Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೋರಾಟಗಳೇಕೆ ಹೀಗಾಗುತ್ತಿವೆ?

ಮಾಚಯ್ಯ ಎಂ ಹಿಪ್ಪರಗಿ

ಹೋರಾಟಗಳಿಗೆ ತುಂಬಾ ಮುಖ್ಯವಾದುದು ಅಧ್ಯಯನ. ಆಗಿಹೋದ ಕಾಲವನ್ನು ಅಧ್ಯಯನ ಮಾಡಿದಾಗ ಮಾತ್ರ, ಈಗಿನ ಪರಿಸ್ಥಿತಿಗೆ ಹೇಗೆ ಪ್ರತಿಕ್ರಿಯಿಸಬೇಕು; ಅದರಿಂದ ಮುಂದಾಗುವ ಪರಿಣಾಮವೇನು ಎಂಬ ಸ್ಪಷ್ಟ ಚಿತ್ರಣ ಹೋರಾಟಗಳಿಗೆ ಲಭಿಸುತ್ತದೆ. ಹಾಗಾಗಿ ಓದು, ಅಧ್ಯಯನ ಅನ್ನೋದು ಹೋರಾಟಗಳ ಮೂಲಧಾತು. ಹೋರಾಟಗಾರರಿಗೆ ಇರಲೇಬೇಕಾದ ಅರ್ಹತೆ……. ಇಷ್ಟು ದಿನ ನಾನು ಹೀಗೆ ಅಂದುಕೊಂಡಿದ್ದೆ. ಆದರೆ ಯಾಕೋ ಈ ನನ್ನ ಅಭಿಪ್ರಾಯ ತಪ್ಪು ಎಂದೆನ್ನಿಸಲು ಶುರುವಾಗಿದೆ. ಅಂತಹ ಅಭಿಪ್ರಾಯದ ಮೂಲಕ ನಾನು ಇಷ್ಟು ದಿನ, ಅಕ್ಷರಜ್ಞಾನವಿಲ್ಲದಿದ್ದರೂ ತಮ್ಮ ಮಿತಿಯಲ್ಲಿ ಹೋರಾಟಗಳನ್ನು ರೂಪಿಸಿದ್ದ ಅನಕ್ಷರಸ್ಥ ಹೋರಾಟಗಾರರನ್ನು ಅವಮಾನಿಸುತ್ತಿದ್ದೆನಾ? ಎಂಬ ಪ್ರಜ್ಞೆ ಕಾಡಲಾರಂಭಿಸಿದೆ. ಹಾಗಾದರೆ ಹೋರಾಟಗಳ ದೃಷ್ಟಿಯಿಂದ ಓದಿಗಿಂತಲೂ, ಅಧ್ಯಯನ- ಪಾಂಡಿತ್ಯಕ್ಕಿಂತಲೂ ಮುಖ್ಯವಾದುದು ಯಾವುದು? ಕಾಮನ್‌ಸೆನ್ಸ್‌!

ಶಿಕ್ಷಣವು ಮನುಷ್ಯನ ತಿಳಿವಳಿಕೆ ಹೆಚ್ಚಿಸಬಹುದು, ಆತ್ಮವಿಶ್ವಾಸವನ್ನು ಹುಟ್ಟಿಸಬಹುದು, ಚಿಂತನೆಯನ್ನು ಮೊಳೆಸಬಹುದು. ಆದರೆ ಕಾಮನ್‌ಸೆನ್ಸ್‌ ಇಲ್ಲದೆಹೋದಲ್ಲಿ ಆ ತಿಳಿವಳಿಕೆ, ಆತ್ಮವಿಶ್ವಾಸ, ಚಿಂತನೆಗಳಿಗೆ ಏನು ಬೆಲೆ?

