Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಗೆ ಯಾಕೆ ನಮ್ಮ ರಾಷ್ಟ್ರಧ್ವಜದ ಮೇಲೆ ತಾತ್ಸಾರ? ಗೋಳ್ವಾಲ್ಕರ್ ನಿಲುವೇನು? ಆರೆಸ್ಸೆಸ್ ಹಠವೇನು?

ಮಾಚಯ್ಯ ಎಂ ಹಿಪ್ಪರಗಿ

ಮಂಡ್ಯದ ಕೆರೆಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸುವ ಸ್ಥಂಭದಲ್ಲಿ ಭಗವಾ ಧ್ವಜ ಹಾರಿಸಬೇಕೆಂದು ಬಿಜೆಪಿ ಗಲಭೆ ಸೃಷ್ಟಿಸುತ್ತಿದೆ. ತಮ್ಮನ್ನು ತಾವು ಅಪ್ರತಿಮ ದೇಶಭಕ್ತರು ಎಂದು ಸ್ವಯಂ ಬ್ರ್ಯಾಂಡ್ ಮಾಡಿಕೊಳ್ಳುವ ಬಿಜೆಪಿಗರಿಗೆ ರಾಷ್ಟ್ರಧ್ವಜಕ್ಕಿಂತ ಭಗವಾಧ್ವಜವೇ ಹೆಚ್ಚಾಯಿತೆ!? ಹೀಗೆ ಆಶ್ಚರ್ಯಪಡುವುದರಲ್ಲಿ ಅರ್ಥವೇ ಇಲ್ಲ. ಯಾಕೆಂದರೆ, ಬಿಜೆಪಿಯಾಗಲಿ ಅದರ ಪೂರ್ವಾಶ್ರಮವಾದ ಜನಸಂಘವಾಗಲಿ ಹಾಗೂ ಮಾತೃಸಂಸ್ಥೆಯಾದ ಆರೆಸ್ಸೆಸ್ ಆಗಲಿ ಯಾವತ್ತೂ ಸ್ವಾತಂತ್ರ್ಯ ಚಳವಳಿಯನ್ನು ಗೌರವಿಸಿದವರಲ್ಲ; ರಾಷ್ಟ್ರಭಕ್ತಿಯನ್ನು ಮೆರೆದವರಲ್ಲ; ರಾಷ್ಟ್ರೀಯ ಲಾಂಭನಗಳನ್ನು ಗೌರವಿಸಿದವರೂ ಅಲ್ಲ. ದೇಶಭಕ್ತಿ, ರಾಷ್ಟ್ರಧ್ವಜ ಮತ್ತು ರಾಷ್ಟ್ರೀಯ ಲಾಂಛನಗಳೆಲ್ಲ ಅವರ ಪಾಲಿಗೆ ತಮ್ಮ ವಿಸ್ತರಣೆಯನ್ನು ಸಾಧಿಸಿಕೊಳ್ಳುವ ಪರಿಕರಗಳಷ್ಟೆ. ರಾಷ್ಟ್ರಧ್ವಜದ ಕುರಿತು ಆರೆಸ್ಸೆಸ್ ನಾಯಕರ ನಿಲುವೇನಾಗಿತ್ತು ಎಂಬುದನ್ನು ಅರ್ಥ ಮಾಡಿಕೊಂಡರೆ, ಇವತ್ತು ಮಂಡ್ಯದಲ್ಲಿ ಬಿಜೆಪಿ ಯಾಕೆ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಭಾಗವ ಧ್ವಜ ಹಾರಿಸಬೇಕೆಂದು ಹಠ ಮಾಡುತ್ತಿದೆ ಎಂಬುದು ಮನದಟ್ಟಾಗುತ್ತದೆ.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲೇ ಭಾರತೀಯರ ಐಕ್ಯತೆಯನ್ನು ಪ್ರತಿನಿಧಿಸಲು ಧ್ವಜವೊಂದರ ಅನಿವಾರ್ಯತೆ ಎದುರಾಗಿದ್ದಾಗ, ಪಿಂಗಾಳಿ ವೆಂಕಯ್ಯನವರು ಒಂದು ವಿನ್ಯಾಸವನ್ನು ಮುಂದಿಟ್ಟಿದ್ದರು. ಸ್ವಾತಂತ್ರ್ಯದ ಹೊತ್ತಿಗೆ ಅದರಲ್ಲಿ ಸಾಕಷ್ಟು ಮಾರ್ಪಾಟುಗಳಾಗಿ ಇವತ್ತಿನ, ಅಶೋಕ ಚಕ್ರವನ್ನೊಳಗೊಂಡ ತ್ರಿವರ್ಣ ಧ್ವಜವನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು. ಆದರೆ ಆರಂಭದಿಂದಲೇ ಆರೆಸ್ಸೆಸ್ ಮತ್ತು ಅದರ ನಾಯಕರು ತ್ರಿವರ್ಣ ಧ್ವಜವನ್ನು ಟೀಕಿಸುತ್ತಾ ಬಂದರು.

ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕರಾದ ಎಂ ಎಸ್ ಗೋಳ್ವಾಲ್ಕರ್ ಅವರು ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರದ ಧ್ವಜವೆಂದು ಒಪ್ಪಲು ಸಾಧ್ಯವಿಲ್ಲ ಎಂಬರ್ಥದ ಮಾತುಗಳನ್ನಾಡಿದ್ದರು. ತಮ್ಮ ‘ಬಂಚ್ ಆಫ್ ಥಾಟ್ಸ್’ ಕೃತಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.. “ನಮ್ಮ ನಾಯಕರು ನಮ್ಮ ರಾಷ್ಟ್ರಕ್ಕಾಗಿ ಹೊಸ ಧ್ವಜವನ್ನು ಆಯ್ಕೆ ಮಾಡಿದ್ದಾರೆ. ಯಾಕೆ ಹೀಗೆ ಮಾಡಿದರು? ಈ ಆಯ್ಕೆಯು ಕೇವಲ ಓಲೈಕೆ ಮತ್ತು ನಕಲು ಮಾಡಿದಂತೆ ಕಾಣುತ್ತದೆ. ಈ ರಾಷ್ಟ್ರಧ್ವಜ ಅಸ್ತಿತ್ವಕ್ಕೆ ಬಂದಿದ್ದಾದರೂ ಹೇಗೆ? ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ, ಫ್ರೆಂಚರು ತಮ್ಮ ಕ್ರಾಂತಿಯ ಆಶಯಗಳಾದ ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯವನ್ನು ಪ್ರತಿನಿಧಿಸುವ ಸಲುವಾಗಿ ಮೂರು ಬಣ್ಣಗಳ ಪಟ್ಟಿಯ ಧ್ವಜವನ್ನು ರೂಪಿಸಿಕೊಂಡರು. ಅಮೆರಿಕಾ ಕ್ರಾಂತಿಯು ಕೂಡಾ ಇದರಿಂದ ಪ್ರೇರಿತಗೊಂಡು, ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ತನ್ನ ಧ್ವಜ ರೂಪಿಸಿಕೊಂಡಿತು. ಈ ರೀತಿ ಮೂರು ಪಟ್ಟಿಗಳು ಅನ್ನೋದು ಒಂದು ಬಗೆಯ ವಶೀಕರಣದಂತೆ ಆಗಿಬಿಟ್ಟಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರೂ ಅದರ ಆಕರ್ಷಣೆಗೆ ಒಳಗಾಗಿ ಈ ತಿರಂಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ.”

ಹೀಗೆ ಬರೆಯುವ ಗೋಳ್ವಾಲ್ಕರ್, ಮುಂದುವರೆದು ತ್ರಿವರ್ಣ ಧ್ವಜವನ್ನು ಕೋಮುವಾದಿಯ ರೂಪ ಎಂದು ಜರಿದಿದ್ದರು. “ಇಲ್ಲಿರುವ ಮೂರು ಬಣ್ಣಗಳನ್ನು ವಿವಿಧ ಧರ್ಮಗಳ ಒಗ್ಗಟ್ಟಿನ ಸಂಕೇತವೆಂದು ಬಣ್ಣಿಸಲಾಗುತ್ತದೆ. ಕೇಸರಿ ಬಣ್ಣ ಹಿಂದೂಗಳನ್ನು ಪ್ರತಿನಿಧಿಸಿದರೆ, ಹಸಿರು ಬಣ್ಣ ಮುಸ್ಲಿಮರನ್ನು ಪ್ರತಿನಿಧಿಸುತ್ತದೆ. ಇನ್ನುಳಿದ ಎಲ್ಲಾ ಧರ್ಮಗಳನ್ನು ಬಿಳಿ ಬಣ್ಣ ಪ್ರತಿನಿಧಿಸುತ್ತದಂತೆ. ಹಿಂದೂ ಧರ್ಮವನ್ನು ಹೊರತುಪಡಿಸಿ, ಮುಸ್ಲಿಂ ಧರ್ಮವನ್ನೇ ಯಾಕೆ ನಿಖರವಾಗಿ ಉಲ್ಲೇಖಿಸುತ್ತಾರೆಂದರೆ ಇಲ್ಲಿ ದೊಡ್ಡದೊಡ್ಡ ಮುಸ್ಲಿಂ ನಾಯಕರು ಇರುವುದರಿಂದ! ಅವರನ್ನು ಹೊರಗಿಟ್ಟು ರಾಷ್ಟ್ರೀಯತೆಯನ್ನು ಕಾಂಗ್ರೆಸಿನವರಿಗೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ! ಕೆಲವರು ಈ ತ್ರಿವರ್ಣ ಧ್ವಜದ ಕೋಮುವಾದಿ ಗುಣವನ್ನು ಪ್ರಶ್ನೆ ಮಾಡಿದಾಗ, ಹೊಸ ವ್ಯಾಖ್ಯಾನೆಯನ್ನು ತೇಲಿಬಿಟ್ಟರು. ಕೇಸರಿ ತ್ಯಾಗದ ಪ್ರತೀಕ, ಬಿಳಿ ಶುದ್ಧತೆಯ ಪ್ರತೀಕ, ಹಸಿರು ಶಾಂತಿಯ ಪ್ರತೀಕ ಹೀಗೆ ಏನೇನೊ ಹೇಳುತ್ತಾರೆ..”

