Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ: ಸ್ಟಾರ್ ಚಂದ್ರು

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಯಾಗಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನನ್ನ ಗೆಲುವಿಗೆ ಶ್ರಮಿಸಬೇಕು ಎಂದು ಲೋಕಸಭೆ ಸಂಭಾವ್ಯ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.

ಮಂಡ್ಯ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭೆ ಚುನಾವಣಾ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಉಸ್ತುವಾರಿಗಳು ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಶಾಸಕರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ನನಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ಸಹಕಾರ ಮಾಡಬೇಕು. ನಿಮ್ಮ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ. ನಿಮ್ಮೆಲ್ಲರ ಹಾಗೂ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಉಪಕಾರ ಸ್ಮರಣೆ ಬಗ್ಗೆ ಕಾರ್ಯಕರ್ತರು ಜಿಲ್ಲೆಯ ಮತದಾರರಿಗೆ ತಿಳಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.

ಶಕ್ತಿ ಯೋಜನೆ ಮೂಲಕ ಜಿಲ್ಲೆಯಲ್ಲಿ ಫೆಬ್ರವರಿವರೆಗೆ 4.67ಕೋಟಿ ಉಚಿತ ಟಿಕೆಟ್ ಪಡೆದು ಮಹಿಳೆಯರು ಪ್ರಯಾಣಿಸಿದ್ದು, ಒಟ್ಟು 115.94ಕೋಟಿ ರೂ. ಮೌಲ್ಯದ ಪ್ರಯಾಣ ವೆಚ್ಚವನ್ನು ಸರ್ಕಾರ ಭರಿಸಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿ 5 ಕೆ.ಜಿ ಅಕ್ಕಿಯನ್ನು ಫೆಬ್ರವರಿ ಅಂತ್ಯಕ್ಕೆ 170ರೂ.ನಂತೆ ನಗದು ರೂಪದಲ್ಲಿ ಒಟ್ಟು 4,38,705 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಪಾವತಿಸಲಾಗಿದೆ. ಅಂತೆಯೇ ಗೃಹಲಕ್ಷ್ಮಿ ಯೋಜನೆಯಡಿ ಫೆಬ್ರವರಿ ಅಂತ್ಯಕ್ಕೆ 4,40,447 ಕುಟುಂಬಗಳ ಯಜಮಾನಿ ಮಹಿಳೆಯರಿಗೆ ತಲಾ 2ಸಾವಿರ ರೂ.ನಂತೆ ಅವರ ಖಾತೆಗೆ ಜಮೆಯಾಗಿದೆ ಎಂದರು.

ಗೃಹ ಜ್ಯೋತಿ ಯೋಜನೆಯಡಿ 4,64,303 ಮನೆಗಳ ಗ್ರಾಹಕರು ಹೆಸರು ನೋಂದಾಯಿಸಿ ಉಚಿತ ವಿದ್ಯುತ್ ಪಡೆದಿದ್ದಾರೆ. ಹಾಗೆಯೇ ಯುವ ನಿಧಿ ಯೋಜನೆಯಡಿ ಡಿಪ್ಲೊಮಾ ಹಾಗೂ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಕ್ರಮವಾಗಿ 1500 ಮತ್ತು 3000 ರೂ.ಗಳನ್ನು 2 ವರ್ಷಗಳವರೆಗೆ ನಿರುದ್ಯೋಗ ಭತ್ಯೆಯಾಗಿ ನೀಡಲಿದ್ದು, ಈವರೆಗೆ 3,143 ಅರ್ಜಿಗಳು ನೋಂದಣಿಯಾಗಿ ಗೌರವ ಧನ ಬಿಡುಗಡೆ ಹಂತದಲ್ಲಿದೆ. ಹೀಗಾಗಿ ಈ ಎಲ್ಲಾ ಮಾಹಿತಿಯನ್ನು ಜಿಲ್ಲೆಯ ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದರು.

