ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶಶಿಕಲಾ ಅವಿರೋಧವಾಗಿ ಆಯ್ಕೆಯಾದರು.
ಸಿದ್ದರಾಜು ಅವರ ರಾಜೀನಾಮೆಯಿಂದ ತೆರೆವಾಗಿದ್ದ ಸ್ಥಾನಕ್ಕೆ ಇಂದು ನಡೆದ 24 ಸದಸ್ಯರ ಬಲದಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಶಶಿಕಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಶಶಿಕಲಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ನಾಗರಾಜು ಘೋಷಣೆ ಮಾಡಿದರು.
ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಮಾತನಾಡಿ, ಅಧ್ಯಕ್ಷರಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಸದಸ್ಯರ ಸಹಕಾರದೊಂದಿಗೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಗ್ರಾ.ಪಂ ಸದಸ್ಯ ಕೆವಿ ಪ್ರಕಾಶ್ ಮಾತನಾಡಿ, ಗ್ರಾಮಪಂಚಾಯಿತಿಯ 24 ಸದಸ್ಯರ ಬಲದಲ್ಲಿ ಕಾಂಗ್ರೆಸ್ ಬೆಂಬಲಿತ 14 ಸದಸ್ಯರಿದ್ದು, ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಸಲಹೆಯಂತೆ 14 ಸದಸ್ಯರು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷದ ಬೆಂಬಲಿತರಿಗೆ ಬೆಂಬಲ ಸೂಚಿಸುವುದರ ಮೂಲಕ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ, ಎಲ್ಲರ ಸಹಕಾರದೊಂದಿಗೆ ಗ್ರಾಮಗಳನ್ನು ಅಭಿವೃದ್ದಿಪಡಿಸುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದರು.
ನೂತನ ಅಧ್ಯಕ್ಷರಿಗೆ ಸದಸ್ಯರಾದ ಕೆವಿ ಪ್ರಕಾಶ್, ಸಿದ್ದರಾಜು, ಕಲಿಂ ಜೆನುಲ್ಲಾ, ಮಹದೇವು, ಕುಸುಮ, ವಿಜಯಮ್ಮ, ಜಪ್ರೋಲ್ಲಖಾನ್, ಚೆನ್ನಮ್ಮ , ರಫಿಯಾ, ಅನಿತಾ ಇನಿಯಾತ್ ಕಾತುನ್ ಸೇರಿದಂತೆ ಇತರರು ಅಭಿನಂದನೆ ಸಲ್ಲಿಸಿದರು.




