Thursday, May 16, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬೂದನೂರಿನಲ್ಲಿ ಕಳೆಕಟ್ಟಿದ ಸಂಭ್ರಮ: ಹರಿದು ಬಂದ ಜನಸಾಗರ

ಮಂಡ್ಯ ತಾಲೂಕಿನ ಬೂದನೂರು ಗ್ರಾಮದ ಶ್ರೀ ಕಾಶಿ ವಿಶ್ವನಾಥ ದೇವಾಲಯದ ಆವರಣದಲ್ಲಿ 2 ದಿನಗಳ ಕಾಲ ಆಯೋಜಿಸಿರುವ ಬೂದನೂರು ಉತ್ಸವಕ್ಕೆ ಶನಿವಾರ ವಿಜೃಂಭಣೆಯಿಂದ ನಿನ್ನೆ ಚಾಲನೆ ನೀಡಲಾಯಿತು. ಗ್ರಾಮದ ಶ್ರೀ ಕಾಶಿ ವಿಶ್ವನಾಥ ದೇವಾಲಯಕ್ಕೆ ವರ್ಣಮಯ ದೀಪಾಲಂಕಾರ ಮಾಡಲಾಗಿತ್ತು. ದೇವಾಲಯದ ಆವರಣ ವಿದ್ಯುತ್ ದೀಪಗಳಿಂದ ಕಂಗೊಳಿಸುತಿದ್ದವು, ಸುತ್ತಮುತ್ತಲ ಗ್ರಾಮಗಳಿಂದ ಜನಸಾಗರವೇ ಹರಿದು ಬಂದಿತ್ತು.

ಬೂದನೂರು ಉತ್ಸವದ ಅಂಗವಾಗಿ ಗ್ರಾಮದ ಪ್ರವೇಶ ದ್ವಾರದಿಂದ ಶ್ರೀ ಕಾಶಿ ವಿಶ್ವನಾಥ ದೇವಾಲಯದವರೆಗೆ ಮೆರವಣಿಗೆ ಆಯೋಜಿಸಲಾಗಿತ್ತು. ಪೂಜಾ ಕುಣಿತ, ಡೊಳ್ಳು ಕುಣಿತ, ಗಾರುಡಿಗೊಂಬೆ ಸೇರಿದಂತೆ ಇನ್ನಿತರೆ ಜಾನಪದ ಕಲಾತಂಡಗಳ ಜೊತೆ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಗಣ್ಯರನ್ನು ವೇದಿಕೆಯವರೆಗೆ ಕರೆತರಲಾಯಿತು. ಮೆರವಣಿಗೆಯಲ್ಲಿ ಗ್ರಾಮದ ನೂರಾರು ಜನರು ಪಾಲ್ಗೊಂಡಿದ್ದರು.

ಗ್ರಾಮದ ರಸ್ತೆಗಳನ್ನು ಸ್ವಚ್ಛಗೊಳಿಸಿ ಮನೆಗಳ ಮುಂಭಾಗ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಿ ಮಹಿಳೆಯರು ಹಾಗೂ ಮಕ್ಕಳು ಸಂಭ್ರಮಿಸಿದರು. ಬೂದನೂರು ಉತ್ಸವದ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು. ಶ್ರೀ ಕಾಶಿ ವಿಶ್ವನಾಥ ದೇಗುಲಕ್ಕೆ ಹೊರಗಿನಿಂದ ನೂರಾರು ಜನರು ಬೆಳಗ್ಗೆಯಿಂದ ರಾತ್ರಿಯವರೆಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಶ್ರೀ ಕಾಶಿ ವಿಶ್ವನಾಥ ದೇವರನ್ನು ಆಕರ್ಷಣೀಯವಾಗಿ ಅಲಂಕರಿಸಲಾಗಿತ್ತು. ಖ್ಯಾತ ಸಂಗೀತ ನಿರ್ದೇಶಕ ಸಾಧುಕೋಕಿಲ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಜನತೆ ಕಿಕ್ಕಿರಿದು ಸೇರಿದ್ದರು.

ಪ್ರವಾಸೋದ್ಯಮ ಬೆಳಸಬೇಕಿದೆ

ವೇದಿಕೆ ಕಾರ್ಯಕ್ರಮಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರುವ ದೇವಸ್ಥಾನಗಳು ಬೂದನೂರು ಗ್ರಾಮದಲ್ಲಿದೆ‌. ಮದ್ದೂರಿನ ಕೊಕ್ಕರೆ ಬೆಳ್ಳೂರಿಗೆ ಆಸ್ಟ್ರೇಲಿಯಾದಿಂದ ಪಕ್ಷಿಗಳು ವಲಸೆ ಬರುತ್ತದೆ. ಐತಿಹಾಸಕ ಪ್ರಸಿದ್ಧ ಕೆ.ಆರ್.ಎಸ್ ಜಲಾಶಯ, ಮೇಲುಕೋಟೆ ಚಲುವರಾಯಸ್ವಾಮಿ ದೇವಾಲಯ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯಗಳಿವೆ‌ ‌ ಅದರೂ ಸಹ ಜಿಲ್ಲೆ ಪ್ರವಾಸೋದ್ಯಮದಲ್ಲಿ ಹಿಂದುಳಿದಿದೆ. ಪ್ರವಾಸೋದ್ಯಮಕ್ಕೆ ಪ್ರಚಾರ ನೀಡಿ ಪ್ರವಾಸೋದ್ಯಮ ಬೆಳಸಬೇಕಿದೆ ಎಂದರು.

