ಮಂಡ್ಯದಲ್ಲಿರುವ ಸೌಹಾರ್ದ ಪರಂಪರೆಯ ಸಾಮರಸ್ಯದ ಜೀವನ್ನು ಹಾಳುಗೆಡವಲು, ಕೆಲವು ಕೋಮು ಶಕ್ತಿಗಳು ಪ್ರಯತ್ನಿಸುತ್ತಿವೆ, ಆದರೆ ಇತಂಹ ದುಷ್ಕೃತ್ಯಕ್ಕೆ ಜಿಲ್ಲೆಯ ಜನತೆ ಅವಕಾಶ ನೀಡುವುದಿಲ್ಲ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ (ಸಿಪಿಐಎಂ) ಎಂ.ಪುಟ್ಟಮಾದು ತಿಳಿಸಿದರು.
ಮಂಡ್ಯನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಇಂದು ನಡೆದ ಶ್ರಮಿಕರ ಸಮಾವೇಶದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, 1902ರಲ್ಲಿ ಏಷ್ಯಾಖಂಡಕ್ಕೆ ಮೊದಲು ಮಂಡ್ಯ ಜಿಲ್ಲೆಯ ಶಿಂಷಾ ಪ್ರದೇಶದಿಂದ ವಿದ್ಯುತ್ ಮೂಲಕ ಬೆಳಕನ್ನು ಕೊಟ್ಟ ಜಿಲ್ಲೆ ನಮ್ಮದು ಎನ್ನುವುದನ್ನು ನಾವು ಮರೆಯಬಾರದು. ಅದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಶಕ್ತಿಗಳು ಇಂತಹ ಬೆಳಕನ್ನು ಆರಿಸಲಿಕ್ಕೆ ಬರುತ್ತಿದ್ದಾರೆ. ಆದರೆ, ನಾವು ಆರಿಸುವುದನ್ನು ತಡೆಗಟ್ಟುತ್ತೇವೆ, ಅದೇ ಬೆಳಕನ್ನು ನಾವು ಪಡೆಯುತ್ತೇವೆ, ಅದೇ ಬೆಳಕಿನಲ್ಲಿ ನಾವು ಬದುಕುತ್ತೇವೆ, ಸಾಮರಸ್ಯದ ಜೀವನವನ್ನು ಮಾಡುತ್ತೇವೆ ಎನ್ನುವ ಪ್ರತಿಜ್ಞೆಯ ಆಧಾರದಲ್ಲಿ ಈ ಸಮಾವೇಶವನ್ನು ಸಂಘಟಿಸುತ್ತಿದೇವೆ ಎಂದರು.
ಮಂಡ್ಯ ಜಿಲ್ಲೆ ರೈತರು ಕೃಷಿಕೂಲಿಕಾರರು, ಮಹಿಳೆಯರು, ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಎಲ್ಲರನ್ನು ಒಳಗೊಂಡಂತಹ ದುಡಿಯುವ ವರ್ಗದ ದುಡಿಮೆಯ ಆಧಾರದ ಮೇಲೆ ನಿಂತಿರುವ ಮಂಡ್ಯ ಜಿಲ್ಲೆ ಇಂದು ಹಲವಾರು ಬದಲಾವಣೆಯನ್ನು ಕಾಣುತ್ತಿದೆ. ಬಹಳ ಪ್ರಮುಖವನ್ನು ಕನ್ನಂಬಾಡಿ ಕಟ್ಟೆಯಿರುವುದು ಮಂಡ್ಯ ಜಿಲ್ಲೆಯಲ್ಲಿಯೇ. ತಮಿಳುನಾಡು, ಆಂಧ್ರ, ಪುದುಚೇರಿ, ಕೇರಳ, ಕರ್ನಾಟಕ. ಈ ನಾಲ್ಕೈದು ರಾಜ್ಯಗಳಿಗೆ ನೀರುಣಿಸುವ ಜಿಲ್ಲೆ ಮಂಡ್ಯ. ಜಿಲ್ಲೆಯಿಂದ ಈ ರಾಜ್ಯಗಳಲ್ಲಿ ಅವಲಂಬಿಸಿರುವ ಲಕ್ಷಾಂತರ ರೈತರ ಬದುಕಿಗೆ ನೀರು ಇಲ್ಲಿಂದಲ್ಲೆ ಕೊಡುತ್ತಿದ್ದೇವೆ, ಇದು ಸಾಮರಸ್ಯದ ಜೀವನಕ್ಕೆ ಸಾಕ್ಷಿಯಾಗಿದೆ ಎಂದರು.
