Thursday, September 19, 2024

ಪ್ರಾಯೋಗಿಕ ಆವೃತ್ತಿ

ಬುದ್ಧವಾಗದೆ- ಸಮಾಜವಾದಿಯಾಗದೆ…. ಭಾರತ ಒಕ್ಕೂಟವಾಗುವುದೇ?

ಶಿವಸುಂದರ್

ಕೇಳಿಕೊಳ್ಳಲೇಬೇಕಾದ ಕೆಲವು ಕಟು ಪ್ರಶ್ನೆಗಳು

ಭಾರತವನ್ನು ಒಂದು ನೈಜ ಒಕ್ಕೂಟವಾಗಿ ಮರು ರೂಪಿಸಿಕೊಳ್ಳಬೇಕೆಂಬ ಅತ್ಯಂತ ಸ್ವಾಗತಾರ್ಹ ಚಿಂತನೆಗಳು ನಡೆಯುತ್ತಿರುವ ಹೊತ್ತಿನಲ್ಲಿ..

ಹಲವು ಕಟು ಪ್ರಶ್ನೆಗಳನ್ನು ನಮ್ಮನ್ನು ನಾವು ಕೇಳಿಕೊಳ್ಳಬೇಕಿದೆ.

ಭಾರತವು ಈಗಿರುವ ಪರಿಸ್ಥಿತಿಗೆ ಬಂದು ತಲುಪಲು ಹಿಂದೂತ್ವವಾದಿ ಫ್ಯಾಶಿಷ್ಟರೇ ಪ್ರಧಾನ ಕಾರಣವಾದರೂ, ಅದಕ್ಕೆ ಬೇಕಾದ ಭೂಮಿಕೆಯನ್ನು ಈ ಹಿಂದೆ ಆಡಳಿತ ಮಾಡಿದ ಎಲ್ಲಾ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಕೂಡ ಕಾರಣವಾಗಿವೆ ಎಂಬುದನ್ನು ಮರೆಯಲಾಗದು.

ಹೀಗಾಗಿ ಸಮಸ್ಯೆಯ ಭಾಗವಾಗಿರುವ ಅವುಗಳ ರಾಜಕೀಯ ಪರಿಹಾರದ ಭಾಗವಾಗಬಹುದೇ?

ಅಷ್ಟು ಮಾತ್ರವಲ್ಲ….

ಇನ್ನೂ ಆಳವಾಗಿ ನೋಡಿದರೆ ಭಾರತದ ಇಂದಿನ ಪರಿಸ್ಥಿತಿಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಧಾನ ಧಾರೆಯಾಗಿದ್ದ..

ಉದಾರವಾದಿ ಭಾರತೀಯ ರಾಷ್ಟ್ರವಾದದ ಹಲವು ಅಂಶಗಳು ಮತ್ತು ಅದರಿಂದಾಗಿ ಸಂವಿಧಾನದಲ್ಲೇ ಸೇರಿಕೊಂಡ ಕೇಂದ್ರೀಕರಣ ಪರ ಧೋರಣೆಗಳೂ ಕಾರಣವಾಗಿಲ್ಲವೇ?

75 ವರ್ಷಗಳ ನಂತರ ಹಿಂತಿರುಗಿ ನೋಡಿದರೆ ಅದು ಈಗ ಸ್ಪಷ್ಟವಾಗಿ ಕಣ್ಣಿಗೆ ರಾಚುತ್ತದೆ.

1.ನಮ್ಮ ಸಂವಿಧಾನ ಕರ್ತರು ಭಾರತವನ್ನು Federation of States ಆಗಿ ರೂಪಿಸದೆ Union of States ಆಗಿ ರೂಪಿಸಿದ್ದರಲ್ಲೇ ಇಂದಿನ ಅತಿರೇಕದ ಮೂಲಗಳಿಲ್ಲವೇ?

