Saturday, October 26, 2024

ಪ್ರಾಯೋಗಿಕ ಆವೃತ್ತಿ

ದೇವರ ಪಾತ್ರವೇನು ಈ ಚುನಾವಣಾ ಸಮಯದಲ್ಲಿ…….

✍️ ವಿವೇಕಾನಂದ ಎಚ್.ಕೆ

ಆತ ,
ನಿರ್ಣಾಯಕನೇ ?
ಪಾತ್ರದಾರಿಯೇ ?
ಸೂತ್ರದಾರಿಯೇ ?
ಪ್ರೇಕ್ಷಕನೇ ?
ರಕ್ಷಕನೇ ?
ಶಿಕ್ಷಕನೇ ?
ವಕ್ತಾರನೇ ?
ವೀಕ್ಷಕನೇ ?
ಅಗೋಚರನೇ ?
ಕಾಲ್ಪನಿಕನೇ ?
ಅಥವಾ
ಅವರವರ ಲಾಭಕ್ಕೆ ಉಪಯೋಗವಾಗುವ ಒಂದು ಅಮೂರ್ತ ಭಾವನೆಯೇ ?……..

ಉತ್ತರ ತುಂಬಾ ಕಷ್ಟ ಎಂದು ಹೇಳಬೇಡಿ. ವಿಷಯ ತುಂಬಾ ಸರಳವಿದೆ.

ಈ ವಾಸ್ತವಿಕ ಜಗತ್ತಿನ ದಿನನಿತ್ಯದ ವ್ಯವಹಾರಗಳನ್ನು ನೋಡಿದಾಗ………

ದೊಡ್ಡ ದೊಡ್ಡ ರಾಜಕಾರಣಿಗಳು ತಮ್ಮ ಮನೆಗಳಲ್ಲಿ ಬಹುದೊಡ್ಡ ಪೂಜೆಗಳನ್ನು ಮಾಡಿಸುತ್ತಾರೆ. ಇನ್ನೂ ಕೆಲವರು ಸಾರ್ವಜನಿಕವಾಗಿ ಬೃಹತ್ ದೇವರ ಉತ್ಸವಗಳನ್ನು ಕೈಗೊಳ್ಳುತ್ತಾರೆ. ಅದಕ್ಕಾಗಿ ಕೋಟ್ಯಾಂತರ ಹಣವನ್ನು ಖರ್ಚು ಮಾಡುತ್ತಾರೆ. ಆ ಹಣದ ಮೂಲ ಮತ್ತು ಪಾವಿತ್ರ್ಯತೆ ಅವರವರ ವಿವೇಚನೆಗೆ ಬಿಡುತ್ತಾ…..

ದೇವರೆಂಬ ನಂಬಿಕೆಯ ಒಂದು ಅಮೂರ್ತ ಶಕ್ತಿ ಈ ಕ್ಷಣದಲ್ಲಿ ಎಷ್ಟು ಶಕ್ತಿಶಾಲಿ ಎಂದರೆ, ಬಹುತೇಕ ಮಾನವ ಪ್ರಾಣಿಯ ರಕ್ತದ ಕಣಕಣದಲ್ಲೂ, ಪ್ರತಿ ಉಸಿರಿನಲ್ಲೂ, ನರನಾಡಿಗಳಲ್ಲೂ‌ ಸೇರಿಕೊಂಡು ಆತನ ಮೆದುಳು ಮತ್ತು ಹೃದಯವನ್ನು ಸಂಪೂರ್ಣ ನಿಯಂತ್ರಿಸುತ್ತಿದೆ.

ಅದಕ್ಕೆ ಪೂರಕವಾಗಿ ಮಂದಿರ ಮಸೀದಿ ಚರ್ಚುಗಳು,
ಪೂಜಾರಿ, ಮೌಲ್ವಿ, ಪಾದ್ರಿಗಳು,
ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮಗಳು, ಭಗವದ್ಗೀತೆ, ಖುರಾನ್ ಬೈಬಲ್‌ಗಳು, ಸೃಷ್ಟಿಯಾಗಿ ಇಡೀ ಸಮಾಜವನ್ನೇ ಆ ಶಕ್ತಿ ಆಕ್ರಮಿಸಿದೆ.

