ಸರ್ಕಾರದಿಂದ ಜಿಲ್ಲೆಯಲ್ಲಿ 400 ಶ್ರಮಿಕ್ ಟ್ಯಾಬ್ ಗಳನ್ನು ಉಚಿತವಾಗಿ ವಿತರಣೆ ಮಾಡಲು ಅವಕಾಶವಿದ್ದು, ಕಟ್ಟಡ ಕಾರ್ಮಿಕ ಮಕ್ಕಳಿಗೆ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ತಿಳಿಸಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶ್ರಮಿಕ ಟ್ಯಾಬ್ ವಿತರಣೆ ಮಾಡುವ ಸಂಬಂಧ ಶನಿವಾರ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆದ್ಯತೆ ನೀಡಲಾಗುವುದು ಎಂದರು.
ಸಮಿತಿಯ ತೀರ್ಮಾನದಂತೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ 9 ಮತ್ತು 10 ನೇ ತರಗತಿಯ ಅರ್ಹ ಕಾರ್ಮಿಕ ಮಕ್ಕಳಿಗೆ ಜನವರಿ 4ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಟ್ಯಾಬ್ ಗಳನ್ನ ವಿತರಣೆ ಮಾಡಲು ಸಭೆಯಲ್ಲಿ ತೀರ್ಮಾನಿಸಿದರು.
ಕಾರ್ಮಿಕರ ಮಕ್ಕಳು ಕೂಡ ಉತ್ತಮ ವಿದ್ಯಾಭ್ಯಾಸ ಮಾಡಬೇಕು. ಹೊಸ ತಂತ್ರಜ್ಞಾನದ ಮೂಲಕ ಓದಿಕೊಳ್ಳಬೇಕು, 9 ಮತ್ತು 10 ತರಗತಿಯ ಭಾಷಾ ವಿಷಯ ಬಿಟ್ಟು ಉಳಿದ ಐಚ್ಛಿಕ ವಿಷಯಗಳನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕಲಿಯಬಹುದು. ಜೊತೆಗೆ ಆಡಿಯೋ ಮತ್ತು ವಿಡಿಯೋ ರೂಪದಲ್ಲಿಯು ವಿಷಯಗಳನ್ನು ನೀಡಲಾಗಿದೆ. ಇದರಿಂದ ಮಕ್ಕಳು ಅವರು ಇರುವ ಜಾಗದಲ್ಲಿಯೇ ಅಭ್ಯಾಸ ಮಾಡಬಹುದು. ಇದು ಬಹಳ ಪರಿಣಾಮಕಾರಿ ಹಾಗೂ ಆಕರ್ಷಕವಾಗಿಯು ಇದೆ ಎಂದು ಹೇಳಿದರು.
ವಿಡಿಯೋ ಮೂಲಕ ಕೆಲವೊಂದು ವಿಷಯಗಳನ್ನು ನಾನು ನೋಡಿದ್ದೇನೆ, ಇದರಿಂದ ಮಕ್ಕಳಿಗೆ ಪಾಠ ಕೇಳಿರುವುದಕ್ಕಿಂತಲು ವಿಶೇಷವಾದ ಅನುಭವವಾಗುವುದು. ತಕ್ಷಣ ಅವರಿಗೆ ನೆನಪಾಗುವುದು. ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಮನನ ಮಾಡಿಕೊಳ್ಳಲು ಅನುಕೂಲವಾಗುದು ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ.ಸಹಾಯಕ ಕಾರ್ಯದರ್ಶಿ ಸುಬ್ರಹ್ಮಣ್ಯ ಶರ್ಮ, ಕಾರ್ಮಿಕ ಅಧಿಕಾರಿ ಎಸ್.ಎಂ. ಮಂಜುಳಾದೇವಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಶಾಖಾ ಅಧಿಕಾರಿ ರಾಜೇಗೌಡ, ಇಲಾಖೆಯ ತಾಲ್ಲೂಕು ನಿರೀಕ್ಷಕರಾದ ಸ್ವಾಮಿ, ನಾಗರತ್ನ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.