ಮೋದಿ ಸಾಧನೆ ಶೂನ್ಯ
ಮೋದಿ ಸರ್ಕಾರ ಕಳೆದ ಹತ್ತುವರ್ಷಗಳಲ್ಲಿ ಏನೂ ಸಾಧನೆ ಮಾಡದೇ, ಹಲವಾರು ಪ್ರಮಾದಗಳನ್ನು ಮಾಡಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ, ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಕಡಿತ ಮಾಡಿದ್ದು, ಇದೇ ಬಿಜೆಪಿಯ ಮೋದಿ ಸರ್ಕಾರ. ಬಜೆಟ್ ನಲ್ಲಿ ಶ್ರಮಿಕ ವರ್ಗಕ್ಕೆ 2.25 ಲಕ್ಷ ಕೋಟಿ ಬೇಕಾಗಿತ್ತು. ಇದರಲ್ಲಿ ಅರ್ಧಭಾಗವನ್ನು ಮೋದಿ ಕೊಡಲಿಲ್ಲ. ಇದರ ಅರ್ಥ, ಬಡವರನ್ನು, ಕೂಲಿಕಾರರನ್ನು ನಾಶ ಮಾಡುವಂತಹ ನೀತಿಯನ್ನು ಮೋದಿ ಸರ್ಕಾರ ಹೊಂದಿದೆ ಎಂದು ಕಿಡಿಕಾರಿದರು.
ಸಮಾವೇಶಕ್ಕೆ ಬಂದಿರುವ ಜನತೆ ಮೂರು ತಿಂಗಳಿಂದ ನರೇಗಾ ಕೂಲಿ ಬರದೆ, ಪರಿತಪ್ಪಿಸುತ್ತಿದ್ದಾರೆ. ಆದ್ದರಿಂದ ಲೋಕಸಭೆಯ ಚುನಾವಣೆ, ಮುಖ್ಯವಲ್ಲ ನಮಗೆ, ಹೊಟ್ಟೆ ಮುಖ್ಯ, ಒಂದು ವಾರದೊಳಗೆ ಕೊಡಬೇಕಾದಂತಹ ಬಾಕಿಯನ್ನು ಕೊಡದೇ ಇದ್ದರೆ, ನಿಮ್ಮ ಕೇಂದ್ರ ಸರ್ಕಾರದ ಕಚೇರಿಗಳನ್ನು ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಬಹಿರಂಗ ಸಮಾವೇಶದ ಮೂಲಕ ಎಚ್ಚರಿಸಿದರು.
ದೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜನತೆ ಕೇವಲ 100 ರಿಂದ 150 ರೂ ಕೂಲಿ ಮಾಡಿ ಬದುಕನ್ನು ಸಾಗಿಸುತ್ತಿದ್ದಾರೆ. ಕೇಂದ್ರ ಸರ್ಕಾರ, ಅದಾನಿ, ಅಂಬಾನಿಯ ಪರವಾಗಿ ನೀತಿಯನ್ನು ರೂಪಿಸುತ್ತಾ, ಅವರಿಗೆ ಅನುಕೂಲ ಮಾಡಿಕೊಡುತ್ತಾ, ಬಡವರನ್ನು, ಕೂಲಿಕಾರರನ್ನು, ಕೃಷಿಕರನ್ನು ಅನ್ಯಾಯ ಮಾಡುತ್ತ ಒಂದು ದೊಡ್ಡ ಪ್ರಮಾದನ್ನು ಮಾಡಿದೆ ಎಂದು ಕಿಡಿಕಾರಿದರು.
