Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಂಡೋ ಸೀಟ್ ಮುದುಕಪ್ಪನೂ, ಎಮರ್ಜೆನ್ಸಿ ಎಕ್ಸಿಟ್ ಎಂ.ಪಿ.ಯೂ

✍🏽 ಗಿರೀಶ್ ತಾಳಿಕಟ್ಟೆ


ಟೆಕ್ನಾಲಜಿ ಸಿಕ್ಕಾಪಟ್ಟೆ ಮುಂದುವರೆದಿದೆ. ಕುಳಿತ ಕಡೆಯೇ ಜಗತ್ತನ್ನು ಕಾಣಬಹುದು. ಯುಪಿಐ ವ್ಯಾಲೆಟ್‌ನಲ್ಲಿ ಹಣವಿದ್ದರೆ ಪುಟ್ಟದೊಂದು ಮೊಬೈಲ್‌ನ ಆನ್‌ಲೈನ್ ಶಾಪಿಂಗ್ ನಿಮ್ಮ ಬಹುಪಾಲು ಬೇಡಿಕೆಗಳನ್ನು ಈಡೇರಿಸಬಲ್ಲದು. ಇಂಥಾ ಹೈಫೈ ಜೀವನದ ನಡುವೆ, ಇವತ್ತಿಗೂ ನನ್ನ ಊರಿಗೆ ಬಸ್ ಸೌಲಭ್ಯ ಇಲ್ಲವೆನ್ನೋದನ್ನು ಹೇಳಿಕೊಳ್ಳಲು ಕೊಂಚ ಮುಜುಗರವಾಗುತ್ತೆ. ಚಿತ್ರದುರ್ಗದಿಂದ ಚೆನ್ನಗಿರಿಗೆ ಹೋಗುವ ಹೆದ್ದಾರಿಯಲ್ಲಿರುವ ಗೇಟ್‌ವರೆಗೆ ಸರಾಗವಾಗಿ ತಲುಪಬಹುದು, ಅಲ್ಲಿಂದಾಚೆಗೆ ಸಣ್ಣ ಕಾವಲಿನ ನನ್ನೂರನ್ನು ಸೇರುವ ಏಳು ಮೈಲಿ ಹಾದಿಗೆ ಬಸ್ಸಿನ ಸೌಕರ್ಯವಿಲ್ಲ. ನಡೆದು ಹೋಗುವುದು ಈಗ ಹಳೆಯ ಮಾತು. ಅಲ್ಲಿ ನಿಂತು, ಊರ ಕಡೆಗೆ ಹೋಗುವ ಯಾವುದಾದರು ಬೈಕೊ, ಟ್ರ್ಯಾಕ್ಟರೋ, ಕಾರೋ ಸಿಗುತ್ತದಾ ಅಂತ ಬಕಪಕ್ಷಿಯಂತೆ ಕಾಯಬೇಕು.

ಅವತ್ತು ಸಂಸಾರ ಸಮೇತನಾಗಿ ಊರಿಗೆ ಹೊರಟಿದ್ದ ನಾನು, ದುರ್ಗದಿಂದ ಹೊರಟ ಬಸ್ಸಿನ ವಿಂಡೋ ಸೀಟಿನಲ್ಲಿ ಕೂತಿದ್ದರೂ, ’ಗೇಟಿನಿಂದ ಮುಂದಕ್ಕೆ ಹೇಗೆ ಹೋಗೋದು?’, ’ಬೈಕ್‌ಗಳಲ್ಲಿ ಇಷ್ಟು ಜನ ಹೋಗೋದು ಸಾಧ್ಯವಿಲ್ಲ, ಅದೂ ಲಗೇಜಿನ ಜೊತೆಗೆ!’, ’ಟ್ರ್ಯಾಕ್ಟರ್‌ಗಳು ಸಿಗುವ ಭರವಸೆಯಿಲ್ಲ, ಕಾರುಗಳೋ, ನಮ್ಮ ಈ ತುಂಬು ಸಂಸಾರ ನೋಡಿದರೆ ಅದೇಗೆ ತಾನೆ ನಿಂತಾವು?’… ಹೀಗೆ ಯೋಚನೆಯಲ್ಲಿ ಮಗ್ನನಾಗಿದ್ದೆ. ಬಸ್ಸು ಕದಲಾಡುತ್ತಾ ಲಯವಾಗಿ ನಮ್ಮನ್ನು ಹೊತ್ತು ಸಾಗಿತ್ತು.

