Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿಗಾಗಿ ಜನಪ್ರತಿನಿಧಿಗಳ ಒಗ್ಗಟ್ಟು ಅಗತ್ಯ- ವಿಜಯ್ ಆನಂದ್

ಕಾವೇರಿ ಜಲಾನಯನ ಪ್ರದೇಶದ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿದ್ದು, ಕುಡಿಯುವ ನೀರು ಹಾಗೂ ಬೆಳೆ ರಕ್ಷಣೆಗಾಗಿ ರಾಜ್ಯದ ರಾಜಕೀಯ ಪಕ್ಷಗಳ ನೇತಾರರು ಹಾಗೂ ಜನಪ್ರತಿನಿಧಿಗಳು ಒಗ್ಗಟ್ಟು ಪ್ರದರ್ಶಿಸಬೇಕಾದ ಅಗತ್ಯತೆ ಅನಿವಾರ್ಯವಾಗಿದೆ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ತಿಳಿಸಿದರು.

ಮಂಡ್ಯ ನಗರದ ಸರ್.ಎಂ.ವಿ ಪ್ರತಿಮೆ ಮುಂಭಾಗ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮಿಳುನಾಡು ರಾಜ್ಯದ ಜನಪ್ರತಿನಿಧಿಗಳ ಒಗ್ಗಟ್ಟು ನಮಗೆ ಸಂಕಷ್ಟ ತಂದೊಡ್ಡಿದೆ, ಅಣೆಕಟ್ಟೆಗಳಲ್ಲಿ ನೀರಿನ ಶೇಖರಣೆ ಕ್ಷೀಣಿಸಿದ್ದರು. ನೀರು ಬಿಡುಗಡೆಯ ತೀರ್ಪು ಅವೈಜ್ಞಾನಿಕವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜನಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ನ್ಯಾಯ ಪಡೆಯಲು ಮುಂದಾಗಬೇಕೆಂದು ಮನವಿ ಮಾಡಿದರು.

ಕಾವೇರಿ ವಿವಾದ ಕೇವಲ ಇಂದಿನದ್ದಲ್ಲ 1992, 2013, 2018ರಲ್ಲೂ ಪ್ರತಿಭಟನೆ ನಿರಂತರವಾಗಿತ್ತು, ಈ ಹಿಂದೆ ಸಾಗರೋಪಾದಿಯಲ್ಲಿ ಜನ ಪ್ರತಿಭಟನೆಗೆ ಭಾಗವಹಿಸಿ, ಆಳುವ ಸರ್ಕಾರಗಳನ್ನು ಎಚ್ಚರಿಸಿದ್ದರು. ಉತ್ತು- ಬಿತ್ತು ಊಟ ತಿನ್ನುವವರ ಆಹಾರವನ್ನು ಕಿತ್ತುಕೊಳ್ಳುವ ಪ್ರವೃತ್ತಿ ಸರಿಯಲ್ಲ, ಬೆಳೆದು ನಿಂತಿರುವ ಬೆಳೆ ರಕ್ಷಣೆಗೆ ಹಾಗೂ ಕುಡಿಯುವ ನೀರಿನ ಅಗತ್ಯತೆ ಅರಿವಾಗದಿರುವುದು ನೋವಿನ ವಿಚಾರ ಎಂದರು.

ಪ್ರಾಧಿಕಾರಗಳು ನೀರಿನ ಶೇಖರಣೆ ಅರಿಯದೇ ಪ್ರತಿನಿತ್ಯ 5 ಅಥವಾ 3 ಸಾವಿರ ಕ್ಯೂಸೆಕ್ ನೀರು ಹರಿಸಿ ಎಂದು ಹೇಳುವುದು ಅವೈಜ್ಞಾನಿಕ ಆಳುವ ಸರ್ಕಾರ ಕೂಡಲೇ ಈ ಬಗ್ಗೆ ಮನವಿ ಮಾಡಿ, ನಮ್ಮ ಸಂಕಷ್ಟ ಪರಿಸ್ಥಿತಿಯನ್ನು ಸಂವೇದನೆಯಿಂದ ತಮಿಳುನಾಡಿಗೆ ಅರ್ಥೈಸದಿರುವುದು ಬೇಸರದ ಸಂಗತಿ ಎಂದರು.

ಮಂಡ್ಯ ಜಿಲ್ಲೆಯ ರೈತರು ಸೂಕ್ಷ್ಮಮತಿಗಳಾಗಿದ್ದು, ಅನಿವಾರ್ಯವಾದರೆ ಯಾವ ಮಟ್ಟಕ್ಕೂ ಇಳಿಯಬಲ್ಲರೂ ಎಂಬುದನ್ನು ಜನಪ್ರತಿನಿಧಿಗಳು ಅರ್ಧೈಸಿಕೊಂಡು ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು. ನಾವೇ ಹಸಿದಿರುವಾಗ ಬೇರೆಯವರಿಗೆ ಸಹಾಯ ಮಾಡುವುದು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕೆಂದರು.

ರೈತ ಹಿತರಕ್ಷಣಾ ಸಮಿತಿಯ ಹೋರಾಟ ನ್ಯಾಯೋಚಿತವಾಗಿದ್ದು, ಸಮಿತಿಯ ಮುಂದಿನ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ, ಜಿಲ್ಲೆಯ ಜನಪ್ರತಿನಿಧಿಗಳು ನ್ಯಾಯ ಒದಗಿಸಲು ಮುಂದಾಗಬೇಕೆಂದರು.

ಪ್ರತಿಭಟನೆಯಲ್ಲಿ ರೈತ ಹಿತರಕ್ಷಣಾ ಸಮಿತಿಯ ಮುಖಂಡರಾದ ಸುನಂದಾ ಜಯರಾಂ, ಅಂಬುಜಮ್ಮ, ಕೆ.ಬೋರಯ್ಯ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಇಂಡುವಾಳು ಸಚ್ಚಿದಾನಂದ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!