ಕ್ಷಯರೋಗದ ಬಗ್ಗೆ ಆತಂಕ ಬೇಡ.ಈ ಖಾಯಿಲೆ ಗುಣಪಡಿಸಬಹುದಾಗಿದ್ದು 2025 ರ ವೇಳೆಗೆ ಕ್ಷಯರೋಗವನ್ನು ಸೋಲಿಸಿ ದೇಶವನ್ನು ಗೆಲ್ಲಿಸುವ ಸಂಕಲ್ಪ ಮಾಡೋಣ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಡಿ.ಬೆನ್ನೂರ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಮಹದೇವಪುರ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ‘ಕ್ಷಯ ರೋಗ ಜಾಗೃತಿ’ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಕ್ಷಯರೋಗವು ಸಾಂಕ್ರಾಮಿಕ ರೋಗವಾಗಿದ್ದು ಸಕಾಲದಲ್ಲಿ ಪರೀಕ್ಷೆ ಮತ್ತು ನಿಯಮಿತ ಚಿಕಿತ್ಸೆ ಪಡೆಯುವುದರಿಂದ ಪೂರ್ಣ ಗುಣಪಡಿಸಬಹುದಾಗಿದೆ. ಒಂದು ವಾರಕ್ಕಿಂತ ಸತತ ಕೆಮ್ಮು,ಕಫ,ಕಫದಲ್ಲಿ ರಕ್ತ, ಹಸಿವಾಗದಿರುವುದು,ತೂಕ ಕಡಿಮೆಯಾಗುವುದು, ಬೆವರುವುದು, ಸಾಯಂಕಾಲದ ವೇಳೆ ಜ್ವರ ,ದೇಹದ ಮೇಲಿನ ಗಂಟುಗಳು ಕ್ಷಯರೋಗದ ಲಕ್ಷಣಗಳಾಗಿವೆ ಎಂದರು.

ಇಂತಹ ಲಕ್ಷಣ ಹೊಂದಿದವರನ್ನು ಗುರುತಿಸಿ ಸರಕಾರಿ ಆಸ್ಪತ್ರೆಯಲ್ಲಿ ಕಫದ ಮಾದರಿ ಪರೀಕ್ಷಿಸಿ ಕ್ಷಯ ಎಂದು ದೃಢ ಪಟ್ಟಲ್ಲಿ ಉಚಿತವಾಗಿ 6 ತಿಂಗಳ ವರೆಗೆ ಚಿಕಿತ್ಸೆ ನೀಡಿ, ಜೊತೆಗೆ ರೋಗಿಯ ಪೌಷ್ಠಿಕ ಆಹಾರಕ್ಕಾಗಿ ಪ್ರತಿ ತಿಂಗಳು ರೂ.500 ರಂತೆ 6 ತಿಂಗಳಿಗೆ ರೂ 3000 ಗಳನ್ನು ನೇರವಾಗಿ ರೋಗಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಬನ್ನಿ ಕ್ಷಯ ಪತ್ತೆ ಹಚ್ಚಲು ಸಹಕರಿಸಿ ಸೂಕ್ತ ಚಿಕಿತ್ಸೆ ಪಡೆದು ಸಂಪೂರ್ಣ ನಿರ್ಮೂಲನೆ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಂತರ ಆರೋಗ್ಯ ನಿರೀಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ, ವಿದ್ಯಾರ್ಥಿಗಳ ಹಾಗೂ ಸಂಘ ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ. ಹೀಗಾಗಿ ಎಲ್ಲರೂ ಸೇರಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಕ್ಷಯ ನಿರ್ಮೂಲನೆಗಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಸ್ವಾಮಿ,ಉಪನ್ಯಾಸಕ ಬಾಲರಾಜು, ಮಾದೇಗೌಡ, ಮಮತಾ, ನಜ್ಮಾ, ವಸೀಮ,ಸಮುದಾಯ ಆರೋಗ್ಯ ಅಧಿಕಾರಿ ಸಹನಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಿನಯ, ಆಶಾ ಕಾರ್ಯಕರ್ತೆಯರಾದ ನೇತ್ರಾ, ಲಕ್ಷ್ಮೀ, ಸುಮಾ ಇತರರು ಹಾಜರಿದ್ದರು.




