ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕರ್ಮ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶಕ್ಕೆ ಪಾಂಡವಪುರ ತಾಲ್ಲೂಕಿನ ವಿಶ್ವಕರ್ಮ ಜನಾಂಗದವರು ಬೆಂಗಳೂರಿಗೆ ಇಂದು ಬೆಳಿಗ್ಗೆ ತೆರಳಿದರು.
ಪಾಂಡವಪುರ ತಾಲೂಕು ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಸುಂಕಾತೊಣ್ಣೂರು ಹೇಮಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮರಳಿ ಸಿ.ಎಂ.ನಾರಾಯಣಸ್ವಾಮಿ, ವಿಶ್ವಕರ್ಮ ಯುವ ಘಟಕದ ಅಧ್ಯಕ್ಷ ಕ್ಯಾತನಹಳ್ಳಿ ಮೋಹನ್ ಹಾಗೂ ಜನಾಂಗದ ಮುಖಂಡರ ನೇತೃತ್ವದಲ್ಲಿ ವಿಶ್ವಕರ್ಮ ಜನಾಂಗದ ನೂರಾರು ಮಂದಿ ಬಸ್ ಗಳಲ್ಲಿ ಬೆಂಗಳೂರು ಸಮಾವೇಶಕ್ಕೆ ತೆರಳಿದರು.
ವಿಶ್ವಕರ್ಮ ಜನಾಂಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಾಗೂ ರಾಜಕೀಯದಲ್ಲಿ ನಮ್ಮ ಜನಾಂಗದವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಸಮಾವೇಶದ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಲಾಗುವುದು.
ವಿಶ್ವಕರ್ಮ ಜನಾಂಗದ ರಾಜ್ಯ ನಾಯಕ ಕೆ.ಪಿ.ನಂಜುಂಡಿ ಅವರನ್ನು ಸಚಿವರನ್ನಾಗಿ ಮಾಡಬೇಕು ಹಾಗೂ ವಿಶ್ವಕರ್ಮ ಜನಾಂಗವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಲಾಗುವುದು ಎಂದು ವಿಶ್ವಕರ್ಮ ಸಮುದಾಯದ ಮುಖಂಡರು ತಿಳಿಸಿದರು.