Friday, September 20, 2024

ಪ್ರಾಯೋಗಿಕ ಆವೃತ್ತಿ

ಮತ್ತೆ ವೈರಸ್ ಭೀತಿ…. ಮತ್ತೆ ಲಾಕ್ ಡೌನ್ ಭಯ….

✍️ ವಿವೇಕಾನಂದ ಎಚ್.ಕೆ

ಮತ್ತೆ ವೈರಸ್ ‌…..

ಕಾಲರ – ಪ್ಲೇಗು – ದಡಾರ – ಪೋಲಿಯೊ – ಕ್ಷಯ – ಕುಷ್ಠ – ಏಡ್ಸ್ – ಡೆಂಗಿ – ಮಂಗನಬಾಹು – ಚಿಕನ್ ಗುನ್ಯಾ – ಕ್ಯಾನ್ಸರ್ – ಅಲ್ಸರ್ – ಅಲರ್ಜಿ – ಆಸ್ತಮಾ – ಕೊರೋನಾ….. ಹೀಗೆ ಮುಗಿಯದ ಖಾಯಿಲೆಗಳ ನಡುವೆ ವಿಶ್ವದ ಜನಸಂಖ್ಯೆ ಸುಮಾರು 750 ಕೋಟಿಯ ಸಮೀಪವಿದೆ…….

ಭೂಕಂಪ – ಸುನಾಮಿ – ಚಂಡಮಾರುತ – ಪ್ರವಾಹ – ಬಿರುಗಾಳಿ – ಬಿಸಿಗಾಳಿ – ಶೀತಗಾಳಿ – ಬರಗಾಲ – ಮೇಘ ಸ್ಪೋಟ – ಜ್ವಾಲಾಮುಖಿ – ಕಾಳ್ಗಿಚ್ಚು….. ಹೀಗೆ ಮುಗಿಯದ ಪ್ರಾಕೃತಿಕ ವಿಕೋಪಗಳು ನಿರಂತರವಾಗಿ ನಡೆಯುತ್ತಿದ್ದರು ಜನಸಂಖ್ಯೆ ಕಡಿಮೆಯಾಗುತ್ತಿಲ್ಲ….

ಯುದ್ಧ – ಗಲಭೆ – ಅಪಘಾತ – ಆತ್ಮಹತ್ಯೆ – ಕೊಲೆ – ಬೆಂಕಿ ಅವಘಡ….. ಹೀಗೆ ಸ್ವಯಂ ಕೃತ ಮತ್ತು ಆಕಸ್ಮಿಕ ದುರ್ಘಟನೆಗಳು ಸಂಭವಿಸುತ್ತಿದ್ದರು ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ………

ಈ ಹಿನ್ನೆಲೆಯಲ್ಲಿ ಕೋವಿಡ್ ಎಂಬ ವೈರಸ್ ವಿವಿಧ ರೂಪಗಳನ್ನು ಪಡೆಯುತ್ತಾ ಜನಸಂಖ್ಯೆ ನಿಯಂತ್ರಿಸಲು ಯಾವುದೇ ಪ್ರಯತ್ನ ಮಾಡಿದರು ಯಶಸ್ವಿಯಾಗುವ ಸಾಧ್ಯತೆ ಕಡಿಮೆ. ಈ ದಾಳಿಗಳಿಂದ ಒಂದಷ್ಟು ತೊಂದರೆ ಆಗಬಹುದು. ಕೆಲವರು‌ ಈ ಹೋರಾಟದಲ್ಲಿ ಅಸುನೀಗಬಹುದು. ಆದರೆ ಅಂತಿಮ ಜಯ ಮಾತ್ರ ಮಾನವನದೇ……

