ಕಾರ್ಮಿಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು.ಹಾಗಾಗಿ ಸಂಚಾರಿ ಚಿಕಿತ್ಸಾ ಘಟಕದ ಸದುಪಯೋಗಪಡಿಸಿಕೊಳ್ಳಬೇಕೆಂದು ಜೆ.ಎಂ.ಎಫ್.ಸಿ ಹಿರಿಯ ಸಿವಿಲ್ ಕೋರ್ಟ್ ನ ನ್ಯಾಯಾಧೀಶರಾದ ವಿ.ಮಾದೇಶ ತಿಳಿಸಿದರು.
ಮಳವಳ್ಳಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಶಿರಸಿಯ ಸ್ಕೊಡ್ವೆಸ್ ಸಂಸ್ಥೆ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿಯ ಸಹಯೋಗದೊಂದಿಗೆ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಸಂಚಾರಿ ಚಿಕಿತ್ಸಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಟ್ಟಡ ಕಾರ್ಮಿಕರು ಸಾಮಾನ್ಯವಾಗಿ ಬಡ ಕುಟುಂಬದವರಾಗಿದ್ದು, ಜೀವನ ನಡೆಸುವ ಸಲುವಾಗಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವರ ಆರೋಗ್ಯ ರಕ್ಷಣೆಗೆ ಸಂಚಾರಿ ಆರೋಗ್ಯ ತಪಾಸಣಾ ಶಿಬಿರ ಸಹಕಾರಿಯಾಗಿದೆ ಎಂದರು.
ಕಟ್ಟಡ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ, ಒತ್ತಡದಲ್ಲಿ ಬದುಕುವ ಕಾರ್ಮಿಕರ ಆರೋಗ್ಯ ದೃಷ್ಠಿಯಿಂದ ಆರೋಗ್ಯ ರಕ್ಷಣೆಗೆ ಸಂಚಾರಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಿ, ಕೆಲಸ ಮಾಡುವ ಸ್ಥಳದಲ್ಲಿಯೇ ಆರೋಗ್ಯ ಪರೀಕ್ಷೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನಾಯಾಧೀಶರಾದ ಮಮತಾ ಶಿವಪೂಜಿ ಮಾತನಾಡಿ, ಕಾರ್ಮಿಕರ ಆರೋಗ್ಯದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಹಮ್ಮಿಕೊಂಡಿರುವ ಸಂಚಾರಿ ಚಿಕಿತ್ಸಾ ಶಿಬಿರ ಉತ್ತಮ ಸೇವೆಯಾಗಿದೆ, ಇದು ಸಮರ್ಪಕವಾಗಿ ಸದ್ಬಳಕೆಯಾಗಲಿ ಎಂದು ಆಶಿಸಿದರು.
ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಚಿನ್ ಕುಮಾರ್ ಶಿವಪೂಜಿ, ಕಾರ್ಮಿಕ ಇಲಾಖೆಯ ಸಹಾಯಕ ನಿರೀಕ್ಷಕಿ ಅನಿತಾ, ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ನಟೇಶ್, ಖಜಾಂಚಿ ಸಿ.ಹರ್ಷವರ್ಧನ್ ಸೇರಿದಂತೆ ಇತರಿದ್ದರು.