ಜತೆಗೆ ಹೊಸ ತಂತ್ರಜ್ಞಾನದೊಂದಿಗೆ ಮೈಷುಗರ್ ಕಾರ್ಖಾನೆ ಸ್ಥಾಪಿಸಲು ಸರ್ಕಾರ ಐತಿಹಾಸಿಕ ತೀರ್ಮಾನ ಮಾಡಿದೆ. ಕಾವೇರಿ‌ ನೀರಾವರಿ ನಿಗಮ ಮೂಲಕ ವಿಶ್ವೇಶ್ವರಯ್ಯ ನಾಲಾ ಆಧುನೀಕರಣಕ್ಕೆ ಅನುದಾನ ಬಿಡುಗಡೆ ಮಾಡಿದೆ. ಕೃಷಿ ವಿದ್ಯಾಲಯ ಸ್ಥಾಪನೆ ಮಾಡಲಿದ್ದು, ಕೆಆರ್ ಎಸ್ ನಲ್ಲಿ ವಿಶ್ವ ಧರ್ಜೆ ಮಾದರಿಯ ಉದ್ಯಾನವನ ನಿರ್ಮಿಸಲಿದೆ. ಬರಗಾಲ ಹಿನ್ನೆಲೆ ಜಿಲ್ಲೆಯ 79 ಸಾವಿರ ಬ್ಯಾಂಕ್ ಖಾತೆಗಳಿಗೆ 2 ಸಾವಿರ ರೂ. ನೇರ ಜಮೆ ಮಾಡಿ ರೈತರ ನೆರವಿಗೆ ಧಾವಿಸಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ ಎಂದರು.

ಲೋಕಸಭೆ ಚುನಾವಣೆ ಕೊನೆಯ ಚುನಾವಣೆ. ಮುಂದೆ ಜೂನ್, ಜುಲೈ ತಿಂಗಳಲ್ಲಿ ಜಿ.ಪಂ, ತಾಪಂ ಚುನಾವಣೆ ಎದುರಾಗಲಿದೆ. ಹೀಗಾಗಿ ಕಾರ್ಯಕರ್ತರು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮೈಷುಗರ್ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಪಕ್ಷದ ಸಂಭಾವ್ಯ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವ ಪಕ್ಷ ಗೆಲ್ಲುವುದಿಲ್ಲ ಎಂಬ ಸಂದೇಶವನ್ನು ಜಿಲ್ಲೆಯ ಕಾರ್ಯಕರ್ತರು ರವಾನಿಸಬೇಕು ಎಂದು ಕರೆ ನೀಡಿದರು.

ಲೋಕಸಭೆ ಗೆಲುವು ಸ್ಟಾರ್ ಚಂದ್ರು ಗೆಲುವಲ್ಲ, ಕಾರ್ಯಕರ್ತರ ಗೆಲುವು, ಮುಖಂಡರ ಗೆಲುವು. ನಮ್ಮ ಕಾರ್ಯಕರ್ತರು ಯಾವುದೇ ಅಧಿಕಾರ ಇಲ್ಲದೇ ಕಂಗೆಟ್ಟಿದ್ದರು. ಈಗ ಶಾಸಕರ ಮೂಲಕ ಅಧಿಕಾರ ದೊರಕಿದ್ದು, ಮುಂದೆ ಸಂಸದರ ಮೂಲಕ ಮತ್ತಷ್ಟು ಅಧಿಕಾರ ಸಿಗಲಿದೆ. ನಾಲ್ಕೈದು ದಿನಗಳಲ್ಲಿ ಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳುವ ನೀರಿಕ್ಷೆ ಇದೆ. ಚುನಾವಣೆಗೆ ಇನ್ನೂ ಒಂದು ಮುಕ್ಕಾಲು ತಿಂಗಳಿದೆ. ಸಣ್ಣಪುಟ್ಟ ಲೋಪದೋಷ ಸರಿಪಡಿಸಿಕೊಂಡು ಯಶಸ್ವಿಯಾಗಿ ಚುನಾವಣೆ ನಡೆಸಬೇಕು ಎಂದರು.

