ಪ್ರತಿನಿತ್ಯ ಸೈಕಲ್ ಬಳಕೆಯಿಂದ ಅಸಾಂಕ್ರಾಮಿಕ ರೋಗಗಳಾದ ಸಕ್ಕರೆ ಕಾಯಿಲೆ, ಅಧಿಕ ರಕ್ತದ ಒತ್ತಡ, ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟು ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಸಂಜಯ್ ಎಂ ಡಿ ಹೇಳಿದರು
ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮಂಡ್ಯ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆ ಶ್ರೀರಂಗಪಟ್ಟಣ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯಕ್ರಮದ ಅಡಿಯಲ್ಲಿ “ವಿಶ್ವ ಬೈಸಿಕಲ್ ದಿನ “ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ದಿನದ ಕರ್ತವ್ಯಕ್ಕೆ ಸೈಕಲ್ ಸವಾರಿ ಮೂಲಕ ಆಗಮಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎನ್ ಕೆ ವೆಂಕಟೇಶ್ ಮಾತನಾಡಿ, ಪ್ರತಿದಿನ ಸೈಕಲ್ ಸವಾರಿ ಮಾಡುವದರಿಂದ ದೇಹದಲ್ಲಿನ ಅನಾವಶ್ಯಕ ಕೊಬ್ಬನ್ನು ಕಡಿಮೆ ಮಾಡಲು, ಅಧಿಕ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಲು ಹಾಗೂ ಪರಿಸರ ಮಾಲಿನ್ಯ ತಡೆಗಟ್ಟಲು, ಒಳ್ಳೆಯ ಪರಿಶುದ್ಧ ಗಾಳಿ ಸೇವಿಸಿ ಆರೋಗ್ಯ ವೃದ್ಧಿಸಲು ಸೈಕಲ್ ಸವಾರಿ ಹೆಚ್ಚು ಸಹಕಾರಿಯಾಗಲಿದೆ. ಹೀಗಾಗಿ ಸಾರ್ವಜನಿಕರು ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆ ಸಣ್ಣ ಪುಟ್ಟ ಕೆಲಸಗಳಿಗಾದರು ಸೈಕಲ್ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.
ಸದರಿ ಸೈಕಲ್ ಜಾಥಾ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಹೊರಟು ಬಸ್ ನಿಲ್ದಾಣ, ಪುರಸಭಾ, ಅಂಬೇಡ್ಕರ್ ವೃತ್ತ, ರಂಗನಾಥ ಸ್ವಾಮಿ ದೇವಸ್ಥಾನ, ಸ್ನಾನಘಟ್ಟ, ಸಂತೆ ಬೀದಿ, ಖಾಸಗಿ ಬಸ್ ನಿಲ್ದಾಣಗಳಲ್ಲಿ ಸಂಚರಿಸಿ ಆರೋಗ್ಯಕ್ಕಾಗಿ ಸೈಕಲ್ , ಹೆಚ್ಚು ದಿನ ಬದುಕಲು ಸೈಕಲ ಸವಾರಿ ಮುಂತಾದ ಘೋಷಣೆಗಳೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಜಾಥಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪಿ ಮಾರುತಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರ ತಿಮ್ಮರಾಜು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ, ಜಿ ಬಿ ಹೇಮಣ್ಣ,ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಸ್ ಪಿ ಪಣಿಂದ್ರ, ಎಂ ಸಿ ಚಂದನ್,ಎಂ ಎನ್ ಕೃಷ್ಣೇಗೌಡ, ಕ್ಷಯ ರೋಗ ಮೇಲ್ವಿಚಾರಕ ಮಹೇಶ್, ಸುಹೇಲ್ ಅಹ್ಮದ್, ಪ್ರಭಾಕರ್ ,ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಹೇಶ್, ವಿಶ್ವನಾಥ್ ಇತರರು ಭಾಗವಹಿಸಿದ್ದರು