ಆಗ ಇದ್ದಕ್ಕಿದ್ದಂತೆ ಬೆನ್ನ ಹಿಂದಿನಿಂದ ಯಾರೋ ತಿವಿದಂತಾಯ್ತು. ತಿರುಗಿ ನೋಡಿದೆ. ನನ್ನ ಹಿಂಬದಿ ಸೀಟಿನಲ್ಲಿ ತಲೆಗೆ ಪೇಟ ಸುತ್ತಿಕೊಂಡು ಕೂತಿದ್ದ ಒಬ್ಬ ಅಪ್ಪಟ ಹಳ್ಳಿ ಮುದುಕಪ್ಪ, ಎಲೆಯಡಿಕೆ ಜಗಿದೂ ಜಗಿದೂ ಕೆಂಪಗಾಗಿದ್ದ ತನ್ನ ತುಟಿಯಂಚಲ್ಲಿ ‘ಲೊಚ್ ಎಂಬ ಉದ್ಘಾರ ಹೊರಡಿಸಿ, “ನಿಮ್ಮ್ ಮೊಗ, ಕಿಟಕಿಯಿಂದ ಕೈ ಹೊರಗಾಗ್ತಾ ಐತೆ ಸ್ವಲುಪ ನೋಡಪ್ಪಾ ಎಂದರು.

ನನ್ನ ತೊಡೆಯ ಮೇಲಿದ್ದ ಕಿರಿಮಗ, ನಾನು ಯೋಚನಾ ಮಗ್ನನಾಗಿದ್ದಾಗ ಚಲಿಸುವ ಬಸ್ಸಿನ ಕಿಟಕಿಯಿಂದ ಕೈ ಹೊರಹಾಕಿ ಆಟವಾಡುತ್ತಿದ್ದ. ತಪ್ಪಿನ ಅರಿವಾಗಿ ಸಟ್ಟನೆ ಅವನ ಕೈಯನ್ನು ಒಳಗೆಳೆದುಕೊಂಡು, “ಹಂಗೆಲ್ಲ ಕೈಯನ್ನ ಕಿಟಿಕಿಯಿಂದ ಹೊರಗೆ ಹಾಕಬಾರದು” ಅಂತ ಪ್ರೀತಿಯಿಂದ ಗದರಿದೆ.

ಎಚ್ಚರಿಸಿದ ಆ ಹಿರಿ ಮನುಷ್ಯನಿಗೆ ಥ್ಯಾಂಕ್ಸ್ ಹೇಳಬೇಕೆನಿಸಿ, ಹಿಂದೆ ತಿರುಗಿ ಕ್ಷಮಾಪಣೆ ಕೇಳುವ ದಾಟಿಯಲ್ಲಿ ನಕ್ಕೆ. “ಎದ್ರಿಗೆ ಬಸ್ಸು ಲಾರಿ ಬರ್ತಾ ಇರ‍್ತವೆ. ಮಕ್ಕಳಿಗೆ ಏನೂ ಗೊತ್ತಾಗದಿಲ್ಲ. ಅಪಾಯ ಆದ್ರೆ ಕಷ್ಟ. ಮಕ್ಕಳನ್ನ ಕಿಟಕಿ ಪಕ್ಕ ಕೂರುಸ್ಬಾರದು. ಅವುಕ್ಕೇನೊ ಒಂಥರಾ ಖುಸಿ, ಹಿಂಗೇನಾರು ಕೀಟ್ಳೆ ಮಾಡಿಬಿಡ್ತವೆ. ಕೂರಿಸ್ಕಂಡ್ರೂ ಎಚ್ಚರಿಕೆಯಿಂದ ಇರ‍್ಬೇಕು…” ಅಂದರು ಆ ಮುದುಕ.

ಹಾರಾಡೋ ವಿಮಾನದ ಎಮರ್ಜೆನ್ಸಿ ಎಕ್ಸಿಟ್ ಬಾಗಿಲನ್ನು ತೆರೆದ ಎಜುಕೇಟೆಡ್ ಎಂ.ಪಿ.ಯೊಬ್ಬರ ಅವಾಂತರ ಕೇಳಿದ ತರುವಾಯ, ಚಲಿಸೋ ಬಸ್ಸಿನಿಂದ ಕೈ ಕೂಡಾ ಹೊರಹಾಕಬಾರದು ಅನ್ನೋ ಕಾಮನ್‌ಸೆನ್ಸ್ ಇರುವ ಅನಕ್ಷರಸ್ಥ ಮುದುಕಪ್ಪ ಮತ್ತೆ ನೆನಪಾದರು…. ಎಜುಕೇಷನ್‌ಗೂ, ಕಾಮನ್‌ಸೆನ್ಸ್‌ಗೂ ಎಷ್ಟೆಲ್ಲ ವ್ಯತ್ಯಾಸ ಇದೆ ಅಲ್ವಾ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!