Thursday, September 19, 2024

ಪ್ರಾಯೋಗಿಕ ಆವೃತ್ತಿ

ಉಪೇಂದ್ರನ ಅಸೂಕ್ಷ್ಮ ಮಾತು ಮತ್ತು ಪೊಗರು ಸಿನಿಮಾದ ವಿವಾದ

✍️ ಮಾಚಯ್ಯ ಎಂ ಹಿಪ್ಪರಗಿ

‘ಒಂದು ಯಕಶ್ಚಿತ್ ಗಾದೆ ಮಾತಿಗೆ ಇಷ್ಟೆಲ್ಲ ರಾದ್ದಾಂತ ಯಾಕೆ?’ ಉಪೇಂದ್ರನ ವಿವಾದ ಕೇಳಿಸಿಕೊಂಡ ಬಹಳಷ್ಟು ಸಜ್ಜನರು ಹೇಳುವ ಮಾತು ಇದು. ಈ ಗಾದೆಗಳನ್ನು ಕುರಿತಾದದ್ದೇ ಒಂದು ಗಾದೆಯಿದೆ. ’ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಅಂತ. ಅದರರ್ಥ ಗಾದೆಗಳು ಸತ್ಯವನ್ನೇ ಹೇಳುತ್ತವೆ ಎಂದಲ್ಲ. ವೇದಗಳ ರೀತಿ, ಗಾದೆಗಳು ಯಾರೋ ಒಬ್ಬ ವ್ಯಕ್ತಿಯಿಂದ ಅಥವಾ ಒಂದು ಸಮುದಾಯದಿಂದ ಗುಪ್ತ ಉದ್ದೇಶವನ್ನಿಟ್ಟುಕೊಂಡು ರಚಿತವಾದವಲ್ಲ; ಬದಲಿಗೆ, ಜನರ ನಡುವೆ, ಜನಪದರ ಬದುಕಿಗೆ ಸನಿಹವಾಗಿಯೇ ಹುಟ್ಟಿಕೊಂಡವು; ಆ ಕಾರಣಕ್ಕೆ, ವೇದಗಳಿಗಿಂತ ಹೆಚ್ಚು ಗಾದೆಗಳು ವಾಸ್ತವಗಳನ್ನು ಪ್ರತಿನಿಧಿಸುತ್ತವೆ ಎನ್ನುವುದು ಈ ಗಾದೆಯ ತಾತ್ಪರ್ಯ.

ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿರುವ ಮತ್ತೊಂದು ಮುಖ್ಯವಾದ ಸಂಗತಿಯೆಂದರೆ, ಹೀಗೆ ಜನರ ನಡುವೆ ಹುಟ್ಟುವ ಗಾದೆಗಳು ಆಯಾ ಕಾಲಘಟ್ಟದ ಆಚಾರ, ವಿಚಾರ, ನಂಬಿಕೆ, ಆಲೋಚನೆಗಳು, ಬದುಕಿನ ರೀತಿಯಿಂದ ಪ್ರಭಾವಿತವಾಗಿರುತ್ತವೆ ಅಥವಾ ಅವುಗಳನ್ನು ತನ್ಮೂಲಕ ಪ್ರತಿಫಲಿಸುತ್ತಿರುತ್ತವೆ. ನಾವು ಇವತ್ತು ಬಳಸುವ ಬಹಳಷ್ಟು ಗಾದೆಗಳು ಹಲವು ತಲೆಮಾರುಗಳಷ್ಟು ಹಿಂದಿನ ಕಾಲಘಟ್ಟದಲ್ಲಿ ಹುಟ್ಟಿಕೊಂಡಂತವು. ಜಾತಿ ವ್ಯವಸ್ಥೆ ಮತ್ತು ಶೋಷಣೆಗಳು ತೀರಾ ಸಹಜ ಎನ್ನುವಷ್ಟರ ಮಟ್ಟಿಗೆ ಸ್ವೀಕೃತವಾಗಿದ್ದ ಕಾಲದಲ್ಲಿ ಮೈದಳೆದ ಬಹಳಷ್ಟು ಗಾದೆಗಳು ಅದೇ ಅನಿಷ್ಟ ಪರಿಕಲ್ಪನೆಯನ್ನು ತಮ್ಮೊಳಗೆ ಒಳಗೊಂಡಿರುತ್ತವೆ. ಈಗ ಕಾಲ ಬದಲಾಗಿದೆ. ನಮ್ಮ ನಡುವೆ ಬಾಬಾ ಸಾಹೇಬರು ಹಾದು ಹೋಗಿದ್ದಾರೆ; ಸಂವಿಧಾನವೆಂಬ ಶುಶ್ರೂಷಕ ಗ್ರಂಥವನ್ನೂ ಇರಿಸಿಹೋಗಿದ್ದಾರೆ. ಈಗ ನಾವು ಸ್ಪಷ್ಟವಾಗಿ ಅಲ್ಲದಿದ್ದರೂ, ತಕ್ಕಮಟ್ಟಿಗಾದರೂ ಸರಿ ಮತ್ತು ತಪ್ಪುಗಳ ನಡುವೆ ಪ್ರಜ್ಞೆ ಬೆಳೆಸಿಕೊಂಡಿದ್ದೇವೆ ಅಥವಾ ಹಾಗೆಂದುಕೊಂಡಿದ್ದೇವೆ. ಚಂದ್ರನ ಎದೆಗೆ ದಾಟುವಷ್ಟು ಬುದ್ದಿವಂತರಾದ ನಾವು, ಕೆಲವೊಂದು ಗಾದೆಗಳಲ್ಲಿ ಅಡಕವಾಗಿರುವ ಆ ಕಾಲದ ಅನಿಷ್ಟಗಳನ್ನು ಅರ್ಥ ಮಾಡಿಕೊಳ್ಳದೆ ಹೋಗುವುದು ಎಷ್ಟರಮಟ್ಟಿಗೆ ಸರಿ?

ತನ್ನನ್ನು ತಾನು ಬುದ್ದಿವಂತ ಎಂದು ಸೆಲ್ಫ್ ಬ್ರ್ಯಾಂಡ್ ಮಾಡಿಕೊಂಡಿರುವ ಹಾಗೂ ತನ್ನ ಸಿನಿಮಾಗಳು ‘ಬುದ್ದಿವಂತರಿಗೆ ಮಾತ್ರ ಎಂಬ ಟ್ಯಾಗ್‌ಲೈನ್ ಬಿಗಿದುಕೊಳ್ಳುವ ವಿಕ್ಷಿಪ್ತ ಮನಸ್ಥಿತಿಯ ವಿಚಿತ್ರ ನಟ ಉಪೇಂದ್ರ, ಒಂದು ಔಟ್‌ಡೇಟೆಡ್ ಗಾದೆಯ ಮಾತು ತನ್ನೊಳಗೆ ಅಡಗಿಸಿಕೊಂಡಿರುವ ಅಸೂಕ್ಷ್ಮವನ್ನು ಗ್ರಹಿಸಲಾರದಷ್ಟು ದಡ್ಡನಾದನೆ? ಈ ಪ್ರಶ್ನೆ ನಮಗೆ ಮುಖ್ಯವಾಗಬೇಕಾಗುತ್ತದೆ.