ಆದಿಮಾನವ ಬೆಂಕಿಯ ಮಹತ್ವವನ್ನು ಅರಿತಿದ್ದು ಹೇಗೆ? ಅದನ್ನು ನಿಯಂತ್ರಿಸಲು ಕಲಿತದ್ದು ಹೇಗೆ? ಅದರ ಪ್ರಯೋಜನಗಳೇನು? ಬೆಂಕಿಯ ಅವಘಡದ ಪರಿಣಾಮಗಳು ಏನು? ಬೆಂಕಿಯನ್ನು ಉತ್ಪಾದಿಸುವ ಬಗೆಗಳು ಯಾವುವು? ಮನುಷ್ಯನ ವಿಕಾಸದಲ್ಲಿ ಬೆಂಕಿಯ ಕೊಡುಗೆಯೇನು? ಎಂಬುದನೆಲ್ಲ ಓದಿ ತಿಳಿದ ನಂತರವೂ ಬೆಂಕಿಗೆ ಕೈಯಿಟ್ಟು ಸುಟ್ಟುಕೊಳ್ಳುವ ಪಾಂಡಿತ್ಯವಂತರ ಅವಿವೇಕಕ್ಕಿಂತ, ಬೆಂಕಿ ಜತೆ ಸರ್‍ಸ ಬ್ಯಾಡ ಕಣ್‌ ಮಗಾ’ ಎಂದು ಎಚ್ಚರಿಸುವ ನನ್ನ ಅನಕ್ಷರಸ್ಥ ಹಿರಿಯಜ್ಜಂದಿರ ಕಾಮನ್‌ಸೆನ್ಸ್‌ ಇವತ್ತಿನ ಹೋರಾಟಗಳಿಗೆ ಅಗತ್ಯವಿದೆ. ಯಾಕೆಂದರೆ, ಬದುಕಿನುದ್ದಕ್ಕೂ ಬೆಂಕಿಯನ್ನು ಪಳಗಿಸಿ, ಬಳಸಿಕೊಳ್ಳುತ್ತಾ ಬಂದ ಅವರು ಯಾವ ಮಿತಿಯ ಉಲ್ಲಂಘನೆಯನ್ನು ಸರ್‍ಸ’ ಎಂದು ಪರಿಗಣಿಸುತ್ತಾರೋ ಆ ಎಚ್ಚರವೇ ಕಾಮನ್‌ಸೆನ್ಸ್‌!

ಕಾಮನ್‌ಸೆನ್ಸ್‌ ಕಳೆದುಕೊಂಡ ಹೋರಾಟಗಾರರು ಎಷ್ಟೇ ಶಿಕ್ಷಣವಂತರಾಗಿದ್ದರೂ, ಅಧ್ಯಯನವಂತರಾಗಿದ್ದರೂ, ವಾಕ್ಪಟುಗಳಾಗಿದ್ದರೂ ಅವರು ಕಟ್ಟುವ ಹೋರಾಟಗಳು ಹೊಸ ವಿಸ್ತಾರಕ್ಕೆ ವ್ಯಾಪಿಸುವುದಿಲ್ಲ. ಹೊಸ ವಿಸ್ತಾರ ಎನ್ನುವುದು ಒಂದು ಹೋರಾಟದ ಬಲದ ಹಿಗ್ಗುವಿಕೆ ಮಾತ್ರವಲ್ಲ, ಒಳಗೊಳ್ಳುವಿಕೆಯ ಭಾಗವೂ ಆಗಿರುತ್ತದೆ. ಹೋರಾಟದ ಮೂಲಧಾತು ಎಷ್ಟೇ ಚಿಕ್ಕದಿರಲಿ ಅಥವಾ ಎಷ್ಟೇ ದೊಡ್ಡದಿರಲಿ, ಅದು ದಿನಕಳೆದಂತೆ ಹೊಸ ವಿಸ್ತಾರಕ್ಕೆ, ಅರ್ಥಾತ್ ಒಳಗೊಳ್ಳುವಿಕೆಗೆ ತೆರೆದುಕೊಳ್ಳದಿದ್ದರೆ ಅದು ತನ್ನ ಸ್ಥಾಯೀಗುಣದಿಂದ ಕೃಶವಾಗುತ್ತದೆ. ಹೋರಾಟಗಳು ವಿಸ್ತಾರದ ಗುಣ ತಳೆಯಬೇಕೆಂದರೆ, ಹೋರಾಟಗಾರರಾದವರಿಗೆ ಅಧ್ಯಯನದ ಜೊತೆಗೆ ಕಾಮನ್‌ಸೆನ್ಸ್‌ ಕೂಡಾ ಅಗತ್ಯವಾಗುತ್ತದೆ.

