ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಅಪ್ರತಿಮ ದೇಶ ಪ್ರೇಮಿ ಟಿಪ್ಪುಸುಲ್ತಾನ್ ಹತ್ಯೆಗೈದಿದ್ದಾರೆಂದು ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳನ್ನು ಸೃಷ್ಠಿ ಮಾಡಿ ಬಿಜೆಪಿ ಮುಖಂಡರು ರಾಜ್ಯದ ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಮುಂಜಾನೆ ಮಂಡ್ಯ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಆದಿಚುಂಚನಗಿರಿಗೆ ಭೇಟಿ ನೀಡಿ ಕ್ಷೇತ್ರದ ಅಧಿದೇವತೆ ಕಾಲಭೈರವೇಶ್ವರಸ್ವಾಮಿಗೆ ಅಮಾವಾಸೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ, ಅಶೋಕ್, ಅಶ್ವತ್ಥ ನಾರಾಯಣ ಹೊಸದಾಗಿ ಟಿಪ್ಪು ಹತ್ಯೆಯ ಸ್ಟೋರಿ ಬರೆಯುತ್ತಿದ್ದಾರೆ ಎಂದು ಖಂಡಿಸಿದರು.
ಸಿನಿಮಾ ತೆಗೆಯೋಕೆ ಇನ್ಯಾರೋ ಒಬ್ಬ ಮಹಾಶಯ ಮುಂದಾಗಿದ್ದ. ನಾವ್ಯಾರೂ ಹೇಡಿಗಳಲ್ಲ. ಬಿಜೆಪಿಯವರ ಈ ಕೆಲಸವನ್ನ ಖಂಡಿಸ್ತೀನಿ, ನಮ್ಮ ಸ್ವಾಮಿಗಳು ಹೋರಾಟದ ನೇತೃತ್ವ ವಹಿಸಬೇಕು. ಅವನ್ಯಾವನನ್ನೋ ಕರೆದು ಸಿನಿಮಾ ಮಾಡಬೇಡ ಅಂತಾ ಕೂರಿಸಿ ಮಾತಾಡಬಾರದು. ನಮ್ಮ ಒಕ್ಕಲುತನಗಳ ಬಗ್ಗೆ ಬೇಕಿದ್ರೆ ನೂರು ಸಿನಿಮಾ ಮಾಡಲಿ ಎಂದು ಹೇಳಿದರು.

ಉರಿಗೌಡ, ನಂಜೇಗೌಡ ವಿಚಾರವನ್ನ ಪಠ್ಯಕ್ಕೆ ಸೇರಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ಪಠ್ಯನೂ ಇಲ್ಲ. ಅದನ್ನೆಲ್ಲ ಸ್ಕೂಲ್ ಮೇಷ್ಟ್ರು ಕೇಳಿ. ಅಶ್ವತ್ಥ ನಾರಾಯಣ, ರವಿಗೆ ಪಾಠ ಹೇಳಿಕೊಟ್ಟ ಮೇಷ್ಟ್ರು ಕೇಳಿ. ಅವರೇನಾದ್ರೂ ಹೇಳಿಕೊಟ್ಟಿದ್ರ? ಮೊದಲು 40% ಭ್ರಷ್ಟಾಚಾರ, ಕೊರೋನಾ ಸಂದರ್ಭದ ಕರೆಪ್ಷನ್ ಬಗ್ಗೆ ಸಿನಿಮಾ ತೆಗೆಯಲಿ. ಈ ಬಗ್ಗೆ ಎರಡು ಸಿನಿಮಾ ತೆಗೆದರೆ ಸಾಕು ಎಂದು ಬಿಜೆಪಿ ಮುಖಂಡರ ಕಾಲೆಳೆದರು.
