ಕಾಂಗ್ರೆಸ್ ಪಕ್ಷವು ನನಗೆ ತಾಯಿ ಸಮಾನ. ನಾನು ಯಾವುದೇ ರೀತಿಯಲ್ಲಿಯೂ ಪಕ್ಷಕ್ಕೆ ದ್ರೋಹ ಮಾಡಿಲ್ಲ. ಪ್ರಾಮಾಣಿಕವಾಗಿ ಪಕ್ಷದ ಅಭ್ಯರ್ಥಿ ಬಿ.ಎಲ್.ದೇವರಾಜು ಅವರ ಗೆಲುವಿಗೆ ಶ್ರಮಿಸಿದ್ದೇನೆ. ಪಕ್ಷದ ಹಿನ್ನೆಡೆಗೆ ಪ್ರಚಾರಕ್ಕೆ ಸಮಯಾವಕಾಶದ ಕೊರತೆ, ಸಂಪನ್ಮೂಲದ ಕೊರತೆ ಉಂಟಾದ ಕಾರಣ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಎಲ್.ದೇವರಾಜು ಅವರಿಗೆ ಹಿನ್ನೆಡೆಯಾಯಿತೇ ಹೊರತು ಬೇರೆ ಏನೂ ಕಾರಣವಲ್ಲ ಎಂದು ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸುಮಾರು 58 ಸಾವಿರ ಮಂದಿ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ್ದು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಕೊರತೆ ಇರುವುದು ಸತ್ಯ. ಇದನ್ನು ನಾನು ಕಳೆದ ಒಂದೂವರೆ ವರ್ಷದಿಂದ ತಾಲ್ಲೂಕಿನಾದ್ಯಂತ ಸಮಾಜ ಸೇವೆ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ತಿಳಿದುಕೊಂಡಿದ್ದೇನೆ. ಇದಕ್ಕಾಗಿ ಪಕ್ಷದ ಜಿಲ್ಲಾ ನಾಯಕರು ಹಾಗೂ ರಾಜ್ಯ ನಾಯಕರ ಸೂಚನೆ ಮೇರೆಗೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ, ಪ್ರಿಯಾಂಕಾ ಗಾಂಧೀ ಅವರ ನಾ ನಾಯಕಿ ಕಾರ್ಯಕ್ರಮ, ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ತಾಲ್ಲೂಕಿನಲ್ಲಿ ಪಕ್ಷವನ್ನು ಸಂಘಟಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.
ಆದರೆ ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ 6 ಮಂದಿಯನ್ನು ಹೊರತು ಪಡಿಸಿ ಜೆಡಿಎಸ್ ಪಕ್ಷದಿಂದ ಬಂದ ಹಿರಿಯರು ಹಾಗೂ ಸರಳ ಸಜ್ಜನ ರಾಜಕಾರಣಿಯಾಗಿರುವ ಬಿ.ಎಲ್.ದೇವರಾಜು ಅವರಿಗೆ ಪಕ್ಷವು ಟಿಕೆಟ್ ಘೋಷಣೆ ನೀಡಿದಾಗ ಎಲ್ಲರೂ ಒಮ್ಮತದಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ, ಇದರಿಂದಾಗಿ ಸುಮಾರು 58 ಸಾವಿರಕ್ಕೂ ಅಧಿಕ ಮತಗಳು ಬಂದಿವೆ. ಜೆಡಿಎಸ್ ಪಕ್ಷವು ಅಭ್ಯರ್ಥಿಗೆ 5 ತಿಂಗಳು ಮುಂಚೆಯೇ ಟಿಕೆಟ್ ಘೋಷಣೆ ಮಾಡಿದ ಕಾರಣ ಪಕ್ಷ ಸಂಘಟನೆಯನ್ನು ಚನ್ನಾಗಿ ಮಾಡಿದ ಕಾರಣ ಆ ಪಕ್ಷದ ಅಭ್ಯರ್ಥಿಯು ಎಲ್ಲಾ ಹೋಬಳಿಯಲ್ಲಿಯೂ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡು ಗೆಲುವು ಸಾಧಿಸಿದರು. ಆದರೆ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಪ್ರಚಾರಕ್ಕೆ ಸಮಯದ ಅಭಾವ ಕಂಡು ಬಂದಿತು ಎಂದು ವಿವರಿಸಿದರು.
ಅಲ್ಲದೆ ಬಿ.ಎಲ್.ದೇವರಾಜು ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಂದಾಣಿಕೆಗೆ ಅವಕಾಶವೇ ಸಿಗಲಿಲ್ಲ. ಜೊತೆಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಸರಿ ಸಮನಾಗಿ ಆರ್ಥಿಕ ಸಂಪನ್ಮೂಲ ಹೊಂದಿಸಲು ಸಾಧ್ಯವಾಗದೇ ಇರುವ ಕಾರಣ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಈ ವಿಚಾರವನ್ನು ಅರ್ಥ ಮಾಡಿಕೊಳ್ಳದೇ ನನ್ಮ ಮೇಲೆ ವಿನಾಕಾರಣ ದೂರುವುದು ಸರಿಯಲ್ಲ. ಒಂದು ವೇಳೆ ನಾವು ಯಾವುದೇ ಅಭ್ಯರ್ಥಿಯೊಂದಿಗೆ ಶಾಮೀಲಾಗಿರುವುದಕ್ಕೆ ಸಣ್ಣ ದಾಖಲೆ ನೀಡಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ವಿಜಯ್ ರಾಮೇಗೌಡ ಸುಳ್ಳು ಅಪಪ್ರಚಾರ ಮಾಡುವವರಿಗೆ ಸವಾಲು ಹಾಕಿದರು.
ಸಭೆಯಲ್ಲಿ ಮುಖಂಡರಾದ ಶಿವರಾಂ ನಾಯಕ್, ಕೆ.ಎಸ್.ಬಸವೇಗೌಡ, ಎಲ್.ಪಿ.ನಂಜಪ್ಪ, ಮಾಧವಪ್ರಸಾದ್, ಸಣ್ಣನಿಂಗೇಗೌಡ, ಶ್ಯಾಮಣ್ಣ, ರಾಜಯ್ಯ, ಅಕ್ಕಿಹೆಬ್ಬಾಳು ರಾಮಸ್ವಾಮಿ ವೆಂಕಟಪ್ಪ, ಅಘಲಯ ರಮೇಶ್, ಸುಮಿತ್, ವಕೀಲ ಜಿ.ಜೆ.ಲೋಕೇಶ್, ಹಿರಿಕಳಲೆ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