ಆದ್ದರಿಂದ ತುಂಬಾ ಆತಂಕ ಪಡುವ ಅವಶ್ಯಕತೆ ಇಲ್ಲ. ಕೋವಿಡ್ ಎದುರಿಸಿದ ಸುಮಾರು 3 ವರ್ಷಗಳ ಅನುಭವವೂ ಇದೆ. ಧೈರ್ಯವಾಗಿರಿ. ಜೊತೆಗೆ ಎಂದಿನಂತೆ ವೈದ್ಯರ ಸಲಹೆ – ಸೂಚನೆ, ಸರ್ಕಾರದ ಕ್ರಮಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕು……

ಇದನ್ನು ಹೊರತುಪಡಿಸಿ ಶರಣ ಸಂಸ್ಕೃತಿಯ ಕೆಲವು ಸಾಲುಗಳು ನೆನಪಾಗುತ್ತದೆ.
” ಮರಣವೇ ಮಹಾ ನವಮಿ ” ಸಾವನ್ನು ಸ್ವೀಕರಿಸುವ ಮನಸ್ಥಿತಿಯನ್ನು ಈ ಸಾಲುಗಳು ತುಂಬಾ ಪರಿಣಾಮಕಾರಿಯಾಗಿ ಹೇಳುತ್ತವೆ….

ಭಾರತೀಯ ಸಮಾಜದಲ್ಲಿ ಸಾವನ್ನು ನೋಡುವ ದೃಷ್ಟಿಕೋನಗಳು ಹಲವಾರು ಇವೆ. ಆದರೆ ಮುಖ್ಯವಾಗಿ ದೇವರು ಮತ್ತು ಧಾರ್ಮಿಕ ನಂಬಿಕೆಯ ಜನ್ಮಾಂತರ. ಇದರಲ್ಲಿ ಸಾವು ದೇಹಕ್ಕೆ ಮಾತ್ರ ಆತ್ಮಕ್ಕೆ ಸಾವಿಲ್ಲ. ಅದು ಬೇರೆ ಬೇರೆ ರೂಪ ಪಡೆಯುತ್ತಾ ಸಂಚರಿಸುತ್ತಿರುತ್ತದೆ. ಆತ್ಮದ ಮೋಕ್ಷ ಸಾಧ್ಯತೆಯ ಬಗ್ಗೆಯೂ ಉಲ್ಲೇಖವಿದೆ. ಇದು ಖಚಿತ ಸಾಕ್ಷಿಗಳಿಲ್ಲದ ನಂಬಿಕೆಯ ಭಾವ ಮಾತ್ರ…..

ಮತ್ತೊಂದು ಬಹುಶಃ ಬುದ್ದ ಮತ್ತು ಆ ರೀತಿಯ ಚಿಂತಕರು, ಶರಣರು, ವಿಚಾರವಾದಿಗಳು ಮುಂತಾದವರು ಸಾವನ್ನು ಪ್ರಕೃತಿಯ ಸಹಜ ಪ್ರಕ್ರಿಯೆ, ಅದನ್ನು ಸ್ವೀಕರಿಸುವ, ಆ ನೋವನ್ನು, ಭಯವನ್ನು ಕಡಿಮೆ ಮಾಡಿಕೊಳ್ಳುವ ಬಗೆಗಳನ್ನು ವಿಧವಿಧವಾಗಿ ವಿವರಿಸಿದ್ದಾರೆ. ಇಲ್ಲಿ ಭಕ್ತಿ ಭಾವನೆಗಿಂತ ವಾಸ್ತವ ನೆಲೆಯಲ್ಲಿ ಸಾವನ್ನು ಅರ್ಥಮಾಡಿಕೊಳ್ಳುವ ವರ್ತಮಾನದ ವಿಧಾನ…..

