Friday, September 20, 2024

ಪ್ರಾಯೋಗಿಕ ಆವೃತ್ತಿ

ಹಾವೇರಿ| ಅನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಟ್ವಿಸ್ಟ್; ಮಹಿಳೆ ಅಪಹರಿಸಿ ಸಾಮೂಹಿಕ ಅತ್ಯಾಚಾರ ಆರೋಪ

ಹಾವೇರಿ ಜಿಲ್ಲೆ ಹಾನಗಲ್‌ ಪಟ್ಟಣದಲ್ಲಿ ನಡೆದಿದ್ದ ಅನೈತಿಕ ಪೊಲೀಸ್‌ಗಿರಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಸಂತ್ರಸ್ತ ಮಹಿಳೆಯನ್ನು ಅಪಹರಿಸಿ ಏಳು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅನ್ಯಕೋಮಿನ ಪುರುಷನೊಂದಿಗೆ ಲಾಡ್ಜ್‌ನಲ್ಲಿದ್ದ ವಿವಾಹಿತ ಮಹಿಳೆಗೆ ಥಳಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿದೆ.

ಲಾಡ್ಜ್‌ನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿರುವ ದೃಶ್ಯ

ಹೋಟೆಲ್​ನಲ್ಲಿ ಹಲ್ಲೆ ಮಾಡಿದ ಬಳಿಕ ಅರಣ್ಯ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದು 7 ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಆಕೆ, “ಒಬ್ಬರಾದ ಮೇಲೆ ಒಬ್ಬರು ನನ್ನನ್ನು ಅತ್ಯಾಚಾರ ಮಾಡಿದ್ದಾರೆ. ಮಾರಣಾಂತಿಕವಾಗಿ ಹಲ್ಲೆ ಕೂಡ ನಡೆಸಿದ್ದಾರೆ” ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.

“ಆರೋಪಿಗಳು ನನ್ನ ಪತ್ನಿಯನ್ನು ಅರಣ್ಯಕ್ಕೆ ಕರೆದೊಯ್ದು ಅತ್ಯಾಚಾರಗೈದು, ಹಿಂಸೆ ನೀಡಿದ್ದಾರೆ. ಅವರು ಎಲ್ಲವನ್ನೂ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ” ಎಂದು ಮಹಿಳೆಯ ಪತಿ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅತ್ಯಾಚಾರದ ಬಗ್ಗೆ ಉಲ್ಲೇಖಿಸಿಲ್ಲ ಎಸ್ಪಿ 

ಸಂತ್ರಸ್ಥ ಮಹಿಳೆ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಹಾವೇರಿ ಜಿಲ್ಲಾ ಎಸ್ಪಿ ಅಂಶು ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಸಂತ್ರಸ್ತೆಯ 161 ಹೇಳಿಕೆ ಪಡೆಯಲಾಗಿದೆ. ಅದರಲ್ಲಿ ಎಲ್ಲಿಯೂ ಸಾಮೂಹಿಕ ಅತ್ಯಾಚಾರದ ಬಗ್ಗೆ ಆಕೆ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.

ಲಿಖಿತ ಹೇಳಿಕೆ ಕೂಡ ಪಡೆಯಲಾಗಿದೆ. ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ನಿನ್ನೆಯವರೆಗೂ ಅತ್ಯಾಚಾರ ಆಗಿದೆ ಎಂದು ಆರೋಪ ಮಾಡಿಲ್ಲ, ಹೇಳಿಕೆಯಲ್ಲಿ ತಿಳಿಸಿಲ್ಲ. ಮ್ಯಾಜಿಸ್ಟ್ರೇಟ್ ಮುಂದೆ ಇಂದು 164 ಹೇಳಿಕೆಗಳನ್ನು​ ಸಲ್ಲಿಸಲಾಗುತ್ತದೆ. ಮ್ಯಾಜಿಸ್ಟ್ರೇಟ್ ಮುಂದೆ ಏನು ಹೇಳ್ತಾರೆ ಅದರ ಮೇಲೆ ತನಿಖೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.

ಬೊಮ್ಮಾಯಿ ಖಂಡನೆ

ಘಟನೆಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, “ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ವಸತಿ ಗೃಹನಲ್ಲಿದ್ದ ಜೋಡಿಯ ಮೇಲೆ ದುಷ್ಕರ್ಮಿಗಳು ನೈತಿಕ ಪೊಲೀಸ್ ಗಿರಿ ನಡೆಸಿರುವುದು ಖಂಡನೀಯ. ಅಮಾಯಕರ ಮೇಲೆ ನೈತಿಕ ಪೋಲಿಸ್ ಗಿರಿ ನಡೆಸಿರುವ ಎಲ್ಲ ಗೂಂಡಾಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಯುವತಿಯ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ತೆರಳಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಈ ರೀತಿ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿ ಪುಂಡರು ರಾಜಾರೋಷವಾಗಿ ನೈತಿಕ ಪೊಲೀಸ್ ಗಿರಿ ಮಾಡಲು ಬಿಟ್ಟಿರುವುದನ್ನು ನೋಡಿದರೆ, ರಾಜ್ಯದಲ್ಲಿ ಸರ್ಕಾರ ಜೀವಂತ ಇದೀಯಾ ಇಲ್ಲವೋ ಎನ್ನುವಂತಾಗಿದೆ” ಎಂದಿದ್ದಾರೆ.

ಪ್ರಕರಣದ ಹಿನ್ನೆಲೆ

ಜನವರಿ 8ರಂದು ಸೋಮವಾರ ಅನ್ಯಕೋಮಿನ ಇಬ್ಬರು ವಿವಾಹಿತರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕ್ಲಕ್ರಾಸ್ ಬಳಿ ಇರುವ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಈ ವೇಳೆ ಕೆಲ ಯುವಕರು ಏಕಾಏಕಿ ಹೋಟೆಲ್ ಗೆ ನುಗ್ಗಿ ದಾಂಧಲೆ ಮಾಡಿ ಮಹಿಳೆ ಮತ್ತು ಪುರುಷನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಹಲ್ಲೆ ಮಾಡುವಾಗ ವಿಡಿಯೋ ಮಾಡಿಕೊಂಡಿದ್ದರು. ಘಟನೆಗೆ ಸಂಬಂಧಿಸಿದ್ದು ಎನ್ನಲಾದ 2 ವಿಡಿಯೋಗಳು ವೈರಲ್ ಆಗಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!