Thursday, November 19, 2026

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿನಿಲಯ ಜ್ಞಾನ ದೀವಿಗೆ ಹಚ್ಚುವ ದೇಗುಲ – ಡಾ.ಕುಮಾರ

ವಿದ್ಯಾರ್ಥಿ ನಿಲಯಗಳು ಕೇವಲ ಇಟ್ಟಿಗೆ ಸಿಮೆಂಟ್ ನಿಂದ ನಿರ್ಮಿಸಿರುವ ಕಟ್ಟಡಗಳಲ್ಲ, ವಿದ್ಯಾರ್ಥಿ ನಿಲಯಗಳು ಜ್ಞಾನ ದೀವಿಗೆ ಹಚ್ಚುವ ದೇಗುಲಗಳು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ಎದುರಿನ ಡಿ.ದೇವರಾಜು ಅರಸು ಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಅರಸು ಜ್ಞಾನ ಕೇಂದ್ರದ ಉದ್ಘಾಟನೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ಕಾರ್ಯಾಗಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಾನು ಸಹ ನನ್ನ ವಿದ್ಯಾರ್ಥಿ ದಿನಗಳಲ್ಲಿ ಮನೆಗಿಂತ ಹೆಚ್ಚು ಹಾಸ್ಟೆಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ವಿದ್ಯಾರ್ಥಿ ನಿಲಯಗಳು ವಿದ್ಯಾರ್ಥಿಗಳಿಗೆ ಅನ್ನ, ಅಶ್ರಯ, ಅಕ್ಷರವನ್ನು ನೀಡುತ್ತದೆ. ವಿದ್ಯಾರ್ಥಿ ನಿಲಯಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಂಡು ಉನ್ನತ ಸ್ಥಾನ ಅಲಂಕರಿಸಬೇಕು. ವಿದ್ಯಾರ್ಥಿ ನಿಲಯಗಳು ಯಾವುದೇ ದೇವಸ್ಥಾನಕ್ಕಿಂತ ಕಮ್ಮಿ ಇಲ್ಲ ಎಂದು ತಿಳಿಸಿದರು.

ವಿದ್ಯಾರ್ಥಿ ನಿಲಯಗಳ ಸೌಲಭ್ಯಗಳನ್ನು ಪಡೆದು ಸಾರ್ಥಕತೆಯ ಬದುಕು ಕಂಡುಕೊಳ್ಳಲು ವಿಫಲರಾದರೆ ಸೌಲಭ್ಯ ಕಲ್ಪಿಸುತ್ತಿರುವ ವ್ಯವಸ್ಥೆಗೆ ದ್ರೋಹ ಬಗೆದಂತೆ. ವಿದ್ಯಾರ್ಥಿ ನಿಲಯಗಳಲ್ಲಿ ಅಭ್ಯಾಸಿಸುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ನಿಲಯಗಳ ಮೇಲೆ ವಿಶೇಷವಾದ ಪ್ರೀತಿ ಮತ್ತು ಗೌರವವನ್ನು ಇಡಬೇಕು ಎಂದು ತಿಳಿ ಹೇಳಿದರು.

ಸಾಮಾಜಿಕ ನ್ಯಾಯದ ಹರಿಕಾರರಾಗಿ ಡಿ.ದೇವರಾಜ್ ಅರಸ್ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಬಹುದೊಡ್ಡ ಆಶಾಕಿರಣರಾಗಿದ್ದವರು ಡಿ.ದೇವರಾಜ್ ಅರಸ್. ಅವರು ಹುಟ್ಟು ಹಾಕಿದ ಬಿ.ಸಿ.ಎಂ ಹಾಸ್ಟೆಲ್ ಪರಿಕಲ್ಪನೆಯಿಂದ ಲಕ್ಷಾಂತರ ಜನರು ಅಕ್ಷರಾಭ್ಯಾಸ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಗ್ರಾಮೀಣ ಪ್ರತಿಭೆಗಳೂ ವಿದ್ಯಾರ್ಥಿ ನಿಲಯಗಳು ಆಶ್ರಯ ನೀಡಿದೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಡಾ.ಪಿ.ಎನ್ ಹೇಮಾಚಂದ್ರ ಅವರೊಂದಿಗೆ ನನ್ನ ಪರಿಚಯ ಬಹಳ ಹಳೆಯದು. ಅವರೊಂದು ಎನ್ಸೈಕ್ಲೋಪಿಡಿಯ ಯಾವುದೇ ವಿಷಯದ ಕುರಿತು ಸರಾಗವಾಗಿ ಮಕ್ಕಳಿಗೆ ತಿಳಿಸುವ ಸಂಪನ್ಮೂಲ ವ್ಯಕ್ತಿ. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದರು ಸಹ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಜ್ಞಾನವನ್ನು ಧಾರೆಯೆರೆಯುವ ಮೂಲಕ ಯಶಸ್ಸಿನ ದಾರಿ ಕಳೆದ ಇಪ್ಪತ್ತು ವರ್ಷಗಳಿಂದ ತೋರಿಸುತ್ತಿದ್ದಾರೆ ಎಂದು ಹೇಳಿದರು.

