Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯನಗರದ ನೀರಿನ ದರ ₹225ಕ್ಕೆ ನಿಗದಿಗೊಳಿಸಿ ಸರ್ಕಾರದ ಆದೇಶ: ರವಿಕುಮಾರ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭರವಸೆಯಂತೆ ಮಂಡ್ಯನಗರ ವ್ಯಾಪ್ತಿಯ ಸುಮಾರು 20 ಸಾವಿರ ಕುಟುಂಬಗಳ ಕುಡಿಯುವ ನೀರಿನ ದರ ಇಳಿಕೆ ಹಾಗೂ ಮಂಡ್ಯನಗರದ ಅಭಿವೃದ್ದಿಗೆ ಪೂರಕವಾದ ಯೋಜನೆಗಳನ್ನು ಕಾರ್ಯಗತಗೊಳಿಸಲು ಮುಂದಾಗಿರುವುದಾಗಿ ಶಾಸಕ ರವಿಕುಮಾರ್ ಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, 120 ರೂಪಾಯಿ ಮಾಸಿಕ ಕುಡಿಯುವ ನೀರಿನ ದರವನ್ನು 2011ರಲ್ಲಿ ಏಕಾಏಕಿ ದುಪ್ಪಟ್ಟು ಮಾಡಲಾಗಿತ್ತು, 2019ರಲ್ಲಿ 282 ರೂಪಾಯಿಗೆ ಹೆಚ್ಚಳ ಮಾಡಿ ನಾಗರೀಕರಿಗೆ ನೀರಿನ ಕರದ ಭಾರ ಹೇರಲಾಗಿತ್ತು. ನಾಗರೀಕರ ಒತ್ತಾಸೆಯಂತೆ ಪ್ರಸ್ತುತ 225 ರೂಪಾಯಿಗೆ ದರವನ್ನು ಕಡಿತಗೊಳಿಸಿ ಆದೇಶ ಹೊರಡಿಸಲಾಗಿದ್ದು, ಪ್ರಸಕ್ತ ತಿಂಗಳಿನಿಂದ ಹೊಸ ಆದೇಶ ಅನುಷ್ಟಾನವಾಗಲಿದೆ ಎಂದರು.

ಬಡ್ಡಿ ಮನ್ನಾಗೆ ಪ್ರಯತ್ನ

ಮಂಡ್ಯನಗರ ವ್ಯಾಪ್ತಿಯ ನೀರು ಬಳಕೆದಾರರಿಂದ ಜಲಮಂಡಳಿಗೆ ₹44.51 ಕೋಟಿ ರೂ ಬಾಕಿ ಇದ್ದು, ₹ 27,66 ಕೋಟಿ ಅಸಲು ಹಾಗೂ ₹16.91ಕೋಟಿ ರೂ. ದಂಡ ಹಾಗೂ ಬಡ್ಡಿಯನ್ನು ಮನ್ನಾ ಮಾಡಿಸಿ, ಅಸಲು ಪಾವತಿಗೆ ರಿಯಾಯಿತಿ ನೀಡಿ ಒಂದೇ ಹಂತದ ಪಾವತಿಗೆ ಆದೇಶ ಹೊರಡಿಸಲು ಸರ್ಕಾರದೊಂದಿಗೆ ಪ್ರಯತ್ನಿಸಲಾಗುವುದೆಂದು ತಿಳಿಸಿದರು.

ಕುಡಿಯುವ ನೀರಿನ ಕರ ಇಳಿಕೆಗೆ ಸಹಕರಿಸಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಪೌರಾಡಳಿತ ಹಾಗೂ ನಗರಾಭಿವೃದ್ದಿ ಸಚಿವರಿಗೆ ನಗರದ ಜನತೆ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಎಂ.ಸಿ ರಸ್ತೆ ಅಭಿವೃದ್ದಿಗೆ 33 ಕೋಟಿ

ಮಂಡ್ಯನಗರದ ಸಮಗ್ರ ಅಭಿವೃದ್ದಿ ದೃಷ್ಠಿಯಿಂದ ಮೈಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಹೋಟೇಲ್ ಅಮರಾವತಿಯಿಂದ, ಹೋಟೇಲ್ ಜ್ಯೋತಿ ಇಂಟರ್ ನ್ಯಾಷನಲ್ ವರೆಗೆ ಅಭಿವೃದ್ದಿಪಡಿಸಲು 33 ಕೋಟಿ ರೂ. ವೆಚ್ಚದ ಯೋಜನೆ ಸಾಕಾರಗೊಳ್ಳಲಿದೆ ಎಂದು ತಿಳಿಸಿದರು.

