Wednesday, November 18, 2026

ಪ್ರಾಯೋಗಿಕ ಆವೃತ್ತಿ

ಪರಿಸರ ವಿರೋಧಿ ಗಣಿಗಾರಿಕೆಗೆ ಹೆಚ್.ಡಿ.ಕುಮಾರಸ್ವಾಮಿ ಅನುಮತಿ: ಶಿವನಂಜು

2018ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿಮಲೈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಬಿಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು, ಇಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ನಂತರ ಇದೇ ಜಾಗದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವ ಕಡತಕ್ಕೆ ಸಹಿ ಮಾಡಿ, ಪರಿಸರ ನಾಶಕ್ಕೆ ಮುಂದಾಗಿದ್ದಾರೆಂದು ಕಾಂಗ್ರೆಸ್ ಮುಖಂಡ ಶಿವನಂಜು ದೂರಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರಾದ ನಂತರ ಹೆಚ್.ಡಿ.ಕುಮಾರಸ್ಮಾಮಿ ಅವರು ಪರಿಸರಕ್ಕೆ ಮಾರಕವಾಗಬಹುದಾದ ಕಡತಕ್ಕೆ ಸಹಿ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿಮಲೈ ಅಭಯಾರಣ್ಯ ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿದ್ದು, ಅತ್ಯಂತ ಸೂಕ್ಷ್ಮಜೀವಿ ಹಾಗೂ ಪ್ರಾಣಿ ಸಂಕುಲಗಳು ಮತ್ತು ಸಸ್ಯ ಸಂಕುಲಗಳು ಇರುವ ಸೂಕ್ಷ್ಮ ಪರಿಸರ ಅಭಯಾರಣ್ಯ ಪ್ರದೇಶವಾಗಿದೆ. ಇಂತಹ ಪರಿಸರದಲ್ಲಿ 485.77 ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಅನುಮತಿ ನೀಡಿರುವು ದನ್ನು ಎಲ್ಲಾ ಪರಿಸರವಾದಿಗಳು ಹಾಗೂ ಪರಿಸರ ಪ್ರೇಮಿಗಳು ಖಂಡಿಸಿದ್ದಾರೆ ಎಂದರು.

ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿದರೆ 99,388 ಬೃಹತ್ ಮರಗಳು, ಜೀವ ಸಂಕುಲಗಳು ಹಾಗೂ ಔಷಧಿ ಸಸ್ಯಗಳ ಮಾರಣಹೋಮವಾಗಲಿದೆ. ಅಂತರ್ಜಲ ಹಾಗೂ ಭೂಕುಸಿತಕ್ಕೆ ಕಾರಣವಾಗಲಿದೆ. ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿಗಳು ಅರಣ್ಯ ಸಂರಕ್ಷಣಾ ಕಾಯಿದೆ 1980ರ ಅಡಿಯಲ್ಲಿ ಈ ಗಣಿಗಾರಿಕೆ ಯೋಜನೆಗೆ ಅನುಮತಿ ನೀಡದಂತೆ ವಿರೋಧ ವ್ಯಕ್ತಪಡಿಸಿ ಗಣಿಗಾರಿಕೆಗೆ ಅನುಮತಿ ನೀಡದಂತೆ ಶಿಫಾರಸ್ಸು ಮಾಡಿದ್ದರು. ಹೀಗಿರುವಾಗ ಈಗ ಅನುಮತಿ ನೀಡಿರುವುದು ಖಂಡನೀಯ ಎಂದರು.

ಪರಿಸರವನ್ನು ನಾಶ ಮಾಡುವ ಬದಲು ಕರ್ನಾಟಕದ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಯನ್ನು ಪುನರಾರಂಭ ಮಾಡಿ ಬಡ ಕುಟುಂಬಗಳಿಗೆ ಅನುಕೂಲ ಮಾಡಿಕೊಡಲಿ. ಮುಚ್ಚಿ ಹೋಗಿರುವ ಬೃಹತ್ ಕೈಗಾರಿಕೆಗಳ ಪುನರ್ಚೇತನಕ್ಕೆ ಮುಂದಾಗಲಿ. ಜೊತೆಗೆ ರಾಜ್ಯಕ್ಕೆ ಬರಬೇಕಿರುವ ಒಂದು ಲಕ್ಷದ 85,000 ಕೋಟಿ ಜಿಎಸ್‌ಟಿ ಹಣದ ಬಿಡುಗಡೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಕುಮಾರಸ್ವಾಮಿಯವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ಜನತೆ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿ ಆಗಲಿ ಎಂಬ ಆಶಯದಿಂದ ಗೆಲ್ಲಿಸಿದ್ದಾರೆ ಹೊರತು, ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಲಿ ಎಂದಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.

ಗೋಷ್ಠಿಯಲ್ಲಿ ನಗರಸಭೆ ಸದಸ್ಯ ಶ್ರೀಧರ್, ಕಾಂಗ್ರೆಸ್ ಮುಖಂಡ ಶಿವಣ್ಣ, ನಾಗರತ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