ಇನ್ನು ಕೆಲವರು, ’ಬಾಯ್ತಪ್ಪಿನಿಂದ’ ಅಥವಾ ‘ನಾಲಿಗೆ ಜಾರಿ’ ಹೀಗೆ ಮಾತಾಡಿರಬಹುದು ಎಂದು ಹೇಳುತ್ತಾರೆ. ವೈಯಕ್ತಿಕವಾಗಿ ನಾನಿದನ್ನು ಒಪ್ಪಲಾರೆ. ಯಾಕೆಂದರೆ, ಮಾತುಗಳು ಬಾಯಿಯಿಂದ ಅಥವಾ ನಾಲಿಗೆಯಿಂದ ಉತ್ಪತ್ತಿಯಾಗುತ್ತವೆ ಎಂದುಕೊಂಡವರು ಮಾತ್ರ ಹಾಗೆ ಹೇಳಬಲ್ಲರು. ಆದರೆ ನಾಲಗೆಯಿಂದ, ತುಟಿಯಿಂದ, ಹಲ್ಲುಗಳಿಂದ.. ಒಟ್ಟಾರೆ ಬಾಯಿಯಿಂದ ಉತ್ಪತ್ತಿಯಾಗುವುದು ಶಬ್ಧಗಳು ಮಾತ್ರ. ಮಾತುಗಳು ವ್ಯಕ್ತಿಯ ಮನಸ್ಸಿನಲ್ಲಿ ಉತ್ಪತ್ತಿಯಾಗುತ್ತವೆ. ಮೇಲೆ ಉಲ್ಲೇಖಿಸಿದ ಅಷ್ಟೂ ಅಂಗಗಳು ಆ ಮಾತಿಗೆ ಕೇವಲ ಶಬ್ಧದ ರೂಪವನ್ನಷ್ಟೇ ಕೊಡಬಲ್ಲವು. ಹಾಗಾಗಿ ನಾವಾಡುವ ಯಡವಟ್ಟು ಮಾತುಗಳನ್ನು ಬಾಯ್ತಪ್ಪಿನಿಂದ, ನಾಲಿಗೆ ಜಾರುವಿಕೆಯಿಂದ ಆದದ್ದು ಎಂದು ಸಮರ್ಥಿಸಿಕೊಳ್ಳುವುದೇ ನನ್ನ ಪ್ರಕಾರ ಅಸಂಬದ್ಧವಾದದ್ದು. ನಾಲಗೆಯು ತುಂಡಾದ ವ್ಯಕ್ತಿಗಳಿಗೂ ಮಾತುಗಳಿರುತ್ತವೆ. ಆತ/ಆಕೆ ತನ್ನೊಳಗೆ ಮಾತಾಡಬಲ್ಲ/ಳು, ಅನ್ನಿಸಿದ್ದನ್ನು ಹೇಳಿಕೊಳ್ಳಬಲ್ಲ/ಳು. ಆದರೆ ಅವು ಶಬ್ಧದ ರೂಪವಾಗಿ ನಮಗೆ ತಲುಪಲಾರವಷ್ಟೆ. ಅಂದರೆ ಮಾತಿಗೂ, ಬಾಯಿಗೂ ಹೊಣೆಗಾರಿಕೆಯನ್ನೊಪ್ಪಿಸುವಂತಹ ಸಂಬಂಧವಿಲ್ಲ. ಮಾತುಗಳು ಮನುಷ್ಯನ ಮನಸ್ಸಿನ ಪ್ರತಿರೂಪಗಳು. ಯಾವುದು ತಪ್ಪು ಎಂಬುದರ ಬಗ್ಗೆ ನಮ್ಮ ಮನಸ್ಸಿಗೆ ಸ್ಪಷ್ಟತೆಯಿರುತ್ತೋ, ಅದು ಎಂಥಾ ಸಂದರ್ಭದಲ್ಲೂ ನಮ್ಮ ಮಾತಾಗಿ ಬರುವುದಿಲ್ಲ.