ದಿನೇಶ್ ಗೂಳಿಗೌಡರು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲನ್ನು ಮುರಿದು ಗೆಲುವಿನ ಓಟಕ್ಕೆ ಕಾರಣರಾದರು. ಜಿಲ್ಲೆಯ ಕಾರ್ಯಕರ್ತರು ಸತತ ಹೋರಾಟ, ಉತ್ತಮ ಸಂಘಟನೆ ಮೂಲಕ ಹಲವಾರು ಚುನಾವಣೆಗಳಲ್ಲಿ ಗೆಲುವಿಗೆ ಸಹಕರಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಸವಾಲಿನಾದಾಗಿದೆ. ದೇಶ, ರಾಜ್ಯ ಹಾಗೂ ಜಿಲ್ಲೆಯ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ. ನಮ್ಮ ಸಂಪ್ರದಾಯಿಕ ಎದುರಾಳಿ ಜೆಡಿಎಸ್ ಪ್ರತಿ ಚುನಾವಣೆಯಲ್ಲೂ ಒಂದೊಂದು ಪಕ್ಷಗಳ‌ ಜತೆ ಮೈತ್ರಿ ಮಾಡಿಕೊಂಡು, ಇದೀಗ ಕೋಮುವಾದಿ ಬಿಜೆಪಿ ಜತೆಗೆ ಬೇರೆ ರೀತಿ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸಿದ್ದವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವೇ ನಮ್ಮೆಲ್ಲರ ನಿಲುವಾಗಬೇಕಿದೆ ಎಂದರು.

2018ರ ಚುನಾವಣೆಯಲ್ಲಿ ಸೋತು ಕಂಗೆಟ್ಟಿದ್ದ ಕಾಂಗ್ರೆಸ್ 2 ಎಂಎಲ್ ಸಿ ಗೆಲುವಿನ ಮೂಲಕ 2023ರಲ್ಲಿ ಜಿಲ್ಲೆಯಲ್ಲಿ ಲೋಕಸಭೆ ವ್ಯಾಪ್ತಿಯ 8 ಕ್ಷೇತ್ರಗಳ ಪೈಕಿ 7 ಗೆದ್ದಿದೆ. ಮೂವರು ಎಂಎಲ್ ಸಿ ಇದ್ದಾರೆ. ಲೋಕಸಭೆ ಅಭ್ಯರ್ಥಿ ಗೆಲುವಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ ಅಭ್ಯರ್ಥಿ ಗೆಲ್ಲಿಸಬೇಕು ಎಂದರು.

ಸಭೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ರಾಮಕೃಷ್ಣ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮುಹಾಹಿದ್, ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಉಸ್ತುವಾರಿಗಳಾದ ಸಿ.ಆರ್.ರಮೇಶ್, ಸಾತನೂರು ಕೃಷ್ಣ, ಕೊತ್ತತ್ತಿ ರಾಜು, ವೀಣಾ ಶಂಕರ್, ತಗ್ಗಹಳ್ಳಿ ಯಶೋಧ, ಗುರುರಾಜು, ಕಿರಣ್, ನಾಗಭೂಷಣ್, ಹಿಟ್ಟನಹಳ್ಳಿಕೊಪ್ಪಲು ನಾಗರಾಜು, ಜಿಲ್ಲಾ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ, ಜಿಲ್ಲಾ ಕಾರ್ಯದರ್ಶಿ ಅಂತನಹಳ್ಳಿ ಬಸವರಾಜು, ಸಾಮಾಜಿಕ ಜಾಲತಾಣದ ಅನಿಲ್ ಕುಮಾರ್, ಕೆನ್ನಾಳು ವನರಾಜು, ಎನ್ ಎಸ್ ಯುಐ ನ ಮಂಜು, ಉಮ್ಮಡಹಳ್ಳಿ ನಾಗೇಶ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!