Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜನರ ಅಭಿಪ್ರಾಯ ಆಲಿಸಿ ಸೂಕ್ತ ರಾಜಕೀಯ ನಿರ್ಧಾರ: ವಿಜಯ್ ಆನಂದ್

ಬಹಳ ಹಿಂದಿನಿಂದಲೂ ನನ್ನ ಕಷ್ಟ-ಸುಖಗಳಲ್ಲಿ ಭಾಗಿಯಾಗಿರುವ ನಿಮ್ಮೆಲ್ಲರ ಅಭಿಪ್ರಾಯ ಆಲಿಸಿ ಸೂಕ್ತ ರಾಜಕೀಯ ತೀರ್ಮಾನ ಕೈಗೊಳ್ಳುತ್ತೇನೆಂದು ಯುವ ಮುಖಂಡ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಸ್ಪಷ್ಟ ಪಡಿಸಿದರು.

ಮಂಡ್ಯ ನಗರದ ಕಲ್ಲಹಳ್ಳಿಯ ವಿ.ವಿ.ನಗರದ ಹೊಂಬಾಳೆ ಫಂಕ್ಷನ್ ಹಾಲ್‌ನಲ್ಲಿ ತಮ್ಮ ಬೆಂಬಲಿಗರು ಹಾಗೂ ಹಿತೈಷಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜಕೀಯದಲ್ಲಿ ನನಗೆ ಆಗಿರುವ
ಏಳು-ಬೀಳುಗಳಿಂದ ನಾನು ಹತಾಶನಾಗಿಲ್ಲ.ರಾಜಕೀಯದಲ್ಲಿ ನನ್ನ ಸ್ಥಾನಮಾನದ ಅರಿವು ನನಗಿದೆ. ನನ್ನ ಹಿತೈಷಿಗಳು ಮತ್ತು ಬೆಂಬಲಿಗರ ಆಕಾಂಕ್ಷೆಗೆ ವಿರುದ್ಧವಾಗಿ ರಾಜಕೀಯ ತೀರ್ಮಾನ ಕೈಗೊಳ್ಳುವುದಿಲ್ಲ.ನಿಮ್ಮೆಲ್ಲರ ಅಭಿಪ್ರಾಯ ಪರಿಗಣಿಸಿ ಕೆಲವೇ ದಿನಗಳಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜೆಡಿಎಸ್ ಪಕ್ಷದ ಹಲವು ಮಾಜಿ ಶಾಸಕರು ನನ್ನನ್ನು ತಮ್ಮ ಪಕ್ಷ ಸೇರುವಂತೆ ಆಹ್ವಾನಿಸಿದ್ದಾರೆ. ಅವರೆಲ್ಲರಿಗೂ ನಾನು ಋಣಿಯಾಗಿದ್ದೇನೆ ಎಂದರು.

ನಾನು ಸುಳ್ಳು ಹೇಳಿಲ್ಲ. ಯಾರಿಗೂ ಮೋಸ ಮಾಡಿಲ್ಲ. ನನ್ನ ಬೈಯ್ಯುವ ಚಾಳಿಯನ್ನು ಕಡಿಮೆ ಮಾಡಿಕೊಂಡಿದ್ದೇನೆ. ಎರಡು ದಿನಗಳ ಹಿಂದೆ ಸಭೆ ನಡೆಸುವ ನಿರ್ಧಾರ ಕೈಗೊಂಡೆ. ಕೆಲವರಿಗಷ್ಟೇ ದೂರವಾಣಿಯಲ್ಲಿ ಆಹ್ವಾನಿಸಿದ್ದೆ‌.ನನ್ನ ಮಾತಿಗೆ ಗೌರವ ನೀಡಿ ಇಷ್ಟೊಂದು ಜನರು ಸಭೆಗೆ ಆಗಮಿಸಿದ್ದೀರಿ.ಮೊದಲಿನಿಂದಲೂ ನನ್ನೊಂದಿಗೆ ನಿಂತು ನನ್ನ ಕಷ್ಟ-ಸುಖಗಳಲ್ಲಿ ಭಾಗಿಯಾದ ನೀವೇಲ್ಲರೂ ಸಭೆಗೆ ಬಂದಿರುವುದು ಸಂತೋಷ ತಂದಿದೆ ಎಂದರು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎದುರಾದ ರಾಜಕೀಯ ಸನ್ನಿವೇಶದಲ್ಲಿ ಸ್ವಾಭಿಮಾನದ ಹೆಸರಿನಲ್ಲಿ ಸ್ಪರ್ಧೆ ಮಾಡಿದ ನನಗೆ 15 ಸಾವಿರಕ್ಕೂ ಹೆಚ್ಚು ಮತ ನೀಡಿದ್ದೀರಿ. ಇದಕ್ಕೆ ನಾನು ಆಭಾರಿಯಾಗಿದ್ದೇನೆ. ಇತ್ತೀಚೆಗೆ ನಾನು ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ಹೆಚ್ಚಿನವರಿಗೆ ಸಂತೋಷ ತಂದರೆ, ಕೆಲವರಿಗೆ ಬೇಸರ ತಂದಿದೆ. ನಿಮ್ಮೆಲ್ಲರ ಪ್ರೀತಿ,ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಮುಂದೆಯೂ ರಾಜಕಾರಣ ಮಾಡುತ್ತೇನೆ ಎಂದು ತಿಳಿಸಿದರು.

ನಾನು ಕುಮಾರಸ್ವಾಮಿ ಅವರ ಆಹ್ವಾನದ ಮೇರೆಗೆ ಅವರನ್ನು ಭೇಟಿ ಮಾಡಿ ನನ್ನ ಸಂಕಷ್ಟವನ್ನು ಹಂಚಿಕೊಂಡಿದ್ದೇನೆ. ನನ್ನ ಕಷ್ಟದ ಸಮಯದಲ್ಲಿ ಜೊತೆಯಲ್ಲಿದ್ದವರ ಅಭಿಪ್ರಾಯ ಆಲಿಸಿ ರಾಜಕೀಯ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿ ಬಂದಿದ್ದೇನೆ. ಲೋಕಸಭಾ ಚುನಾವಣೆ ನಂತರ ರಾಜಕೀಯ ತೀರ್ಮಾನ ಕೈಗೊಳ್ಳೋಣ ಎಂದುಕೊಂಡಿದ್ದೆ. ಆದರೆ, ನಿಮ್ಮೆಲ್ಲರ ಹಿತದೃಷ್ಠಿಯಿಂದ ಚುನಾವಣೆಗೂ ಮುನ್ನ ಸೂಕ್ತ ತೀರ್ಮಾನ ಮಾಡಬೇಕಿದೆ.ಯಾರಿಗೂ ನೋವುಂಟಾಗದಂತೆ ರಾಜಕೀಯ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹಣೆಬರಹ ಕೆಟ್ಟಿತ್ತು.ಅದಕ್ಕಾಗಿ ನಾನು ಯಾರ ಮೇಲೂ ದೋಷಾರೋಪಣೆ ಮಾಡಲ್ಲ. ನಮ್ಮ ಕುಟುಂಬದ ರಕ್ಷಣೆ ನಿಮ್ಮೆಲ್ಲರಿಂದ ಮಾತ್ರ ಸಾಧ್ಯ ಎಂಬ ಅರಿವು ನನಗಿದೆ. ನನ್ನನ್ನು ಮಾತೃ ಪಕ್ಷಕ್ಕೆ ಆಹ್ವಾನಿಸಿದ ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಕೆ. ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ ಹಾಗೂ ಬಿ.ಆರ್. ರಾಮಚಂದ್ರು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!