ವ್ಯವಸಾಯದಲ್ಲಿ, ದೇವರು-ಧರ್ಮವನ್ನು ಅನುಸರಿಸುವುದರಲ್ಲಿ ಮಂಡ್ಯ ಜಿಲ್ಲೆ ಸಾಮರಸ್ಯವನ್ನು ಮೆರೆದಿದೆ. ಟಿಪ್ಪು ಸುಲ್ತಾನ್ ಈ ರಾಜ್ಯವನ್ನು ಆಳಿದ್ದಾರೆ. ಶ್ರೀರಂಪಟ್ಟಣದಲ್ಲಿ, ಶ್ರೀರಂಗನಾಥ ಸ್ವಾಮಿ, ಆದಿರಂಗ ದೇವಸ್ಥಾನ ಇನ್ನೊಂದು ಕಡೆ ಮಸೀದಿ ಎರಡು ಇದೆ ಎಂದರೆ, ಅವರ ಆಳ್ವಿಕೆಯಲ್ಲಿ ಸಾಮರಸ್ಯವನ್ನು ಅವರು ಜಾರಿಗೆ ಮಾಡಿದ್ದರು, ಅದರ ಮೂಲಕ ಜನಜೀವನ ನೆಮ್ಮದಿಯಿಂದ ಬಾಳಲಿ ಎಂದು ಮಾಡಿದ್ದರು. ಅದೇ ಸಂದರ್ಭದಲ್ಲಿ ವ್ಯವಸಾಯವನ್ನು ಅಭಿವೃದ್ದಿ ಮಾಡಲಿಕ್ಕಾಗಿ ರೇಷ್ಮೆಯನ್ನು ಅಮದು ಮಾಡಿಕೊಂಡು, ರೇಷ್ಮೆಯನ್ನು ಬೆಳೆಯಬೇಕು ಎಂದು ಪ್ರಪ್ರಥಮವಾಗಿ ಇಡೀ ದೇಶದಲ್ಲಿ ರೇಷ್ಮೆಯನ್ನು ಪರಿಚಯಿಸಿದವರು ಟಿಪ್ಪು ಸುಲ್ತಾನ್ ಎನ್ನುವುದನ್ನು ನಾವು ಮರೆಯಬಾರದು ಎಂದರು.
ಶ್ರಮಜೀವಿಗಳ ಸಮಾವೇಶದಲ್ಲಿ ಪಾಲಿಟ್ ಬ್ಯೂರೋ ಸದಸ್ಯರಾದ ಕಾಮ್ರೇಡ್ ಬೃಂದಾ ಕಾರಟ್ ಪ್ರಧಾನ ಭಾಷಣ ಮಾಡಿದರು. ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್.ವಿಮಲ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ, ರಾಜ್ಯ ಕಾರ್ಯದರ್ಶಿ ಬಸವರಾಜ್, ಸಿಪಿಐಎಂ ಪಕ್ಷದ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಮೀನಾಕ್ಷಿ ಸುಂದರಂ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಮುಸ್ಲಿಂ ಸೌಹಾರ್ದ ಒಕ್ಕೂಟಕದ ಅಧ್ಯಕ್ಷ ಇಲಿಯಾಜ್ ಅಹಮದ್ ಖಾನ್, ಸಿಪಿಐಎಂ ಪಕ್ಷದ ರಾಮನಗರ ಜಿಲ್ಲೆಯ ಕಾರ್ಯದರ್ಶಿ, ವೆಂಕಟಚಲಯ್ಯ, ಸಿಪಿಐಎಂ ಪಕ್ಷದ ಮೈಸೂರು ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಸಿಪಿಐಎಂ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ದೇವಿ, ಟಿ.ಯಶವಂತ್, ಸಿಪಿಐಎಂ ಮಂಡ್ಯ ಜಿಲ್ಲೆಯ ಹಿರಿಯ ಮುಖಂಡರಾದ ಜಿ.ರಾಮಕೃಷ್ಣ,ಮುಖಂಡರಾದ ಭರತ್ ರಾಜ್, ಸುಶೀಲ, ಬಾಲಕೃಷ್ಣ ಹಾಗೂ ಸುನಂದ ಉಪಸ್ಥಿತರಿದ್ದರು.




