‘ಕುರ್ಚಿ ಕಿತ್ತಾಟದಲ್ಲಿ ಸರ್ಕಾರ ಏನು ಬೇಕಾದರೂ ಆಗಬಹುದು’ ಎಂಬ ಹೇಳಿಕೆ ನೀಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಚಿವ ಚಲುವರಾಯಸ್ವಾಮಿ ಟಾಂಗ್ ನೀಡಿದ್ದು, ಕುಮಾರಸ್ವಾಮಿಯವರಿಗೆ ರೆಡಿಯಾಗೋಕೆ ಹೇಳಿ.. ಎಂದು ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಬಂಡವಾಳ ನಡೆಯುತ್ತಿಲ್ಲ.
ಅದಕ್ಕೆ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯಲ್ಲಿ ಇವರ ಆಟ ನಡೆಯಲ್ಲ,ಇವರು ಸಿಎಂ ಆಗಲ್ಲ. ಸಿಎಂ ಮತ್ತು ಪ್ರಧಾನಿ ಮಾಡೋಕೆ ಬಿಜೆಪಿಯೇನೂ ಕಾಂಗ್ರೆಸ್ ಪಕ್ಷವಲ್ಲ ಎಂದು ತಿವಿದರು.
ವೈಯಕ್ತಿಕ ಅಭಿಪ್ರಾಯ ಕೊಡಲು ಆಗಲ್ಲ
ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಮಂತ್ರಿ, ಹೀಗಾಗಿ ವೈಯಕ್ತಿಕ ಅಭಿಪ್ರಾಯ ಕೊಡಲು ಆಗಲ್ಲ. ಶಾಸಕರು, ಮುಖಂಡರು ವೈಯಕ್ತಿಕ ಅಭಿಪ್ರಾಯ ಕೊಡಬಹುದು.
ನನಗೆ ಲಂಗು ಲಗಾಮು ಇದೆ. ಹೀಗಾಗಿ ನಾನು ಮಾಧ್ಯಮದ ಮುಂದೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಆಗಲ್ಲ. ಹೈಕಮಾಂಡ್ ನನ್ನನ್ನು ಕೇಳಿದ್ರೆ ನಾನು ಹೇಳಬಹುದು ಅಷ್ಟೆ. ನನ್ನ ಇತಿಮಿತಿಯಲ್ಲಿ ಮಾತಮಾಡಬಹುದು ಅಷ್ಟೆ ಎಂದರು.
ಶಾಸಕರು, ನಾಯಕರು ಮಾತನಾಡುವುದನ್ನು ಹೈಕಮಾಂಡ್ ಗಮನಿಸುತ್ತಿದೆ. ಸಚಿವ ಸಂಪುಟ ವಿಚಾರ ಹಾಗೂ ಡಿಕೆಶಿ ಸಿಎಂ ವಿಚಾರ ಹೈಕಮಾಂಡ್ ಮುಂದೆ ಇದೆ. ಹೈಕಮಾಂಡ್ ಎಲ್ಲವನ್ನೂ ಸರಿಯಾಗಿ ನಿಭಾಯಿಸುತ್ತದೆ.
ರಾಜ್ಯದಲ್ಲಿ ಗೊಂದಲ ಆಗಲು ಹೈಕಮಾಂಡ್ ಬಿಡುವುದಿಲ್ಲ ಎಂದರು.
ರಾಜಕೀಯ ವಿವೇಕ ಇಲ್ಲ
ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ಬೇಕು ಅಂದ್ರೆ ಹೈಕಮಾಂಡ್‌ಗೆ ಹಣ ಕೊಡಬೇಕು ಎಂಬ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅಶೋಕ್ ಮತ್ತು ನಾರಾಯಣಸ್ವಾಮಿಗೆ ರಾಜಕೀಯ ವಿವೇಕ ಇಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡಕ್ಕೂ ಹೈಕಮಾಂಡ್ ಇದೆ. ಕಾಂಗ್ರೆಸ್ ಆಡಳಿತ ಮಾಡುವಾಗ ಜನ ಭ್ರಷ್ಟಾಚಾರದ ಬಗ್ಗೆ ಮಾತಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರದ ಮಾತು ಬರ್ತಾ ಇದೆ.
ಅಶೋಕ್, ನಾರಾಯಣಸ್ವಾಮಿ ಅವರು ಚರ್ಚೆಗೆ ಬರಲಿ, ಯಾರಿಂದ ಭ್ರಷ್ಟಾಚಾರ ಆರಂಭವಾಯಿತು ತಿಳಿಯುತ್ತದೆ ಎಂದರು.
ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ, ವೇಣುಗೋಪಾಲ್ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನಮ್ಮ ಐದು ಗ್ಯಾರಂಟಿಗಳನ್ನು ಜನರಿಗೆ ಕೊಟ್ಟು ಸಮರ್ಪಕ ಕೆಲಸ ಮಾಡ್ತಿದೀವಿ ಎಂದರು.