Union Of States ಅಂದರೆ federal ಎಂಬರ್ಥದ ರಾಜ್ಯಗಳ ಒಕ್ಕೂಟವಲ್ಲ. …

ಅದನ್ನು ಪ್ರಶ್ನಿಸಿ ಬದಲಿಸಿದ ಹೊರತು ಇಂದಿನ ಕೇಂದ್ರದ ಫ್ಯಾಶಿಸ್ಟ್ ಏಕಾಧಿಪತ್ಯ ತಪ್ಪುವುದಿಲ್ಲ…

2.ಈ ಕಾರಣದಿಂದಾಗಿಯೇ ನಮ್ಮ ಸಂವಿಧಾನದಲ್ಲೇ ಬಲವಾದ ಕೇಂದ್ರೀಕರಣಕ್ಕೆ ಪೂರಕವಾದ ಹಲವಾರು ಅಂಶಗಳಿವೆ. ರಾಜ್ಯಗಳು ಮತ್ತು ರಾಷ್ಟ್ರೀಯತೆಗಳು ಇಂಥಾ ಏಕಾಧಿಪತ್ಯದ ವಿರುದ್ಧ ಹೋರಾಡಿದಾಗ ಆನಂದ್ ಸಾಹಿಬ್ ಒಪ್ಪಂದ, ಸರ್ಕಾರಿಯಾ ಆಯೋಗ ಇತ್ಯಾದಿಗಳು ರೂಪುಗೊಂಡರೂ ಅವುಗಳ ಯಾವ ಶಿಫಾರಸ್ಸುಗಳೂ ಜಾರಿಯಾಗಲಿಲ್ಲ. ಮತ್ತೊಂದು ಕಡೆ ಸುಪ್ರೀಂಕೋರ್ಟ್ ಬೊಮ್ಮಾಯಿಯಂಥಾ ಪ್ರಕರಣಗಳಲ್ಲಿ ರಾಜ್ಯಪಾಲರ ಸ್ವೇಚ್ಛೆಗೆ ಕೆಲವು ಕಡಿವಾಣ ಹಾಕಿದರೂ . ಕೇಂದ್ರದ ಏಕಾಧಿಪತ್ಯ ತಪ್ಪಲಿಲ್ಲ. ಏಕೆಂದರೆ ನಮ್ಮ ಸಂವಿಧಾನದ ಪ್ರಧಾನ ಆಶಯವೆ ಪ್ರಬಲ ಕೇಂದ್ರದ ಪರವಾಗಿದೆ. .

3.ಈ ದೇಶದ ಉದಾರವಾದಿ ಸಂವಿಧಾನ ಕರ್ತರ ಭಾರತ ರಾಷ್ಟ್ರದ ಪರಿಕಲ್ಪನೆಗೂ ಮತ್ತು ಸಂಘಿ ಫ್ಯಾಶಿಷ್ಟರ ಹಿಂದೂ ರಾಷ್ಟ್ರ ಪರಿಕಲ್ಪನೆಗೂ ಹಲವು ಮೂಲಭೂತ ವ್ಯತ್ಯಾಸಗಳಿದ್ದರೂ …

….. ದುರದೃಷ್ಟವಶಾತ್ ಏಕಾಧಿಪತ್ಯವನ್ನು ಗಟ್ಟಿಗೊಳಿಸುವ, ಹೇರುವ ಹಲವಾರು ಅಂಶಗಳು ಉದಾರವಾದಿ ಭಾರತ ರಾಷ್ಟ್ರ ಕಲ್ಪನೆಯಲ್ಲೂ ಇದ್ದೆ ಇವೇ…

ಆದ್ದರಿಂದಲೇ ಸ್ವಾತಂತ್ರ್ಯಾ ನಂತರದ ಮೊದಲ ನಾಲ್ಕು ದಶಗಳಲ್ಲಿ ಹಿಂದೂ ರಾಷ್ಟ್ರೀಯವಾದ ಭಾರತದ ರಾಜಕಾರಣದಲ್ಲಿ ಅಷ್ಟು ಗಟ್ಟಿಯಿಲ್ಲದಿದ್ದರೂ, ಉದಾರವಾದಿ ಭಾರತೀಯ ರಾಷ್ಟ್ರವಾದವೇ ಬಹುತ್ವದ ಹಾಗೂ ಸ್ವಾಯತ್ತತೆ ಮತ್ತು ಸ್ವ ನಿರ್ಣಯದ ಪ್ರತಿಪಾದನೆಗಳನ್ನು ರಾಷ್ಟ್ರದ್ರೋಹಿ ಎಂದು ಬಗ್ಗು ಬಡಿಯಲು ಯತ್ನಿಸಿತ್ತು.