ಯಾವ ಕಾರಣಕ್ಕೂ ಬಿಡೋದಿಲ್ಲ
ನಾವು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾವ ಕಾರಣಕ್ಕೂ ಬಿಡೋದಿಲ್ಲ. ಇದರ ವಿರುದ್ಧ ಹೋರಾಟಕ್ಕೆ ಸ್ವಾಮಿಗಳು ನೇತೃತ್ವ ವಹಿಸಬೇಕು. ಹೋರಾಟದ ಸ್ವರೂಪ, ನಾಯಕತ್ವವನ್ನ ಸ್ವಾಮಿಜೀಗಳು ವಹಿಸಬೇಕು. ಇಲ್ಲವಾದರೆ ನಾನು ಒಂದು ಪಕ್ಷದ ಅಧ್ಯಕ್ಷನಾಗಿ ನಾನೇ ಹೋರಾಟ ಹಮ್ಮಿಕೊಳ್ತೀನಿ. ಒಕ್ಕಲಿಗರಿಗೆ ಕಳಂಕ ತರಲು ಬಿಜೆಪಿಯವರು ಹೊರಟಿದ್ದಾರೆ. ಉರಿಗೌಡ, ನಂಜೇಗೌಡ ಅನ್ನೋರು ಯಾರೂ ಇಲ್ಲ. ಇವರೇ (ಬಿಜೆಪಿ ಮುಖಂಡರು) ಉರಿಗೌಡ, ನಂಜೇಗೌಡರು ಎಂದು ಕಿಡಿಕಾರಿದರು.
ಇದು ನಮ್ಮ ಮಠ
ಇದು ನಮ್ಮ ಮಠ. ಹೊಸ ವರ್ಷದ ಅಮಾವಾಸ್ಯೆ, ಯುಗಾದಿ ಹಬ್ಬದ ಸಂದರ್ಭದಲ್ಲಿ ಶ್ರೀಮಠಕ್ಕೆ ಬಂದಿದ್ದೇನೆ.
ಈ ವರ್ಷ ರಾಜ್ಯದಲ್ಲಿ ದೊಡ್ಡ ವ್ಯತ್ಯಾಸ, ಬದಲಾವಣೆ ಆಗ್ತಿದೆ. ನಾಡಿಗೆ ಒಳ್ಳೆಯದಾಗಲಿ, ಎಲ್ಲರಿಗೂ ಒಳ್ಳೆಯದಾಗ್ಲೀ. ನಾನು ನನ್ನ ಧರ್ಮ ಪತ್ನಿ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಳ್ತಿದ್ದೇವೆ. ನಮಗೂ, ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ಇದು. ದೇವರನ್ನ ಕೇಳೋದು ನಾನು, ವರ ಕೊಡೋದು ದೇವರು.
ಸಂಕಲ್ಪ ಮಾಡಿಕೊಳ್ಳುವುದು ನನಗೂ, ಭಗವಂತನಿಗೂ ಬಿಟ್ಟದ್ದು ಎಂದು ನುಡಿದರು.
ಚಿಂಚನಸೂರು ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚಿಂಚನಸೂರು ಈಗಾಗಲೇ ರಾಜೀನಾಮೆ ಕೊಟ್ಟು ಆಗಿದೆ. ನನ್ನತ್ರ ಮಾತಾಡಿದ್ದಾರೆ, ನೀವು ಬರೆದಿದ್ದೀರಿ. ಅವರು ಹಿರಿಯ ಕಾಂಗ್ರೆಸ್ ನಾಯಕರು. ಅವರಿಗೆ ಪಕ್ಷ ದೊಡ್ಡ ಸ್ಥಾನ ಕೊಟ್ಟು ಬೆಳೆಸಿದೆ. ಅವರು ಕಾಂಗ್ರೆಸ್ ಪಕ್ಷದ ಆಸ್ತಿ ಆಗ್ತಾರೆ.
ನಾರಾಯಣಗೌಡರು ನನ್ನತ್ರ ಮಾತಾಡಿಲ್ಲ. ಅವರತ್ರ ನಾನು ಕೂಡ ಮಾತಾಡಿಲ್ಲ ಮಿಕ್ಕಿದ್ದು ಏನಾದ್ರೂ ಇದ್ರೆ ನಾರಾಯಣಗೌಡರನ್ನೇ ಕೇಳಿ. ಮತ್ತೊಂದು ಅಮಾವಾಸ್ಯೆ ಪೂಜೆಗೆ ಬಂದರೆ ಹೇಳ್ತೀನಿ ಬಿಡಿ ಎಂದು ಪ್ರತಿಕ್ರಿಯಿಸಿದರು.