ಮತ್ತೊಂದು ವೈದ್ಯಕೀಯ ಕ್ಷೇತ್ರ ವಿವರಿಸುವ ಮನುಷ್ಯರ ದೇಹ ಜೀವಕೋಶಗಳ ರಾಶಿ. ಕಣ್ಣು ಕಿವಿ ಮೂಗು ಬಾಯಿ ಮೆದುಳು ಹೃದಯ ಕಿಡ್ನಿ ಶ್ವಾಸಕೋಶ ರಕ್ತನಾಳಗಳು ಮುಂತಾದ ಎಲ್ಲಾ ಅಂಗಗಳ ಕಾರ್ಯನಿರ್ವಹಣೆಯೇ ಮನುಷ್ಯ ಜೀವ. ಇದು ವಯಸ್ಸು ಮುಂತಾದ ಕಾರಣಗಳಿಂದ ತನ್ನ ಕಾರ್ಯ ನಿಲ್ಲಿಸಿದಾಗ ದೇಹ ನಿರ್ಜೀವವಾಗುತ್ತದೆ. ಅದೇ ಸಾವು. ನಂತರ ದೇಹ ಮಣ್ಣಾಗುತ್ತದೆ ಅಥವಾ ಭಸ್ಮವಾಗುತ್ತದೆ ಎನ್ನುತ್ತಾರೆ.. ‌.

ವಿಶ್ವದ ವಿವಿಧ ನಾಗರಿಕತೆ ಸಂಸ್ಕೃತಿ ಧರ್ಮಗಳಲ್ಲಿ ಸಾವಿನ ಬಗ್ಗೆ ಮತ್ತಷ್ಟು ನಂಬಿಕೆಗಳು ಇರಬಹುದು. ಆದರೆ ಸಾವು ಉಂಟುಮಾಡುವ ಭಯ ಆತಂಕ ಮಾತ್ರ ಪದಗಳಿಗೆ ನಿಲುಕುವುದಿಲ್ಲ…..

ಇಷ್ಟೆಲ್ಲಾ ಆದರೂ, ತಿಳಿವಳಿಕೆ ಮೂಡಿದ್ದರೂ………,

ಮತ್ತೆ ವೈರಸ್ ಭೀತಿಯಲ್ಲಿ,
ಮತ್ತೆ ಲಾಕ್ ಡೌನ್ ಭಯದಲ್ಲಿ,
ಮತ್ತೆ ಸಾವಿನ ಹೆದರಿಕೆಯಲ್ಲಿ,
ಮತ್ತೆ ಬದುಕಿನ ಆತಂಕದಲ್ಲಿ,
ಮತ್ತೆ ನಿರಾಸೆಯ ಸನಿಹದಲ್ಲಿ ನಾವುಗಳು ಇದ್ದರೂ…….

ಭ್ರಷ್ಟಾಚಾರ ಕಡಿಮೆಯಾಗಿಲ್ಲ,
ಜಾತಿಯ ಅಸಮಾನತೆ ಹೋಗಿಲ್ಲ,
ಪರಿಸರ ನಾಶ ಆಗುತ್ತಲೇ ಇದೆ,
ಆಹಾರ ಕಲಬೆರಕೆ ನಡೆಯುತ್ತಲೇ ಇದೆ,
ಅಧಿಕಾರದ ದಾಹ ಇಳಿಯುತ್ತಲೇ ಇಲ್ಲ,………

ಒಂದು ಕಡೆ ಪ್ರಾಕೃತಿಕ ಸವಾಲುಗಳು,
ಮತ್ತೊಂದು ಕಡೆ ಆಡಳಿತಾತ್ಮಕ ವೈಫಲ್ಯಗಳು,
ಸಾಮಾಜಿಕ ಆರ್ಥಿಕ ಅಸಮಾನತೆಗಳು,
ದೈಹಿಕ ಮಾನಸಿಕ ತಾಕಲಾಟಗಳು, ……..

ಎಲ್ಲವನ್ನೂ ಏಕಕಾಲದಲ್ಲಿ ಎದುರಿಸಬೇಕಾದ ಅಗ್ನಿಪರೀಕ್ಷೆ ಬಂದೊದಗಿದೆ……

21 ನೆಯ ಶತಮಾನದಲ್ಲಿ ಮನುಷ್ಯ,
ಆಧುನಿಕತೆಯ ಅಹಂನಲ್ಲಿ,
ತಂತ್ರಜ್ಞಾನದ ನೆರಳಿನಲ್ಲಿ,
ಹಣ ಅಧಿಕಾರದ ಮೋಹದಲ್ಲಿ,
ಸಂಪರ್ಕ ಕ್ರಾಂತಿಯ ಜಾಲದಲ್ಲಿ…..

