Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕ ವಾತಾವರಣ – ಟಿ.ಎಸ್.ಸತ್ಯಾನಂದ

ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಗೆಲುವಿಗೆ ಪೂರಕ ವಾತಾವರಣವಿದ್ದು, ಹುಣ್ಣಿಮೆ ಚಂದ್ರನ ಅಂಗಳದಲ್ಲಿ ಬೀಸುವ ತಂಗಾಳಿಯ ರೀತಿ ಕಾಂಗ್ರೆಸ್ ಪಕ್ಷದ ಗಾಳಿ‌ ನಾಡಿನ ಉದ್ದಗಲಕ್ಕೂ ಬೀಸುತ್ತಿದೆ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಟಿ.ಎಸ್.ಸತ್ಯಾನಂದ ಹೇಳಿದರು.

ಮಂಡ್ಯದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಕಡು ಭ್ರಷ್ಟಾಚಾರ ದಿಂದ ಬೇಸತ್ತಿರುವ ರಾಜ್ಯದ ಜನತೆ ಮಂಬರುವ ಮೇ ಹತ್ತರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಉತ್ಸುಕತೆಯಿಂದ ಕಾಯುತ್ತಿದ್ದಾರೆ‌. ಮಾನವ ಧರ್ಮ ಹಾಗೂ ಅಭಿವೃದ್ಧಿಯನ್ನೇ ಮರೆತು ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಅಧಿಕಾರ ನಡೆಸುತ್ತಿರುವ ರಾಜ್ಯ ಸರ್ಕಾರದ ನಡತೆಗೆ ರಾಜ್ಯದ ಜನ ಅಂತ್ಯ ಹಾಡಲಿದ್ದು, ಕಾಂಗ್ರೆಸ್ ಸರ್ಕಾರದ ಆಗಮನಕ್ಕೆ ಹಾತೊರೆಯುತ್ತಿದ್ದಾರೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ‌ತಿರಸ್ಕರಿಸಿದ ಮತದಾರ ಇಂದು ಎಚ್ಚೆತ್ತುಗೊಂಡಿದ್ದು, ಹಲವು ಆಶೋತ್ತರಗಳಿಂದ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಕ್ಕೆ ಭ್ರಮನಿರಸನ ಗೊಂಡಿದ್ದಾನೆ. ಜಿಲ್ಲೆಯ ಅಭಿವೃದ್ಧಿಗೆ ಕಿಂಚಿತ್ತೂ ಶ್ರಮ ಪಡದೆ ಕಾಲಹರಣ ಮಾಡಿದ ಜಿಲ್ಲೆಯ ಜೆಡಿಎಸ್ ಶಾಸಕರು ಬೊಗಳೆ ಹೇಳಿಕೆಗಳು, ದುರಹಂಕಾರದ ನಡವಳಿಕೆಗಳ ಮೂಲಕ ಮತ ನೀಡಿದ ಮತದಾರನ ನಂಬಿಕೆಗಳಿಗೆ ದ್ರೋಹವೆಸಗಿದ್ದಾರೆ. ಜಿಲ್ಲೆಯ ಸಾರ್ವಜನಿಕ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿದ್ದು, ಯಾವೊಬ್ಬ ಶಾಸಕನು ಅದನ್ನು ಪ್ರಶ್ನಿಸುವ ಬದಲು ಅದನ್ನು ಪೋಷಿಸುತ್ತಾ ಭ್ರಷ್ಟಾಚಾರದ ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್‌ನ ಶಾಸಕರು ಹೆಚ್.