ಹಲವು ವರ್ಷಗಳಿಂದ ವಾಹನ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಮಂಡ್ಯ-ಕೆರಗೋಡು ರಸ್ತೆ ಮಾರ್ಗದ ಉಳಿಕೆ ಕಾಮಗಾರಿ ಪೂರ್ಣಗೊಳಿಸಲು 11 ಕೋಟಿ ರೂ.ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಿದರು.

ಮಂಡ್ಯನಗರ ವ್ಯಾಪ್ತಿಯ ಬನ್ನೂರು ರಸ್ತೆಯನ್ನು ಕನ್ನಿಕಾ ಪರಮೇಶ್ವರಿ ದೇವಾಲಯ ಹಾಗೂ ಗೌರಿ ಶಂಕರ ಕಲ್ಯಾಣ ಮಂಟಪದವರೆಗೆ ಆಧುನಿಕ ರೀತಿಯಲ್ಲಿ ಅಭಿವೃದ್ದಿಪಡಿಸಲು 1.70 ಕೋಟಿ ಅನುದಾನ ಮಂಜೂರಾಗಿದ್ದು, ತಾಂತ್ರಿಕ ಮಂಜೂರಾತಿಗಳು ಸಾಗಿವೆ, ಪ್ರಯಾಣಿಕರ ಹಿತದೃಷ್ಠಿಯಿಂದ ಗುಂಡಿ ಮುಚ್ಚಲು 16 ಲಕ್ಷ ರೂಪಾಯಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ತಕ್ಷಣವೇ ಕಾರ್ಯಾರಂಭ ಮಾಡಲಾಗುವುದು ಎಂದು ತಿಳಿಸಿದರು.

 

ಲೋಕಸಭೆಗೆ ಹಲವು ಆಕಾಂಕ್ಷಿಗಳು

ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಲವರು ಆಕಾಂಕ್ಷಿಗಳಿದ್ದು, ಯಾರೇ ಸ್ಪರ್ಧಿಸಿದರೂ ಗೆಲವು ಶತಸಿದ್ದ ಎಂದು ಶಾಸಕ ರವಿಕುಮಾರ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಷೇತ್ರ ವ್ಯಾಪ್ತಿಯ 7 ಕ್ಷೇತ್ರಗಳಲ್ಲಿ ಪಕ್ಷದ ಶಾಸಕರಿದ್ದಾರೆ. ವಿಧಾನ ಪರಿಷತ್ ಸದಸ್ಯರು ನಮ್ಮ ಪಕ್ಷದವರೆ ಆಗಿದ್ದು, ಯಾರೇ ಅಭ್ಯರ್ಥಿಯಾದರೂ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 30 ಸಾವಿರ ಬಹುಮತ ದೊರೆಯಲಿದೆ ಎಂದರು.

ಶಾಂಭವಿ ಎಸ್.ಎಂ.ಕೃಷ್ಣ, ಉದ್ಯಮಿ ಸ್ಟಾರ್ ಚಂದ್ರು, ಮಾಜಿ ಸಂಸದೆ ರಮ್ಯಾ, ಕೆ.ಬಿ.ಚಂದ್ರಶೇಖರ್, ಡಾ.ರವೀಂದ್ರ, ಡಾ.ಕೃಷ್ಣ, ಕೀಲಾರ ರಾಧಾಕೃಷ್ಣ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅಥವಾ ಅವರ ಕುಟುಂಬ ಸದಸ್ಯರನ್ನು ಕಣಕ್ಕಿಳಿಸುವಂತೆ ಒತ್ತಾಯಿಸಲಾಗಿದೆ ಎಂದರು.