ತಾನು ಅತ್ಯಂತ ಸುಖಿ ಮತ್ತು ಇಡೀ ಪ್ರಕೃತಿಯ ಮೇಲೆ ನಿಯಂತ್ರಣ ಹೊಂದಿ ಎಲ್ಲವನ್ನೂ ತನ್ನ ಅಡಿಯಾಳಾಗಿ ಮಾಡಿಕೊಂಡಿದ್ದೇನೆ ಎಂಬ ಭ್ರಮೆ ಮತ್ತು ದುರಹಂಕಾರದಲ್ಲಿ ಮುಳುಗಿದ್ದ. ಗಾಳಿ ನೀರು ಆಹಾರವಷ್ಟೇ ಅಲ್ಲದೇ ಸಮಯವನ್ನು ಹಣದಲ್ಲಿಯೇ ಲೆಕ್ಕ ಹಾಕುವ ಧಾರ್ಷ್ಟ್ಯ ಬೆಳೆಸಿಕೊಂಡ……

ಹಾಲಿಗೆ ಯೂರಿಯಾ,
ನೀರಿಗೆ ರಾಸಾಯನಿಕ,
ಗಾಳಿಗೆ ಹೊಗೆ,
ಆಹಾರದ ಕಲಬೆರಕೆ,
ಶಿಕ್ಷಣ ಆರೋಗ್ಯ ಸಾಹಿತ್ಯ ಸಮಾಜ ಸೇವೆ ದೇವರ ಪೂಜೆಯನ್ನು ದಂಧೆಯಾಗಿ ಮಾಡಿಕೊಂಡ…….

ಆದರೆ ಈಗ ನಿಧಾನವಾಗಿ ಆ ಭ್ರಮೆಯಿಂದ ಹೊರಬರತೊಡಗಿದ್ದಾನೆ.
ತನ್ನ ಮಿತಿಯ ಅರಿವಾಗತೊಡಗಿದೆ.
ಜೊತೆಗೆ ತಾನು ಅಸಹಾಯಕ ಮತ್ತು ಬಲಿಪಶು ಎಂದೂ ಅರ್ಥವಾಗುತ್ತಿದೆ……

ವೈದ್ಯಕೀಯ ವಿಜ್ಞಾನ ಮುಂದುವರಿದಷ್ಟೂ ಅನಾರೋಗ್ಯಗಳು ಹೆಚ್ಚಾಗುತ್ತಾ,
ಶಿಕ್ಷಣ ಕ್ಷೇತ್ರ ಆಧುನಿಕವಾದಷ್ಟೂ ಸಂಕುಚಿತ ಮನೋಭಾವ ಬೆಳೆಯುತ್ತಾ,
ರಸ್ತೆ ವಾಹನಗಳು ಉತ್ತಮವಾದಷ್ಟೂ ಅಪಘಾತಗಳು ಜಾಸ್ತಿಯಾಗುತ್ತಾ,
ಹಣದ ಹರಿವು ಬೆಳೆದಂತೆ ಮೋಸ ವಂಚನೆಗಳು ಹೆಚ್ಚಾಗುತ್ತಾ,
ಮಾಧ್ಯಮಗಳು ಅಭಿವೃದ್ಧಿಯಾದಂತೆ ನಂಬಲನರ್ಹವಾದ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಾ ಸಾಗುತ್ತಿದೆ……

ಈಗ
ಬದುಕಿನ ಮಾರ್ಗವನ್ನು,
ಬದುಕಿನ ರೀತಿಯನ್ನು,
ಬದುಕಿನ ಗುರಿಯನ್ನು,
ಬದುಕಿನ ಸಾರ್ಥಕತೆಯನ್ನು,….

