Saturday, May 18, 2024

ಪ್ರಾಯೋಗಿಕ ಆವೃತ್ತಿ

ರೈತರ ಪಂಪ್‌ಸೆಟ್‌ಗಳಿಗೆ 6 ಗಂಟೆ ವಿದ್ಯುತ್‌ ನೀಡಿ : ದಿನೇಶ್‌ ಗೂಳಿಗೌಡ


  • ದಿಶಾ ಸಭೆಯಲ್ಲಿ ಶಾಸಕರ ಒತ್ತಾಯ : ಪರಿಶೀಲಿಸಿ ಕ್ರಮವಹಿಸುವ ಭರವಸೆ

  • ಚರ್ಮಗಂಟು : ಮೃತ ರಾಸುಗಳ ಮಾಲೀಕರಿಗೆ ಪರಿಹಾರ ನೀಡಿ

ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿನ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಸಮರ್ಪಕವಾಗಿ ಆಗದೆ, ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಬೆಳಗ್ಗೆಯೇ ಆರು ಗಂಟೆ ಅವಧಿಗೆ ವಿದ್ಯುತ್‌ ಪೂರೈಕೆ ಮಾಡಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (DISHA) ಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್‌ ಗೂಳಿಗೌಡ ಅವರು ಗಮನಕ್ಕೆ ತಂದರು. ಇದಕ್ಕೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ಪದೇ ಪದೆ ವಿದ್ಯುತ್‌ ವ್ಯತ್ಯಯವಾಗುತ್ತಿರುವುದರಿಂದ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಇದು ಹೀಗೆಯೇ ಮುಂದುವರಿಯಬಾರದು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಕಳೆದ ಒಂದೆರೆಡು ವಾರದಿಂದ ತಾಂತ್ರಿಕ ಸಮಸ್ಯೆಯಾಗುತ್ತಿದೆ. ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಿ, ರೈತರಿಗೆ ಸಮರ್ಪಕ ವಿದ್ಯುತ್‌ ಪೂರೈಕೆ ಮಾಡುತ್ತೇವೆ. ಈಗ ರಾತ್ರಿ ಮೂರು ಗಂಟೆ ಹಾಗೂ ಬೆಳಗ್ಗೆ ಮೂರು ಗಂಟೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ಆಗ ಮಾತನಾಡಿದ ಶಾಸಕರು, ಈಗ ಕೊಡುತ್ತಿರುವ ಆರು ಗಂಟೆ ವಿದ್ಯುತ್‌ ಅನ್ನು ಬೆಳಗ್ಗೆ ಮತ್ತು ರಾತ್ರಿಗೆ ಎಂದು ಮಾಡದೇ, ಬೆಳಗ್ಗೆಯೇ ಸರಬರಾಜು ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಅಲ್ಲದೆ, ರಾತ್ರಿ ಸಂದರ್ಭದಲ್ಲಿ ಈಗ ಕಾಡುಪ್ರಾಣಿಗಳ ಕಾಟ ವಿಪರೀತವಾಗಿದೆ. ರೈತರು ನೀರು ಬಿಡಲು ಹೊಲಕ್ಕೆ ಈ ಸಂದರ್ಭದಲ್ಲಿ ಹೋದರೆ ಪ್ರಾಣಿಗಳ ದಾಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೆಳಗ್ಗೆಯೇ 6 ಗಂಟೆಗಳ ಕಾಲ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸರಬರಾಜು ಮಾಡಬೇಕು ಎಂದು ಸೂಚಿಸಿದರು. ಇದಕ್ಕೆ ಉತ್ತರಿಸಿದ ವಿದ್ಯುತ್‌ ಇಲಾಖೆ ಅಧಿಕಾರಿಗಳು, ಇದನ್ನು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರ

ಮೃತ ರಾಸುಗಳ ಮಾಲೀಕರಿಗೆ ಪರಿಹಾರ ನೀಡಿ

ಇದೇ ವೇಳೆ ಜಾನುವಾರುಗಳಿಗೆ ಚರ್ಮಗಂಟು ರೋಗ ಭಾದಿಸುತ್ತಿರುವುದರ ಬಗ್ಗೆ ಮಾತನಾಡಿದ ಶಾಸಕರು, ಚರ್ಮಗಂಟು ರೋಗಕ್ಕೆ ವ್ಯಾಕ್ಸಿನೇಷನ್‌ ಕೊರತೆ ಇದೆಯೇ ಹಾಗೂ ಈ ರೋಗದಿಂದ ಮೃತಪಟ್ಟಿರುವ ಜಾನುವಾರುಗಳ ಮಾಲೀಕರಿಗೆ ಪರಿಹಾರವನ್ನು ಕೊಡುವ ಕೆಲಸ ಆಗುತ್ತಿದೆಯೇ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸಂಬಂಧಪಟ್ಟ ಅಧಿಕಾರಿಗಳು, ವ್ಯಾಕ್ಸಿನೇಷನ್‌ ಕೊರತೆ ಇಲ್ಲ, ಅಲ್ಲದೆ, ಚರ್ಮಗಂಟು ರೋಗದಿಂದ 335 ರಾಸುಗಳು ಮೃತಪಟ್ಟಿವೆ. ಇವುಗಳಲ್ಲಿ ನೂರಕ್ಕೂ ಹೆಚ್ಚು ಜಾನುವಾರುಗಳ ಮಾಲೀಕರಿಗೆ ಪರಿಹಾರವನ್ನು ಒದಗಿಸಲಾಗಿದೆ. ಉಳಿದ ಮಾಲೀಕರಿಗೆ ಪರಿಹಾರವನ್ನು ವಿತರಣೆ ಮಾಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉತ್ತರಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!