Thursday, September 19, 2024

ಪ್ರಾಯೋಗಿಕ ಆವೃತ್ತಿ

ದರ್ಶನ್‌ ಹಳೇ ವೀಡಿಯೊ ಹೇಳುತ್ತಿರುವುದೇನು…..?

ಮಾಚಯ್ಯ ಎಂ ಹಿಪ್ಪರಗಿ

ನಟ ದರ್ಶನ್ ಪ್ರಕರಣದಲ್ಲಿ ಮೀಡಿಯಾಗಳಿಗೆ ಯಾಕಿಷ್ಟು ಮುತುವರ್ಜಿ? ಅದಕ್ಕೆ ಈ ವೀಡಿಯೋದಲ್ಲಿ ನಿಮಗೆ ಉತ್ತರ ಸಿಗಲಿದೆ. ಇದು ಸ್ವತಃ ದರ್ಶನ್ ಮೀಡಿಯಾಗಳ ಜಾಣಕುರುಡು, ಜಾಣಕಿವುಡುತನವನ್ನು ತರಾಟೆಗೆ ತೆಗೆದುಕೊಂಡ ಹಳೆಯ ವೀಡಿಯೊ.

ಈಗ ನಡೆದಿರುವ ಕೊಲೆ ಪ್ರಕರಣವನ್ನು ಹೊರಗಿಟ್ಟು ಯೋಚಿಸುವುದಾದರೆ, ಈ ವೀಡಿಯೊದಲ್ಲಿ ಮೀಡಿಯಾ ಕುರಿತು ದರ್ಶನ್ ಆಡಿರುವ ಅಷ್ಟೂ ಮಾತುಗಳು ನಮ್ಮದೇ ಮಾತುಗಳಂತೆ ಭಾಸವಾಗುತ್ತವೆ. ಯಾಕೆಂದರೆ ಈಗ ಮೀಡಿಯಾಗಳು ತಮ್ಮ ವೃತ್ತಿಧರ್ಮ ಮರೆತು ಕೆಲವರ ಬಾಲಬಡುಕರಂತಾಗಿವೆ. ವ್ಯಕ್ತಿಪೂಜೆಗೆ ಮೀಸಲಾಗಿವೆ. ಸುಳ್ಳುಗಳನ್ನು ಅಥವಾ ತಮ್ಮವರ ಅನುಕೂಲಕ್ಕೆ ತಕ್ಕಂತೆ ಅರ್ಧ ಸತ್ಯಗಳನ್ನು ಉತ್ಪಾದಿಸುವ ಫ್ಯಾಕ್ಟರಿಗಳಾಗಿವೆ. ಈ ವಿಚಾರದಲ್ಲಿ ನಾವು ನೀವೆಲ್ಲ ಮೀಡಿಯಾಗಳನ್ನು ಬಾಯಿಗೆ ಬಂದಂತೆ ಬೈಯ್ಯುತ್ತಲೇ ಇರುತ್ತೇವೆ. ಇದೇ ಮಾತನ್ನು ಆಗಾಗ್ಗೆ ದರ್ಶನ್ ಕೂಡಾ ಹೇಳುತ್ತಿದ್ದ. ಆದರೆ ಆತ ಸೆಲೆಬ್ರಿಟಿಯಾಗಿರುವ ಕಾರಣಕ್ಕೆ ಆತನ ಮಾತುಗಳು ನಮ್ಮ ಮೀಡಿಯಾದವರು ತಳ ಉರಿಸುತ್ತಿದ್ದವು. ಆ ಉರಿಯೇ ಇವತ್ತಿನ ಅವರ ಸೇಡಿನ ಧಾಟಿಯ ವರದಿಗಾರಿಕೆಯಲ್ಲಿ ವ್ಯಕ್ತವಾಗುತ್ತಿರೋದು.

ಅಂದಹಾಗೆ, ಈ ವೀಡಿಯೊದಲ್ಲಿ ನಟ ದರ್ಶನ್ ತನ್ನ ತೋಟದಲ್ಲಾದ ಒಂದು ಘಟನೆ ಬಗ್ಗೆ ಪ್ರಸ್ತಾಪಿಸಿದ್ದಾನೆ. ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹೆಣ್ಣುಮಗಳೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರ ಮಾಡಿದ ಘಟನೆ ಅದು. ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡಿದ್ದ ದರ್ಶನ್, ನ್ಯಾಯಾಲಯದಲ್ಲಿ ಕೇಸನ್ನು ನಿರಂತರವಾಗಿ ಫಾಲೊ ಅಪ್ ಮಾಡಿ, ಅತ್ಯಾಚಾರಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಅದನ್ನೇ ಈ ವಿಡಿಯೊ ತುಣುಕಿನಲ್ಲಿ ಪತ್ರಕರ್ತರೆದುರು ಹೇಳಿಕೊಂಡಿದ್ದಾನೆ. ಹಾಗೆ ಹೇಳುವ ಕೊನೆಯಲ್ಲಿ ಆತನ ಒಂದು ಮಾತು ಇಂಟರೆಸ್ಟಿಂಗ್ ಅನ್ನಿಸುತ್ತೆ. “ಕೋರ್ಟಿನ ಈ ತೀರ್ಪು ಇನ್ನುಮುಂದೆ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಯೋಚಿಸುವ ಕಾಮುಕರಿಗೆ ಎಚ್ಚರಿಕೆಯ ಗಂಟೆಯಾಗಬೇಕು” ಎನ್ನುತ್ತಾನೆ ಆತ!

