ರಾಜ್ಯಾದ್ಯಂತ ಆಗಸ್ಟ್ 13 ರಂದು ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಜಿಲ್ಲೆಯಲ್ಲಿಯೂ ಸಹ ಅಂದು ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ.ಎಂ ನಳಿನಿಕುಮಾರಿ ತಿಳಿಸಿದರು.
ಮಂಡ್ಯ ನಗರದ ಎ.ಡಿ.ಆರ್ ಕಟ್ಟಡದಲ್ಲಿ ಲೋಕ್ ಅದಾಲತ್ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 75,870 ಪ್ರಕರಣಗಳು ಬಾಕಿ ಇದ್ದು, ಅದರಲ್ಲಿ ಸುಮಾರು 10,660 ಪ್ರಕರಣಗಳು ರಾಜಿ ಆಗಬಹುದಾದ ಪ್ರಕರಣಗಳಾಗಿವೆ. (ವ್ಯಾಜ್ಯ ಪೂರ್ವ ಪ್ರಕರಣಗಳು) ಇದರಲ್ಲಿ ಸುಮಾರು 590 ಪ್ರಕರಣಗಳು ಈಗಾಗಲೇ ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.
ಕಳೆದ ಬಾರಿ ಲೋಕ್ ಅದಾಲತ್ ನಲ್ಲಿ 11,012 ಪ್ರಕರಣಗಳು ಇತ್ಯರ್ಥವಾಗಿದ್ದು, ವಕೀಲರ, ಪಕ್ಷಗಾರರ ಹಾಗೂ ಎಲ್ಲಾ ನ್ಯಾಯಲಯದ ಗೌರವಾನ್ವಿತ ನ್ಯಾಯಾಧೀಶರುಗಳ ಸಹಯೋಗದೊಂದಿಗೆ ಇತ್ಯರ್ಥ ಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
ಈ ಬಾರಿಯ ಲೋಕ್-ಅದಾಲತ್ ನಲ್ಲಿಯೂ ಸಹ ಇನ್ನೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಜನ ಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ನ್ಯಾಯದಾನ ಮಾಡಬೇಕೆಂಬ ಇಚ್ಛೆಯಿಂದ ಪ್ರಕರಣಗಳನ್ನು ತೆಗೆದುಕೊಂಡಿದ್ದು, ಜನ ಸಾಮಾನ್ಯರು ಇದರ ಸದುಪಯೋಗ ಪಡೆದುಕೊಂಡು ಲೋಕ್ ಅದಾಲತ್ ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರತಿದಿನ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್ ಮತ್ತು ಪೀಠಗಳು ನಡೆಯುತ್ತಲಿದ್ದು, ಆಗಸ್ಟ್ 13 ರವರೆಗೆ ಟೆಲಿಫೋನ್ ಬಿಲ್, ವಿದ್ಯುತ್ ಬಿಲ್ ನ್ಯಾಯಾಲಯದಲ್ಲಿ ಬಾಕಿ ಇರುವ ಸಿವಿಲ್ ವ್ಯಾಜ್ಯ ಮತ್ತು ಚೆಕ್ ಬೌನ್ಸ್ ಪ್ರಕರಣಗಳು, ಎಂಎಂಆರ್ ಡಿ ಪ್ರಕರಣಗಳು ರಾಜಿ ಮುಖಾಂತರ ನಡೆಸಲಾಗುವುದು ಹಾಗೂ ಸಣ್ಣಪುಟ್ಟ ಸಾಲ ವಸೂಲಿಗಾಗಿ ಸಲ್ಲಿಸಿರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಸಲುವಾಗಿ ವಿಶೇಷ ಪೀಠ ನಡೆಸಲಾಗುವುದು ಎಂದರು.
ಹತ್ತಿರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಭೇಟಿ ನೀಡಿ ತಮ್ಮ ಸಿವಿಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು. ಇಬ್ಬರ ಒಪ್ಪಿಗೆ ಮೇರೆಗೆ ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣಗಳನ್ನು ರಾಜಿ ಮಾಡುವ ಪ್ರಕ್ರಿಯೆಯೇ ಲೋಕ ಅದಾಲತ್ ಎಂದರು.
ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯದ ಶುಲ್ಕವಿರುತ್ತದೆ. ಈಗಾಗಲೇ ನ್ಯಾಯಾಲಯದ ಶುಲ್ಕ ಕಟ್ಟಿದ್ದರೆ ಲೋಕ ಅದಾಲತ್ ನಲ್ಲಿ ರಾಜಿಯಾದ ಹಿನ್ನೆಲೆಯಲ್ಲಿ ಎಲ್ಲಾ ನ್ಯಾಯಾಲಯಗಳು ಶುಲ್ಕವನ್ನು ಮರುಪಾವತಿ ಮಾಡಲಿವೆ ಎಂದರು.
ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ಇತರ್ಥ್ಯ ಪಡಿಸಿಕೊಳ್ಳಲು ನ್ಯಾಯಾಲಯದಲ್ಲಿ ಬಾಕಿ ಇದ್ದರೆ ತಮ್ಮ ವಕೀಲರಿಗೆ ಅರ್ಜಿ ಕೊಟ್ಟು ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ರಾಜಿ ಮಾಡಿಸಿ ಎಂದು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಗಳಿಗೆ ಎಲೆಕ್ಟ್ರಾನಿಕ್ ಮೋಡ್ ಮುಖಾಂತರವಾಗಲಿ ಅಥವಾ ಖುದ್ದಾಗಿ ವಕೀಲರ ಮೂಲಕ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದರು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ/ತಾಲ್ಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಇ-ಮೇಲ್ [email protected] ಎಸ್.ಎಂ.ಎಸ್, ವಾಟ್ಸ್ ಆ್ಯಪ್ ಸಂಖ್ಯೆ: 9482971495 ಸಂದೇಶದ ಮುಖಾಂತರ, ಸಹಾಯವಾಣಿ ಸಂಖ್ಯೆ 08232-229345/1800-425-90900 ಅಥವಾ ಖುದ್ದಾಗಿ ಭೇಟಿನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.




