ಮಂಡ್ಯನಗರ ಎಲ್ಲಾ ಉದ್ಯಾನವನಗಳನ್ನು ತ್ಯಾಜ್ಯರಹಿತವಾಗಿ ಸ್ವಚ್ಚಗೊಳಿಸಿ ಸುಂದರ ನಗರ ನಿರ್ಮಾಣ ಮಾಡುವುದು ನಮ್ಮ ಮುಖ್ಯ ಉದ್ಧೇಶವಾಗಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಅಶೋಕ್ ಜಯರಾಂ ಚಾಲನೆ ನೀಡಿದರು.
ಮಂಡ್ಯನಗರದ ಹೊಸಹಳ್ಳಿಯ ಚನ್ನಯ್ಯ ಉದ್ಯಾನವನದಲ್ಲಿ ಜಿಲ್ಲಾ ಬಿಜೆಪಿ ನಗರ ಮೋರ್ಚಾ ಮತ್ತು ಎಸ್.ಡಿ. ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ-5ನೇ ವಾರದ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಸೆ.17 ದಂದು ಸ್ವಚ್ಛತಾ ಅಭಿಯಾನ ಮಾಡುವ ಮೂಲಕ ಸೇವಾ ಸಪ್ತಾಹದಡಿ ವಿವಿಧ ಸೇವಾ ಕಾರ್ಯಗಳು ನಡೆದವು, ಅದರ ಮುಂದುವರಿದ ಭಾಗವಾಗಿ ಪ್ರತಿ ವಾರ ಮಂಡ್ಯ ನಗರದಲ್ಲಿ ಸ್ಥಳೀಯ ನಾಗರೀಕರು, ಬಿಜೆಪಿ ಕಾರ್ಯಕರ್ತರು ಮತ್ತು ಸ್ವಯಂ ಸೇವಾ ವಿದ್ಯಾರ್ಥಿ ತಂಡದಿಂದ ಸ್ವಚ್ಛತಾ ಅಭಿಯಾನ ಕಾರ್ಯಾರಂಭಗೊಂಡಿದೆ ಎಂದು ನುಡಿದರು.
ಕಳೆದ ತಿಂಗಳು ನಗರದಲ್ಲಿರುವ ಕೆರೆಯಂಗಳದ ಕೆ.ಎಚ್.ಬಿ.ಕಾಲೋನಿಯ ಪಾರ್ಕ್ ನಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಹೊಸ ರೂಪ ನೀಡಲಾಗಿದೆ, ಬೀಡಿ ಕಾಲೋನಿಯ ಟಿಪ್ಪು ಸುಲ್ತಾನ ಉದ್ಯಾನವನ, ಜೈನರ ರುದ್ರಭೂಮಿಯಲ್ಲಿ ಶ್ರಮದಾನ ನಡೆಸಿ, ಸಂಪೂರ್ಣ ತ್ಯಾಜ್ಯವನ್ನು ತೆಗೆದು ಸುಂದರ ಸ್ಮಶಾನ ನಿರ್ಮಿಸಲಾಗಿದೆ, ಸ್ವರ್ಣಸಂದ್ರದಲ್ಲಿರು ವೀರ ಯೋಧರ ಉದ್ಯಾನವನಗಳನ್ನು ಸ್ವಚ್ಚತೆ ಮಾಡಲಾಗಿದೆ ಎಂದು ತಿಳಿಸಿದರು.
ಇಂದು ವಿಶೇಷವಾಗಿ ಸಾರ್ವಜನಿಕರೊಡನೆ ಚರ್ಚೆ ಮಾಡಿ, ಹೊಸಹಳ್ಳಿಯ ಚನ್ನಯ್ಯ ಉದ್ಯಾನವನದಲ್ಲಿ ನಾಗರೀಕರ ಸಹಯೋಗದಲ್ಲಿ ಪ್ಲಾಸ್ಟಿಕ್ ಮುಕ್ತ ಉದ್ಯಾನವನ ಮಾಡುವುದು, ಮೂಲಭೂತ ಸೌಕರ್ಯ ಒದಗಿಸಲು ನಗರಸಭೆ ಮನವಿ ಮಾಡುವುದು, ವಾಯು ವಿಹಾರಿಗಳ ಸಂಚಾರಕ್ಕೆ ಮತ್ತು ಸ್ಥಳೀಯ ಮಕ್ಕಳ ಆಟ-ಮನರಂಜನೆಗೆ ಆದ್ಯತೆ ನೀಡಲು ಒತ್ತು ನೀಡುವ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಮಾಜಿ ಗುರುವಮ್ಮ, ಬಿಜೆಪಿ ನಗರಾಧ್ಯಕ್ಷ ವಿವೇಕ್, ಸ್ವಯಂ ಸೇವಾ ವಿದ್ಯಾರ್ಥಿಗಳ ತಂಡ, ಸ್ಥಳೀಯ ನಾಗರೀಕರು ಹಾಜರಿದ್ದರು.