ಕಾಶ್ಮೀರ , ಈಶಾನ್ಯ ರಾಜ್ಯಗಳ ದಮನ, ಹಿಂದಿ ಹೇರಿಕೆ ಇತ್ಯಾದಿಗಳು ಇದರ ಉಗ್ರ ರೂಪಗಳು

ಇವಲ್ಲದೆ ವ್ಯಸ್ಥಿತವಾಗಿ ಮತ್ತು ಸಾಂವಿಧಾನಿಕವಾಗಿಯೂ ರಾಜ್ಯಗಳನ್ನು ಬಡಕಲು ಮಾಡುವ ಸಾಂವಿಧಾನಿಕ ರಚನೆಗಳೇ ಕೇಂದ್ರವನ್ನು ಬಲಿಷ್ಠವಾಗಿಸಿದವು. ರಾಜ್ಯಪಾಲ, IAS-IPS-IFSಇತ್ಯಾದಿಗಳ ಮೂಲಕ ರಾಜ್ಯದ ಮೇಲೆ ಕೇಂದ್ರ ನಿಯಂತ್ರಣ, ಹಣಕಾಸು, ತೆರಿಗೆ ಸಂಗ್ರಹ ಹಂಚಿಕೆಯಲ್ಲಿ ಕೇಂದ್ರದ ಪಾರಮ್ಯ , ಇದೀಗ ಎಲ್ಲಾ ಪಕ್ಷಗಳು ಒಪ್ಪಿಕೊಂಡೆ ಜಾರಿಗೆ ಬಂದಿರುವ GST…..

…..1975 ರಿಂದಲೂ ಸಮವರ್ತಿ ಪಟ್ಟಿಗಳ ನಿರಂತರ ವಿಸ್ತರಣೆ ಅಥವಾ ರಾಜ್ಯಗಳ ಪಟ್ಟಿಯ ಅತಿಕ್ರಮಣ, ರಾಷ್ಟ್ರೀಯ ಭದ್ರತೆಯ ಹೆಸರಲ್ಲಿ ಕರಾಳ ಕಾನೂನುಗಳ ರಚನೇ ಅದಕ್ಕೆ ಎಲ್ಲಾ ಪಕ್ಸಗಳ ಬೆಂಬಲ … ಇತ್ಯಾದಿ.. ಇತ್ಯಾದಿ…

ಅವನ್ನು ಗುರುತಿಸದೆ, ಬದಲಾಯಿಸದೆ ಭಾರತ ಫೆಡರಲ್ ಆಗದು..

4.ಹಾಗೆಯೇ…ಸಂವಿಧಾನದಲ್ಲಿ ಅಡಕವಾದ ಭಾರತ ರಾಷ್ಟ್ರ ಕಲ್ಪನೆಯಲ್ಲಿ ಹಲವು ಹಿಂದುತ್ವವಾದಿ ಅಂಶಗಳು ಮೊದಲಿಂದಲೂ ಇವೇ…