ಸ್ಪರ್ಧಾತ್ಮಕ ಜಗತ್ತು ದೊಡ್ಡದಿದೆ

ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ ನಾವೆಲ್ಲರೂ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಸಾಗಿಸುತ್ತಿದ್ದೇವೆ. ನಾವು ಒದುವ ಸಂದರ್ಭದಲ್ಲಿದಿದಕ್ಕಿಂತ ಇಂದು ಸ್ಪರ್ಧಾತ್ಮಕ ಜಗತ್ತು ದೊಡ್ಡದಿದೆ. ಸ್ಪರ್ಧಾತ್ಮಕ ಅಭ್ಯರ್ಥಿಗಳ ಸಂಖ್ಯೆಯೂ ದೊಡ್ಡದಿದೆ. ಕೇವಲ ನೂರು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೆ ಹತ್ತರಿಂದ ಹದಿನೈದು ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ ಎಂದು ಹೇಳಿದರು.

ಸತತ ಪ್ರಯತ್ನ ಮತ್ತು ಶ್ರದ್ಧೆಯಿಂದ ಯಾರು ಓದುತ್ತಾರೆ ಅವರಿಗೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಭೇದಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಇಂದಿನಿಂದಲೇ ಸತತ ಪ್ರಯತ್ನದಿಂದ ವಿದ್ಯಾಭ್ಯಾಸ ಮಾಡಬೇಕು. ಮೊಬೈಲ್ ಬಳಕೆಯಲ್ಲಿ ಕಾಲಹರಣ ಮಾಡದೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ.

ಭತ್ತ ತುಂಬುವ ಚೀಲಗಳಾಗದೆ ಭತ್ತ ಬೆಳೆಯುವ ಗದ್ದೆಗಳಾಗಿ

ಉಪ ವಿಭಾಗಾಧಿಕಾರಿ ಶಿವಮೂರ್ತಿ ಅವರು ಮಾತನಾಡಿ ಜಿಲ್ಲಾಧಿಕಾರಿ ಡಾ.ಕುಮಾರ ಅವರನ್ನು ವಿದ್ಯಾರ್ಥಿಗಳೂ ಪ್ರೇರಣೆಯಾಗಿ ತೆಗೆದುಕೊಳ್ಳಿ, ವಿದ್ಯಾರ್ಥಿ ದೆಸೆಯಲ್ಲಿ ನೀವು ಓದುವುದರ ಕುರಿತು ಆಸಕ್ತಿ ವಹಿಸಬೇಕು. ವಿದ್ಯಾರ್ಥಿಗಳಿಗೆ ಓದುವುದು ಬಿಟ್ಟು ಬೇರೆ ಯಾವುದೇ ಕೆಲಸ ಇರುವುದಿಲ್ಲ ಓದುವುದೇ ನಿಮ್ಮ ಕೆಲಸ. ಕುವೆಂಪು ಅವರು ಹೇಳಿದಂತೆ ವಿದ್ಯಾರ್ಥಿಗಳು “ಭತ್ತ ತುಂಬುವ ಚೀಲಗಳಾಗದೆ ಭತ್ತ ಬೆಳೆಯುವ ಗದ್ದೆಗಳಾಗಿ” ಇನ್ನಿತರ ವಿಷಯಗಳಲ್ಲಿ ಕಾಲ ಹರಣ ಮಾಡದೇ ವಿದ್ಯಾಬ್ಯಾಸದ ಕಡೆ ಒತ್ತು ನೀಡಿ ಎಂದು ಕಿವಿಮಾತು ಹೇಳಿದರು.

ನಂತರ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರು ಹೂಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಪಿ.ಎನ್. ಹೇಮಾಚಂದ್ರ ಅವರಿಗೆ ಸಮ್ಮಾನ ಮಾಡಿ ಗೌರವಿಸಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಡಿ.ದೇವರಾಜ್ ಅರಸ್ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಎಲ್.ಸಂದೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