ಆದಾಗ್ಯೂ ಉಪೇಂದ್ರನಿಗೆ ‘ಬಾಯ್ತಪ್ಪಿನ ಒಂದು ಗ್ರೇಸ್ ಮಾರ್ಕ್ಸ್ ಕೊಡೋಣವೆಂದರೆ, ತಾನು ಅದಕ್ಕೂ ಅರ್ಹನಲ್ಲವೆನ್ನುವುದನ್ನು ಆತನೇ, ’ಪಡೆ, ತಡೆ, ನಡೆ, ಕೊಡೆ’ ಎಂಬ ಬಾಲಿಶ ಪ್ರಾಸಪದ್ಯದ ಮುಖೇನ ಸಾಬೀತು ಮಾಡಿಕೊಂಡಿದ್ದಾನೆ. ಆ ಮೂಲಕ, ಜಾತಿವ್ಯವಸ್ಥೆಯಿಂದ ಪ್ರಭಾವಿತವಾದ ತನ್ನ ಮನಸ್ಸು ಎಂಥ ಕೀಳು ಅಭಿರುಚಿಯಿಂದ ತುಂಬಿ ತುಳುಕುತ್ತಿದೆ ಎಂಬುದನ್ನು ಜಾಹೀರು ಮಾಡಿಕೊಂಡಿದ್ದಾನೆ. ಹೀಗೆ ಜಾತಿಯ ಕಾರಣಕ್ಕೆ ವಿಷ ತುಂಬಿಕೊಂಡಿರುವ ಮನುಷ್ಯನ ಬಾಯಿಂದ ಹೊರಬಿದ್ದ ಆ ಮಾತನ್ನು ಕೇವಲ ಒಂದು ಬಾಯ್ತಪ್ಪಿನ ಗಾದೆ ಎಂದು ನಿರ್ಲಕ್ಷಿಸಲು ಸಾಧ್ಯವೇ?

ಈಗ ಇನ್ನೊಂದು ಆಯಾಮಕ್ಕೆ ಪ್ರವೇಶಿಸೋಣ. ಹೇಳಿಕೇಳಿ ಉಪೇಂದ್ರ ಸಿನಿಮಾ ವ್ಯಕ್ತಿ. ಹಾಗಾಗಿ ಸಿನಿಮಾ ಕ್ಷೇತ್ರದ್ದೇ ಒಂದು ಉದಾಹರಣೆಯನ್ನು ಪರಿಗಣಿಸೋಣ. ಕೆಲವು ದಿನಗಳ ಹಿಂದೆ ‘ಪೊಗರು’ ಎನ್ನುವ ಕನ್ನಡ ಸಿನಿಮಾವೊಂದು ತೆರೆಕಂಡಿತ್ತು. ಆ ಸಿನಿಮಾದಲ್ಲಿ ಒಂದು ದೃಶ್ಯವಿತ್ತು. ಪರಮ ಪೋಕರಿಯಂತಹ ನಾಯಕನಟ, ಬ್ರಾಹ್ಮಣ ಅರ್ಚಕನ ಪಾತ್ರಧಾರಿಗೆ ಜಾಡಿಸಿ ಹೊದೆಯುವ ದೃಶ್ಯ. ಮೊದಲನೆಯದಾಗಿ, ಅದು ಯಾವುದೇ ಸತ್ಯ ಘಟನೆಯನ್ನು ಆಧರಿಸಿದ ಕಥೆಯಾಗಿರಲಿಲ್ಲ; ಬ್ರಾಹ್ಮಣ ಅರ್ಚಕನ ಪಾತ್ರ ಮಾಡಿದವನು ವಾಸ್ತವದಲ್ಲಿ ಬ್ರಾಹ್ಮಣ ಜಾತಿಗೆ ಸೇರಿದವನೂ ಆಗಿರಲಿಲ್ಲ. ಆದರೆ ಆ ದೃಶ್ಯದ ವಿರುದ್ಧ ಬ್ರಾಹ್ಮಣ ಅರ್ಚಕರೆಲ್ಲ ದನಿ ಬಿಚ್ಚಿ ’ನಮ್ಮ ಸಮುದಾಯದ ಭಾವನೆಗೆ ಧಕ್ಕೆಯಾಗಿದೆ’ ಎಂದು ಗದ್ದಲವೆಬ್ಬಿಸಿ, ದೊಡ್ಡ ಪ್ರತಿಭಟನೆಯನ್ನು ರೂಪಿಸಿ, ಸಿನಿಮಾ ಮಂಡಳಿಗೆ ದೂರು ಕೊಟ್ಟು, ಆ ನಾಯಕನಟ ಕ್ಷಮೆಯಾಚಿಸುವಂತೆ ಮಾಡಿ, ಸಿನಿಮಾದಿಂದ ಆ ದೃಶ್ಯವನ್ನೇ ಕತ್ತರಿಸಿ ತೆಗೆದುಹಾಕುವಂತೆ ನೋಡಿಕೊಂಡರು. ಹಾಗಾದರೆ, ಭಾವನೆಗಳು ಅಂತ ಇರುವುದು ಕೇವಲ ಮೇಲ್ಜಾತಿಯ ಜನರಿಗೆ ಮಾತ್ರವಾ? ಕೆಳ ಜಾತಿಯವರಿಗೆ, ದಲಿತರಿಗೆ ಭಾವನೆಗಳೇ ಇಲ್ಲವೇ? ಸಿನಿಮಾ ನೆಪದಲ್ಲಿ ಅವರ ಭಾವನೆಗಳು ಮೈಲಿಗೆಯಾಗುತ್ತವೆ ಎನ್ನುವುದಾದರೆ, ಗಾದೆಯ ನೆಪದಲ್ಲೋ ಬಾಯ್ತಪ್ಪಿನ ನೆಪದಲ್ಲೋ ಕೆಳ ಸಮುದಾಯಗಳ ಜನರ ಮೇಲೆ ಘಾಸಿ ಮಾಡಿ, ಆರಾಮವಾಗಿ ಇದ್ದು ಬಿಡಬಹುದೇ? ಈ ವೈರುಧ್ಯಕ್ಕೆ ಕೊನೆ ಇಲ್ಲವೇ? ಇವತ್ತು ಉಪೇಂದ್ರನ ಅಸೂಕ್ಷ್ಮ ಮಾತನ್ನು ’ಯಕಶ್ಚಿತ್ ಒಂದು ಗಾದೆ’ ಎನ್ನುವ ಬುದ್ದಿವಂತರೇಕೆ ಅವತ್ತು ಬ್ರಾಹ್ಮಣ ಅರ್ಚಕರಿಗೆ ‘ಯಕಶ್ಚಿತ್ ಒಂದು ಸಿನಿಮಾ’ ಕಣ್ರಯ್ಯ ಎಂದು ಬುದ್ದಿ ಹೇಳಲಿಲ್ಲ ಅಥವಾ ವ್ಯಂಗ್ಯವಾಡಲಿಲ್ಲ?