ಹಿಂದೂಸ್ಥಾನಿಯ ಬದಲು ಸಂಸ್ಕೃತ ಭೂಯಿಸ್ಟ ದೇವನಾಗರಿ ಲಿಪಿಯ ಹಿಂದಿಯ ಉತ್ತೇಜನ ಮತ್ತು ಅದಕ್ಕೆ ರಾಜ್ ಭಾಷ ಸ್ಥಾನ, ಗೊಹತ್ಯೆ ನಿಷೇಧವು ಭಾವಿ ಭಾರತದ ಆಶಯವಾಗಿ ಆರ್ಟಿಕಲ್ 48 ಆಗಿ ಸೇರಿರುವುದು, ಕಾಂಗ್ರೆಸ್ ಕಾಲದಿಂದಲೂ ಹಿಂದಿ ಉತ್ತೇಜನ ದೇಶದ ಐಕ್ಯತೆ ಮತ್ತು ಸಮಗ್ರತೆಯ ವಿಷಯವಾಗಿರುವುದು… ಇತ್ಯಾದಿಗಳು

5.ಮೋದಿ ಇಂದು ಮಾಡುತ್ತಿರುವ ಸೆಸ್ ಸುಲಿಗೆ, ವಿತ್ತೀಯ ಅನ್ಯಾಯದ ಮೂಲಗಳೂ ಸಹ 1991 ರ ನಂತರ ಕಾಂಗ್ರೆಸ್ ನೇತೃತ್ವದಲ್ಲಿ ಬಿಜೆಪಿಯು ಒಳಗೊಂಡು ಎಲ್ಲಾ ಪಕ್ಷಗಳು ಸರ್ವ ಸಮ್ಮತಿಯಿಂದ ಜಾರಿ ಮಾಡಿದ ಕಾರ್ಪೊರೇಟ್ ಪರ ವಿತ್ತೀಯ ನೀತಿಗಳಲ್ಲೇ ಇದೆ.

ಅದರ ಮುಂದುವರಿಕೆಯಾಗಿ 2000 ದಲ್ಲಿ ವಾಜಪೇಯಿ ನೇತೃತ್ವದ NDA ಸರ್ಕಾರ ಸೆಸ್ ಸುಲಿಗೆಗೆ 80 ನೇ ಸಂವಿಧಾನಾತ್ಮಕ ತಿದ್ದುಪಡಿಯನ್ನು ತಂದು ಶಾಸನಾತ್ಮಕಗೊಳಿಸಿತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಆದಿಯಾಗಿ ಎಲ್ಲರೂ ಅದನ್ನುಬೆಂಬಲಿಸಿದ್ದರು . 2004-14 ರ ಅವಧಿಯಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದರೂ ಅದನ್ನು ಬದಲಿಸಲಿಲ್ಲ.

ಈಗ ಅದು ಮೋದಿ ಕಾಲದಲ್ಲಿ ಅತಿರೇಕಕ್ಕೆ ಹೋಗಿದೆ..

ಹಾಗೆಯೇ ರಾಜ್ಯಗಳ ವಿತ್ತೀಯ ನಿರ್ವಹಣೆಯನ್ನು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ತಕ್ಕಂತೆ ನಿಯಂತ್ರಸುವ Fiscal Resposibility and Budget Management Act ಅನ್ನು 2003 ರಲ್ಲಿ ವಾಜಪೇಯಿ ಸರ್ಕಾರ ಕಾಂಗ್ರೆಸ್ಸಿನ ಬೆಂಬಲದೊಂದಿಗೆ ದೇಶಾದ್ಯಂತ ಜಾರಿಗೆ ತಂದಿತು. ಅದರ ಪರಿಣಾಮವೇ ಇಂದಿನ ಕಾರ್ಪೊರೇಟ್ ಪರ ವಿತ್ತೀಯ ಕೇಂದ್ರೀಕರಣ

6.ಇದಲ್ಲದೆ ವಿತ್ತೀಯ ಅಸಮತೋಲನದ ಪ್ರಶ್ನೆ ಬಂದಾಗ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ರಾಜ್ಯಗಳು ಬ್ರಾಹ್ಮಣಿಯ meritocrats ತರ ಮತ್ತು ಸ್ವ ಶ್ರಮದಿಂದಲೇ ಮೇಲೆ ಬಂದವೆಂದು ವಾದ ಮಾಡುವ ಸೋಗಲಾಡಿ ಬಂಡವಾಳಶಾಹಿಗಳ ಮಾತಾಡುವುದು ಸರಿಯೇ ಎಂಬುದು ಕೂಡ ದಕ್ಷಿಣರಾಜ್ಯಗಳ ಏಕಾಧಿಪತ್ಯ ವಿರೋಧಿ ಹೋರಾಟಗಾರರ ಆತ್ಮ ವಿಮರ್ಶೆಯ ವಸ್ತುವಾಗಬೇಕಲ್ಲವೇ? .