ಇತ್ತೀಚಿನ ಹೋರಾಟಗಾರರು ತುಂಬಾ ಓದಿಕೊಳ್ಳುತ್ತಿದ್ದಾರೆ; ಯಾವ ವಿಚಾರವಾದಿ, ತನ್ನ ಯಾವ ಕೃತಿಯ, ಎಷ್ಟನೇ ಪುಟದ, ಎಷ್ಟನೇ ಪ್ಯಾರಾದಲ್ಲಿ ಏನು ಹೇಳಿದ್ದಾರೆ ಎಂದು ನೆನಪಿಟ್ಟುಕೊಂಡು ವಾದಿಸುವಷ್ಟು ತೀಕ್ಷ್ಣಮತಿಗಳೂ ಆಗಿದ್ದಾರೆ….. ಆದರೆ ಯಾಕೋ, ಕಾಮನ್‌ಸೆನ್ಸ್‌ ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ಹೋರಾಟಕ್ಕಾಗಲಿ ಒಂದು ಮೂಲ ಉದ್ದೇಶ ಇರುತ್ತದೆ. ಮುಂಚಲನೆ ಅಥವಾ ಮೇಲ್ಚಲನೆ ಆ ಉದ್ದೇಶವಾಗಿರುತ್ತದೆ. ಆಗ ಮಾತ್ರ ಅದನ್ನೊಂದು ಹೋರಾಟ ಎನ್ನಬಹುದು. ಹೋರಾಟವನ್ನು ರೂಪಿಸುವಾಗ ಯಾವುದು ಮುಂಚಲನೆ ಎಂದು ಅರ್ಥ ಮಾಡಿಸುವುದೇ ನಮ್ಮ ಕಾಮನ್‌ಸೆನ್ಸ್‌. ಅಂತಹ ಮುಂಚಲನೆಯ ಆಶಯವಿಲ್ಲದ ಯಾವ ಹೋರಾಟಗಳೂ ಜನವಿಸ್ತಾರ ಗಳಿಸಿಕೊಳ್ಳಲಾರವು. ಒಳಗೊಳ್ಳುವಿಕೆ ಅಥವಾ ವಿಸ್ತಾರದ ಗುಣ ಹೊಂದಿರಲಾರವು. ಮುಂಚಲನೆಯಿಲ್ಲದ ಹೋರಾಟವನ್ನು ಕಟ್ಟಲು ಮುಂದಾಗುವ ಹೋರಾಟಗಾರರು ತಮ್ಮ ಜ್ಞಾನದ ಆಕರದಿಂದ ಏನೇನೊ ಸಮರ್ಥನೆಗಳನ್ನು, ವಾದಗಳನ್ನು, ಪುರಾವೆಗಳನ್ನು ಹೆಕ್ಕಿತೆಗೆದು ಪ್ರಸ್ತುತಪಡಿಸಬಹುದು; ಆದರೆ, ಕಾಮನ್‌ಸೆನ್ಸ್‌ನ ಒಂದು ಕೊರತೆ, ಅಷ್ಟೂ ಸಮರ್ಥನೆ, ವಾದ, ಪುರಾವೆಗಳನ್ನು ಅರ್ಥಹೀನವಾಗಿಸುತ್ತದೆ. ಕಾಮನ್‌ಸೆನ್ಸ್‌ ಇಲ್ಲದ ಹೋರಾಟಗಳು ಕೇವಲ ಲೆಕ್ಕಾಚಾರಗಳಾಗಿ ಉಳಿದುಬಿಡುತ್ತವೆ. ಲೆಕ್ಕಾಚಾರದಲ್ಲೇ ಕಳೆದುಹೋಗುತ್ತವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!