’ಯಕಶ್ಚಿತ್ ಒಂದು ಗಾದೆ ಮಾತು’ ಎಂಬ ಸಾಮಾಜಿಕ ವ್ಯಾಕರಣದ ಮೂಲಕ ಉಪೇಂದ್ರನಿಗೆ ’ಸಹಾನುಭೂತಿ’ಯನ್ನು ಉತ್ಪಾದಿಸಲು ಮೇಲ್ಜಾತಿಯ ಎಲ್ಲಾ ಸಾಂಸ್ಕೃತಿಕ ಶೂರರು ಲಜ್ಜೆಬಿಟ್ಟು ದನಿಗೂಡಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮವರು ಅನ್ನಿಸಿಕೊಂಡವರು ಕೂಡಾ ಆ ಸಹಾನುಭೂತಿಯ ಖೆಡ್ಡಾಕ್ಕೆ ಬೀಳುತ್ತಿರುವುದನ್ನು ನೋಡಿದಾಗ ಬೇಸರಕ್ಕಿಂತ ಹೆಚ್ಚಾಗಿ ಆಘಾತವಾಗುತ್ತಿದೆ! ನ್ಯಾಯಾಲಯದಲ್ಲಿ ಈ ಕೇಸು ನಿಲ್ಲುತ್ತದೋ, ಸೋಲುತ್ತದೋ ಎಂದು ಜಿಜ್ಞಾಸೆಗಿಳಿದು ಮಾತಾಡುವ ಪ್ರಕರಣವಲ್ಲ ಇದು; ನಿಮ್ಮ ಹುನ್ನಾರ, ಉದ್ಧಟತನಗಳಿಗೆ ನಮ್ಮ ಪ್ರತಿರೋಧ ಇದ್ದೇ ಇರುತ್ತೆ, ಈಗ ಮೊದಲಿಗಿಂತ ತೀವ್ರವಾಗಿರುತ್ತೆ ಎಂದು ಅವರಿಗೆ ಎಚ್ಚರಿಸುವ ಪ್ರಕರಣ ಇದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!