ಏಕೆಂದರೆ …

-ಕೇಂದ್ರ ದಕ್ಷಿಣದ ಪಾಲನ್ನು ಕೊಡದೆ ತನ್ನ ಕ್ರೋನಿ ಸ್ನೇಹಿತರಿಗೆ ಕೊಡುತ್ತಿದೆಯೇ ವಿನ ಉತ್ತರದ ಬಡ ರಾಜ್ಯಗಳನ್ನು ಉದ್ದಾರ ಮಾಡುತ್ತಿದೆಯೇ?

-ಕರ್ನಾಟಕದ ಪಾಲು ಎಂದು ಕೇಳುವಾಗ ಇಲ್ಲಿ ನೋಂದಾಯಿತವಾದ ಕಂಪನಿಗಳು ಇಲ್ಲಿಂದ ಕಾರ್ಪೋರೆಟ್ ತೆರಿಗೆ ಕಟ್ಟುತ್ತಾವಾದರೂ ಅವುಗಳ ಒಟ್ಟು ಆದಾಯ ಸಂಚಿತವಾಗುವುದು ಇಡೀ ದೇಶಾದ್ಯಂತ ವಹಿವಾಟು ನಡೆಸಿದ್ದರಿಂದಲ್ಲವೇ?

-ಸ್ವತಂತ್ರ್ಯದ ಮೊದಲ ದಶಕಗಳಲ್ಲಿ ದೇಶದ ಅಭಿವೃದ್ಧಿಯ ಹೆಸರಿನಲ್ಲಿ ಖನಿಜ ಶ್ರೀಮಂತ ರಾಜ್ಯಗಳನ್ನು ಸುಲಿಗೆ ಮಾಡಿದ್ದು ಕೂಡ ಇವತ್ತು ಅವು ‘bimaru’ ಆಗಿಯೇ ಉಳಿದಿರುವುದಕ್ಕೆ ಕಾರಣವಲ್ಲವೇ?

ಹೀಗಾಗಿ ವಿತ್ತೀಯ ಹಂಚಿಕೆಯ ಅಸಮಾನತೆಯ ಸಮಸ್ಯೆ ಎಂಬುದು ..

ಉತ್ತರ ವರ್ಸಸ್ ದಕ್ಷಿಣದ ಸಮಸ್ಯೆ ಅಲ್ಲ

ಬದಲಿಗೆ..

ಕಾರ್ಪೊರೇಟ್ ಬಂಡವಾಳವಾದಿ ಪರ ಕೇಂದ್ರ ವರ್ಸಸ್ ಭಾರತದ ಎಲ್ಲ ಜನರ ಸಮಸ್ಯೆ

6.ಬೇರೊಂದು ಸಮಸ್ಯೆಯೂ ಇದೆ.

ಉದಾಹರಣೆಗೆ ಪ್ರಾತಿನಿಧಿಕ ಪ್ರಜಾಪ್ರಭುತ್ವದಲ್ಲಿ ಸಮಾನ ಜನಸಂಖ್ಯೆಗೆ ಸಮಾನ ಜನಪ್ರತಿನಿಧಿಗಳಿರಬೇಕು. ಅದು ನೈಜ ಪ್ರಜಾತಾಂತ್ರಿಕ ವಿಧಾನ . ಅದಕ್ಕೆ ಕಾಲಕಾಲಕ್ಕೆ delimitation ಆಗಬೇಕು..

