ಸರ್ಕಾರದ ಇತರ ಎಲ್ಲಾ ಹುದ್ದೆಗಳಿಗಿಂತ ಶಿಕ್ಷಕರ ಹುದ್ದೆ ಸಮಾಜದಲ್ಲಿ ಹೆಚ್ಚು ಶ್ರೇಷ್ಠ ಹಾಗೂ ಗೌರವಯುತವಾದದ್ದು, ಶಿಕ್ಷಕರು ರಾಷ್ಟ್ರ ನಿರ್ಮಾಣದ ಶಿಲ್ಪಿಗಳು ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ತಿನ ಶಾಸಕ ಕೆ.ವಿವೇಕಾನಂದ ಅಭಿಪ್ರಾಯಪಟ್ಟರು.
ಸರ್ಕಾರಿ ಗ್ರೇಡ್ -1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಂಡ್ಯ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಪಾಂಡವಪುರ ತಾಲೂಕಿನ ಸಣಬ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಿ.ಎನ್.ಶಿವಕುಮಾರ್ ರವರನ್ನು ಅಭಿನಂದಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ದೈಹಿಕ ಶಿಕ್ಷಣದ ಅವಶ್ಯಕತೆ ಇದ್ದು, ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಶಾಲೆಯಲ್ಲಿ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಅವಕಾಶ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮಂಡ್ಯ ತಾಲ್ಲೂಕು, ದಕ್ಷಿಣ ವಲಯದ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಣ್ಣಮಂಗಲ, ಶ್ರೀರಂಗಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ. ಮಂಜುನಾಥ್ ಬಲ್ಲೇನಹಳ್ಳಿ, ಮಂಡ್ಯ ತಾಲ್ಲೂಕು ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಿ.ಕೆ ಜಗದೀಶ್,
ಪ್ರೌಢ ಶಾಲಾ ಸಹಶಿಕ್ಷಕರ ಸಂಘ, ಮಂಡ್ಯ ತಾ. ಉತ್ತರ ವಲಯದ ಅಧ್ಯಕ್ಷ ಎನ್. ಗೋಪಿನಾಥ್, ಶಿಕ್ಷಕರಾದ ಮಹೇಶ್, ರಾಜೇಶ್, ನಾಗರಾಜು, ಕೆ.ಎಸ್.ರಘು ಹಾಗೂ ಇನ್ನಿತರು ಉಪಸ್ಥಿತರಿದ್ದರು.