ಮತ್ತೊಮ್ಮೆ ಪುನರ್ ವಿಮರ್ಶೆಗೆ ಒಳಪಡಿಸಬೇಕಾಗಿದೆ…..

ತಾಂತ್ರಿಕ ಪ್ರಗತಿಯೇ ಅಭಿವೃದ್ಧಿ ಎನ್ನಬೇಕೆ ?
ನೆಮ್ಮದಿಯ ಗುಣಮಟ್ಟವನ್ನು ಅಭಿವೃದ್ಧಿ ಎನ್ನಬೇಕೆ ?
ಆರೋಗ್ಯವಂತ ಆಯಸ್ಸಿನ ಅವಧಿಯನ್ನೇ ಅಭಿವೃದ್ಧಿ ಎನ್ನಬೇಕೆ ?
ಹಣ ಅಧಿಕಾರ ಪ್ರಚಾರ ಜನಪ್ರಿಯತೆ ಪಡೆಯುವುದನ್ನೇ ಯಶಸ್ಸು ಎನ್ನಬೇಕೆ ?
ಮಾನವೀಯ ಮೌಲ್ಯಗಳ ಗುಣಮಟ್ಟದ ಆಧಾರವೇ ಅಭಿವೃದ್ಧಿ ಎನ್ನಬೇಕೆ ?…….

ವಿಧಿಯಾಟ –
ದೈವಲೀಲೆ –
ಹಣೆ ಬರಹ –
ಸೃಷ್ಟಿಕರ್ತನ ಮಹಿಮೆ –
ಕರ್ಮಫಲ – ಮುಂತಾದ ವಾದಗಳ ಅರ್ಥವನ್ನು ಮತ್ತೊಮ್ಮೆ ಆತ್ಮಸಾಕ್ಷಿಗೆ ಒಳಪಡಿಸಬೇಕಿದೆ……

ಒಂದು ವೇಳೆ ಈ ವಿಷಯಗಳನ್ನು ವೈಚಾರಿಕ ಮನೋಭಾವದ ಆಧುನಿಕ ಹಿನ್ನಲೆಯಲ್ಲಿ, ನಮ್ಮ ಸಾಂಸ್ಕೃತಿಕ ವ್ಯಕ್ತಿತ್ವದೊಂದಿಗೆ ಸಮೀಕರಿಸಿ ಉತ್ತರ ಹುಡುಕಿಕೊಳ್ಳುವ ಪ್ರಯತ್ನ ಮಾಡಿದರೆ…..

ಬಹುಶಃ ಸಾವು ಸೋಲು ನೋವು ಭಯ ಆತಂಕ ಒಂದಷ್ಟು ಕಡಿಮೆಯಾಗಿ,
ವೈರಸ್ ದಾಳಿಗಳು,
ಆರ್ಥಿಕ ಸಂಕಷ್ಟಗಳು,
ಹತ್ತಿರದವರ ಸಾವುಗಳು,
ಮಾನಸಿಕ ದೈಹಿಕ ನೋವುಗಳು,
ಬ್ರೇಕಿಂಗ್ ನ್ಯೂಸ್ ಗಳ ಪರಿಣಾಮಗಳು….

ಈ ಎಲ್ಲದರ ನಡುವೆಯೂ
ಮನಸ್ಸಿನಲ್ಲಿ ಒಂದಷ್ಟು ಕಿರುನಗೆ ಮೂಡಬಹುದು…..

ಬದುಕು ನಮ್ಮ ನಿರೀಕ್ಷೆಯಂತೆ ಮಾತ್ರ ಇರುವುದಿಲ್ಲ.
ಬದುಕಿನ ನಿರೀಕ್ಷೆಗೆ ನಾವು ಸಹ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಸರಳ ಸತ್ಯ ಅರ್ಥಮಾಡಿಕೊಂಡರೆ ಬದುಕು ಒಂದಷ್ಟು ಸಹನೀಯ ಆಗಬಹುದು. ಪ್ರಯತ್ನ ಸಾಗಲಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!