Friday, September 20, 2024

ಪ್ರಾಯೋಗಿಕ ಆವೃತ್ತಿ

ಬಡವರಿಗೆ ಪಕ್ಷಾತೀತವಾಗಿ ಸ್ಪಂದಿಸಿದ್ದೇವೆ : ರವೀಂದ್ರ ಶ್ರೀಕಂಠಯ್ಯ

ಕಳೆದ 80 ವರ್ಷಗಳಿಂದ ಕೃಷ್ಣರಾಜಸಾಗರ ಗ್ರಾಮದಲ್ಲಿ ದಾಖಲೆಯಿಲ್ಲದೆ ಬದುಕುತ್ತಿದ್ದ ಜನರಿಗೆ ಹಕ್ಕುಪತ್ರ ನೀಡುವ ಮೂಲಕ ಅವರ ಬಹುದಿನದ ಕನಸನ್ನು ನನಸು ಮಾಡುವ ಮೂಲಕ ಬಡವರಿಗಾಗಿ ಪಕ್ಷಾತೀತವಾಗಿ ಸ್ಪಂದಿಸಿದ್ದೇವೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಗ್ರಾಮದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕೃಷ್ಣರಾಜಸಾಗರ ಕಂದಾಯ ಗ್ರಾಮವಾಗಿ ಘೋಷಣೆ ಹಾಗೂ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷ್ಣರಾಜ ಸಾಗರ ನಿರ್ಮಾಣಕ್ಕಾಗಿ ಬಂದು ನೆಲೆಸಿದ ಸುಮಾರು 1800 ಫಲಾನುಭವಿಗಳು ಕಂದಾಯ ದಾಖಲೆಯಿಲ್ಲದೆ ಕಳೆದ 80 ವರ್ಷಗಳಿಂದ ನೆಮ್ಮದಿ ಇಲ್ಲದೆ ಜೀವನ ಸಾಗಿಸುತ್ತಿದ್ದರು. ಅವರಿಗೆ ಹಕ್ಕು ಪತ್ರ ನೀಡದಿರುವುದು ಅಧಿಕಾರದಲ್ಲಿದ್ದವರು ತಲೆತಗ್ಗಿಸುವ ವಿಚಾರವಾಗಿತ್ತು. ಆದರೆ ಇಂದು ಕೃಷ್ಣರಾಜಸಾಗರ ವ್ಯಾಪ್ತಿಯ ಹುಲಿಕೆರೆ, ಮುದಗೆರೆ,ಬೆಳಗೊಳ ಮೊದಲಾದ ಗ್ರಾಮಗಳಿಗೆ ಹಕ್ಕುಪತ್ರ ಕೊಡಿಸಲು ಬಹಳ ಸಂತೋಷವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಳೆದ 80 ವರ್ಷಗಳಿಂದ ಕಂದಾಯ ದಾಖಲೆಯಿಲ್ಲದೆ 8 ರಿಂದ 10 ಸಾವಿರ ಜನ ಕೃಷ್ಣರಾಜಸಾಗರ ಗ್ರಾಮ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿದ್ದರು. ಕೆಆರ್‌ಎಸ್‌ನಲ್ಲಿ ಕನ್ನಂಬಾಡಿ ಅಣೆಕಟ್ಟು ಇದೆ ಎಂಬುದು ತಿಳಿದಿತ್ತೇ ಹೊರತು ಕೃಷ್ಣರಾಜ ಸಾಗರ ಗ್ರಾಮ ಇರುವುದಕ್ಕೆ ದಾಖಲೆ ಇರಲಿಲ್ಲ. ನಮ್ಮ ತಾಯಿ ಶಾಸಕರಾಗಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಎಂದು ಘೋಷಣೆ ಮಾಡಲಾಗಿತ್ತು.

ಆಗ ಚರಂಡಿ ಕೂಡ ಇರಲಿಲ್ಲ, ಕೊಳಚೆ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿತ್ತು. ನಮ್ಮ ತಾಯಿ ಪಾರ್ವತಮ್ಮ ಶ್ರೀಕಂಠಯ್ಯನವರು ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಂದ ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ ವಿಶೇಷ ಅನುದಾನವನ್ನು ತಂದು ಕೆಲಸ ಮಾಡಿಸಿದರು ಎಂದರು.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇಲ್ಲಿನ ಜನ ನಮಗೆ ಯಾವುದೇ ಕಂದಾಯ ದಾಖಲೆ ಇಲ್ಲ ಎಂದು ಹೇಳಿದ್ದರು. ಈ ಬಗ್ಗೆ ಆಗಿನ ಮುಖ್ಯಮಂತ್ರಿ, ಕುಮಾರಸ್ವಾಮಿಯವರಿಗೆ ಮನವಿ ಮಾಡಿದ ಸಂದರ್ಭದಲ್ಲಿ ಅವರು ಕಂದಾಯ ಗ್ರಾಮ ಮಾಡಲು ಅಧಿಕಾರಿಗಳ ಜೊತೆ ಮಾತನಾಡಿ ಕೆಲಸ ಪ್ರಾರಂಭಿಸಿದರು.