ವೀರ ಬಲ್ಲಾಳ 13 ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ಕಾಶಿ ವಿಶ್ವನಾಥ ಹಾಗೂ ಅನಂತ ಪದ್ಮನಾಭ ದೇವಸ್ಥಾನಗಳು ಮಂಡ್ಯ ಜಿಲ್ಲೆಯಲ್ಲಿರುವುದು ಅದೃಷ್ಟದ ಸಂಗತಿ. ಬೂದನೂರು ಉತ್ಸವ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದು, ಜನಪರ ಅಭಿವೃದ್ಧಿ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಶಾಸಕ ರವಿಕುಮಾರ್ ಅವರ ಕೆಲಸ ಶ್ಲಾಘನೀಯ. ಬೂದನೂರು ರಸ್ತೆ ಅಭಿವೃದ್ಧಿ ಗೆ 1 ಕೋಟಿ, ಪ್ರವಾಸೋದ್ಯಮಕ್ಕೆ 50 ಲಕ್ಷ ರೂ ನೀಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಪ್ರತಿ ಕುಟುಂಬಕ್ಕೆ 5 ಗ್ಯಾರಂಟಿ ಯೋಜನೆಗಳಿಂದ ಅಂದಾಜು 5000 ರೂ ಒದಗಿಸಿ ಆರ್ಥಿಕವಾಗಿ ಸದೃಢಗೊಳಿಸಲು ಸಹಕರಿಸಲಾಗುತ್ತಿದೆ. 35 ಲಕ್ಷ ರೈತರಿಗೆ 2000 ರೂ ನಂತೆ ಬರ ಪರಿಹಾರ, ಕೃಷಿ ಬೆಳೆ ವಿಮೆ 600 ಕೋಟಿ ರೂ ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ‌ ಎಂದರು.

ಜಿಲ್ಲೆಗೆ ಹೊಸದಾಗಿ 75 ಬಸ್ ಗಳನ್ನು ಸರ್ಕಾರ ನೀಡಿದ್ದು, ಪ್ರತಿ ತಾಲ್ಲೂಕಿಗೆ 10 ಬಸ್ ಗಳನ್ನು ಹಂತ ಹಂತವಾಗಿ ನೀಡುವುದರ ಮೂಲಕ ಗ್ರಾಮೀಣ ಭಾಗದ ಜನರು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ ಸಮಸ್ಯೆಯನ್ನು ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.

ಎಂಟು ತಿಂಗಳಲ್ಲಿ ಜಿಲ್ಲೆಗೆ 1200 ಕೋಟಿ ರೂ ಅನುದಾನ : ಪಿ ರವಿಕುಮಾರ್

ಸರ್ಕಾರ ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ 1200 ಕೋಟಿ ರೂ. ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗಿ ನಿಂತಿದೆ ಎಂದು ಶಾಸಕ ಪಿ. ರವಿಕುಮಾರ್ ಅವರು ಹೇಳಿದರು.

ಮಂಡ್ಯ ನಗರದ ಅಮರಾವತಿ ಹೋಟೆಲ್ ನಿಂದ ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್ ವರೆಗಿನ ರಸ್ತೆ ಅಭಿವೃದ್ದಿಗೆ 33 ಕೋಟಿ ರೂ. ಮಂಜೂರಾಗಿದ್ದು ಇನ್ನೆರಡು ದಿನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಕೇರಳದಲ್ಲಿರುವ ಶ್ರೀ ಅನಂತ ಪದ್ಮನಾಭ ದೇವಾಲಯ ಬಿಟ್ಟರೆ ಬೂದನೂರಿನಲ್ಲಿ ಶ್ರೀ ಅನಂತ ಪದ್ಮನಾಭ ದೇವಾಲಯವಿರುವುದನ್ನು ಕಾಣಬಹುದು. ಅದೇ ರೀತಿ ಶ್ರೀ ಕಾಶಿ ವಿಶ್ವಾನಾಥ ದೇವಾಲಯವನ್ನು ಒಂದೇ ಊರಿನಲ್ಲಿ ನೋಡಬಹುದು. ಐತಿಹಾಸಿಕ ದೇವಾಲಯಗಳನ್ನು ಒಳಗೊಂಡಿದ್ದರೂ ಬೂದನೂರು ಪ್ರವಾಸಿ ತಾಣವಾಗಿ ಅಭಿವೃದ್ದಿ ಕಾಣದ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಬೂದನೂರು ಉತ್ಸವ ಆಯೋಜಿಸಿರುವುದಾಗಿ ತಿಳಿಸಿದರು.

ಬೂದನೂರು ಇಂದು ಇತಿಹಾಸ ಪುಟ ಸೇರಿದೆ.‌ಇನ್ನು ಮುಂದೆ ಪ್ರತಿ ವರ್ಷ ಬೂದನೂರು ಉತ್ಸವ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷರು ಎ.ಬಿ. ರಮೇಶ ಬಂಡಿಸಿದ್ದೇಗೌಡ, ಮೈ ಶುಗರ್ ಕಾರ್ಖಾನೆ ಅಧ್ಯಕ್ಷ ಗಂಗಾಧರ್,
ಬೂದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾನಸ, ಉಪಾಧ್ಯಕ್ಷೆ ಜಯಲಕ್ಷ್ಮಿ, ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!