ಅಷ್ಟೇ ಏಕೆ, ಈ ಆಧುನಿಕ ಜಗತ್ತಿನಲ್ಲಿ ಸಂವಿಧಾನದ ಅಡಿ, ಚುನಾವಣೆಯಲ್ಲಿ ಮತದಾನದ ಮೂಲಕ ಆಯ್ಕೆಯಾಗುವ ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು, ವಿದ್ಯಾಭ್ಯಾಸದ ಅರ್ಹತೆಯ ಮುಖಾಂತರ ಆಯ್ಕೆಯಾಗುವ ಅಧಿಕಾರಿಗಳು, ತಮ್ಮ ಕೌಶಲ್ಯ ಸಾಮರ್ಥ್ಯ ಶ್ರಮದ ಮೂಲಕ ಸಾಧನೆ ಮಾಡುವ ಸಿನಿಮಾ ನಟರು, ಕ್ರೀಡಾ ಪಟುಗಳು, ಸಾಹಿತಿ ವಿಜ್ಞಾನಿಗಳು, ವೃತ್ತಿಪರರು ಎಲ್ಲರೂ ಈ ಕಾಲ್ಪನಿಕ ಅಮೂರ್ತ ದೈವಶಕ್ತಿಗೇ ಕೃತಜ್ಞತೆ ಸಲ್ಲಿಸಿ, ಅದರಿಂದಾಗಿಯೇ ತಾವು ಯಶಸ್ವಿಯಾಗಲು ಕಾರಣ ಎಂದೇ ಭಾವಿಸುತ್ತಾರೆ……

ಇನ್ನೂ ವಿಚಿತ್ರವೆಂದರೆ,
ಕೊಲೆಗಡುಕರು, ಅತ್ಯಾಚಾರಿಗಳು,
ಭ್ರಷ್ಟರು, ವಂಚಕರು, ಕಳ್ಳರು, ಮೋಸಗಾರರೂ ಸಹ ಈ ದೈವಶಕ್ತಿಯನ್ನು ನಂಬಿಯೇ, ಅದಕ್ಕೆ ನಮಸ್ಕರಿಸಿಯೇ ತಮ್ಮ ಕೆಲಸ ಮಾಡುತ್ತಾರೆ……..

ಇನ್ನೂ ಇನ್ನೂ ಇನ್ನೂ ವಿಚಿತ್ರವೆಂದರೆ,
ಒಂದು ವೇಳೆ ಯಾರಾದರೂ ದೇವರು ಇಲ್ಲ, ಅದೊಂದು ಕಾಲ್ಪನಿಕ ಮನೋ ನಿಯಂತ್ರಣ ಶಕ್ತಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ದೇವರನ್ನು ನಂಬುವ ಜನಗಳು, ಇಲ್ಲ ಎನ್ನುವವರನ್ನು ಮನಸ್ಸೋ ಇಚ್ಛೆ ನಿಂದಿಸಿ, ಅವಕಾಶ ಸಿಕ್ಕರೆ ಹಲ್ಲೆ ಮಾಡಿ, ತಾವು ಸಾಕ್ಷಾತ್ ಆ ದೇವರ ಪ್ರತಿನಿಧಿಗಳಂತೆ, ಆತನೇ ಇವರಿಗೆ ಅಧಿಕಾರ ಕೊಟ್ಟಂತೆ ಆಡುತ್ತಾರೆ…….

ಈ ಎಲ್ಲವುಗಳ ಅತಿರೇಕ ಈ ಚುನಾವಣಾ ಸಂದರ್ಭದಲ್ಲಿ ನೋಡಬಹುದು. ದೈವ ಶಕ್ತಿಯ ಕೇಂದ್ರಗಳು, ಭವಿಷ್ಯಕಾರರು ಈಗ ಅತ್ಯಂತ ಬೇಡಿಕೆಯಲ್ಲಿ ಇರುತ್ತಾರೆ. ಒಬ್ಬ ಅಭ್ಯರ್ಥಿಯ ಗೆಲುವು ಆತನ ಬದುಕನ್ನೇ ಉನ್ನತ ಸ್ಥಾನಕ್ಕೆ ಏರಿಸುವುದರಿಂದ ಆತ ಯಾವ ರೀತಿಯ ನಂಬಿಕೆಯನ್ನೂ ಪ್ರಶ್ನಿಸದೆ ಎಲ್ಲವನ್ನೂ ಒಪ್ಪಿಕೊಳ್ಳುತ್ತಾನೆ. ಇರುವ ಆಯ್ಕೆಯಲ್ಲಿ ಒಬ್ಬ ಗೆದ್ದರೆ‌ ಆತ ಮತದಾರನನ್ನು ಮರೆತು ದೈವಶಕ್ತಿಗೇ ಮಹತ್ವ ಕೊಡುತ್ತಾನೆ. ಏಕೆಂದರೆ
ಮನುಷ್ಯ ಪ್ರಾಣಿ ದೇವರ ಶಕ್ತಿಯ ಮುಂದೆ ತುಂಬಾ ಕ್ಷುಲ್ಲಕ ಎಂಬ ಅಭಿಪ್ರಾಯ ಅವನದು……..