ಆದರೆ ಇದರಿಂದ ದಕ್ಷಿಣದ ಪ್ರಾತಿನಿಧ್ಯದ ಅಸಮತೋಲನವಾಗುತ್ತದೆ…

ಹಾಗಾಗದಂತೆ delimitation ಮಾಡುವುದು ಹೇಗೆ ಅನ್ನುವುದು ನಮ್ಮ ಮುಂದಿರುವ ಪ್ರಶ್ನೆಯಾಗಬೇಕೆ ವಿನ ಅದನ್ನು ವಿರೋಧಿಸುವುದಲ್ಲ.. ಅಲ್ಲವೇ?

7.ಹೀಗಾಗಿ ಇಂದಿನ ಒಕ್ಕೂಟ ವಿರೋಧಿ ಏಕಾಧಿಪತ್ಯದ ಸಂದರ್ಭಕ್ಕೆ ಎಲ್ಲಾ ಪಕ್ಷಗಳು ಅನುಸರಿಸುತ್ತಾ ಬಂದಿರುವ ಬಂಡವಾಳ ಶಾಹಿ ಹಾಗೂ ಬ್ರಾಹ್ಮಣಶಾಹಿ ಕೇಂದ್ರೀಕರಣವೇ ಪರ ನೀತಿಗಳು ಕಾರಣವಲ್ಲವೇ?

ಆಡಳಿತ, ಸಂಸ್ಕೃತಿ ಮತ್ತು ರಾಜಕೀಯದಲ್ಲಿ ಹೆಚ್ಚುತ್ತಿರುವ ಬಹುತ್ವ ವಿರೋಧಿ ಏಕಾಧಿಪತ್ಯಾ ಧೋರಣೆಗೂ ಇದಕ್ಕೂ ನೇರ ಸಂಬಂಧವಿಲ್ಲವೇ?

8.ಆದ್ದರಿಂದ ಮೋದಿ ಕಾಲದ ಫ್ಯಾಶಿಸ್ಟ್ ಅತಿರೇಕಗಳನ್ನು ವಿರೋಧಿಸಲೇ ಬೇಕು..

ಅದು ಇಂದಿನ ಪ್ರಧಾನ ಶತ್ರು.

ಆದರೆ ಅದಕ್ಕೆ ಪ್ರತಿಯಾಗಿ ನೈಜ ಪರ್ಯಾಯವನ್ನು ಕಟ್ಟಿಕೊಳ್ಳಬೇಕೆಂದರೆ…

ಹಿಂದೂತ್ವ ರಾಷ್ಟ್ರದ ಪರಿಕಲ್ಪನೆಯಲ್ಲಿ ಮಾತ್ರವಲ್ಲದೆ, ಉದಾರವಾದಿ ಭಾರತ ರಾಷ್ಟ್ರ ಪರಿಕಲ್ಪನೆಯಲ್ಲೂ ಅಡಕವಾಗಿರುವ ಗುಪ್ತ ಏಕವಾದಿ ಭಾರತ ರಾಷ್ಟ್ರ ನಿರ್ಮಾಣದ ಅಂಶಗಳನ್ನು , ಸಂವಿಧಾನದಲ್ಲಿ, ಅಂತರ್ಗತವಾಗಿರುವ ಏಕಾಧಿಪತ್ಯವಾದಿ ಧೋರಣೆಗಳನ್ನು ನಿವಾರಿಸಿಕೊಳ್ಳಬೇಕಲ್ಲವೇ?

ಸ್ವಾಯತ್ತ, ಬಲಿಷ್ಠ, ವ್ಯಕ್ತಿ ಘನತೆ , ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯುಳ್ಳ ಸಮಾಜವಾದಿ ರಾಜ್ಯಗಳ ಒಕ್ಕೂಟವಾಗಿ ಬಲಿಷ್ಠ ಭಾರತವನ್ನು ಕಟ್ಟುವ ಉದ್ದೇಶ ನಮ್ಮದಾಗಬೇಕು.

ಅದಕ್ಕಾಗಿ ಪಕ್ಷಾತೀತ ವಾದ ಜನಸಂಗ್ರಾಮವನ್ನೇ ಹೂಡಬೇಕು.. ಅಲ್ಲವೇ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!