Friday, September 20, 2024

ಪ್ರಾಯೋಗಿಕ ಆವೃತ್ತಿ

ಆಸ್ಟ್ರೇಲಿಯಾ ವಿಶ್ವಕಪ್ ಜಯಿಸಲು ಪಾತ್ರವಹಿಸಿದ್ದ ಮಂಗಳೂರು ಯುವತಿ ಯಾರು ಗೊತ್ತೇ ?

ಆರನೇ ಬಾರಿ ಏಕದಿನ ವಿಶ್ವಕಪ್‌ ಕ್ರಿಕೆಟ್ ಚಾಂಪಿಯನ್‌ ಆಗಿರುವ ಆಸ್ಟ್ರೇಲಿಯಾ ತಂಡದ ಗೆಲುವಿನ ಹಿಂದೆ ಮಂಗಳೂರು ಮೂಲದ ಉರ್ಮಿಳಾ ರೊಸಾರಿಯೋ ಎಂಬುವವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೇರ್‌ ಟೇಕರ್‌ ಆಗಿರುವ ಮಂಗಳೂರು ಮೂಲದ ಯುವತಿ ಉರ್ಮಿಳಾ ರೊಸಾರಿಯೋ ಆಸೀಸ್ 2023ರ ವಿಶ್ವಕಪ್‌ ಎತ್ತಿ ಹಿಡಿಯುವಲ್ಲಿ ತಮ್ಮ ಕೊಡುಗೆಯನ್ನು ಸಹ ನೀಡಿದ್ದಾರೆ. 34 ವರ್ಷದ ಉರ್ಮಿಳಾ ರೊಸಾರಿಯೋ ಅವರು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಮಂಗಳೂರಿನ ಕಟೀಲಿನ ಕಿನ್ನಿಗೋಳಿಯವರಾಗಿರುವ ಐವಿ ಮತ್ತು ವಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿ.

ಉರ್ಮಿಳಾ ರೊಸಾರಿಯೋ ಪೋಷಕರು ಕಿನ್ನಿಗೋಳಿಯಿಂದ ಉದ್ಯೋಗದ ನಿಮಿತ್ತ ಕತಾರ್‌ನ ದೋಹಾ ವಲಸೆ ಹೋಗಿದ್ದರು. ಉರ್ಮಿಳಾ ಅವರು ಜನನವಾಗಿದ್ದು ಕತಾರ್‌ನಲ್ಲಿಯೇ. ಬಾಲ್ಯದಿಂದಲೇ ಕ್ರೀಡೆ ಬಗ್ಗೆ ಅಪರಿಮಿತ ಆಸಕ್ತಿ ಹೊಂದಿದ್ದ ಉರ್ಮಿಳಾ, ಮೊದಲು ಕತಾರ್ ಟೆನ್ನಿಸ್ ಫೆಡರೇಶನ್‌ನಲ್ಲಿ ಕಾರ್ಯನಿರ್ವಹಿಸಿದ್ದರು.

ಊರ್ಮಿಳಾ ಪೋಷಕರು ಏಳು ವರ್ಷಗಳ ಹಿಂದೆ ಭಾರತಕ್ಕೆ ಮರಳಿ ಸದ್ಯ ಹಾಸನದ ಸಕಲೇಶಪುರದಲ್ಲಿ ಕಾಫಿ ಎಸ್ಟೇಟ್ ಖರೀದಿಸಿ ಅಲ್ಲಿಯೇ ನೆಲೆಸಿದ್ದಾರೆ. ಈ ನಡುವೆ, ಊರ್ಮಿಳಾ ಕಾರ್ನೆಗೀ ಮೆಲನ್ ವಿಶ್ವವಿದ್ಯಾನಿಲಯದಿಂದ ಬಿಬಿಎ ಪದವಿ ಪಡೆಯಲು ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿಯಿದ್ದ ಕಾರಣ ವಿದ್ಯಾಭ್ಯಾಸದ ನಂತರ ಮೊದಲು ಆಸ್ಟ್ರೇಲಿಯಾದ ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದರು. ಅನಂತರ, ತಮ್ಮ ಕೆಲಸದ ಬದ್ಧತೆಯಿಂದಾಗಿ ಮ್ಯಾನೇಜರ್ ಆಗಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡಕ್ಕೆ ನಿಯೋಜನೆಗೊಂಡರು. ಹಾಗೆಯೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಟೀಮ್ ಮ್ಯಾನೇಜರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಕತಾರ್‌ನಲ್ಲಿ ಫುಟ್‌ಬಾಲ್ ಕ್ರೀಡಾಂಗಣವನ್ನು ನಿರ್ವಹಿಸುವ ಪ್ರಯುಕ್ತ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಿಂದ ಕೆಲಕಾಲ ಬಿಡುವು ಪಡೆದುಕೊಂಡರು. ಕತಾರ್‌ನಲ್ಲಿಯೇ ನಾಲ್ಕು ತಿಂಗಳ ಕಾಲ ಇದ್ದು ಫುಟ್‌ಬಾಲ್ ಕ್ರೀಡಾಂಗಣ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದರು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕತಾರ್‌ನಿಂದ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದ ನಂತರ, ಊರ್ಮಿಳಾ ಅವರ ಕೆಲಸದ ಬದ್ಧತೆಯನ್ನು ಗಮನಿಸಿದ ಆಸೀಸ್ ಕ್ರಿಕೆಟ್ ಮಂಡಳಿ, ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡವನ್ನು ನೋಡಿಕೊಳ್ಳಲು ಸಲುವಾಗಿ ಊರ್ಮಿಳಾ ಅವರನ್ನು ಕೇರ್‌ ಟೇಕರ್‌ ಆಗಿ ನೇಮಿಸಿತು. ಒಂದೂವರೆ ತಿಂಗಳ ಕಾಲ ಭಾರತದ ವಿವಿಧ ನಗರಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

“ಆಸೀಸ್‌ ತಂಡದ ಕೇರ್‌ ಟೇಕರ್ ಆಗಿದ್ದ ಸಂದರ್ಭದಲ್ಲಿ ಉರ್ಮಿಳಾ ಆಟಗಾರರು ಹೋಗುವ ದೇಶದಲ್ಲಿ ಆಟಗಾರರ ಊಟೋಪಚಾರ, ವಸತಿ ಎಲ್ಲವನ್ನೂ ನಿಭಾಯಿಸಿದ್ದಾರೆ. ಆಕೆಗೆ ಕನ್ನಡ, ಇಂಗ್ಲಿಷ್, ಹಿಂದಿ, ಕೊಂಕಣಿ ಭಾಷೆಗಳ ಹಿಡಿತವಿದೆ. ಅವಳ ಕೆಳಗೆ ದೊಡ್ಡ ತಂಡವೇ ಕಾರ್ಯ ನಿರ್ವಹಿಸುತ್ತಿದೆ. ಮಗಳ ಸಾಧನೆ ಬಗ್ಗೆ ಹೆಮ್ಮೆ ಇದೆ. ಕೆಲಸದಲ್ಲಿ ಸಮಯ ಸಿಕ್ಕಾಗ ಸಕಲೇಶಪುರದ ಎಸ್ಟೇಟಿಗೆ ಆಗಮಿಸುತ್ತಾಳೆ” ಎಂದು ಉರ್ಮಿಳಾ ತಂದೆ ವಾಲೆಂಟೈನ್ ರೊಸಾರಿಯೋ ಹೇಳುತ್ತಾರೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!