ಗೋಳ್ವಾಲ್ಕರ್ ಮಾತುಗಳನ್ನು ಸಾರಾಂಶದಲ್ಲಿ ನೋಡಿದಾಗ, ತ್ರಿವರ್ಣ ಧ್ವಜವನ್ನು ಅವರು ರಾಷ್ಟ್ರೀಯ ಅನನ್ಯತೆಯಾಗಿ ನೋಡದೆ ನಕಲು ರೂಪದಲ್ಲಿ ನೋಡಿದ್ದರು ಮತ್ತು ಅವರಿಗೆ ಅದರೊಳಗೆ ಮುಸ್ಲೀಮರನ್ನು ದ್ವೇಷಿಸಲು ಕೋಮುವಾದಿ ಅಂಶವೂ ಕಂಡಿತ್ತು!

ಆರೆಸ್ಸೆಸ್ ನಾಯಕರ ನಿಲುವು ಹೀಗೆ ಇದ್ದುದರಿಂದಲೇ, 1947ರಲ್ಲಿ, ಆರೆಸ್ಸೆಸ್‌ನ ಮುಖವಾಣಿಯಾದ ‘ದಿ ಆರ್ಗನೈಸರ್ ಪತ್ರಿಕೆಯು ತನ್ನ ಸಂಪಾದಕೀಯದಲ್ಲಿ ರಾಷ್ಟ್ರಧ್ವಜ ಕುರಿತು, “ಭಾರತೀಯ ನಾಯಕರು ನಮ್ಮ ಕೈಗೆ ತ್ರಿವರ್ಣ ಧ್ವಜವನ್ನು ಕೊಡಬಹುದು. ಆದರೆ ನಾವ್ಯಾವತ್ತೂ ಅದನ್ನು ಗೌರವಿಸುವುದಿಲ್ಲ ಮತ್ತು ಅದನ್ನು ಒಪ್ಪಿಕೊಳ್ಳುವುದೂ ಇಲ್ಲ. ಮೂರು ಎನ್ನುವ ಸಂಖ್ಯೆಯೇ ಒಂದು ಅಪಶಕುನ. ಹಾಗಾಗಿ ಮೂರು ವರ್ಣಗಳ ಈ ಧ್ವಜವು ತೀರಾ ಕೆಟ್ಟ ಮಾನಸಿಕ ಪರಿಣಾಮವನ್ನು ಉಂಟು ಮಾಡುತ್ತದೆ ಮತ್ತು ದೇಶಕ್ಕೆ ಹಾನಿಯುಂಟು ಮಾಡುತ್ತದೆ” ಎಂದು ಬರೆದುಕೊಂಡಿತ್ತು.

ಇಂಥಾ ನಿಲುವಿನ ಪರಿಣಾಮವಾಗಿಯೇ ನಾಗ್ಪುರದಲ್ಲಿರುವ ಆರೆಸ್ಸೆಸ್ ಕೇಂದ್ರ ಕಚೇರಿ ಮೇಲೆ ೫೨ ವರ್ಷಗಳ ಕಾಲ ನಮ್ಮ ರಾಷ್ಟ್ರಧ್ವಜವನ್ನೇ ಹಾರಿಸಿರಲಿಲ್ಲ. 2001ರ ಜನವರಿ 26ರಂದು ರಾಷ್ಟ್ರಪ್ರೇಮಿ ಯುವದಳದ ಮೂವರು ಕಾರ್ಯಕರ್ತರು, ಬಲವಂತವಾಗಿ ಆರೆಸ್ಸೆಸ್ ಕಚೇರಿಗೆ ನುಗ್ಗಿ, ಸಾಕಷ್ಟು ವಿರೋಧದ ನಡುವೆಯೂ ಅದರ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ಆರೆಸ್ಸೆಸ್‌ಗೆ ಸೆಡ್ಡು ಹೊಡೆದಿದ್ದರು. ಅವರ ಮೇಲೆ ಆರೆಸ್ಸೆಸ್ ಕೇಸು ಕೂಡಾ ದಾಖಲಿಸಿತ್ತು. ಅದಾದ ನಂತರವೇ ಆರೆಸ್ಸೆಸ್, ಅನಿವಾರ್ಯವಾಗಿ ರಾಷ್ಟ್ರಧ್ವಜವನ್ನು ಹಾರಿಸಲು ಮುಂದಾದದ್ದು.