ಹಾಲಿ ಸಂಸದೆ ಸುಮಲತಾ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ್ದು, ಅವರ ಕಾಂಗ್ರೆಸ್ ಸೇರುವ ಸಾಧ್ಯತೆಯನ್ನು ತಳ್ಳಿ ಹಾಕಿದರು.

ವಾರ್ಡ್ ಗಳಿಗೆ ತಲಾ ₹ 13 ಲಕ್ಷ ಅನುದಾನ

ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಚರಂಡಿ ನಿರ್ಮಾಣಕ್ಕಾಗಿ 30 ಕೋಟಿ ರೂ., ವಾರ್ಡ್ ಅಭಿವೃದ್ದಿಗಾಗಿ ನಗರದ 35 ವಾರ್ಡ್ಗಗಳಿಗೆ ತಲಾ 13 ಲಕ್ಷ ರೂ. ಅನುದಾನ ಹಂಚಿಕೆಗೆ ಕ್ರಮ ವಹಿಸಲಾಗಿದ್ದು, ಇದಕ್ಕಾಗಿ 5 ಕೋಟಿ ರೂ.ಗಳ ಅನುದಾನ 50:53ರ ನಿಧಿಯಡಿ ಬಿಡುಗಡೆಯಾಗಿದೆ ಎಂದರು.

ರಕ್ಷಣಾ ಗೋಡೆ ನಿರ್ಮಾಣ

ಬೀಡಿ ಕಾಲೋನಿ ಹಾಗೂ ಚಿಕ್ಕಮಂಡ್ಯ ನಿವಾಸಿಗಳಿಗೆ ಮಳೆ ಹಾವಳಿಯಿಂದ ಉಂಟಾಗುತ್ತಿದ್ದ ನಷ್ಟ ನಿವಾರಣೆಗೆ ಶಾಶ್ವತ ರಕ್ಷಣಾ ಗೋಡೆ ನಿರ್ಮಾಣಕ್ಕೆ 5 ಕೋಟಿ ರೂ. ವ್ಯಯಿಸಲಾಗುತ್ತಿದೆ. ಮಂಡ್ಯನಗರದ ಗಾಂಧೀ ಪಾರ್ಕ್ ಅಭಿವೃದ್ದಿಗೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

10 ಕೋಟಿ ವಿಶೇಷ ಅನುದಾನ

ಒಟ್ಟಾರೆ ಮಂಡ್ಯನಗರದ ಸಮಗ್ರ ಅಭಿವೃದ್ದಿಗೆ ಹಂತ- ಹಂತವಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು, ಪ್ರತಿ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ತಲಾ 25 ಕೋಟಿ ರೂ. ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳು ಕ್ರಮ ವಹಿಸಿದ್ದು, ಸದರಿ ಅನುದಾನದಲ್ಲಿ 10 ಕೋಟಿ ರೂ.ಗಳನ್ನು ಮಂಡ್ಯನಗರದ ಅಭಿವೃದ್ದಿಗೆ ಬಳಸಲಾಗುವುದೆಂದು ಶಾಸಕರು ತಿಳಿಸಿದರು.

ಬೂದನೂರು ಉತ್ಸವ

ಮಂಡ್ಯ ತಾಲ್ಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ಐತಿಹಾಸಿಕವಾಗಿರುವ ಅನಂತ ಪದ್ಮನಾಭ ಹಾಗೂ ಕಾಶೀ ವಿಶ್ವನಾಥ ದೇಗುಲಗಳಿದ್ದು, ಇವುಗಳನ್ನು ಜನರಿಗೆ ಪರಿಚಯಿಸುವ ಸದುದ್ದೇಶದಿಂದ ಪ್ರತಿವರ್ಷ 2 ದಿನಗಳ ಕಾಲ ಬೂದನೂರು ಉತ್ಸವ ಆಚರಣೆಗೆ ನಿರ್ಧರಿಸಲಾಗಿದ್ದು, 25 ಲಕ್ಷ ರೂ.ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ರುದ್ರಪ್ಪ, ನಗರಸಭಾ ಸದಸ್ಯರಾದ ಶ್ರೀಧರ್, ನಯೀಂ, ಶಿವಪ್ರಕಾಶ್, ಪೂರ್ಣಿಮಾ, ಜಾಕೀರ್, ಹಾಲಹಳ್ಳಿ ರವಿ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