Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಣಿಪುರ| ಮತ್ತೆ ಭುಗಿಲೆದ್ದ ಹಿಂಸಾಚಾರ; ಪೊಲೀಸರು ಸೇರಿ 10 ಮಂದಿಗೆ ಗಾಯ

ಗಲಭೆ ಪೀಡಿತ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಪೊಲೀಸರು ಸೇರಿ 10 ಮಂದಿ ಗಾಯಗೊಂಡಿದ್ದಾರೆ.

ಇಂಫಾಲ್ ಪಶ್ಚಿಮ ಜಿಲ್ಲೆಯ ಸಿಂಗ್ಡಾ ಮತ್ತು ಕಾಂಗ್‌ಚುಪ್ ಹಳ್ಳಿಯಲ್ಲಿ ಬೆಳಿಗ್ಗೆ 9 ಗಂಟೆಯ ವೇಳೆಗೆ ಗುಂಡಿನ ದಾಳಿ ನಡೆಸಲಾಗಿದೆ. ಸ್ಥಳೀಯರ ಪ್ರಕಾರ ಘಟನೆಯಲ್ಲಿ ಪೊಲೀಸರು ಸೇರಿ 10 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ 7 ಮಂದಿಯನ್ನು ಲ್ಯಾಂಫೆಲ್‌ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಮೂವರು ಇಂಫಾಲ್‌ನ ರಾಜ್ ಮೆಡಿಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಕಾಂಗ್‌ಚುಪ್‌ನ ಗ್ರಾಮಸ್ಥರ ಪ್ರಕಾರ, ಶಸ್ತ್ರಸಜ್ಜಿತರ ಗುಂಪು ಬೆಳಿಗ್ಗೆ 9ರ ಸುಮಾರಿಗೆ ಕಾಂಗ್‌ಚುಪ್ ಚಿಂಗ್‌ಖಾಂಗ್ ಪ್ರದೇಶದ ಸಮೀಪದಲ್ಲಿರುವ ಮೈತೈ ಸಮುದಾಯದ ಜನರಿರುವ ಗ್ರಾಮಗಳ ಕಡೆಗೆ ಗುಂಡು ಹಾರಿಸಿದ್ದಾರೆ. ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಇಂಫಾಲ್ ಪಶ್ಚಿಮದ ಸಿಂಗ್ಡಾ ಕಡಂಗ್‌ಬಂಡ್ ಪ್ರದೇಶದ ಸಮೀಪವಿರುವ ಗ್ರಾಮಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ವರದಿ ತಿಳಿಸಿದೆ.

ಕಡಂಗ್‌ಬಂಡ್ ಪ್ರದೇಶಕ್ಕೆ ಭದ್ರತಾ ಪಡೆಗಳು ತೆರಳಿದ್ದವು. ಆ ಪ್ರದೇಶದಲ್ಲಿ ಕೆಲಕಾಲ ಗುಂಡಿನ ಚಕಮಕಿ ನಡೆದಿದೆ. ಆದರೆ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ. ಥಮ್ನಾಪೋಕ್ಪಿ ಗ್ರಾಮದಲ್ಲಿ ಶಸ್ತ್ರಸಜ್ಜಿತರು  ರೈತರಿಗೆ ಬೆದರಿಕೆ ಹಾಕಿದ್ದು, ಹೊಲಗಳಲ್ಲಿ ಕೃಷಿಯನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.

ಸೈನಿಕರ ಸಂಬಂಧಿಯೊಬ್ಬರ ಸಹಿತ ನಾಲ್ವರನ್ನು ಅಪಹರಣ ಮಾಡಲಾಗಿದೆ ಎಂಬ ಸುದ್ದಿ ಮಣಿಪುರದಲ್ಲಿ ಹರಡಿತ್ತು. ಇದರಿಂದಾಗಿ ಕುಕಿ ಜನರು ಇಂಫಾಲ ಪಶ್ಚಿಮ ಜಿಲ್ಲೆಯ ಕಂಗ್ಚುಪ್ ಪ್ರದೇಶದಲ್ಲಿ ಮತ್ತು ಕಂಗ್ಪೋಕ್ಪಿ ಜಿಲ್ಲೆಗಳಲ್ಲಿ ಗುಂಪುಗಳತ್ತ ಗುಂಡು ಹಾರಿಸಿದ್ದಾರೆಂದು ಹೇಳಲಾಗುತ್ತಿದೆ. ಮಂಗಳವಾರ ತಡರಾತ್ರಿವರೆಗೂ ಅಪಹರಣಕ್ಕೊಳಗಾದ ನಾಲ್ಕು ಮಂದಿಯ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!