Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಧಾನಸಭಾ ಚುನಾವಣೆ| ಜಮ್ಮು ಕಾಶ್ಮೀರದಲ್ಲಿ ಬಿರುಸಿನಿಂದ ಸಾಗಿದ ಮತದಾನ

ಜಮ್ಮು ಕಾಶ್ಮೀರದಲ್ಲಿ ಬುಧವಾರ ವಿಧಾನಸಭೆ ಚುನಾವಣೆಗೆ ಮತದಾನ ಪ್ರಾರಂಭವಾಗಿದ್ದು, ರಾಜ್ಯದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. 370ನೇ ವಿಧಿ ರದ್ದು ಮಾಡಿ ರಾಜ್ಯವನ್ನು ಜಮ್ಮು ಕಾಶ್ಮೀರ ಮತ್ತು ಲಡಾಕ್‌ ಎಂದು 2 ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿದೆ.

ಏಳು ಜಿಲ್ಲೆಗಳಲ್ಲಿ ಹರಡಿರುವ 24 ಕ್ಷೇತ್ರಗಳಲ್ಲಿ ಇಂದು ಬಿಗಿಯಾದ ಭದ್ರತಾ ವ್ಯವಸ್ಥೆಗಳ ನಡುವೆ 1 ನೇ ಹಂತದಲ್ಲಿ ಮತದಾನ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಜಮ್ಮು ಕಾಶ್ಮೀರವು ಕೇಂದ್ರಾಡಳಿತ ಪ್ರದೇಶ ಎಂದು ಆದ ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಯಾಗಿದ್ದು, ಕಳೆದ 10 ವರ್ಷಗಳಲ್ಲಿ ವಿಧಾನಸಭಾ ಚುನಾವಣೆ ಇಲ್ಲಿ ನಡೆದಿಲ್ಲ.

ಭದ್ರತೆ ಸೇರಿದಂತೆ ಎಲ್ಲ ವ್ಯವಸ್ಥೆಗಳು ಜಾರಿಯಲ್ಲಿದ್ದು, ಜಮ್ಮು ಕಾಶ್ಮೀರದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಮೂರು ಹಂತದ ಚುನಾವಣೆಯ ಮೊದಲ ಹಂತ ಇದಾಗಿದ್ದು, ಪಿರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಯಲ್ಲಿರುವ ಜಮ್ಮು ಕಾಶ್ಮೀರದ ಏಳು ಜಿಲ್ಲೆಗಳು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನ ಮಾಡುತ್ತಿದ್ದಾರೆ.

ಜಮ್ಮು ಪ್ರದೇಶದ ಮೂರು ಜಿಲ್ಲೆಗಳಲ್ಲಿ ಎಂಟು ಮತ್ತು ಕಾಶ್ಮೀರ ಕಣಿವೆಯ ನಾಲ್ಕು ಜಿಲ್ಲೆಗಳ 16 – 24 ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸುತ್ತಿರುವ 90 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 219 ಅಭ್ಯರ್ಥಿಗಳ ಭವಿಷ್ಯವನ್ನು 23 ಲಕ್ಷಕ್ಕೂ ಹೆಚ್ಚು ಮತದಾರರು ಇಂದು ನಿರ್ಧರಿಸಲಿದ್ದಾರೆ.

ಚುನಾವಣಾ ಆಯೋಗದ (EC) ಪ್ರಕಾರ, 11,76,462 ಪುರುಷರು, 11,51,058 ಮಹಿಳೆಯರು ಮತ್ತು 60 ತೃತೀಯಲಿಂಗಿ ಮತದಾರರನ್ನು ಒಳಗೊಂಡಂತೆ ಒಟ್ಟು 23,27,580 ಮತದಾರರು ಹಂತ 1 ರಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.

“18 ರಿಂದ 19 ವರ್ಷ ವಯಸ್ಸಿನ 1.23 ಲಕ್ಷ ಯುವಕರು, 28,309 ವಿಕಲಾಂಗ ವ್ಯಕ್ತಿಗಳು (PwDs) ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ 15,774 ಹಿರಿಯ ಮತದಾರರು ಸಹ ಮೊದಲ ಹಂತದಲ್ಲಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ” ಎಂದು EC ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

3,276 ಮತಗಟ್ಟೆಗಳಲ್ಲಿ ಒಟ್ಟು 14,000 ಮತಗಟ್ಟೆ ಸಿಬ್ಬಂದಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

“302 ನಗರ ಮತಗಟ್ಟೆಗಳು ಮತ್ತು 2,974 ಗ್ರಾಮೀಣ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಯಲ್ಲಿ ಅಧ್ಯಕ್ಷರು ಸೇರಿದಂತೆ ನಾಲ್ವರು ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಒಟ್ಟು 14,000 ಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿಯನ್ನು 1 ನೇ ಹಂತದ ಚುನಾವಣೆಗೆ ಕರ್ತವ್ಯಕ್ಕೆ ನಿಯೋಜಿಸಲಾಗುವುದು.” ಅವರು ಹೇಳಿದ್ದಾರೆ.

ಭದ್ರತಾ ವ್ಯವಸ್ಥೆಗಳಲ್ಲಿ ಕೇಂದ್ರ ಸಶಸ್ತ್ರ ಅರೆಸೇನಾ ಪಡೆ (ಸಿಎಪಿಎಫ್), ಜಮ್ಮು ಕಾಶ್ಮೀರ ಸಶಸ್ತ್ರ ಪೊಲೀಸ್ ಮತ್ತು ಜಮ್ಮು ಕಾಶ್ಮೀರ ಪೊಲೀಸರ ಬಹು ಹಂತದ ಪಡೆಗಳು ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರದ ಪ್ರಮುಖ ಅಭ್ಯರ್ಥಿಗಳ ಪೈಕಿ ಬುಧವಾರದಂದು ಸಿಪಿಐ (ಎಂ)ನ ಮೊಹಮ್ಮದ್ ಯೂಸುಫ್ ತರಿಗಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್, ನ್ಯಾಷನಲ್ ಕಾನ್ಫರೆನ್ಸ್‌ನ ಸಕೀನಾ ಇಟೂ ಮತ್ತು ಪಿಡಿಪಿಯ ಸರ್ತಾಜ್ ಮದ್ನಿ ಮತ್ತು ಅಬ್ದುಲ್ ರೆಹಮಾನ್ ವೀರಿ ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಶ್ರೀಗುಫ್ವಾರಾ-ಬಿಜ್‌ಬೆಹರಾದಿಂದ ಸ್ಪರ್ಧಿಸುತ್ತಿರುವ ಪಿಡಿಪಿಯ ಇಲ್ತಿಜಾ ಮುಫ್ತಿ ಮತ್ತು ಪುಲ್ವಾಮಾದಿಂದ ಪಕ್ಷದ ಯುವ ನಾಯಕ ವಹೀದ್ ಪಾರಾ ಕೂಡ ಮೊದಲ ಹಂತದ ಮತದಾನದ ಕಣದಲ್ಲಿದ್ದಾರೆ.

ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ಇನ್ನೆರಡು ಹಂತಗಳು ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ನಡೆಯುತ್ತಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!