ಅಷ್ಟಾದರೂ ಆರೆಸ್ಸೆಸ್‌ಗೆ ನಮ್ಮ ರಾಷ್ಟ್ರಧ್ವಜದ ಮೇಲೆ ಗೌರವ ಬಂದಿಲ್ಲ. ತೀರಾ ಇತ್ತೀಚಗೆ, ಅಂದರೆ 2015ರಲ್ಲಿ ಆರೆಸ್ಸೆಸ್, “ನಮ್ಮ ರಾಷ್ಟ್ರಧ್ವಜದಲ್ಲಿರುವ ಕೇಸರಿ ಬಣ್ಣ ಮಾತ್ರವೇ ನಿಜವಾದ ಬಣ್ಣ, ಇನ್ನುಳಿದ ಎಲ್ಲಾ ಬಣ್ಣಗಳು ನಮ್ಮಲ್ಲಿ ಕೋಮುಭಾವನೆ ಹುಟ್ಟಿಸುತ್ತವೆ” ಎಂದು ಹೇಳಿಕೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

ಕೇವಲ ಮುಸ್ಲಿಂ ಆಯಾಮದ ಹಸಿರು ಬಣ್ಣವಿರುವುದು ಮಾತ್ರವಲ್ಲ, ಮಧ್ಯದಲ್ಲಿ ನೀಲಿ ವರ್ಣದಿ ರಾರಾಜಿಸುವ ಚಕ್ರ ಕೂಡಾ ಆರೆಸ್ಸೆಸ್ ನಮ್ಮ ರಾಷ್ಟ್ರಧ್ವಜವನ್ನು ದ್ವೇಷಿಸಲು ಇರುವ ಮತ್ತೊಂದು ಕಾರಣ. ಯಾಕೆಂದರೆ ಇದು ಸಾರಾನಾಥದಲ್ಲಿರುವ ಅಶೋಕ ಸ್ತಂಭದ ಚಕ್ರದ ಪ್ರತಿರೂಪ. ಅಶೋಕ, ಬುದ್ಧನ ಅನುಯಾಯಿ. ಬುದ್ಧ, ವೈದಿಕ ಧರ್ಮದ ವರ್ಣಾಶ್ರಮ ಮೌಢ್ಯದ ವಿರುದ್ಧ ವಿಚಾರವಂತಿಕೆಯ ಹೊಸ ಧರ್ಮವನ್ನು ಹುಟ್ಟುಹಾಕಿದ ಮಹಾನುಭವ. ಸನಾತನತೆಯ ಹೆಸರಲ್ಲಿ ವೈದಿಕ ಧರ್ಮ, ವರ್ಣಾಶ್ರಮವನ್ನು ಆರಾಧಿಸುವ ಆರೆಸ್ಸೆಸ್‌ಗೆ ನಮ್ಮ ರಾಷ್ಟ್ರಧ್ವಜ ರುಚಿಸುವುದಾದರೂ ಹೇಗೆ?

ಜನರ ನಡುವೆ ಮನ್ನಣೆ ಗಳಿಸಿಕೊಳ್ಳಬೇಕೆಂಬ ಏಕೈಕ ಕಾರಣಕ್ಕೆ, ತಮಗಿಷ್ಟವಿಲ್ಲದಿದ್ದರೂ ಆರೆಸ್ಸೆಸ್ ಮತ್ತು ಬಿಜೆಪಿ ತ್ರಿವರ್ಣ ಧ್ವಜವನ್ನು ಒಪ್ಪಿಕೊಂಡಂತೆ, ಗೌರವಿಸುವಂತೆ ನಾಟಕವಾಡುತ್ತಾ ಬಂದಿವೆಯಷ್ಟೆ. ಅವಕಾಶ ಸಿಕ್ಕಾಗ, ರಾಷ್ಟ್ರಧ್ವಜವನ್ನು ಅವಮಾನಿಸುವ ಕೆಲಸವನ್ನು ಮಾಡುತ್ತಲೇ ಬಂದಿವೆ. ಕೆರೆಗೋಡಿನಲ್ಲಿ ರಾಷ್ಟ್ರಧ್ವಜ ಸ್ತಂಭದಲ್ಲಿ ಭಗವಾ ಧ್ವಜ ಹಾರಿಸಬೇಕೆಂದು ಬೆಂಕಿ ಹಚ್ಚುತ್ತಿರುವುದು ಇದಕ್ಕೊಂದು ತಾಜಾ ಉದಾಹರಣೆಯಷ್ಟೆ…

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!