ಈಗ ದರ್ಶನ್ ಕೈಯಿಂದ ಕೊಲೆಯಾಗಿ ಹೋಗಿರುವ ಆ ವ್ಯಕ್ತಿ ಒಂದು ಹೆಣ್ಣಿನ ವಿಚಾರದಲ್ಲಿ ಇಷ್ಟೇ ಅಸಭ್ಯವಾಗಿ ವರ್ತಿಸಿದವನು. ಅಶ್ಲೀಲ ಮೆಸೇಜು ಕಳಿಸಿ, ಹೆಣ್ಣಿನ ಘನತೆಗೆ ಕುಂದು ತಂದವನು. ಇಲ್ಲಿ ದರ್ಶನ್ ಮಾಡಿದ್ದು ಸರಿ ಎಂದು ಹೇಳಲು ಸಾಧ್ಯವಿಲ್ಲವಾದರೂ, ದರ್ಶನ್ ಈ ಪ್ರಕರಣದಲ್ಲಿ ಟ್ರಿಗರ್ ಆಗಲು ಕಾರಣವೇನಿರಬಹುದು ಎಂದು ನಾವು ಅಂದಾಜಿಸಬಹುದು. ಈ ವೀಡಿಯೊದಲ್ಲಿರುವ ಆತನ ಕೊನೆಯ ಮಾತೇ ಇದಕ್ಕೆ ಸಾಕ್ಷಿ.

ಈ ಪ್ರಕರಣದ ನಂತರ ಅಥವಾ ಪ್ರಕರಣಕ್ಕೂ ಮೊದಲು, ದರ್ಶನ್ ಒಬ್ಬ ಕ್ರೂರಿ ಅಥವಾ ರೌಡಿ ಎಲಿಮೆಂಟ್ ಎಂಬ ತೀರ್ಮಾನಕ್ಕೆ ಬಂದಿರುವ ನಮ್ಮಲ್ಲಿ ಅದೆಷ್ಟು ಜನರಿಗೆ ಆತನ ವೈಯಕ್ತಿಕ ಪರಿಚಯವಿತ್ತು ಅಥವಾ ಒಡನಾಟವಿತ್ತು? ಮಾಧ್ಯಮಗಳು ಆತನನ್ನು ನಮ್ಮ ಮುಂದೆ ಹೇಗೆ ಪ್ರೊಜೆಕ್ಟ್ ಮಾಡುತ್ತಾ ಬಂದವು ಎನ್ನುವುದರ ಮೇಲೆ ಅಥವಾ ಹೆಚ್ಚೆಂದರೆ ಆತ ಸಿನಿಮಾಗಳಲ್ಲಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಪಾತ್ರಗಳ ಮೇಲೆ ನಾವು ಈ ಅಭಿಪ್ರಾಯಕ್ಕೆ ಬಂದಿದ್ದೇವೆ. ಇವತ್ತಿನ ಮೀಡಿಯಾಗಳನ್ನು ನಂಬಿಕೊಂಡು ನಾವು ಇಂತಹ ಅಭಿಪ್ರಾಯಕ್ಕೆ ಜಾರುವುದು ಸಮಂಜಸವೇ? ತಮಗೆ ಸರಿ ಅನ್ನಿಸಿದ ವ್ಯಕ್ತಿಯನ್ನು ಮೀಡಿಯಾಗಳು ವಿಶ್ವಗುರು ಎಂದು ಬಿಂಬಿಸುತ್ತವೆ, ಇಲ್ಲವಾದಲ್ಲಿ ಪಪ್ಪು ಎಂದು ಲೇವಡಿ ಮಾಡಿ ಸುದ್ದಿ ಹೆಣೆಯುತ್ತವೆ.

ಅಪಾರ್ಥಕ್ಕೆ ಆಸ್ಪದ ಬೇಡ. ದರ್ಶನ್ ಈ ಪ್ರಕರಣದಲ್ಲಿ ಮಾಡಿದ್ದು ಖಂಡಿತ ತಪ್ಪು. ಅದಕ್ಕೆ ತಕ್ಕ ಶಿಕ್ಷೆಯನ್ನು ಆತ ಅನುಭವಿಸಲೇಬೇಕು. ಇದರಲ್ಲಿ ಎರಡು ಮಾತಿಲ್ಲ. ಜೊತೆಗೆ, ಈ ಕೆಲವು ಏಕಮುಖ ಮೀಡಿಯಾಗಳ ಚಕ್ರವ್ಯೂಹದಿಂದ ನಮ್ಮನ್ನು ನಾವು ಬಿಡಿಸಿಕೊಳ್ಳುವ ಯತ್ನವನ್ನೂ ಮಾಡೋಣ. ಪ್ರತಿ ಸುದ್ದಿಯ ಎಲ್ಲಾ ಮಗ್ಗುಲುಗಳನ್ನೂ ಅರ್ಥ ಮಾಡಿಕೊಳ್ಳಲು ಯತ್ನಿಸೋಣ. ಇವತ್ತು ಕರ್ನಾಟಕದ ಹೈಕೋರ್ಟ್ ಕೂಡಾ ಇದೇ ಮಾತು ಹೇಳಿದೆ. `ಸಮಾಜದಲ್ಲಿ ಸಂಚಲನ ಉಂಟುಮಾಡುವ ಪ್ರಕರಣಗಳಲ್ಲಿ ಮಾಧ್ಯಮಗಳ ವಿಚಾರಣೆ ಸಲ್ಲದು’ ಅಂತ…

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!