ನಿಜವಾಗಿಯೂ ಆ ದೇವರೇ ಗೆಲ್ಲಿಸುವ ಶಕ್ತಿ ಹೊಂದಿದ್ದರೆ ಈ ಭ್ರಷ್ಟರು, ಸುಳ್ಳರು, ಮೂರ್ಖರನ್ನು ಗೆಲ್ಲಿಸುತ್ತಿದ್ದನೆ ?……

ಇದನ್ನು ಹೇಳಿದರೆ ಕೇಳುವವರಾರು ? ಎಲ್ಲರೂ ಚುನಾವಣೆ ಗೆಲ್ಲುವ ತಂತ್ರಗಳಲ್ಲಿ ನಿರತರಾಗಿದ್ದಾರೆ. ಅದಕ್ಕಾಗಿ ದೇವರಿಗೆ ಹೆಚ್ಚು ಹೆಚ್ಚು ಲಂಚ ಕೊಡುವ ಕೆಲಸದಲ್ಲಿ ತೊಡಗಿದ್ದಾರೆ……..

ಆದರು, ಕನಿಷ್ಠ ನಾವು ನೀವಾದರೂ ಸತ್ಯ ಮತ್ತು ವಾಸ್ತವದ ಹುಡುಕಾಟದಲ್ಲಿ ಒಂದಷ್ಟು ಯೋಚಿಸೋಣ……‌

ದೇವರು ವಾಸ್ತವದಲ್ಲಿ ಎಲ್ಲಿಯೂ ನೇರವಾಗಿ, ಸುಲಭವಾಗಿ, ಸರಳವಾಗಿ ತನ್ನ ಅಸ್ತಿತ್ವ ತೋರಿಲ್ಲ.‌ ಯಾವುದೋ ಗ್ರಂಥಗಳಲ್ಲಿ, ಕಲ್ಪನೆಗಳಲ್ಲಿ, ಕಥೆಗಳಲ್ಲಿ, ಮಾತುಗಳಲ್ಲಿ ಮಾತ್ರ ಉಲ್ಲೇಖವಿದೆ. ನೈಜವಾಗಿ ತನ್ನ ಅಸ್ತಿತ್ವ ಉಳಿಸಿಕೊಂಡಿರುವುದು ಮನುಷ್ಯ ಪ್ರಾಣಿ…..

ಆದ್ದರಿಂದ ಚುನಾವಣಾ ಸಮಯದಲ್ಲಿ ಮತ್ತು ಆಯ್ಕೆಯಾದ ನಂತರ ದಯವಿಟ್ಟು ನೀವು ನಾಗರಿಕ ಮನುಷ್ಯನ ರೀತಿ ನಿಮ್ಮ ಕಾರ್ಯ ನಿರ್ವಹಿಸಿ. ಭ್ರಷ್ಟರಾಗಬೇಡಿ. ಇಲ್ಲದ ದೇವರಿಗಿಂತ ಇರುವ ಮನುಷ್ಯನಿಗೆ ನಿಯತ್ತಾಗಿರಿ. ದೇವರ ಭಕ್ತಿಯ ನಾಟಕಕ್ಕಿಂತ ಇರುವ ಮನುಷ್ಯನ ಪ್ರೀತಿಗೆ ಹೆಚ್ಚು ಮಹತ್ವ ನೀಡಿ…..

ನಿಮ್ಮ ಅವಶ್ಯಕತೆ ಇರುವುದು ದೇವರಿಗಲ್ಲ ಮನುಷ್ಯನಿಗೆ. ನಿಮ್ಮ ಸೇವೆ ದೇವರಿಗಲ್ಲ ಮನುಷ್ಯನಿಗೆ ಮೀಸಲಿಡಿ. ದೇವರನ್ನು ಮೆಚ್ಚಿಸುವುದಕ್ಕಿಂತ ಮತದಾರನನ್ನು ಮೆಚ್ಚಿಸಿ. ನಿಮಗೆ ಓಟು ನೀಡಿ ಗೆಲ್ಲಿಸಿರುವುದು ಮತದಾರನೇ ಹೊರತು ದೇವರಲ್ಲ ಎಂಬ ಆತ್ಮಸಾಕ್ಷಿಯ ಮನಸ್ಸು ಸದಾ ನಿಮ್ಮದಾಗಿರಲಿ ಎಂದು ಮನವಿ ಮಾಡಿಕೊಳ್ಳುತ್ತಾ………

ದೇವರಿದ್ದರೆ ಇರಲಿ ಬಿಡಿ. ಆತನೇ ಎಲ್ಲವನ್ನೂ ನೋಡಿಕೊಳ್ಳುವನು. ಅವನಿಗೆ ನೀವು ಮೆಚ್ಚಿಸುವ ಅವಶ್ಯಕತೆ ಇಲ್ಲ. ಆತನಿಗೆ ಎಲ್ಲವೂ ತಿಳಿಯುತ್ತದೆ. ದಯವಿಟ್ಟು ನೀವು ಮತದಾರರನ್ನು ಮೆಚ್ವಿಸಿ ಸಾಕು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!