಎಲ್ ನಾಗರಾಜ್ ಅವರು ಬೇಸರ ವ್ಯಕ್ತ ಪಡಿಸಿದರು.

ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ವಿಶ್ವ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ನಮ್ಮ ಸುತ್ತಮುತ್ತಲೂ ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿದೆ, ಇದರ ಅರ್ಥ, ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಕೂಡ ಉತ್ತಮ ಆರೋಗ್ಯ ವೃದ್ದಿಸಿಕೊಳ್ಳುವ ಬಗ್ಗೆ ಮುಂದಾಗಬೇಕು. ಮನುಷ್ಯರ ಆರೋಗ್ಯದಿಂದ ಇದ್ದರೆ ದೇಶವು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.

ಉತ್ತಮ ಆರೋಗ್ಯಕ್ಕಾಗಿ ಯುವಜನತೆ ಮೊದಲು ಧೂಮಪಾನ, ಮದ್ಯಪಾನ ಮುಂತಾದ ದುಶ್ಚಟಗಳಿಂದ ದೂರವಿರಿ. ಮಕ್ಕಳು, ಯುವಕ ಯುವತಿಯರು ಹೆಚ್ಚಾಗಿ ತರಕಾರಿ, ಹಣ್ಣು ಸೇರಿದಂತೆ ಹೆಚ್ಚು ಪೋಷಕಾಂಶ ಇರುವ ಆಹಾರ ಸೇವನೆ ಮಾಡಿ ಇದರಿಂದ ಆರೋಗ್ಯ ವೃದ್ದಿ ಆಗುತ್ತದೆ ಹಾಗೂ ದೈರ್ಯವಾಗಿ ರಕ್ತದಾನ ಮಾಡಿ ಕಷ್ಟದಲ್ಲಿರುವವರ ಜೀವ ಉಳಿಸಬಹುದು ಎಂದು ಹೇಳಿದರು.

ಇಡೀ ದೇಶದಲ್ಲಿ ರಕ್ತ ಹಾಗೂ ರಕ್ತ ದಾನಿಗಳ ಕೊರತೆ ಇದೆ. ರಕ್ತದಾನದಿಂದ ಆರೋಗ್ಯ ಏರುಪೇರು ಆಗುತ್ತದೆ ಎಂಬ ಮನೋಭಾವದಿಂದ ಬಹಳಷ್ಟು ಜನರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಪುನಃ ರಕ್ತದ ಉತ್ಪತ್ತಿ ಆಗುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂಬ ಭಯದಿಂದ ಎಷ್ಟೋ ಜನರು ರಕ್ತದಾನ ಮಾಡಲು ಮುಂದೆ ಬರುವುದಿಲ್ಲ. ರಕ್ತದಾನ ಮಾಡುವುದರಿಂದ ಆರೋಗ್ಯದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

ರಕ್ತದಾನ ಮಾಡುವುದಕ್ಕೆ ಮುಂದೆ ಬರಲು ಹಿಂಜರಿಯುತ್ತಿರುವವರಿಗೆ ಪ್ರೇರಣೆ ಆಗಬೇಕು ಮತ್ತು ಇದುವರೆಗೂ ರಕ್ತದಾನ ಮಾಡಲು ಮುಂದೆ ಬರದೇ ಇರುವವರು ಮುಂದೆ ಬಂದು ರಕ್ತದಾನ ಮಾಡಬೇಕು ಎಂಬ ಉದ್ದೇಶದಿಂದಲೇ ಸನ್ಮಾನ ಮಾಡುತ್ತಿರುವುದು ಎಂದು ತಿಳಿಸಿದರು.

ರಕ್ತದಾನಿಗಳಿಗೆ ಸನ್ಮಾನ ಸ್ವ ಇಚ್ಛೆಯಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಅನಿಲ್ ರಾಜ್ ಎಚ್ ಸಿ-31 ಬಾರಿ , ತ್ಯಾಗರಾಜ್ ನಾಯ್ಡು ಡಿ -11 ಬಾರಿ, ಕಿರಣ್ ಕುಮಾರ್ ಎನ್- 9 ಬಾರಿ, ಕೆ.ಪಿ. ಕುಮಾರ್ -35 ಬಾರಿ, ಶಶಿಕಲಾ-11 ಬಾರಿ, ಸೃಜನ್ ಗೌಡ-4 ಬಾರಿ ಒಟ್ಟು 6 ಜನರನ್ನು ಸನ್ಮಾನಿಸಲಾಯಿತು.

ಹಲವು ಸಂಘಟನೆಗಳಿಗೆ ಮುಖಂಡರಿಗೆ ಸನ್ಮಾನ

01 ಜೂನ್ 2023 ರಿಂದ 31 ಮೇ 2024 ರವರೆಗೆ ರಕ್ತದಾನ ಶಿಬಿರ ನಡೆಸಿ 1572 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಜೀವದಾರೆ ಟ್ರಸ್ಟ್ , 1080 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಮಳವಳ್ಳಿ ಯುವಕ ಮಿತ್ರ, , 738 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಪಿ.ಇ.ಎಸ್ ಟ್ರಸ್ಟ್, 541 ಯೂನಿಟ್ ರಕ್ತ ಸಂಗ್ರಹಿಸಿದ ಮದ್ದೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಘ ಮತ್ತು ಸಮಾನ ವಯಸ್ಕರ ವೇದಿಕೆ, 356 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಬಿ.ಎಸ್.ಯು ಶ್ರೀರಂಗಪಟ್ಟಣ ಸಂಸ್ಥೆ, 1837 ಯೂನಿಟ್ ರಕ್ತವನ್ನು ಸಂಗ್ರಹಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ ಮೋಹನ್, ಮಿಮ್ಸ್ ನಿರ್ದೇಶಕ ರಾದ ಪಿ ನರಸಿಂಹ ಸ್ವಾಮಿ, ರೆಡ್ ಕ್ರಾಸ್ ಸಂಸ್ಥೆಯ ಗೌರವಾಧ್ಯಕ್ಷರಾದ ಮೀರಾಶಿವಲಿಂಗಯ್ಯ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಮ್.ಎನ್ ಆಶಾಲತಾ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಗಾಯಿತ್ರಿ, ಜಿಲ್ಲಾ ಆರೋಗ್ಯ ಇಲಾಖೆಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಮಮತಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!