Wednesday, October 23, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ತ್ವರಿತವಾಗಿ ವಿ.ಸಿ ನಾಲಾ ಆಧುನೀಕರಣ ಕಾಮಗಾರಿ ಮುಗಿಸಿ: ಕೆಂಪೂಗೌಡ

ಕೆ.ಆರ್.ಎಸ್ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಒಟ್ಟು 42 ಕಿ.ಮೀ ನಾಲಾ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಈ ಪೈಕಿ 18 ಕಿ.ಮೀ ಆಧುನೀಕರಣ ಕಾಮಗಾರಿಯಷ್ಟೇ ಪೂರ್ಣಗೊಂಡಿದೆ, ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸಂಪೂರ್ಣ ನಾಲಾ ಆಧುನೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಕೆಂಪೂಗೌಡ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ, ಜೂನ್ ತಿಂಗಳಿನಿಂದ ಮುಂಗಾರು ಬೆಳೆಗೆ ಸಿದ್ದತೆ ಮಾಡಿಕೊಳ್ಳಬೇಕಿದೆ, ಇಂತಹ ಸಂದರ್ಭದಲ್ಲಿ ನಾಲೆಗಳಲ್ಲಿ ನೀರು ಹರಿಸಬೇಕಾಗುತ್ತದೆ. ಆದ್ದರಿಂದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಳೆದ 15 ದಿನಗಳಿಂದ ಕಾಮಗಾರಿಯು ಕುಂಟುತ್ತಾ ನಡೆಸಯುತ್ತಿದೆ, ಕಾಮಗಾರಿಗೆ ಅಗತ್ಯವಾದ ಲೇಬರ್ ಗಳನ್ನು ಕಳುಹಿಸಿ ಕೊಡುತ್ತಿಲ್ಲ, ಇದರಿಂದ ವಿಳಂಬವಾಗಿದೆ. ಮುಂಗಾರು ಬೆಳೆವೊಡ್ಡುವ ಸಂದರ್ಭದಲ್ಲಿ ನಾಲೆಗಳ ಕಾಮಗಾರಿ ನಡೆಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ, ಆದರಿಂದ ಇನ್ನೂ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಂದು ತಾಕೀತು ಮಾಡಿದರು.

ಬರ ಪರಿಹಾರ ವಿರತಣೆಗೆ ಆಗ್ರಹ

ಮಂಡ್ಯ ಜಿಲ್ಲೆಯ ಏಳು ತಾಲ್ಲೂಕುಗಳನ್ನು ಬರಪೀಡಿತ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ, ಜಿಲ್ಲೆಯಲ್ಲಿ ಅತೀ ಹೆಚ್ಚು ತೆಂಗು ಮತ್ತು ಅಡಿಕೆ ಬೆಳೆಗಳು ನಾಶವಾಗಿವೆ, ಆದ್ದರಿಂದ ಅವುಗಳಿಗೂ ಸೂಕ್ತ ಪರಿಹಾರ ನೀಡಬೇಕು. ಕೇವಲ ಖುಷ್ಕಿ ಬೆಳೆಗಳಿಗಲ್ಲದೇ, ನೀರಾವರಿ ಪ್ರದೇಶದ ರೈತರಿಗೂ ಬರ ಪರಿಹಾರ ವಿತರಣೆ ಮಾಡಬೇಕೆಂದರು.

ಮೈಕ್ರೋ ಫೈನಾನ್ಸ್ ಗಳ ಹಾವಳಿ

ಮಂಡ್ಯ ಜಿಲ್ಲೆಯಲ್ಲಿ ಜನತೆಗೆ ಸಾಲ ನೀಡಿರುವ ಮೈಕ್ರೋ ಫೈನಾನ್ಸ್ ಗಳು ಜನರನ್ನು ಹಾಗೂ ರೈತರನ್ನು ಶೋಷಣೆ ಮಾಡುತ್ತಿದೆ, ಅಡವಿಟ್ಟ ಚಿನ್ನಾಭರಣಗಳನ್ನು ರೈತರ ಗಮನಕ್ಕೆ ಬಾರದಂತೆ ಮಾರಾಟ ಮಾಡಿಕೊಳ್ಳುತ್ತಿದೆ, ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು, ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಾಲಿನ ಸಹಾಯಧನ ಬಿಡುಗಡೆ ಮಾಡಿ

ರಾಜ್ಯ ಸರ್ಕಾರವು ಕಳೆದ 7ತಿಂಗಳಿಂದ ಹಾಲಿನ ಸಹಾಯಧನ ಬಿಡುಗಡೆ ಮಾಡಿಲ್ಲ, ಈ ಹಣವನ್ನು ಬಿಡುಗಡೆ ಮಾಡಿದರೆ ಹಾಲು ಉತ್ಪಾದಕರಿಗೆ ಒಂದಷ್ಟು ಸಹಾಯವಾಗಲಿದೆ, ಕೂಡಲೇ ಸಹಾಯಧನ ಬಿಡುಗಡೆ ಮಾಡಿ ರೈತರ ಬೆಂಬಲಕ್ಕೆ ನೀಡಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ರೈತ ಮುಖಂಡರಾಧ ರವಿಕುಮಾರ್, ಕೆ.ಟಿ.ಗೋವಿಂದೇಗೌಡ, ಕೆನ್ನಾಳು ನಾಗರಾಜು, ಬಾಲಚಂದ್ರು, ಶಿವಳ್ಳಿ ಚಂದ್ರು ಹಾಗೂ ಹರವು ಪ್ರಕಾಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!