ನಂತರ ಸರ್ಕಾರ ಬದಲಾಗಿ ಮುಖ್ಯಮಂತ್ರಿಯಾದ ಯಡಿಯೂರಪ್ಪನವರಿಗೆ ಮನವಿ ಮಾಡಿದಾಗ ಅವರು ಜಿಲ್ಲಾಧಿಕಾರಿಯವರನ್ನು ಕರೆದು ಎಲ್ಲಾ ದಾಖಲೆಗಳನ್ನು ಬೆಂಗಳೂರಿಗೆ ತರಿಸಿಕೊಂಡು ಕಂದಾಯ ಸಚಿವ ಅಶೋಕ್ ರವರ ಜೊತೆ ಕೂತು ಚರ್ಚಿಸಿದ ಫಲವಾಗಿ ಕೃಷ್ಣರಾಜಸಾಗರ ಕಂದಾಯ ಗ್ರಾಮವಾಗಿ ಮಾರ್ಪಟ್ಟು ಇಂದು ಎಲ್ಲರಿಗೂ ಹಕ್ಕು ಪತ್ರ ವಿತರಿಸಲಾಗಿದೆ ಎಂದು ತಿಳಿಸಿದರು.

ಯಾವುದೇ ಸರ್ಕಾರ ಬರಲಿ,ಪಕ್ಷಾತೀತವಾಗಿ ಬಡವರಿಗೆ ಸ್ಪಂದಿಸಿದ ಫಲವಾಗಿ ಇಂದು ಹಕ್ಕು ಪತ್ರ ಸಿಕ್ಕಿದೆ. ಕಂದಾಯ ಸಚಿವ ಅಶೋಕ್ ರವರು ಸಹಕರಿಸಿದ ಫಲವಾಗಿ ಅತಂತ್ರವಾಗಿ ಇದ್ದವರಿಗೆ ನೆಲೆ ಸಿಕ್ಕಿದೆ. ಹಾಗೆಯೇ ತಾಲೂಕಿನ ಮೊಗರಹಳ್ಳಿ ಮಂಟಿ ಗ್ರಾಮದ 211 ನಿವೇಶನ ಹಂಚಿ ಹಕ್ಕುಪತ್ರ ಕೂಡ ನೀಡಲಾಗಿತ್ತು.

ಆದರೆ ನಂತರ ಸರ್ಕಾರ ಕೆಐಎಡಿಬಿ ಮೂಲಕ ಭೂಸ್ವಾಧೀನ ಮಾಡಿಕೊಂಡು ವಿಪ್ರೋ ಕಂಪನಿಗೆ ನೀಡಿದ್ದರಿಂದ ಜನರು ಕಂಗಾಲಾಗಿ ಆತಂಕದಿಂದ ಜೀವನ ನಡೆಸುತ್ತಿದ್ದಾರೆ. ಈಗ ವಿಪ್ರೋ ಸಂಸ್ಥೆಯೇ ಈ ಜಮೀನು ನಮಗೆ ಬೇಡ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದು, ಕೂಡಲೇ ನಮ್ಮ ಸಚಿವ ಅಶೋಕ್ ಅವರು ಇದನ್ನು ಪರಿಶೀಲಿಸಿ ಅವರಿಗೂ ಹಕ್ಕು ಪತ್ರ ಕೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಡಳಿತ ಬಡವರ ವಿಚಾರದಲ್ಲಿ ಸಣ್ಣಪುಟ್ಟ ತಪ್ಪಿದ್ದರೆ ಅದನ್ನು ಬದಿಗೆ ಸೇರಿಸಿ ಅವರಿಗೆ ಹಕ್ಕುಪತ್ರ ನೀಡಲು ಕಾರ್ಯಪ್ರವೃತ್ತರಾಗಬೇಕು. ನಾವೆಲ್ಲರೂ ಬಡವರ ಪರ ಪಕ್ಷಾತೀತವಾಗಿ ಇದ್ದೇವೆ ಎನ್ನುವುದನ್ನು ಇಂದು ಸಾರಿದ್ದೇವೆ ಎಂದರು.

ಕಂದಾಯ ಸಚಿವ ಆರ್. ಅಶೋಕ್ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು. ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ ಗೋಪಾಲಯ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಎಸ್.ಅಶ್ವತಿ ಪ್ರಾದೇಶಿಕ ಆಯುಕ್ತ ಪ್ರಕಾಶ್, ಜಿ.ಪಂ ಸಿಇಓ ಶಾಂತ ಹುಲ್ಮನಿ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ,ತಹಶೀಲ್ದಾರ್ ಶ್ವೇತಾ ರವೀಂದ್ರ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!