ಬಸವಣ್ಣನವರ ಸಮಕಾಲೀನರಾಗಿದ್ದ ಶಿವಶರಣ ಹಡಪದ ಅಪ್ಪಣ್ಣನವರ ವಚನ ಸಾಹಿತ್ಯ ಮತ್ತು ಚಿಂತನೆಗಳು ಇಡೀ ಮನುಕುಲದ ಉದ್ಧಾರಕ್ಕೆ ದಾರಿ ದೀಪವಾಗಿದೆ ಎಂದು ಉಪವಿಭಾಗಧಿಕಾರಿ ನಂದೀಶ್ ಹೇಳಿದರು.
ಪಾಂಡವಪುರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಸವಿತಾ ಸಮಾಜದ ವತಿಯಿಂದ ಸೋಮವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರ 889ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದರು. ಅಪ್ಪಣ್ಣ ಅವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ವಚನಗಳು ಸರ್ವಕಾಲೀಕ ಸತ್ಯವಾಗಿದ್ದು. ಪ್ರತಿಯೊಬ್ಬರು ನಮ್ಮ ಪೂರ್ವಿಕರು ತೋರಿಸಿರುವ ದಾರಿಯಲ್ಲಿ ನಡೆದು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಜೀವನ ಸಾಗಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಡಿಎಸ್ಎಸ್ ಮುಖಂಡ ಡಿ.ಕೆ.ಅಂಕಯ್ಯ, ಸವಿತಾ ಸಮಾಜ ತಾಲೂಕು ಅಧ್ಯಕ್ಷ ನಂದೀಶ್, ಗೌರವಾಧ್ಯಕ್ಷ ತಿಮ್ಮರಾಜು, ಕಾರ್ಯದರ್ಶಿ ಶಶಿಧರ್, ಉಪಾಧ್ಯಕ್ಷ ತಮ್ಮಣ್ಣ, ನಿರ್ದೇಶಕರಾದ ಸ್ವಾಮಣ್ಣ, ಕುಮಾರ್ ಇತರರು ಇದ್ದರು.




