Friday, June 21, 2024

ಪ್ರಾಯೋಗಿಕ ಆವೃತ್ತಿ

ಜನರನ್ನು ಮೇಲಕ್ಕೆತ್ತುವ ಕೆಲಸ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ: ಸ್ಟಾರ್ ಚಂದ್ರು

ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಗ್ಯಾರಂಟಿಗಳು ದೇಶದೆಲ್ಲೆಡೆ ಮನೆಮಾತಾಗಿದೆ. ಈ ಬಾರಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ನಮ್ಮ ರಾಷ್ಟ್ರೀಯ ನಾಯಕರು ಘೋಷಣೆ ಮಾಡಿರುವ 25 ಭರವಸೆಗಳನ್ನು ಈಡೇರಿಸಿ ಬಡ ಜನರ ಬದುಕನ್ನು ಮೇಲಕ್ಕೆತ್ತುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.

ಮಂಡ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಮಾತನಾಡಿ, ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಜನರ ಬದುಕನ್ನು ಬದಲಿಸುತ್ತಿವೆ ಎಂಬುದಕ್ಕೆ ಗೃಹಲಕ್ಷ್ಮಿ ಹಣದಿಂದ ಟಿವಿ, ಫ್ರಿಡ್ಜ್ ಕೊಂಡುಕೊಳ್ಳುತ್ತಿರುವುದು, ವಿದ್ಯಾಭ್ಯಾಸಕ್ಕೆ ಅನುಕೂಲ ಆಗುತ್ತಿರುವುದೇ ನಿದರ್ಶನ. ಗ್ಯಾರಂಟಿಗಳು ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುತ್ತಿದೆ ಎಂದರು.

ದೊಡ್ಡ ಶಕ್ತಿ ಅಂದರೆ ಕಾರ್ಯಕರ್ತರು

ಕಾಂಗ್ರೆಸ್ ನ ಅತಿ ದೊಡ್ಡ ಶಕ್ತಿ ಅಂದರೆ ಕಾರ್ಯಕರ್ತರು. ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವುದರ ಜೊತೆಗೆ ಪಕ್ಷದ ಜನಪರ ಕಾರ್ಯಕ್ರಮಗಳನ್ನು ಪ್ರತಿ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಶ್ರಮ ಮತ್ತು ಜನರ ಆಶೀರ್ವಾದದಿಂದ ಗೆಲುವಿನ ದಡ ಮುಟ್ಟುತ್ತೇನೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಬಡವರ ರೈತ ಪರ. ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ, ನರೇಗಾದ ಕೂಲಿ ಹಣ 400 ರೂ.ಗೆ ಹೆಚ್ಚಳ ಮಾಡುವುದರ ಜೊತೆಗೆ ರೈತರ ಸಾಲಮನ್ನಾ ಮಾಡಲಾಗುವುದು. ಜಾತಿಗಣತಿ ನಡೆಸಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆತ್ತುವ ಕೆಲಸ ಕಾಂಗ್ರೆಸ್ ಮಾಡಲಿದೆ ಎಂದರು.

ಪ್ರಚಾರದಲ್ಲಿ ಮಂಡ್ಯ ಶಾಸಕರಾದ ರವಿಕುಮಾರ್, ಮನ್ ಮೂಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಯೋಗೇಶ್, ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ ಚಿದಂಬರಂ, ಕಾಂಗ್ರೆಸ್ ಮುಖಂಡ ಕಿಲಾರ ರಾಧಾಕೃಷ್ಣ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಸೇರಿದಂತೆ ಹಲವರು ಜೊತೆಯಲ್ಲಿದ್ದರು.

ಬೈಕ್ ರ್‍ಯಾಲಿ

ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಮಂಡ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ವೇಳೆ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ ಮತದಾರರ ಗಮನಸೆಳೆದರು. ಚಿಕ್ಕಮಂಡ್ಯದಿಂದ ಆರಂಭವಾದ ಬೈಕ್ ರ್ಯಾಲಿ ನಾನಾ ಗ್ರಾಮಪಂಚಾಯತಿಗಳಲ್ಲಿ ಸಾಗಿತು.

ಎಲ್ಲೆಲ್ಲಿ ಪ್ರಚಾರ?

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ (ಸ್ಟಾರ್ ಚಂದ್ರು) ಅವರು ಚಿಕ್ಕಮಂಡ್ಯ, ಗೋಪಾಲಪುರ, ಸಾತನೂರು, ಹುಲಿವಾನ, ಕೆರಗೋಡು, ಬಿಳಿದೇಗಲು, ಉಪ್ಪರಕನಹಳ್ಳಿ, ದೊಡ್ಡ ಗರುಡನಹಳ್ಳಿ, ಬೇಬಿ, ಮುತ್ತೇಗೆರೆ, ಬಸರಾಳು, ಕಂಬದಹಳ್ಳಿ, ಶಿವಪುರ, ಚಂದಗಾಲು, ಹಲ್ಲೇಗೆರೆ, ಮಾರಗೌಡನಹಳ್ಳಿ, ಹೊಡೆಘಟ್ಟ, ಕೀಲಾರ, ಅಲಕೆರೆ, ಹನಕೆರೆ, ಗೌಡಗೆರೆ, ಕನ್ನಲಿ, ಬೂದನೂರು ಗ್ರಾಮ ಪಂಚಾಯತಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಗ್ಯಾರಂಟಿ ಕಾರ್ಡ್ ವಿತರಣೆ

ಚುನಾವಣಾ ಪ್ರಚಾರದ ಜೊತೆಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ಸಹಿಯುಳ್ಳ ಗ್ಯಾರಂಟಿ ಕಾರ್ಡ್ ಗಳನ್ನು ಕಾರ್ಯಕರ್ತರು ಗ್ರಾಮದ ಪ್ರತಿ ಮನೆಗಳಿಗೆ ವಿತರಣೆ ಮಾಡಿದರು.

ಪೂರ್ಣಕುಂಭ ಸ್ವಾಗತ

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಪ್ರಚಾರಕ್ಕೆ ತೆರಳಿದ ಕಡೆಯಲೆಲ್ಲಾ ಗ್ರಾಮದ ಮಹಿಳೆಯರು ಪೂರ್ಣ ಕುಂಭ ಹೊತ್ತು ಸ್ವಾಗತಿಸಿದರು. ಬಿರುಬಿಸಿಲಿನಲ್ಲೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವನ್ನು ಹಿಮ್ಮಡಿಗೊಳಿಸಿತು.

ಕೆರಗೋಡಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಧ್ವಜ ಪ್ರಕರಣದಲ್ಲಿ ರಾಜ್ಯದ ಗಮನಸೆಳೆದಿದ್ದ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಅಬ್ಬರದ ಪ್ರಚಾರ ನಡೆಸಿ ಕಾಂಗ್ರೆಸ್ ನ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದರು.

ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮಹಿಳೆಯರು ಪೂರ್ಣ ಕುಂಭ ಹೊತ್ತು ಸ್ವಾಗತಿಸಿದರೆ, ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಕೂಗುವ ಮೂಲಕ ಬರಮಾಡಿಕೊಂಡರು. ನೂರಾರು ಕಾರ್ಯಕರ್ತರು ಸರ್ಕಲ್ ನಲ್ಲಿ ಜಮೆಯಾಗಿ ಕಾಂಗ್ರೆಸ್ ನ ಬಲ ಪ್ರದರ್ಶಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!