ಡಿ‌. ಕುಮಾರಸ್ವಾಮಿ‌ ಅವರನ್ನು ಮುಖ್ಯಮಂತ್ರಿ ‌ಮಾಡಲು ನಮಗೆ ಮತ ‌ನೀಡಿ‌ ಎಂದು ಕೇಳುತ್ತಿದ್ದಾರೆಯೇ ಹೊರತು‌ ಕಳೆದ ಐದು‌ ವರ್ಷಗಳಲ್ಲಿ ತಾವು ತಮ್ಮ ಕ್ಷೇತ್ರದಲ್ಲಿ ಯಾವ ಜನೋಪಯೋಗಿ ಕೆಲಸ ಮಾಡಿದ್ದೇವೆ ಮತ ನೀಡಿದ ಮತದಾರನ ಋಣ ತೀರಿಸಲು ಇಂತಹ ಶಾಶ್ವತ ಯೋಜನೆ ತಂದು ಅನುಷ್ಠಾನ ಗೊಳಿಸಿದ್ದೇವೆ ಎಂಬ ಒಂದು ಸಾಕ್ಷಿಯನ್ನು ತೋರಿಸಿ ಮತ ಕೇಳುತ್ತಿಲ್ಲ. ಇದು ನಮ್ಮ ಜಿಲ್ಲೆಯ ದೊಡ್ಡ ದುರಂತವಾಗಿದೆ. ರಾಜ್ಯ ಹಾಗೂ ರಾಷ್ಟ್ರಕ್ಕೆ ಬಲಿಷ್ಠ ನಾಯಕತ್ವ ನೀಡಿದ್ದ ಮಂಡ್ಯ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯನ್ನು ‌ಮುಖ್ಯಮಂತ್ರಿ ಮಾಡಲು ನಮಗೆ ಮತ ನೀಡಿ ಎಂದು ಕೇಳಲಷ್ಟೇ ಒಂದು ರಾಜಕೀಯ ಪಕ್ಷದ ಶಾಸಕರು ನಿಂತಿರುವುದು ನಮ್ಮ ದುರಂತ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಜನ ಅತ್ಯಂತ ಪ್ರಜ್ಞಾವಂತ ಮತ್ತು ಪ್ರಬುದ್ಧ ರಾಗಿದ್ದು ಯಾರಿಗೆ ಯಾವ ಸಮಯದಲ್ಲಿ ಬುದ್ದಿ ಕಲಿಸಬೇಕು ಎಂಬ‌ ಅರಿವು ಹೊಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, 1994 ರಿಂದ ಇಲ್ಲಿಯವರೆಗೆ ನಿರಂತರ ವಾಗಿ ಮಂಡ್ಯ ಜಿಲ್ಲೆಯ ಜನರ ಸಂಪರ್ಕದಲ್ಲಿದ್ದು ಅವರ ನೇತೃತ್ವದಲ್ಲಿ ‌ನಡೆಯುತ್ತಿರುವ ಚುನಾವಣೆಯಲ್ಲಿ ಅವರ ಕೈ ಬಲಪಡಿಸಲು ಜಿಲ್ಲೆಯ ಜನ ಕಾಯುತ್ತಿದ್ದಾರೆ. 2013ರಿಂದ 2018ರವರೆಗೆ ದಕ್ಷ ಅಡಳಿತ ನೀಡಿ ಜಿಲ್ಲೆಯ ಹಲವು ಅಭಿವೃದ್ಧಿ ಯೋಜನೆಗಳ ಮೂಲಕ ಸರ್ವ ಜನಾಂಗದ ಏಳಿಗೆಗೆ ಕಾರಣರಾದ ಸಿದ್ದರಾಮಯ್ಯರವರ ಜನಪರ ಆಡಳಿತ ಮತ್ತು ‌ನೀಡಿದ ಕಾರ್ಯಕ್ರಮಗಳ ಕೊಡುಗೆ ಜನಮಾನಸದಲ್ಲಿ ಹಸಿರಾಗಿದೆ ಆದ್ದರಿಂದ ಮೇಲುಕೋಟೆ ಸೇರಿದಂತೆ ಎಲ್ಲಾ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ‌ಪಕ್ಷದ ಅಭ್ಯರ್ಥಿಗಳು ಜಯಶೀಲರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಓಬಿಸಿ ಘಟಕದ ಜಿಲ್ಲಾಧ್ಯಕ್ಷ ಕೃಷ್ಣ, ನಾಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!