Friday, September 20, 2024

ಪ್ರಾಯೋಗಿಕ ಆವೃತ್ತಿ

ಒಪಿಎಸ್ ಜಾರಿ ವಿಳಂಬ ಮಾಡಿದರೆ ನೌಕರರ ಹೋರಾಟ: ಷಡಕ್ಷರಿ

ಏಳನೇ ವೇತನ ಆಯೋಗದ ವರದಿ ಅನುಷ್ಠಾನ,ಹಳೆ ಪಿಂಚಣಿ ವ್ಯವಸ್ಥೆ ಮರುಜಾರಿ ಹಾಗೂ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ನೌಕರರು ಹೋರಾಟಕ್ಕೆ ಸಿದ್ಧರಿರಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಕರೆ ನೀಡಿದರು.

ಮಂಡ್ಯನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, 12 ಲಕ್ಷ ಸರ್ಕಾರಿ ನೌಕರರ ಬದುಕಿನ ವಿಚಾರ ಇದಾಗಿದ್ದು, ಆ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಲು ಎಲ್ಲಾ ರೀತಿಯ ಹೋರಾಟಕ್ಕೆ ನೌಕರರು ಮುಂದಾಗಬೇಕು ಎಂದು ಹೇಳಿದರು.

7ನೇ ವೇತನ ಆಯೋಗ ರಚಿಸಿ ವರ್ಷಗಳು ಕಳೆದಿವೆ,ಎರಡು ಬಾರಿ ಅವಧಿ ವಿಸ್ತರಣೆ ಮಾಡಿದ್ದು ಇದರಿಂದ ಬಹಳ ವಿಳಂಬವಾಗಿದೆ, ಆಯೋಗಕ್ಕೆ ಮಾರ್ಚ್ 15 ರವರೆಗೆ ಕಾಲಾವಕಾಶ ನೀಡಲಾಗಿದೆ, ನಮಗೆ ತಿಳಿದಿರುವ ಮಾಹಿತಿ ಪ್ರಕಾರ ಆಯೋಗ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿದೆ, ವರದಿಯನ್ನು ತರಿಸಿಕೊಂಡು ಅನುಷ್ಠಾನ ಮಾಡಬಹುದು ಆದರೆ ಸರ್ಕಾರ ಇಂತಹ ಕೆಲಸ ಮಾಡುತ್ತಿಲ್ಲ ಎಂದರು.

ಲೋಕಸಭೆ ಚುನಾವಣೆಗೆ ಮಾರ್ಚಿ ಎರಡನೇ ವಾರ ಅಧಿಸೂಚನೆ ಹೊರಬೀಳಬಹುದು,ಆ ಚುನಾವಣೆ ಮುಗಿದ ನಂತರ ಜೂನ್,ಜುಲೈನಲ್ಲಿ ವಿಧಾನಪರಿಷತ್ ನ ಏಳು ಕ್ಷೇತ್ರ ಗಳಿಗೆ ಚುನಾವಣೆ ನಡೆಯಲಿದೆ, ನವಂಬರ್ ಒಳಗೆ ತಾಪಂ,ಜಿಪಂ ಚುನಾವಣೆ ಮುಗಿಸಬೇಕಾಗಿದೆ ಇದನ್ನು ನೋಡಿದರೆ ಸುದೀರ್ಘಕಾಲ ನೀತಿ ಸಂಹಿತೆ ಜಾರಿಯಲ್ಲಿ ಇರಲಿದೆ ಇದರಿಂದ ವೇತನ ಆಯೋಗದ ವರದಿ ಅನುಷ್ಠಾನ ಜಾರಿಯಾಗದೆ ದೊಡ್ಡ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ, ಆ ನಿಟ್ಟಿನಲ್ಲಿ ಫೆಬ್ರವರಿ ಯೊಳಗೆ ಆಯೋಗದ ವರದಿ ಅನುಷ್ಠಾನ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕಾಗಿದೆ ಎಂದು ಹೇಳಿದರು.

ಹೊಸ ಪಿಂಚಣಿ ವ್ಯವಸ್ಥೆ ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಹೋರಾಟ ಮಾಡಿದ್ದೆವು, ಆದರೆ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ, ಆರೋಗ್ಯವಿಮೆ ಸೌಲಭ್ಯಕ್ಕೆ ಮನವಿ ಮಾಡಿದ್ದು ಅದು ಕೂಡ ವಿಳಂಬವಾಗಿದೆ, ಇಂತಹ ಸಂದರ್ಭದಲ್ಲಿ ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯಲು ಮುಂದಾಗ ಬೇಕಾಗಿದೆ ಎಂದರು.

ವೇದಿಕೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಸ್. ಶಂಭುಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ತಿಮ್ಮೇಗೌಡ, ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಿ. ಬಳ್ಳಾರಿ, ಗೌರವಾಧ್ಯಕ್ಷ ಡಿ.ಎಚ್. ವೆಂಕಟೇಶಯ್ಯ, ಹಿರಿಯ ಉಪಾಧ್ಯಕ್ಷ ಎಂ.ಬಿ. ರುದ್ರಪ್ಪ, ಡಾ. ನೆಲ್ಕುದ್ರಿ ಸದಾನಂದಪ್ಪ, ಎಸ್. ಬಸವರಾಜು, ಮಂಡ್ಯ ಜಿಲ್ಲಾ ಶಾಖೆಯ ಗೌರವಾಧ್ಯಕ್ಷ ಸಿ.ಜೆ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಆರ್. ದೇವರಾಜು, ಖಜಾಂಚಿ ಕೆ. ಗೋಪಾಲ್, ರಾಜ್ಯ ಪರಿಷತ್ ಸದಸ್ಯ ಜಿ.ಎನ್. ನಾಗೇಶ್, ಕಾರ್ಯಾಧ್ಯಕ್ಷರಾದ ಆರ್. ವಿ. ಪ್ರಸನ್ನ, ಹಿರಿಯ ಉಪಾಧ್ಯಕ್ಷರಾದ ಟಿ. ರವಿಶಂಕರ್, ಡಿ.ಜೆ. ಈಶ್ವರ್, ಡಿ. ಪುಟ್ಟರಾಮೇಗೌಡ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!