Tuesday, November 24, 2026

ಪ್ರಾಯೋಗಿಕ ಆವೃತ್ತಿ

ಶ್ರಿರಂಗಪಟ್ಟಣ | ನಾಡ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ; ಪರಿಶೀಲನೆ

ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಅವರು‌ ಇಂದು ಶ್ರೀರಂಗಪಟ್ಟಣ ತಾಲ್ಲಕಿನ ಅರಕೆರೆಯಲ್ಲಿರುವ ನಾಡಕಛೇರಿಗೆ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು‌
ನಾಡ ಕಛೇರಿಯಲ್ಲಿದ್ದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಸ್ವೀಕೃತ ಅಹವಾಲುಗಳನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ಉಪ ತಹಶೀಲ್ದಾರ್ ರವರಿಗೆ ಸೂಚಿಸಿದರು.
ಕಛೇರಿಯ ಆವರಣ ಹಾಗೂ ಒಳಾಂಗಣವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರು ಸಲ್ಲಿಸುವ ಅರ್ಜಿಗಳ ಬಾಬ್ತು ನಿಗದಿತ ಅವಧಿಯಲ್ಲಿ ಸಕಾಲ ಸೇವೆಗಳನ್ನು ಸಾರ್ವಜನಿಕರಿಗೆ  ಯಾವುದೇ ಲೋಪದೋಷವಿಲ್ಲದಂತೆ ಒದಗಿಸಬೇಕು ಎಂದು ಉಪತಹಶೀಲ್ದಾರ್, ಹೋಬಳಿಯ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ  ಅಧಿಕಾರಿಗಳಿಗೆ ತಿಳಿಸಿದರು.
ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಭೂಹಿಡುವಳಿ ಪ್ರಮಾಣ ಪತ್ರ, ವಂಶವೃಕ್ಷ ಹಾಗೂ ಇತರೆ ಎಲ್ಲಾ ರೀತಿಯ ಸೇವೆಗಳನ್ನು ಸಕಾಲದಲ್ಲಿ ನಿಗದಿಪಡಿಸಿರುವ ಅವಧಿಯಲ್ಲಿಯೇ ಕಡ್ಡಾಯವಾಗಿ ಒದಗಿಸತಕ್ಕದ್ದು, ತಪ್ಪಿದ್ದಲ್ಲಿ ಅಂತಹ ನೌಕರರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮವಹಿಸಲಾಗುವುದು ಎಂದು ನೌಕರರಿಗೆ ಎಚ್ಚರಿಕೆ ನೀಡಿದರು.
ಕಛೇರಿಯ ಅಭಿಲೇಖಾಲಯ ಶಾಖೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು  ಸಾರ್ವಜನಿಕರು ದಾಖಲಾತಿಗಳನ್ನು ಕೋರಿ ಅರ್ಜಿ ಸಲ್ಲಿಸಿದಾಗ ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕವನ್ನು ಪಾವತಿಸಿಕೊಂಡೇ ದಾಖಲಾತಿಗಳನ್ನು ನೀಡತಕ್ಕದ್ದು ಹಾಗೂ ನಾಡಕಛೇರಿಗೆ ಸ್ವೀಕೃತವಾಗುದ ಯಾವುದೇ ಶುಲ್ಕವನ್ನು ಕಡ್ಡಾಯವಾಗಿ ಆಯಾ ದಿನದಂದೇ ಸರ್ಕಾರಕ್ಕೆ ಪಾವತಿಸಿ, ದಾಖಲೆಗಳನ್ನು ನಿರ್ವಹಣೆ ಮಾಡುವಂತೆ ಸೂಚಿಸಿದರು.
ಹೋಬಳಿಯ ಎಲ್ಲಾ ಸಿಬ್ಬಂದಿಯು ಸಾರ್ವಜನಿಕರಿಗೆ 24*7 ಲಭ್ಯವಿದ್ದು, ಸಾರ್ವಜನಿಕರ ಮನವಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.
 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮೊದಲಿಗೆ ವಿದ್ಯಾರ್ಥಿಗಳ ದಾಖಲಾತಿ, ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು. ವಿದ್ಯಾರ್ಥಿಗಳು ಮಲಗುವ ಕೊಠಡಿಗಳು, ಭೋಜನಾಲಯ, ಉಗ್ರಾಣ, ಕ್ರೀಡಾಂಗಣವನ್ನು ಪರಿಶೀಲಿಸಿ, ಸದಾ ಕಾಲ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಿದರು.
ಸರ್ಕಾರದಿಂದ ಲಭ್ಯವಾಗುವ ಅನುದಾನವನ್ನು ದುರುಪಯೋಗಪಡಿಸಿಕೊಳ್ಳದೇ, ವಿದ್ಯಾರ್ಥಿ ನಿಲಯವನ್ನು ಉನ್ನತೀಕರಿಸುವಲ್ಲಿ ಅಗತ್ಯ ಕ್ರಮವಹಿಸುವಂತೆ ನಿಲಯಪಾಲಕರುಗಳಿಗೆ ಸೂಚಿಸಿದರು.
9ವಸತಿ ನಿಲಯದ ಉಗ್ರಾಣದಲ್ಲಿ ದಾಖಲಾಗಿದ್ದ ಬೆಡ್ ಶೀಟ್, ಜಮಖಾನ ಗಳ ಬಗ್ಗೆ ಗಮನಹರಿಸಿದ ಜಿಲ್ಲಾಧಿಕಾರಿಗಳು  ಪ್ರಶ್ನಿಸಲಾಗಿ, ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು, ಪೂರ್ಣಗೊಂಡ ನಂತರ ಎಲ್ಲಾ ದಾಸ್ತಾನುಗಳನ್ನು ವಿತರಣೆ ಮಾಡಲು ಕ್ರಮವಹಿಸಲಾಗುವುದೆಂದು ನಿಲಯಪಾಲಕರು ಮಾಹಿತಿ ನೀಡಿದರು.
ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳ ಬಗ್ಗೆ ಹಾಗೂ ಊಟದ ವ್ಯವಸ್ಥೆ ಬಗ್ಗೆ ಪರಿಶೀಲಿಸಿ, ಶುಚಿ-ರುಚಿಯನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