Monday, November 23, 2026

ಪ್ರಾಯೋಗಿಕ ಆವೃತ್ತಿ

ಮಹಾರಾಷ್ಟ್ರ ಚುನಾವಣೆಯಲ್ಲಿ ‘ಮತ ಕಳ್ಳತನ’ ಆರೋಪ | ಡಿಜಿಟಲ್ ಮತದಾರರ ಪಟ್ಟಿ, ಸಿಸಿಟಿವಿ ದೃಶ್ಯಾವಳಿ ಬಿಡುಗಡೆಗೆ ರಾಹುಲ್ ಗಾಂಧಿ ಆಗ್ರಹ

ಮಹಾರಾಷ್ಟ್ರ ಚುನಾವಣೆಯಲ್ಲಿ “ಮತ ಕಳ್ಳತನ” ನಡೆದಿದ್ದು, ಇದನ್ನು ಚುನಾವಣಾ ಆಯೋಗವು  “ಮುಚ್ಚಿಹಾಕುತ್ತಿದೆ”. ಆಯೋಗವು ಚುನಾವಣೆಗೆ ಸಂಬಂಧಿಸಿ ಮೆಷಿನ್-ರೀಡೆಬಲ್ ಡಿಜಿಟಲ್ ಮತದಾರರ ಪಟ್ಟಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಇಂದು ಎಕ್ಸ್ ಖಾತೆಯಲ್ಲಿ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕ್ಷೇತ್ರದಲ್ಲಿ ಮತದಾರರ ಸೇರ್ಪಡೆ ಸಂದರ್ಭದಲ್ಲಿ ಕಡ್ಡಾಯ ಪರಿಶೀಲನೆ ನಡೆಸಲಾಗಿಲ್ಲ. ಅಲ್ಲದೇ ಆರು ತಿಂಗಳ ಅವಧಿಯಲ್ಲಿ ಸುಮಾರು 29,000 ಮತದಾರರನ್ನು ಸೇರಿಸಲಾಗಿದೆ ಎಂದು ವರದಿಯೊಂದು ತಿಳಿಸಿದ ನಂತರ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. 

ಸಿಸಿಟಿವಿ ದೃಶ್ಯಾವಳಿಗಳನ್ನು ತಕ್ಷಣ ಬಿಡುಗಡೆ ಒತ್ತಾಯ

ಮಹಾರಾಷ್ಟ್ರ ಚುನಾವಣೆಗಳ ಮೊದಲು 2024ರ ನಂತರದ ಕರಡು ಮತದಾರರ ಪಟ್ಟಿಗಳ ಪ್ರತಿಗಳನ್ನು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳಿಗೆ ನೀಡಲಾಗಿದೆ ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದಾರೆ.

ಕರಡು ಮತ್ತು ಅಂತಿಮ ಮತದಾರರ ಪಟ್ಟಿಗಳ ಪ್ರಕಟಣೆಯ ನಡುವೆ 19,27,508ರಷ್ಟು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ. ತಪ್ಪಾದ ಸೇರ್ಪಡೆಗಳು ಅಥವಾ ಅಳಿಸುವಿಕೆ ಕುರಿತು ಕೇವಲ 89 ಮನವಿಗಳನ್ನು ಮಾತ್ರ ಸ್ವೀಕರಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

ರಾಹುಲ್ ಮತದಾರರ ಪಟ್ಟಿಗಾಗಿ “ಸಂಪೂರ್ಣ ಪಾರದರ್ಶಕತೆ” ಗಾಗಿ ಪದೇ ಪದೇ ಒತ್ತಾಯಿಸಿದ್ದಾರೆ. ಆದರೆ ಚುನಾವಣಾ ಆಯೋಗವು ಮೆಷಿನ್-ರೀಡೆಬಲ್ ಮತದಾರರ ಪಟ್ಟಿಗಳನ್ನು ಬಹಿರಂಗಪಡಿಸಲು ನಿರಾಕರಿಸುತ್ತಿದೆ ಎಂದು ಅವರು ದೂರಿದ್ದಾರೆ.

ನಮ್ಮ ಚುನಾವಣಾ ವ್ಯವಸ್ಥೆಯ ಸಮಗ್ರತೆಯು ಅಧಃಪತನಕ್ಕೆ ತಲುಪಿದೆ. ಇದನ್ನು ಆಡಳಿತ ಪಕ್ಷದ ನಾಯಕರು ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಮ್ಯಾಚ್ ಫಿಕ್ಸಿಂಗ್ ಅಲ್ಲವಲ್ಲದೆ ಇನ್ನೇನು? ಎಂದು ಅವರು ಪ್ರಶ್ನಿಸಿದ್ದಾರೆ.

ಮತದಾರರಿಗೆ ವಿಳಾಸಗಳಿಲ್ಲ

ನ್ಯೂಸ್‌ಲಾಂಡ್ರಿ ತನ್ನ ವರದಿಯಲ್ಲಿ ನಾಗ್ಪುರ ನೈಋತ್ಯ ಕ್ಷೇತ್ರದಲ್ಲಿ ಆರು ತಿಂಗಳಲ್ಲಿ 29,219 ಹೊಸ ಮತದಾರರನ್ನು ಸೇರಿಸಲಾಗಿದೆ ಎಂದು ಹೇಳಿದೆ. ಇದು 8.25%ರಷ್ಟು ಹೆಚ್ಚಳವಾಗಿದೆ. ಇದು ಕಡ್ಡಾಯ  ಪರಿಶೀಲನೆಗಳಿಗೆ ಚುನಾವಣಾ ಆಯೋಗವು ನಿಗದಿಪಡಿಸಿದ 4% ಹೆಚ್ಚಳದ ಮಿತಿಗಿಂತ ಹೆಚ್ಚಾಗಿದೆ. ಹಲವಾರು ಮತಗಟ್ಟೆಗಳಲ್ಲಿ ಪರಿಶೀಲನೆಗಳನ್ನು ಮಾಡಲಾಗಿಲ್ಲ ಎಂದು ವರದಿ ಹೇಳಿದೆ.

ಕನಿಷ್ಠ 4,000 ಮತದಾರರಿಗೆ ವಿಳಾಸಗಳಿಲ್ಲ ಎಂದು ವರದಿ ಹೇಳಿದೆ. 70% ಮತಗಟ್ಟೆಗಳಲ್ಲಿ 4%ಕ್ಕಿಂತ ಹೆಚ್ಚು ಮತ ಸೇರ್ಪಡೆಗಳಿದ್ದರೆ, 26 ಮತಗಟ್ಟೆಗಳಲ್ಲಿ 20%ಕ್ಕಿಂತ ಹೆಚ್ಚು ಮತ್ತು ನಾಲ್ಕು ಮತಗಟ್ಟೆಗಳಲ್ಲಿ 40%ಕ್ಕಿಂತ ಹೆಚ್ಚು ಸೇರ್ಪಡೆಗಳಿವೆ ಎಂದು ಅದು ಹೇಳಿದೆ. ಚುನಾವಣಾ ಆಯೋಗವು ಈ ಹೇಳಿಕೆಗಳನ್ನು ನಿರಾಕರಿಸಿದೆ.

ಕೃಪೆ : ನಾನು ಗೌರಿ.ಕಾಂ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